ಚಿತ್ರ ವಿಮರ್ಶೆ: ಹ್ಯಾಂಗೋವರ್
ರಾತ್ರಿ ಕುಡಿದವರು ಬೆಳಗ್ಗೆ ಎದ್ದ ಕೂಡಲೇ ಏರಿದ ಮತ್ತು ಸರ್ರ ಇಳಿಯುವಂತಹ ಅನಾಹುತವೊಂದು ಅಲ್ಲಿ ಸಂಭವಿಸಿರುತ್ತದೆ. ಒಂದು ಸಸ್ಪೆನ್ಸ್ ಚಿತ್ರಕ್ಕೆ ಬೇಕಾದ ಅಡಿಪಾಯವನ್ನು ಹೀಗೆ ಆರಂಭದಲ್ಲೇ ಹಾಕಿಕೊಂಡು ಸಾಗುವ ಸಿನಿಮಾ ‘ಹ್ಯಾಂಗೋವರ್’.
ಆರ್ ಕೇಶವಮೂರ್ತಿ
ಏನು ಆ ದುರಂತ ಎನ್ನುವ ಕುತೂಹಲಕ್ಕೆ ಪೊಲೀಸರ ಆಗಮನದೊಂದಿಗೆ ತೆರೆ ಬಿದ್ದರೂ ಕತೆ ಮತ್ತಷ್ಟುಕುತೂಹಲಭರಿತವಾಗಿ ತೆರೆದುಕೊಳ್ಳುತ್ತದೆ. ಹ್ಯಾಂಗೋವರ್‌ಗೆ ಒಳಗಾಗುವ ಯುವ ಮನಸ್ಸುಗಳು ಏನೆಲ್ಲ ಸಮಸ್ಯೆಗಳನ್ನು ಎದುರು ಹಾಕಿಕೊಳ್ಳುತ್ತಾರೆ ಎಂದು ಹೇಳುತ್ತಲೇ ತಾವು ಮಾಡದ ತಪ್ಪಿಗೆ ಶಿಕ್ಷಿಯ ಸಂಕಟವನ್ನು ಅನುಭವಿಸುವ ಕಷ್ಟಕ್ಕೆ ಸಿಲುಕುತ್ತಾರೆ. ಇದರಿಂದ ಹೇಗೆ ಹೊರಗೆ ಬರುತ್ತಾರೆ ಎಂಬುದೇ ಚಿತ್ರದ ಮತ್ತೊಂದು ಮುಖವನ್ನು ತೆರೆದಿಡುವಲ್ಲಿ ನಿರ್ದೇಶಕ ವಿಠಲ್ ಭಟ್ ಯಶಸ್ಸು ಕಾಣುತ್ತಾರೆ. ಒಂದು ಮರ್ಡರ್ ಮಿಸ್ಟ್ರಿ ಕತೆಯನ್ನು ಹೇಳುವಾಗ ‘ಕೊಲೆಗಾರ ಇವನೇ’ ಎಂದು ಹೇಳುವಲ್ಲಿ ನಿರ್ದೇಶಕರು ತೆಗೆದುಕೊಳ್ಳಬೇಕಾದ ಎಲ್ಲ ಎಚ್ಚರಿಕೆಗಳನ್ನು ತೆಗೆದುಕೊಂಡಿದ್ದಾರೆ. ಅದರ ಜತೆಗೆ ಸಿನಿಮಾ ನೋಡುವ ಪ್ರೇಕ್ಷಕ ಏನನ್ನು ಮೊದಲೇ ಊಹೆ ಮಾಡುತ್ತಾನೋ ಅದು ಸುಳ್ಳು ಎಂದು ಹೇಳುವುದೇ ಈ ಕತೆಯ ನಿರೂಪಣೆಯ ನಿಜವಾದ ಶಕ್ತಿ.
ಹ್ಯಾಂಗೋವರ್ ಟ್ರೈಲರ್‌ಗೆ 2 ಲಕ್ಷ ಹಿಟ್ಸ್
ಬಹುತೇಕ ಹೊಸ ನಟ, ನಟಿಯರನ್ನೇ ಕಟ್ಟಿಕೊಂಡು ತಮ್ಮ ಸೀಮಿತ ವ್ಯಾಪ್ತಿಯಲ್ಲಿ ಕತೆ ಹೇಳುವುದಕ್ಕೆ ಹೊರಡುವ ನಿರ್ದೇಶಕರು, ಆ ಸೀಮಿತ ಗಡಿಯನ್ನು ಆಗಾಗ ಪ್ರೇಕ್ಷಕರಿಗೂ ಕಾಣುವಂತೆ ಅಜಾಗೃಕತೆ ವಹಿಸುವುದೇ ಚಿತ್ರದ ಒಂದು ಕೊರತೆ. ಆದರೆ, ಹೊಸಬರಾದರು ಪಾತ್ರಗಳ ನಟನೆ, ಚಿತ್ರದ ಕೊನೆಯವರೆಗೂ ತೆಗೆದುಕೊಂಡು ಹೋರುವ ಸಸ್ಪೆನ್ಸ್ ನಿಂದ ಸಿನಿಮಾ ನೋಡಿಸಿಕೊಳ್ಳುವ ಗುಣ ಹೊಂದಿದೆ. ಪ್ರೀತಿ, ಪ್ರೇಮ ಎಂದು ಸುತ್ತಾಡುತ್ತಿದ್ದ ಮೂವರು ಹುಡುಗ, ಹುಡುಗಿಯರು ವಾರಂತ್ಯದ ಪಾರ್ಟಿಯ ಕನಸು ಕಾಣುತ್ತಾರೆ. ಇಡೀ ರಾತ್ರಿ ಪಾರ್ಟಿ ಮುಗಿಸಿಕೊಂಡು ಕಂಠಪೂರ್ತಿ ಕುಡಿದು ಮಲಗಿದವರ ಒಬ್ಬ ಒಬ್ಬರ ಕೊಲೆಯಾಗುತ್ತದೆ. ಪ್ರೀತಿಗಾಗಿ ಪೀಡಿಸಿದವನೇ ಕೊಲೆ ಮಾಡಿದ್ನಾ ಎನ್ನುವ ಪ್ರಶ್ನೆ ಹುಟ್ಟಿಕೊಂಡಾಗ ಪೊಲೀಸರ ಪ್ರವೇಶವಾಗುತ್ತದೆ. ಅಲ್ಲಿಂದ ಕತೆ ತನಿಖೆಯ ಹಾದಿ ಹಿಡಿಯುತ್ತದೆ. ಮೂವರಲ್ಲಿ ಕೊಲೆ ಮಾಡಿದವರು ಯಾರು ಎನ್ನುವುದೇ ಚಿತ್ರದ ಮುಂದಿನ ಪಯಣ. ಆದರೆ, ಅಂದುಕೊಂಡಿದ್ದು ಬೇರೆ, ಅಲ್ಲಿ ಆಗಿರುವುದು ಬೇರೆ ಎನ್ನುವಲ್ಲಿಗೆ ಸಿನಿಮಾ ಹೊಸ ತಿರುವಿನಲ್ಲಿ ಮುಕ್ತಾಯಗೊಳ್ಳುತ್ತದೆ.
ಕೊಲೆ ಮಾಡಿದವನೇ ಕೊಲೆಗಾರನನ್ನು ಹುಡುಕಿದರೆ ಹೇಗಿರುತ್ತದೆ ಎನ್ನುವ ರೋಚಕ ಝಲಕ್ ಅನ್ನು ಒಳಗೊಂಡಿರುವ ಹ್ಯಾಂಗೋವರ್, ಕೊನೆಯ ತನಕ ನೋಡುಗನಲ್ಲಿ ಕುತೂಹಲ ಮೂಡಿಸುತ್ತ ಸಾಗುತ್ತದೆ. ಕಲಾವಿದರ ಪೈಕಿ ತೆಲುಗು ನಟ ಶೆಫಿ ಅವರ ಟಿಪಿಕಲ್ ಮ್ಯಾನರಿಸಂ ಚೆನ್ನಾಗಿದೆ. ತಾಂತ್ರಿಕವಾಗಿ ಲೋಕೇಶನ್‌ಗಳು ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಚಿತ್ರಕ್ಕೆ ಗಣೇಶ್ ರಾಣಿಬೆನ್ನೂರು ಸಂಭಾಷಣೆ ಬರೆದಿದ್ದು, ಒಂದಿಷ್ಟುಕೇಳುವಂತಹ ಫನ್ ಮಾತುಗಳು ಇವೆ. ಎರಡು ಹಾಡುಗಳಲ್ಲಿ ವೀರ್ ಸಮಥ್‌ರ್ ಸಂಗೀತ, ಗಮನ ಸೆಳೆಯುತ್ತದೆ. ಎಡಿಟಿಂಗ್, ಕ್ಯಾಮೆರಾ ಸೇರಿದಂತೆ ತಾಂತ್ರಿಕವಾಗಿ ಕೆಲ ಕೊರತೆಗಳು ಕಾಣುತ್ತವೆ.