Asianet Suvarna News Asianet Suvarna News

‘ಸೂಜಿದಾರ’ ನಮ್ದು, ನೇಯ್ಗೆ ನಿಮ್ದು!

ಕಥೆ ಕೊನೆಯಾಗಬಾರದು, ಓದುಗನೊಳಗೆ ಬೆಳೆಯುತ್ತಾ ಹೋಗಬೇಕು ಅನ್ನುವ ಮಾತಿದೆ. ಸ್ವತಃ ಕಥೆಗಾರರೂ, ನಾಟಕಕಾರರೂ ಆದ ಮೌನೇಶ್‌ ಬಡಿಗೇರ್‌ ‘ಸೂಜಿದಾರ’ ಸಿನಿಮಾದಲ್ಲಿ ಈ ಪ್ರಯೋಗ ಮಾಡಹೊರಟು ಒಂದರ್ಥದಲ್ಲಿ ಗೆದ್ದಿದ್ದಾರೆ.

Kannada Movie SoojiDhaara film review
Author
Bangalore, First Published May 11, 2019, 9:36 AM IST

ಪ್ರಿಯಾ ಕೆರ್ವಾಶೆ

ಸೂಜಿದಾರ ಎಂಬ ಪ್ರತಿಮೆಯಡಿ ಒಂದಿಷ್ಟುಭಿನ್ನ ಭಾವ, ಚಹರೆ ಹೊತ್ತ ಕತೆಗಳು ಎಳೆಗಳಾಗಿ ಬಂದು ತಮ್ಮನ್ನು ಒಪ್ಪಿಸಿಕೊಂಡಿವೆ. ತನಗೆ ಬೇಕಾದಂತೆ ಹೊಲಿಯುವ ಕೆಲಸ ಪ್ರೇಕ್ಷಕನದು. ಅದೇ ಸವಾಲು ಕೂಡ. ಏಕೆಂದರೆ ಸಿನಿಮಾ ಮುಗಿದ ಮೇಲೆ ಪಕ್ಕ ಕೂತ ಪ್ರೇಕ್ಷಕ, ‘ಏನಾರ ಅರ್ಥ ಆಯ್ತಾ ಗುರೂ’ ಅಂದ್ರೆ ಮುಗೀತು, ಕಾಮನ್‌ ಆಡಿಯನ್ಸ್‌ಗೆ ಸಿನಿಮಾ ಹೇಗನಿಸಿದೆ ಅನ್ನೋದರ ವನ್‌ಲೈನ್‌ ಇದು.

ಸಿನಿಮಾದಲ್ಲಿ ಮೂರ್ನಾಲ್ಕು ಮುಖ್ಯ ಪಾತ್ರಗಳು. ಒಂದಕ್ಕೊಂದು ಸಂಬಂಧವೇ ಇಲ್ಲದ ಹಾಗೆ ಬರುತ್ತವೆ. ಎಲ್ಲೋ ಹೊರಟ ಬಸ್‌, ಒಂದು ಸೀಟಲ್ಲಿ ಒಬ್ಬ ಯುವಕ ಕೂತಿದ್ದಾನೆ. ಪಕ್ಕದಲ್ಲಿ ಕೂತ ಹುಡುಗಿಯ ಕೂದಲಷ್ಟೇ ಕಾಣುತ್ತದೆ. ಕಂಡೆಕ್ಟರ್‌ ಟಿಕೆಟ್‌ ಕೊಟ್ಟು ಆಚೆ ತಿರುಗಿದ್ದೇ ಯುವಕ ನಾಪತ್ತೆ. ಆತ ಬೆನ್ನಟ್ಟಿಬರುವವರಿಂದ ತಪ್ಪಿಸಿಕೊಂಡು ಓಡುವ ಅಜ್ಞಾತ ಯುವಕ. ಬಡವರ ವಠಾರದ ಬೆಳಕು ಇಳಿಯದ ರೂಮ್‌ನಲ್ಲಿ ಅವನ ವಾಸ. ಅವನಿಗೆ ಆಗಾಗ ಬೀಳುವ ಕನಸು, ಅಲ್ಲೆಲ್ಲೋ ಮುಖ ನೋಡಿ ಗುರುತಿಸುವ ಜನ, ಆ ಹೊತ್ತಿಗೆ ಮಡುಗಟ್ಟುವ ಭಯ ಎಲ್ಲವೂ ಪ್ರೇಕ್ಷಕನನ್ನು ಕುರ್ಚಿಯ ತುದಿಯಲ್ಲಿ ನಿಲ್ಲುವಂತೆ ಮಾಡುತ್ತದೆ. ಇನ್ನೊಂದು ಎಳೆಯಾಗಿ ಆ ರೂಮ್‌ ಪಕ್ಕದಲ್ಲೇ ವಾಸಿಸುವ ಸುಂದರಿಯೊಬ್ಬಳ ಬದುಕಿನ ನಿಗೂಢತೆ ಇದೆ. ಕಂಪೆನಿ ನಾಟಕ ಪಾತ್ರಧಾರಿ ಗಂಡ ಪ್ರತೀದಿನ ಕುಡಿದು ಬಂದು ಆಕೆಗೆ ಹೊಡೆಯುತ್ತಾನೆ. ಅವಳು ರಾತ್ರಿ ಅಳುತ್ತಾಳೆ. ಹಗಲು ಮರೆಯುತ್ತಾಳೆ. ಅವಳ ಹುಡುಕಾಟವೇ ಬೇರೆ.

ತಾರಾಗಣ: ಯಶವಂತ ಶೆಟ್ಟಿ, ಹರಿಪ್ರಿಯಾ, ಚೈತ್ರಾ ಕೊಟ್ಟೂರು, ಸುಚೇಂದ್ರ ಪ್ರಸಾದ್‌

ನಿರ್ದೇಶನ: ಮೌನೇಶ್‌ ಬಡಿಗೇರ್‌

ನಿರ್ಮಾಣ: ಅಭಿಜಿತ್‌ ಕೋಟೆಗಾರ್‌, ಸುಚೀಂದ್ರನಾಥ ನಾಯಕ್‌

ಛಾಯಾಗ್ರಹಣ: ಅಶೋಕ್‌ ವಿ ರಾಮನ್‌

ಸಂಗೀತ: ಭಿನ್ನಷಡ್ಜ

ರೇಟಿಂಗ್‌: 3

ಆಕೆಯ ಜೊತೆಗೆ ಆ ಯುವಕ ಹೇಗೆ ಕನೆಕ್ಟ್ ಆದ, ಅಷ್ಟಕ್ಕೂ ಅವಳ್ಯಾರು, ಅವಳ ಹುಡುಕಾಟ ಯಾವುದರ ಬಗ್ಗೆ ಇತ್ಯಾದಿ ವಿವರಗಳನ್ನು ಬಿಗಿ ಹಣಿಗೆಯಲ್ಲಿ ನಿರೂಪಿಸಲಾಗಿದೆ. ಇದರ ಜೊತೆ ಹೂವು ಮಾರಿ ಕಾಲೇಜು ಓದೋ ಸೀರಿಯಲ್‌ ಪ್ರಿಯ ಹುಡುಗಿ, ಕಾಣೆಯಾಗುವ ಪದ್ಮಶ್ರೀ ಪದಕದ ಎಳೆಗಳೂ ಬೇರೆ ಬೇರೆಯಾಗಿ ಬಂದು ಕತೆಯಲ್ಲಿ ಸೇರಿಕೊಳ್ಳುತ್ತವೆ. ಆದರೆ ಕೊನೆಯಲ್ಲಿ ಬರುವ ಟ್ವಿಸ್ಟ್‌ಗಳು ಪ್ರೇಕ್ಷಕನೊಳಗೆ ಆವರೆಗೆ ಮೂಡಿದ ಕಥೆಯನ್ನೇ ತಿರುಗಿ ನೋಡುವ ಹಾಗೆ ಮಾಡುತ್ತವೆ. ಅದು ಈ ಸಿನಿಮಾದ ಶಕ್ತಿ.

ನೀರ್ದೋಸೆ ಹುಡುಗಿ ‘ಸೂಜಿದಾರ’ ಪೋಣಿಸಲು ರೆಡಿ; ಇಲ್ಲಿವೆ ಫೋಟೋಗಳು

ನಿರ್ದೇಶಕರಿಗೆ ಹೇಳುವುದರ ಬಗ್ಗೆ ಖಚಿತತೆ ಇದೆ. ಕತೆ ಬಿಗಿಯಾಗಿದೆ. ನಟ ನಟಿಯರು ಪಾತ್ರಕ್ಕೆ ಜೀವ ತುಂಬಿದ್ದಾರೆ. ಸಂಗೀತ ಹಿತವಾಗಿದೆ. ಮಿಕ್ಕದ್ದು ಅವರವರ ಭಾವಕ್ಕೆ, ಭಕುತಿಗೆ, ಮುಕುತಿಗೆ!

Follow Us:
Download App:
  • android
  • ios