ಅರ್. ಕೇಶವಮೂರ್ತಿ

ರಕ್ಷಿಸಬೇಕಾದ ದೇವಿಯೇ ಭಕ್ಷಿಸುವುದಕ್ಕೆ ಹೊರಡುತ್ತದೆ. ರಕ್ತದಾಹಕ್ಕೆ ಮೈ ಕೊಡವಿಕೊಂಡು ಎದ್ದು ನಿಂತ ದೇವಿಗೆ ಇಡೀ ಸಾಮ್ರಾಜ್ಯ ಸರ್ವನಾಶವಾಗುತ್ತದೆ. ಆದರೂ ಅದರ ರಕ್ತದ ಹಸಿವು ನಿಲ್ಲಲ್ಲ. ಆ ವಿಗ್ರಹ ಯಾರ ಕೈ ಸೇರುತ್ತದೋ ಅವರು ಭೂಮಿ ಮೇಲೆ ಉಳಿಯುವುದು ಅಸಾಧ್ಯ. ರಾಜರು, ಬ್ರಿಟಿಷರ ಕಾಲಘಟದ ನಂತರ ಬರುವ ಸ್ವಾತಂತ್ರ್ಯ ನಾಡಿನಲ್ಲೂ ಆ ವಿಗ್ರಹ ರಕ್ತಕ್ಕಾಗಿ ಕಾಯುತ್ತದೆ. ಹಾಗೆ ಕಾದು ತನ್ನ ದಾಹ ಇಂಗಿಸಿಕೊಳ್ಳುತ್ತದೆಯೇ, ಮುನ್ನೂರು ವರ್ಷಗಳ ಹಿಂದಿನ ಅತ್ಯಂತ ಪ್ರಭಾವಿ ದೇವಿ ಮೂರ್ತಿ ಪ್ರಸ್ತುತ ಕಾಲ ಘಟ್ಟದಲ್ಲಿ ಮಾಡುವ ಅವಾಂತರಗಳೇನು ಎಂಬುದನ್ನು ಹೇಳುವ ಸಿನಿಮಾ ‘ಸುವರ್ಣ ಸುಂದರಿ’. ಬಜೆಟ್‌, ಅದಕ್ಕೆ ತಕ್ಕಂತೆ ಮೇಕಿಂಗ್‌, ಇದಕ್ಕೆ ತಕ್ಕ ಹಾಗೆ ತಾರಾಗಣ ಇದ್ದಿದ್ದರೆ ವಿಶೇಷವಾದ ಮತ್ತು ಕಲರ್‌ಫುಲ್‌ ಸಿನಿಮಾ ಆಗುವ ಸಾಧ್ಯತೆಗಳಿದ್ದವು. ಯಾಕೆಂದರೆ ಚಿತ್ರದ ಕತೆಯ ಸಾಲಿನಲ್ಲಿ ಸತ್ವ ಇದೆ. ಅದನ್ನು ಸ್ಕ್ರೀನ್‌ ಮೇಲೆ ತರುವ ಹೊತ್ತಿಗೆ ಬಜೆಟ್‌, ಮೇಕಿಂಗ್‌ ಅಡ್ಡ ಬಂದಿರುವುದು ಪ್ರೇಕ್ಷಕನಿಗೆ ಸ್ಪಷ್ಟವಾಗಿ ಕಾಣುತ್ತದೆ.

ಚಿತ್ರ ವಿಮರ್ಶೆ: ಅಮರ್

ಸಾಮಾನ್ಯವಾಗಿ ರಾಜಕಾಲದಲ್ಲಿ ಕೇಳಿ ಬರುವ ಕುಲದೇವರು, ವಿಗ್ರಹ, ರಾಜಮುದ್ರೆಗಳು ಆ ರಾಜ್ಯ ಹಾಗೂ ರಾಜಮನೆತನವನ್ನು ಕಾಪಾಡುವುದನ್ನು ನೋಡಿರುತ್ತೇವೆ. ಆದರೆ, ರಕ್ಷಣೆ ಹೆಸರಿನಲ್ಲಿ ಪ್ರತಿಷ್ಠಾಪನೆ ಆಗುವ ದೇವಿಯೇ ಸಾವಿನ ಬೇಟೆ ನಿಲ್ಲುವುದು ನಿರ್ದೇಶಕರ ಹೊಸ ರೀತಿಯ ಯೋಚನೆಗೆ ಸಾಕ್ಷಿ. ರಾಜ್ಯದ ಮೇಲೆ ದಂಡೆತ್ತಿ ಬರುವವರಿಂದ ರಕ್ಷಿಸಿಕೊಳ್ಳುವುದಕ್ಕೆ ರಾಜಮನೆತನದ ಗುರು ಹೇಳಿದಂತೆ ದೇವಿ ವಿಗ್ರಹ ರೂಪಿಸಲಾಗುತ್ತದೆ. ಆದರೆ, ಆ ವಿಗ್ರಹ ರೂಪಿಸುವವನಿಗೆ ರಾಜ, ರಾಜಮನೆತನದ ಮೇಲೆ ಸಿಟ್ಟು ಇರುತ್ತದೆ. ತಮ್ಮ ಸಮುದಾಯವನ್ನು ಕೀಳಾಗಿ ನೋಡುವ ಇವರಿಗೆ ಬುದ್ದಿ ಕಲಿಸಬೇಕೆಂದೇ ತ್ರಿನೇತ್ರಿ ದೇವಿಯ ಬದಲಿಗೆ ರುದ್ರರೂಪಿಣಿಯ ವಿಗ್ರಹ ಮಾಡಿಕೊಡುತ್ತಾನೆ. ಒಂದು ವೇಳೆ ಅದು ಪ್ರತಿಷ್ಠಾಪನೆ ಆದರೆ, ಇಡೀ ಸಾಮ್ರಾಜ್ಯ ನಾಶವಾಗುತ್ತದೆ ತಿಳಿಯುವ ಹೊತ್ತಿಗೆ ಕಾಲ ಕೈ ಮೀರಿ ಹೋಗುತ್ತದೆ. ರಾಜನಿಗೆ ಸಿಟ್ಟು ಬಂದು ವಿಗ್ರಹ ರೂಪಿಸಿದವನನ್ನು ಸಾಯಿಸುತ್ತಾನೆ. ಅಷ್ಟರೊಳಗೆ ವಿಗ್ರಹದ ಪ್ರಭಾವ ರಾಜನ ಪುತ್ರಿಯನ್ನು ಆವರಿಸಿಕೊಂಡು ಆಕೆ ತನ್ನವರನ್ನೇ ಕೊಲ್ಲುತ್ತಾಳೆ. ಅಲ್ಲಿಗೆ 300 ವರ್ಷಗಳ ಹಿಂದಿನ ಕತೆ ಮುಗಿದು ಬ್ರಿಟಿಷರ ಕಾಲಕ್ಕೆ ಬರುವ ಹೊತ್ತಿಗೆ ಆ ಕಾಲದ ಪಾತ್ರಗಳು ಮರು ಹುಟ್ಟು ಪಡೆದಿರುತ್ತವೆ. ಅಲ್ಲೂ ಇದೇ ವಿಗ್ರಹ ಸಂಹಾರಕ್ಕೆ ನಿಲುತ್ತದೆ. ಆದರೆ, ಬ್ರಿಟಿಷರ ನಂತರದ ಕಾಲದಲ್ಲಿ ವಿಗ್ರಹ ರೂಪ ಹೇಗೆ ತಾಳುತ್ತದೆ ಎಂಬುದನ್ನು ಸಿನಿಮಾ ನೋಡಿ ತಿಳಿಯಬೇಕು.

ಚಿತ್ರ ವಿಮರ್ಶೆ: ಒಮ್ಮೆ ನಿಶ್ಯಬ್ದ ಒಮ್ಮೆ ಯುದ್ಧ

ಕನ್ನಡ, ತೆಲುಗಿನ ಸಿನಿಮಾ ಆಗಿದ್ದರಿಂದ ಕೆಲ ದೃಶ್ಯಗಳು ಡಬ್ಬಿಂಗ್‌ ಮಾಡಿದಂತೆ ಕಾಣುತ್ತವೆ. ಪಾತ್ರಗಳು ನೋಡುಗನಿಗೆ ಕನೆಕ್ಟ್ ಆಗುವುದಿಲ್ಲ. ನಿರೂಪಣೆಯಲ್ಲಿ ಐತಿಹಾಸಿಕ ಚಿತ್ರಗಳಿಗೆ ರೋಚಕತೆ ಇಲ್ಲದಿರುವುದು ಚಿತ್ರದ ದೊಡ್ಡ ಕೊರತೆಯಾಗಿ ಕಾಣುತ್ತದೆ. ತಾಂತ್ರಿಕವಾಗಿಯೂ ಹಿನ್ನೆಲೆ ಸಂಗೀತಕ್ಕೆ ಮಹತ್ವ ಕೊಟ್ಟಿಲ್ಲ. ನಟನೆ ವಿಚಾರಕ್ಕೆ ಬಂದರೆ ಪೂರ್ಣ, ಸಾಕ್ಷಿ, ಅವಿನಾಶ್‌ ಪಾತ್ರಗಳು ಹೆಚ್ಚು ನೆನಪಿನಲ್ಲಿ ಉಳಿಯುತ್ತವೆ.