Asianet Suvarna News Asianet Suvarna News

ಮನಸ್ಸು ಕದಿಯದ 'ಕಳ್ಬೆಟ್ಟದ ದರೋಡೆಕೋರರು'

ಕಾದಂಬರಿ ಆಧರಿತ ಸಿನಿಮಾಗಳು ಕಮ್ಮಿಯಾದವು ಎನ್ನುವ ಆತಂಕದ ಮಧ್ಯೆ, 23 ವರ್ಷದ ಯುವಕ ಅನುಷ್ ಶೆಟ್ಟಿ ಬರೆದ ‘ಕಳ್ಬೆಟ್ಟದ ದರೋಡೆಕೋರರು’ ಕಾದಂಬರಿ ಆಧರಿಸಿ ಬಂದ ಚಿತ್ರವಿದು.

 

Kannada movie Kalbettada Darodekoraru Film review
Author
Bengaluru, First Published Feb 25, 2019, 9:30 AM IST

ದೇಶಾದ್ರಿ ಹೊಸ್ಮನೆ

ಹನಗೋಡು ಎಂಬುದೊಂದು ಊರು. ಆ ಊರಿನ ಜನರಿಗೆ ಕಳ್ಬೆಟ್ಟದ ದರೋಡೆಕೋರರ ಭಯ. ಒಂದು ದಿನ ಗ್ರಾಮದ ಬಸಮ್ಮ ಎಂಬುವವರ ಹಸು ಕಾಣೆ ಆಗುತ್ತದೆ. ಅದಕ್ಕೆ ಕಳ್ಬೆಟ್ಟದ ದರೋಡೆಕೋರರೇ ಕಾರಣ ಅಂತಾರೆ ಜನ. ಶಾಮಣ್ಣ ಎಂಬುವರ ತಂಬಾಕು ಬ್ಯಾರನ್‌ಗೆ ಬೆಂಕಿಬಿದ್ದು, ಬೆಲೆಬಾಳುವ ತಂಬಾಕು ಸುಟ್ಟು ಬೂದಿ ಆಗುತ್ತದೆ. ಅದಕ್ಕೂಕಾರಣ ಕಳ್ಬೆಟ್ಟದ ದರೋಡೆಕೋರರು ಅಂತಾರೆ ಜನ. ಹೀಗೆ ಊರಲ್ಲಿ ಏನೇ ಆದರೂ ಅದಕ್ಕೆ ಕಳ್ಬೆಟ್ಟದ ದರೋಡೆಕೋರರೇ ಕಾರಣ ಎನ್ನುವುದು ಜನರ ನಂಬಿಕೆ. ಅದೇ ಕಾರಣಕ್ಕೆ ಆ ಊರಿಗೆ ಪೊಲೀಸರು ಬರುತ್ತಾರೆ. ಪ್ರತಿ ರಾತ್ರಿ ಬಂದೂಕು ಹಿಡಿದು ಗಸ್ತು ತಿರುಗುತ್ತಾರೆ. ಆದರೂ ದರೋಡೆಗಳು ನಡೆಯುತ್ತವೆ. ಹಾಗಾದ್ರೆ ವಾಸ್ತವ ಏನು? ನಿಜಕ್ಕೂ ಅದೆಲ್ಲ ಕಳ್ಬೆಟ್ಟದ ದರೋಡೆಕೋರರ ಕೈವಾಡವೇ? ಅದಕ್ಕೆ ಉತ್ತರ ಚಿತ್ರದ ಕ್ಲೈಮ್ಯಾಕ್ಸ್ ಹೇಳುತ್ತದೆ. ಅದೇ ಈ ಚಿತ್ರದ ಒನ್‌ಲೈನ್ ಸ್ಟೋರಿ ಕೂಡ.

ಸ್ಯಾಂಡಲ್‌ವುಡ್‌ಗೆ ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದಾರೆ ರಾಧಾರಮಣ ’ರಾಧಾ’

ಕಾದಂಬರಿ ಶೀರ್ಷಿಕೆಯೇ ಇಲ್ಲಿ ಸಿನಿಮಾದ ಶೀರ್ಷಿಕೆಯೂ ಹೌದು. ಹನಗೋಡು ಎನ್ನುವ ಕಾಡಿನ ನಡುವಣ ಊರು, ಅಲ್ಲಿ ನಡೆಯುವ ದರೋಡೆಗಳು ಈ ಚಿತ್ರದ ಪ್ರಧಾನ ಸಂಗತಿ. ಆದರ ಜತೆಗೆ ಊರಿನ ಮುಖಂಡರ ನಡುವಿನ ರಾಜಕೀಯ, ಹಗೆತನ, ಸ್ವಾರ್ಥ, ಯುವಜನರಲ್ಲಿನ ಸಂಭ್ರಮ, ಪ್ರೀತಿ-ಪ್ರೇಮದ ಸಲ್ಲಾಪ, ಶ್ರೇಷ್ಟ- ಕನಿಷ್ಟ ಎನ್ನುವ ಕಿತ್ತಾಟ ಜತೆಗೆ ಜನರ ನಡುವಿನ ತಮಾಷೆಯೂ ಸೇರಿದಂತೆ ಹಲವು ಸಂಗತಿಗಳು ಚಿತ್ರದ ಪ್ರಮುಖ ಸರಕು. ಊರು ಅಂದ್ಮೇಲೆ ಅವೆಲ್ಲ ಸಹಜ. ಆ ಮೂಲಕ ಕಳ್ಬೆಟ್ಟದ ದರೋಡೆಕೋರರ ಬಣ್ಣ ಬಯಲು ಮಾಡಲು ಹೊರಟ ನಿರ್ದೇಶಕರ ಪ್ರಯತ್ನ, ರೋಚಕವಾಗಿದ್ದರೂ ಬಹುತೇಕ ನೀರಸ. ಕಾದಂಬರಿ ಓದಿದವರಿಗೆ ಸಿಗುವ ಖುಷಿ ಇಲ್ಲಿ ನೋಡುವಾಗ ಸಿಗದು. ಉದ್ವೇಗ, ಆವೇಗ ಇಲ್ಲದೆ ನೀರಸವಾಗಿ ಶುರುವಾಗುವ ಕತೆ ಅಷ್ಟೇ ನೀರಸವಾಗಿ ಅಂತ್ಯ ಕಾಣುತ್ತದೆ. ಅದು ಈ ಚಿತ್ರದ ಬಹುದೊಡ್ಡ ಮೈನಸ್ ಪಾಯಿಂಟ್.

‘ಕಳ್ಬೆಟ್ಟದ ದರೋಡೆಕೋರರು’ರಲ್ಲಿ ಒಬ್ಬರಾದ ರಾಧಾ ಮಿಸ್ !

ನೋಡುಗನ ಮನಸ್ಸಿಗೆ ತಣ್ಣನೆ ತಟ್ಟುವ ಕತೆಯಲ್ಲೂ ಬಿಸಿ ಮುಟ್ಟಿಸುವ ಒಂದು ಸಂದೇಶವಿದೆ. ಅಲ್ಲಿ ದರೋಡೆ ನಡೆಯುವ ಪ್ರಸಂಗಗಳು ಹನಗೋಡಿಗೆ ಮಾತ್ರ ಸೀಮಿತವಾಗುಳಿ ಯುವುದಿಲ್ಲ. ಸೂಕ್ಷ್ಮವಾಗಿ ನೋಡಿದರೆ ಅವರು ನಮ್ಮೂರುಗಳಲ್ಲೂ ಇದ್ದಾವು? ಆ ಮಟ್ಟಿಗೆ ಈ ಕತೆ ಪ್ರಸ್ತುತವಾಗುತ್ತದೆ. ಅದರಾಚೆ ಇಲ್ಲಿ ನಾಯಕನ ಕೆಲಸ ಏನು ಅಂತ ಹುಡುಕ ಹೊರಟರೆ ಹನಗೋಡಿನಲ್ಲಿ ಆತನೂ ಒಬ್ಬ ಮಾತ್ರ. ಆತ ಕಾಲೇಜು ಹುಡುಗ. ಅದೇ ಊರಿನ ಕಾಳಪ್ಪನ ಮಗಳು ಕಮಲಿ ಮೇಲೆ ಆತನ ಕಣ್ಣು. ಅವರ ನಡುವೆ ಸಣ್ಣದೊಂದು ಪ್ರೇಮ. ಆ ಮೂಲಕ ಹೀರೋ ಆಗಿ ಕಾಣಿಸಿಕೊಳ್ಳುವ ವೆಂಕಿಗೆ ಅಲ್ಲೊಬ್ಬ ವಿಲನ್. ಅವರ ನಡುವೆ ಒಂದಷ್ಟು ಹೊಡೆದಾಟ. ಕೊನೆಗೆ ಒಂದಾಗುವ ಆಟ. ಇಂತಹದೊಂದು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ನಟರಾಜ್. ಆ ಪಾತ್ರಕ್ಕೆ ತಕ್ಕಂತ  ನಟನೆಯಲ್ಲಿ ಮಿಂಚಿದ್ದಾರೆ. ಭರವಸೆ ಮೂಡಿಸುತ್ತಾರೆ. ಕಮಲಿ ಪಾತ್ರದೊಂದಿಗೆ ಇದೇ ಮೊದಲು ಬೆಳ್ಳಿತೆರೆಯಲ್ಲಿ ಕಾಣಿಸಿಕೊಂಡ ಶ್ವೇತಾ ಪ್ರಸಾದ್, ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡಿದ್ದಾರೆ. ಅವರ ಹಾಗೆಯೇ ಪೊಲೀಸ್ ಪಾತ್ರಧಾರಿ ಸುಂದರ್, ದೊಡ್ಡಜ್ಜನಾಗಿ ಶೃಂಗೇರಿ ರಾಮಣ್ಣ, ಕಾಳಪ್ಪನಾಗಿ ದಾನಪ್ಪ ಮೂದಲಗಿ, ಶಾಮಣ್ಣನಾಗಿ ಗಣೇಶ್ ರಾವ್ ಮತ್ತಿತರರು ಪೋಷಕ ಪಾತ್ರಗಳಲ್ಲಿ ಪ್ರೇಕ್ಷಕರಿಗೆ ಹತ್ತಿರವಾಗುತ್ತಾರಾದರೂ, ಯಾರ ಪಾತ್ರವೂ ಹೆಚ್ಚು ಸಮಯ ಉಳಿಯುವುದಿಲ್ಲ. ಅನೂಪ್ ಸೀಳಿನ್ ಸಂಗೀತ, ಕಿರಣ್ ಕ್ಯಾಮರಾ ಸಾಧಾರಣ. ಉಳಿದಂತೆ ಪ್ರೇಕ್ಷಕರ ಪಾಲಿಗೆ ಓದಿ ಖುಷಿ ಪಡಬಹುದಾದ ಕಾದಂಬರಿ, ನೋಡುವಾಗ ರಂಜಿಸಲು ಎಡವಿದ್ದು ಸಿನಿಮಾದ ವೈಫಲ್ಯ. ಅದು ಬಿಟ್ಟರೆ ಒಂದೊಳ್ಳೆ ಪ್ರಯತ್ನವಂತೂ ಹೌದು.

Follow Us:
Download App:
  • android
  • ios