ಮೊಬೈಲ್ ಚಟಕ್ಕೆ ಬಿದ್ದ ಯುವಜನರು ಸಂಬಂಧಗಳಿಂದ ಕಳಚಿಕೊಳ್ಳುವುದು ಹೇಗೆ ಎನ್ನುವುದನ್ನು ಕನ್ನಡದ ಲೌಡ್ ಸ್ಪೀಕರ್ ಚಿತ್ರದಲ್ಲಿ ತಿಳಿಸಲಾಗಿದೆ. 

‘ಒಂದಿಷ್ಟು ಹೊತ್ತು ಮೊಬೈಲ್‌ಅನ್ನು ಗೆಳೆಯರ ಮುಂದೆ ಲೌಡ್ ಸ್ಪೀಕರ್‌ನಲ್ಲಿಟ್ಟು ನೋಡಿ, ನಿಮ್ಮ ಮುಖವಾಡ ಕಳಚಿ ಬೀಳದಿದ್ರೆ ಕೇಳಿ’- ಇದು ‘ಲೌಡ್ ಸ್ಪೀಕರ್’ ಸಿನಿಮಾದ ಒನ್ ಲೈನ್. ಮೊಬೈಲ್ ಚಟಕ್ಕೆ ಬಿದ್ದ ಯುವಜನರು ಸಂಬಂಧಗಳಿಂದ ಕಳಚಿಕೊಳ್ಳುವುದನ್ನುಘಟನಾವಳಿಗಳ ಮೂಲಕ ಹೇಳಲಾಗಿದೆ.

ಕಥೆ ತೆರೆದುಕೊಳ್ಳೋದು ಪೊಲೀಸ್ ಸ್ಟೇಶನ್‌ನಲ್ಲಿ. ತನ್ನ ಪತ್ನಿ ಕಾಣೆಯಾಗಿದ್ದಾಳೆ ಎಂದು ಕಂಪ್ಲೇಂಟ್ ಕೊಡಲು ಬರುವ ವ್ಯಕ್ತಿ ಹಾಗೂ ಗೆಳೆಯರಿಂದ. ವಿಚಾರಣೆಯಲ್ಲಿ ಒಂದೊಂದೇ ಘಟನೆ ತೆರೆದುಕೊಳ್ಳುತ್ತದೆ. ಗೆಳೆಯನ ಮನೆಯ ಪಾರ್ಟಿಯಲ್ಲಿ ಫ್ರೆಂಡ್ಸ್ ಎಲ್ಲ ಸೇರಿದ್ದಾರೆ. ಅಲ್ಲೊಂದು ಚಾಲೆಂಜ್. ಎಲ್ಲರೂ ಮೊಬೈಲ್ ಅನ್ನು ಲೌಡ್ ಸ್ಪೀಕರ್‌ನಲ್ಲಿ ಹಾಕ್ಕೊಳಬೇಕು. ಈ ಚಾಲೆಂಜ್‌ನಲ್ಲಿ ಪ್ರತಿಯೊಬ್ಬನ ಮುಖವಾಡ ಕಳಚಿ ಬೀಳೋದೇ ಸಿನಿಮಾದ ಹೈಲೈಟ್. ಕೊನೆಯಲ್ಲಿ ಸೋಶಿಯಲ್ ಮೀಡಿಯಾಗಳ ಬಗ್ಗೆ ಭಾಷಣ.

ಇಲ್ಲಿ ಫೋನ್‌ಗಳನ್ನಷ್ಟೇ ಲೌಡ್ ಸ್ಪೀಕರ್‌ನಲ್ಲಿಟ್ಟಿಲ್ಲ. ಪಾತ್ರಗಳೂ ಲೌಡ್‌ಸ್ಪೀಕರ್‌ನಂತೆ ಜೋರು ದನಿಯಲ್ಲಿ ಮಾತನಾಡುತ್ತಾರೆ. ಅಲ್ಲಲ್ಲಿ ಸಸ್ಪೆನ್ಸ್, ಹಾಸ್ಯಗಳಿವೆ. ತಾನು ಹಾಳಾಗಿ ಹೋದರೂ ಇನ್ನೊಬ್ಬನ ಸಾಚಾತನ ಬಗ್ಗೆ ಕುತೂಹಲ ತಾಳುವ ಮನುಷ್ಯ ಸಹಜ ಪ್ರವೃತ್ತಿಯ ಬಗ್ಗೆ ವ್ಯಂಗ್ಯವಿದೆ. ಧೈರ್ಯಂ ಮೊದಲಾದ ಸಿನಿಮಾ ನಿರ್ದೇಶಿಸಿದ ಶಿವ ತೇಜಸ್ ಇಲ್ಲಿ ಡೈಲಾಗ್‌ಗಳ ಮೂಲಕವೇ ಎಲ್ಲವನ್ನೂ ಹೇಳಲು ಹೊರಟಿದ್ದಾರೆ. ಕಾರ್ತಿಕ್, ಕಾವ್ಯಾ ಮತ್ತಿತರರ ನಟನೆ ಚೆನ್ನಾಗಿದೆ.

ಪ್ರಿಯಾ ಕೆರ್ವಾಶೆ