Asianet Suvarna News Asianet Suvarna News

ಚಿತ್ರ ವಿಮರ್ಶೆ: ಗಿಮಿಕ್

ಒಂದು ದೊಡ್ಡ ಬಂಗಲೆ. ಅಲ್ಲಿ ಆತ್ಮಗಳು, ಇವುಗಳಿಗೆ ನಂಬಲಾಗದ ಒಂಚೂರು ಚರಿತ್ರೆ. ಈ ಪ್ರೇತಗಳು ಯಾರದು ಎಂದು ಹುಡುಕುವ ಸ್ವಾಮಿಗಳು ಒಂದು ಕಡೆ. ಯಾವುದೋ ಕಾರಣಕ್ಕೆ ಅದೇ ಬಂಗಲೆಗೆ ಬರುವ ನಾಯಕ, ನಾಯಕಿ. ಅಲ್ಲಿಂದ ಒಂದೇ ಮನೆಯಲ್ಲಿ ಆತ್ಮ- ಮನುಷ್ಯರ ಕತೆ ಕಾಮಿಡಿ ಮತ್ತು ಹಾರರ್‌ ನೆರಳಿನಲ್ಲಿ ಸಾಗುತ್ತದೆ.

Kannada movie gimmick film review
Author
Bangalore, First Published Aug 17, 2019, 9:35 AM IST
  • Facebook
  • Twitter
  • Whatsapp

ಆರ್‌ ಕೇಶವಮೂರ್ತಿ

ಇದು ತಮಿಳಿನ ಹಾಸ್ಯ ನಟ ಸಂತಾನಂ ನಾಯಕನಾಗಿ ನಟಿಸಿರುವ ‘ದಿಲ್ಲಿಕು ದುಡ್ಡು’ ಚಿತ್ರದ ರೀಮೇಕ್‌. ಬ್ರಿಟಿಷ್‌ ಆಡಳಿತ ಕಾಲದಿಂದ ಶುರುವಾಗುವ ಈ ಚಿತ್ರದಲ್ಲಿ ಮಾಟಗಾತಿಯೊಬ್ಬಳನ್ನು ಮೋಹಿಸುವ ಬ್ರಿಟಿಷ್‌ ರಾಜ, ಆಕೆಯನ್ನು ಮದುವೆ ಆಗುವುದು, ಆಕೆ ಮತ್ತೊಬ್ಬರ ಜತೆ ಅಕ್ರಮ ಸಂಬಂಧ ಇಟ್ಟುಕೊಳ್ಳುವುದು, ಇದು ಗೊತ್ತಾಗಿ ಆ ಅಕ್ರಮ ಸಂತಾನವನ್ನು ಸಾಯಿಸುವ ಬ್ರಿಟಿಷ್‌ ರಾಜ. ಇದರಿಂದ ನೊಂದು ಅಮಾವಸ್ಯೆಯಂದೇ ನೇಣಿಗೆ ಶರಣಾಗುವ ಮಾಟಗಾತಿ. ಮುಂದೆ ಆ ಬಂಗಲೆ ಪ್ರೇತಗಳ ತಾಣವಾಗುವುದು. ಮತ್ತೊಂದು ಕಡೆ ಒಂದು ಶ್ರೀಮಂತ ಕುಟುಂಬದ ಹುಡುಗಿಯನ್ನು ಪ್ರೀತಿಸುತ್ತಿರುವ ನಾಯಕ. ಇದು ಗೊತ್ತಾಗಿ ನಾಯಕಿ ಅಪ್ಪ ಸುಪಾರಿ ಕೊಡುವುದು. ಇವರನ್ನು ಸಾಯಿಸುವ ಸಂಚು ರೂಪಿಸುವ ಹೊತ್ತಿಗೆ ಎಲ್ಲರು ಅದೇ ಪ್ರೇತಗಳ ಬಂಗಲೆಗೆ ಬರುತ್ತಾರೆ. ಇಲ್ಲಿಗೆ ಯಾಕೆ ಬರುತ್ತಾರೆ, ಮುಂದೆ ಏನೆಲ್ಲ ಅವಾಂತರಗಳಾಗುತ್ತವೆ, ದೆವ್ವಗಳಿಂದ ಎಲ್ಲರು ಹೇಗೆ ತಪ್ಪಿಸಿಕೊಳ್ಳುತ್ತಾರೆ ಎಂಬುದೇ ಸಿನಿಮಾ.

ಚಿತ್ರ ವಿಮರ್ಶೆ: ಗುಬ್ಬಿ ಮೇಲೆ ಬ್ರಹ್ಮಾಸ್ತ್ರ

ಇಡೀ ಸಿನಿಮಾ ಒಂದೇ ಮನೆಯಲ್ಲಿ ನಡೆಯುತ್ತದೆ. ಹಾಸ್ಯ, ಭಯ, ಸಂಚು ಮತ್ತು ಪ್ರೇಮ ಇವುಗಳ ಸುತ್ತ ಸಾಗುವ ‘ಗಿಮಿಕ್‌’ನಲ್ಲಿ ಗಮನ ಸೆಳೆಯುವುದು ಸುಂದರ್‌ ರಾಜ್‌ ಅವರ ಸ್ಟೆಂಟ್‌ ಮಾಸ್ಟರ್‌ ಕ್ಯಾರೆಕ್ಟರ್‌ ಹಾಗೂ ದೆವ್ವದ ಜತೆ ನಂಟು ಬೆಳೆಸುವ ನಟ ಗಣೇಶ್‌. ಸಾಕಷ್ಟುನಗಿಸುವ ಶೋಭರಾಜ್‌. ಈ ಮೂವರು ಚಿತ್ರವನ್ನು ಸಾಧ್ಯವಾದಷ್ಟುನೋಡುವಂತೆ ಮಾಡುತ್ತಾರೆ. ಆದರೆ, ಹೇಳಿಕೊಳ್ಳುವಂತಹ ಅದ್ಭುತ ಕತೆ, ಸಂಭಾಷಣೆ ಹಾಗೂ ನೆನಪಿಟ್ಟುಕೊಳ್ಳುವಂತಹ ಯಾವ ದೃಶ್ಯಗಳೂ ಇಲ್ಲಿ ಇಲ್ಲ. ಇನ್ನೂ ಹಾರರ್‌ ಚಿತ್ರಕ್ಕೆ ಬೇಕಾದ ಖಡಕ್‌ ಹಿನ್ನೆಲೆ ಸಂಗೀತವೂ ಇಲ್ಲಿ ಮಾಯವಾಗಿದೆ. ಅವಸರದ ಅಡುಗೆ, ಕಡಿಮೆ ವೆಚ್ಚ, ದೊಡ್ಡ ಮೊತ್ತದ ಲಾಭದ ಗುರಿಯೊಂದಿಗೆ ಸೆಟ್ಟೇರಿ ತೆರೆ ಮೇಲೆ ಬಂದಿರುವ ‘ಗಿಮಿಕ್‌’ ಚಿತ್ರದಿಂದ ತೀರಾ ಅದ್ಭುತಗಳೇನು ನಿರೀಕ್ಷೆ ಮಾಡುವಂತಿಲ್ಲ.

Follow Us:
Download App:
  • android
  • ios