ಚಿತ್ರ ವಿಮರ್ಶೆ: ಒಮ್ಮೆ ನಿಶ್ಯಬ್ದ ಒಮ್ಮೆ ಯುದ್ಧ
ನಾಯಕಿಗೆ ಮಾತು ಬರುವುದಿಲ್ಲ. ಹಾಗಾಗಿ ನಿಶ್ಯಬ್ದ. ನಾಯಕ ತನ್ನ ಪ್ರೀತಿಯ ಉಳಿವಿಗಾಗಿ ಮೊದಲಿನಿಂದಲೂ ಯುದ್ಧ ಮಾಡುತ್ತಲೇ ಇರುತ್ತಾನೆ. ಹಾಗಾಗಿ ಯುದ್ಧ ಎಂದು ಮೇಲೆ ಅನ್ನಿಸಿದರೂ ಚಿತ್ರದ ಒಳಗೊಂದು ಸೈಕಾಲಜಿಯನ್ನು ನಿರ್ದೇಶಕ ಶ್ರೀನಾಗ್ ತಂದಿದ್ದಾರೆ. ಆದರೆ ಇದರಲ್ಲಿ ಅವರು ಸಂಪೂರ್ಣವಾಗಿ ಯಶ ಕಂಡಿದ್ದಾರೆ ಎಂದು ಖಂಡ ತುಂಡವಾಗಿ ಹೇಳುವುದಕ್ಕೆ ಬರುವುದಿಲ್ಲ.
ನಾಯಕ ಪ್ರಭು ಮುಂಡ್ಕೂರ್‌ಗೆ ಮೂಕಿ ಮತ್ತು ಕಿವುಡಿಯಾದ ನಾಯಕಿ ಸಂಯುಕ್ತಾ ಮೇಲೆ ಲವ್ವಾಗುತ್ತೆ. ಕಾಮನ್ ಆಗಿ ಎಲ್ಲಾ ಚಿತ್ರದಲ್ಲಿ ಇರುವಂತೆ ಇಲ್ಲಿಯೂ ಆಗರ್ಭ ಶ್ರೀಮಂತರಾದ ತಂದೆ ದಿ. ಎಡಕಲ್ಲು ಗುಡ್ಡದ ಚಂದ್ರಶೇಖರ್ ವಿರೋಧ ಮಾಡುತ್ತಾರೆ. ಇದರಲ್ಲಿ ಅವರ ಪ್ರತಿಷ್ಠೆಯ ಜೊತೆಗೆ ಸ್ವಾರ್ಥವೂ ಅಡಗಿರುತ್ತೆ. ಹೀಗೆ ತಂದೆಯನ್ನು ವಿರೋಧ ಮಾಡಿಕೊಂಡು ತನ್ನ ಪ್ರೀತಿಯೇ ಮುಖ್ಯ ಎಂದು ತನ್ನದೇ ದಾರಿ ಹಿಡಿದ ನಾಯಕನಿಗೆ ಮತ್ತೊಂದು ದಿಕ್ಕಿನಲ್ಲಿ ಮತ್ತೊಬ್ಬ ನಾಯಕಿ ಸುಶ್ಮಿತಾ ಗೌಡ ಎದುರಾಗಿರುತ್ತಾರೆ. ಹಾಗಾಗಿ ಇದೊಂದು ಟ್ರಯಾಂಗಲ್ ಲವ್ ಸ್ಟೋರಿ.
ತಾರಾಗಣ: ಪ್ರಭು ಮುಂಡ್ಕೂರ್, ಸಂಯುಕ್ತ ಹೆಗ್ಡೆ, ಸುಶ್ಮಿತಾ ಗೌಡ, ರಾಮಕೃಷ್ಣ, ದಿ. ಎಡಕಲ್ಲು ಗುಡ್ಡದ ಚಂದ್ರಶೇಖರ್, ವಿಜಯ್ ಭೋಲೇನಾಥ್
ನಿರ್ದೇಶನ: ಶ್ರೀನಾಗ್
ನಿರ್ಮಾಣ: ಪ್ರವೀಣ್ ರಾಜ್, ಸುರೇಶ್ ಕುಮಾರ್
ಸಂಗೀತ: ಕಿರಣ್ ವಾರಣಾಸಿ
ಛಾಯಾಗ್ರಹಣ: ಕಲ್ಯಾಣ್
ಶ್ರೀಮಂತನಾದರೂ ಶ್ರಮಿಕ ವರ್ಗದೊಂದಿಗೆ ಕಾಲ ಕಳೆಯುವ ಬಯಕೆ ನಾಯಕನಿಗೆ. ಮೂಗಿ, ಕಿವುಡಿಯಾದರೂ ಅನಾಥ ಮಕ್ಕಳ ಪಾಲಿಗೆ ಆಸರೆಯಾಗುವ ಬಯಕೆ ನಾಯಕಿಗೆ. ಮೊದಲ ನೋಟದಲ್ಲೇ ಲವ್ವಲ್ಲಿ ಬೀಳುವ ನಾಯಕ ಕಡೆಗೆ ಪ್ರೀತಿಯನ್ನು ಪಡೆಯುತ್ತಾನಾದರೂ ಅದಕ್ಕಾಗಿ ಅವನು ಸಾಕಷ್ಟುಯುದ್ಧವನ್ನೇ ಮಾಡಬೇಕಾಗುತ್ತದೆ. ಇಲ್ಲಿ ಮೊದಲಾರ್ಧ ಪ್ರೀತಿಯ ಸುತ್ತ ಸುತ್ತುತ್ತಾ ನಿಶ್ಯಬ್ದವಾಗಿ ಸಾಗುತ್ತದೆ. ಎರಡನೇ ಇನ್ನಿಂಗ್ಸ್ ಪೂರ್ತಿ ಸಿಕ್ಕ ಪ್ರೀತಿಯನ್ನು ಉಳಿಸಿಕೊಳ್ಳಲು ಯುದ್ಧಗಳಾಗುತ್ತವೆ. ಈ ಯುದ್ಧಗಳು ಹಾಗೆ ಧುತ್ತೆಂದು ಬಂದು ಬಿಡುವುದಿಲ್ಲ. ಇವುಗಳ ಆಗಮನ ಅನಿರೀಕ್ಷಿತ ಮತ್ತು ಅಷ್ಟೇ ಕುತೂಹಲಕಾರಿಯಾಗಿವೆ. ಹೀಗೆ ಪ್ರತಿ ಅಂಶಗಳನ್ನು ಚೆನ್ನಾಗಿ ಕನೆಕ್ಟ್ ಮಾಡಿರುವುದು ನಿರ್ದೇಶಕರ ಹೆಗ್ಗಳಿಕೆ. ಇದಕ್ಕೆ ಬೆನ್ನೆಲುಬಾಗಿ ಸಂಭಾಷಣೆಯೂ ನಿಂತಿದೆ. ಸಂಗೀತ ಸಾಧಾರಣ. ಚಿಕ್ಕಮಗಳೂರು ಸುತ್ತಮುತ್ತಲಿನ ಸುಂದರ ದೃಶ್ಯಗಳನ್ನು ಸೆರೆಹಿಡಿಯುವಲ್ಲಿ ಛಾಯಾಗ್ರಾಹಕ ಹಿಂದೆ ಬಿದ್ದಿರುವುದು ಅಲ್ಲಲ್ಲಿ ಸ್ಪಷ್ಟವಾಗಿಯೇ ಗೋಚರವಾಗುತ್ತದೆ.
ಹಿರಿಯ ನಟರಾದ ರಾಮಕೃಷ್ಣ, ದಿ. ಚಂದ್ರಶೇಖರ್ ಇಲ್ಲಿ ಪ್ರಧಾನ ಪಾತ್ರ ನಿರ್ವಹಿಸಿದ್ದಾರೆ. ನಾಯಕ ಪ್ರಭು ಮುಂಡ್ಕೂರ್ ಸಿಕ್ಕ ಅವಕಾಶವನ್ನು ಚೆನ್ನಾಗಿಯೇ ಬಳಕೆ ಮಾಡಿಕೊಂಡಿದ್ದಾರೆ. ಸಂಯುಕ್ತಾ ಚಿತ್ರದ ಪ್ಲಸ್.