ಅತೀಯಾದ ನಿರೀಕ್ಷೆ ಕೆಲವೊಮ್ಮೆ ಹುಸಿ ಆಗುವುದೇ ಹೆಚ್ಚು ಎನ್ನುವ ಮಾತಿದೆ. ಅದು ಈ ಸಿನಿಮಾಕ್ಕೂ ಹೊರತಾಗಿಲ್ಲ. ರೆಬೆಲ್‌ಸ್ಟಾರ್‌ ಅಂಬರೀಶ್‌ ಪುತ್ರ ಅಭಿಷೇಕ್‌ ಅಂಬರೀಶ್‌ ಬೆಳ್ಳಿತೆರೆ ಪ್ರವೇಶದ ಚೊಚ್ಚಲ ಸಿನಿಮಾ ಎನ್ನುವ ಕಾರಣಕ್ಕಾಗಿಯೇ ಪ್ರೇಕ್ಷಕರಲ್ಲಿದ್ದ ಆ ನಿರೀಕ್ಷೆಯನ್ನು‘ಅಮರ್‌’ಬಹುತೇಕ ಹುಸಿಗೊಳಿಸಿದೆ.

ದೇಶಾದ್ರಿ ಹೊಸ್ಮನೆ

ಅಜಾನುಬಾಹು ಹೀರೋ, ಮುದ್ದಾದ ಹುಡುಗಿ, ಚೆಂದದ ಲೋಕೆಷನ್ಸ್‌, ಮೈ ಮನ ಒದ್ದೆಯಾಗಿಸುವ ಮಳೆ, ಕಣ್ಣು ತಂಪಾಗಿಸುವ ಛಾಯಾಗ್ರಹಣ...ಇವೆಲ್ಲವೂ ಚಿತ್ರದ ಹೈಲೈಟ್ಸ್‌. ಅಷ್ಟಿದ್ದರೂ, ಒಬ್ಬ ಹೊಸ ಪ್ರತಿಭೆಯ ಗ್ರಾಂಡ್‌ ಎಂಟ್ರಿಗೆ ಸಿನಿಮಾದಲ್ಲಿರಬೇಕಾದ ಅಂಶಗಳೇ ಇಲ್ಲಿಲ್ಲ. ಅಮರ್‌ ಎನ್ನುವ ಹೆಸರೇ ಇಲ್ಲಿ ಚಿತ್ರದ ದೊಡ್ಡ ಶಕ್ತಿ. ಹೆಸರಲ್ಲಿರುವ ಮಹತ್ವ ಸಿನಿಮಾದಲ್ಲಿಲ್ಲ. ಕತೆ ಮತ್ತು ನಿರೂಪಣೆ ಈ ಸಿನಿಮಾಕ್ಕಿರುವ ಬಹು ದೊಡ್ಡ ಕೊರತೆ. ಅವೆರೆಡು ಸಿನಿಮಾದ ಚೆಂದವನ್ನು ಬಹುವಾಗಿ ನುಂಗಿ ಹಾಕಿವೆ.

ಚಿತ್ರದ ಕಥಾ ನಾಯಕ ಅಮರ್‌.ಆತ ಓರ್ವ ಮಧ್ಯಮ ವರ್ಗದ ಹುಡುಗ. ತನಗೆ ಸಂಬಂಧವೇ ಇರದ ಜೀವದ ಉಳಿವಿಗಾಗಿ ತನ್ನದಲ್ಲದ ತಪ್ಪನ್ನು ಮೈ ಮೇಲೆ ಎಳೆದುಕೊಳ್ಳುವ ಕಲಿಯುಗದ ಕರ್ಣ. ಆತನಿಗೆ ಆಕಸ್ಮಿಕವಾಗಿ ಪರಿಚಯವಾದ ಹುಡುಗಿ ಬಾಬಿ. ಅವರಿಬ್ಬರ ನಡುವಿನ ಪ್ರೇಮ ಕತೆಯೇ ಈ ಚಿತ್ರದ ಪ್ರಧಾನ ಕಥಾ ಹಂದರ. ಅದಕ್ಕೆ ಇಂಡಿಯಾ ಮತ್ತು ಸ್ವಿಟ್ಜರ್‌ಲ್ಯಾಂಡ್‌ ಎರಡು ದೇಶಗಳ ಕನೆಕ್ಷನ್‌ ಕೊಟ್ಟಿದ್ದಾರೆ ನಿರ್ದೇಶಕರು. ಆ ಕನೆಕ್ಷನ್‌ ಯಾಕಾಗಿ ಬಂತು? ಆ ಮೂಲಕ ನಿರ್ದೇಶಕರು ಏನನ್ನು ತೋರಿಸಲು ಹೊರಟಿದ್ದಾರೆ? ಆ ಕತೆ ಗೊತ್ತಾಗಬೇಕಿದ್ದರೆ ನೀವು ಸಿನಿಮಾ ನೋಡಲೇಬೇಕು.ಇದೊಂದು ಹೊಸತೇನು ಅಲ್ಲದ ಪ್ರೇಮ ಕತೆಯೇ. ಅದಕ್ಕೆ ಒಂದಷ್ಟುಮಸಾಲೆ ಹಾಕಿ ರಂಜಿಸಲು ಹೊರಟಿದ್ದಾರೆ ನಿರ್ದೇಶಕರು. ಆದರೆ ಅದು ರುಚಿಯೇ ಇಲ್ಲದ ಬರ್ಗರ್‌ ಅನ್ನೋದು ಚಿತ್ರ ನೋಡಿದಾಗ ಆಗುವ ಅನುಭವ.

ತಾರಾಗಣ : ಅಭಿಷೇಕ್‌ ಅಂಬರೀಷ್‌, ತಾನ್ಯಾ ಹೋಪ್‌, ದರ್ಶನ್‌, ಸಾಧು ಕೋಕಿಲ, ಚಿಕ್ಕಣ್ಣ, ನಿರೂಪ್‌ ಭಂಡಾರಿ, ರಚಿತಾ ರಾಮ್‌

ನಿರ್ದೇಶನ : ನಾಗಶೇಖರ್‌

ಛಾಯಾಗ್ರಹಣ : ಸತ್ಯ ಹೆಗಡೆ

ಸಂಗೀತ : ಅರ್ಜುನ್‌ ಜನ್ಯಾ

ಸಾಮಾನ್ಯವಾಗಿ ಹೊಸ ಪ್ರತಿಭೆಗಳ ಬೆಳ್ಳಿತೆರೆಯ ಎಂಟ್ರಿ ಬಲು ಜೋರಾಗಿಯೇ ಇರುತ್ತೆ. ಆದರೆ ಇಲ್ಲಿ ಅಭಿಷೇಕ್‌ಗೆ ಆ ಬಿಲ್ಡಪ್‌ ಸಿಕ್ಕಿಲ್ಲ. ಅವರ ಎಂಟ್ರಿಯಲ್ಲೂ ವಿಶೇಷತೆ ಇಲ್ಲ. ಸೀದಾಸಾದಾ ಓರ್ವ ಸಾಮಾನ್ಯ ಪಾತ್ರದ ಪ್ರವೇಶದಂತೆಯೇ ತೆರೆ ಮೇಲೆ ಕಾಣಿಸಿಕೊಳ್ಳುವ ಅಭಿಷೇಕ್‌, ಬಹುತೇಕ ಅಪ್ಪನ ನೆರಳಲ್ಲೇ ಪ್ರೇಕ್ಷಕರನ್ನು ರಂಜಿಸಲು ಯತ್ನಿಸಿದ್ದಾರೆ. ಮಾತು, ಗತ್ತು, ಲುಕ್‌ನಲ್ಲಿ ಅಂಬರೀಶ್‌ ಅವರನ್ನೇ ನೆನಪಿಸಿ, ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಾರೆ. ಆದರೆ ನಟನೆ ಹಾಗೂ ಆ್ಯಕ್ಷನ್‌ಗಳಲ್ಲಿ ಅವರ ಫರ್‌ಫಾರ್ಮೆನ್ಸ್‌ ತುಂಬಾ ಸಪ್ಪೆ. ಮೊದಲ ಸಿನಿಮಾವೇ ಆದರೂ, ಸಿನಿಮಾ ಜಗತ್ತು ಅವರಿಗೆ ಹೊಸದಲ್ಲ. ಹಾಗಾದರೂ ನಟನೆಗೆ ಇನ್ನಷ್ಟುಸಿದ್ಧತೆ, ತರಬೇತಿ ಪಡೆಯಬೇಕಿತ್ತೆನಿಸುವುದು ಸಹಜ. ನಾಯಕಿ ತಾನ್ಯಾ ಹೋಪ್‌ ಆವರೇಜ್‌ ನಟನೆಯ ಮೂಲಕ ರಂಜಿಸುತ್ತಾರೆ. ಸಾಧು ಕೋಕಿಲ ಅವರ ಕಳಪೆ ಹಾಸ್ಯ ನಗಿಸುವುದಕ್ಕಿಂತ ಕಿರಿ ಕಿರಿ ಎನಿಸುತ್ತದೆ. ಚಿಕ್ಕಣ್ಣ , ದೇವರಾಜ್‌, ಸುಧಾರಾಣಿ, ದೀಪಕ್‌ ಶೆಟ್ಟಿಅವರ ಪಾತ್ರಗಳು ಚಿತ್ರದ ನೋಟವನ್ನು ಹೆಚ್ಚಿಸಿವೆ.

‘ಅಮರ್’ ಚಿತ್ರದ Exclusive ಫೋಟೋಸ್ ಇಲ್ಲಿವೆ!

ಚಿತ್ರ ಟೇಕಾಪ್‌ ಆಗುವುದು ದರ್ಶನ್‌ ಎಂಟ್ರಿ ಮೂಲಕ. ಒಂದರ್ಥದಲ್ಲಿ ಅವರೇ ಚಿತ್ರವನ್ನು ಮತ್ತೊಂದು ಲೆವಲ್‌ಗೆ ತೆಗೆದುಕೊಂಡು ಹೋಗುತ್ತಾರೆ. ನಿರೂಪ್‌ ಭಂಡಾರಿ ಇಲ್ಲಿ ಮದುವೆ ಹುಡುಗ. ಆ ನೆಪದಲ್ಲಿ ದರ್ಶನ್‌, ನಿರೂಪ್‌ ಭಂಡಾರಿ ಪಾರ್ಟಿ ಸಾಂಗ್‌ವೊಂದರಲ್ಲಿ ಹಾಜಾರಾಗುತ್ತಾರೆನ್ನುವುದು ಹೌದು. ಆದರೆ ಅಲ್ಲಿ ಹೇಗೆ ರಚಿತಾ ರಾಮ್‌ ಬಂದರು ಎನ್ನುವುದು ನೋಡುಗರಲ್ಲಿ ಕಾಡುವ ಯಕ್ಷ ಪ್ರಶ್ನೆ. ಇಂತಹ ಹಲವು ಮಿಸ್ಟೇಕ್ಸ್‌ ಈ ಚಿತ್ರದಲ್ಲಿವೆ. ನಿರ್ದೇಶಕರು ಯಾರಿಗೋ ಬರೆದ ಕತೆಯನ್ನು ಇನ್ನಾರಿಗೋ ಮಾಡಿದರೆ ಇದೆಲ್ಲ ಆಗುವುದು ಸಹಜ ಎನ್ನುವುದು ಚಿತ್ರ ನೋಡುವ ಪ್ರೇಕ್ಷಕರಿಗೂ ಆರ್ಥವಾಗುತ್ತೆ. ಅವೆಲ್ಲ ತಪ್ಪುಗಳನ್ನು ಸತ್ಯ ಹೆಗಡೆ ಛಾಯಾಗ್ರಹಣ, ಅರ್ಜನ್‌ ಜನ್ಯಾ ಅವರ ಸಂಗೀತ ಮುಚ್ಚಿ ಹಾಕಿ, ಪ್ರೇಕ್ಷಕರನ್ನು ಒಂದಷ್ಟುಹಿಡಿದಿಡುವ ಪ್ರಯತ್ನ ಮಾಡಿವೆ. ಅದು ಈ ಚಿತ್ರದ ಪ್ಲಸ್‌ ಪಾಯಿಂಟ್‌.