ತರ್ಕರಹಿತ ಉತ್ಕರ್ಷದ ನಿಷ್ಕರ್ಷ ಪರ್ವ!
ಹೌದು, ‘ಉದ್ಘರ್ಷ’ ಸಿನಿಮಾ ಹೇಗಿದೆ? ಯಾವ ರೀತಿಯ ಕತೆ? ಈ ಜನರೇಷನ್‌ಗೂ ಇಷ್ಟವಾಗುತ್ತದೆಯೇ? ಚಿತ್ರದ ಹೆಸರಿನ ಅರ್ಥವೇನು?
ಆರ್ ಕೇಶವಮೂರ್ತಿ
- ಹೀಗೆ ಒಂದೇ ಸಮನೇ ಈ ಚಿತ್ರದ ಬಗ್ಗೆ ಕುತೂಹಲದ ಪ್ರಶ್ನೆಗಳು ಹುಟ್ಟಿಕೊಳ್ಳುವುದು ಸಹಜ. ಅದಕ್ಕೆ ಕಾರಣ ಈ ಚಿತ್ರದ ನಿರ್ದೇಶಕರು. ತುಂಬಾ ವರ್ಷಗಳ ವಿರಾಮದ ನಂತರ ಬಂದವರು. ಎಲ್ಲಕ್ಕಿಂತ ಮುಖ್ಯವಾಗಿ ಕನ್ನಡದ ಮಟ್ಟಿಗೆ ಕ್ರೈಮ್ ಥ್ರಿಲ್ಲರ್, ಸಸ್ಪೆನ್ಸ್ ಈ ಮೂರು ನೆರಳುಗಳನ್ನು ಮಿಕ್ಸ್ ಮಾಡಿ ಸಿನಿಮಾ ಮಾಡಿ ಗೆದ್ದವರು. ಹೀಗಾಗಿ ಮತ್ತೆ ಸುನೀಲ್ ಕುಮಾರ್ ದೇಸಾಯಿ ಸಿನಿಮಾ ಬರುತ್ತಿದೆ ಎಂದಾಗ ಒಂದೇ ಉಸಿರಿನಲ್ಲಿ ಇಂಥ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಹಾಗಂತ ಚಿತ್ರದ ಕತೆ ಬಗ್ಗೆ ವಿವರಣೆ ಹೇಳಲಾಗದು. ಹಾಗೆ ಸಿನಿಮಾ ಹೇಗಿದೆ ಅಂತಾನೂ ಹೇಳಕ್ಕಾಗಲ್ಲ. ಯಾಕೆಂದರೆ ಇದು ಒನ್ ಮ್ಯಾನ್ ಆರ್ಮಿ ದೇಸಾಯಿ ಕಟ್ಟಿರುವ ಸಿನಿಮಾ. ಹೀಗಾಗಿ ಧೈರ್ಯ ಮಾಡಿಕೊಂಡು ಥಿಯೇಟರ್‌ಗೆ ಹೋಗಿ ನಿಮ್ಮ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಿ ಎಂಬುದು ಸವಿನಯ ಪ್ರಾರ್ಥನೆ.
ಹೆಣ್ಣು, ಹೊನ್ನು, ಭೀಕರ ಕೊಲೆಗಳು, ಚೇಸಿಂಗ್‌ಗೆ ದೇಸಾಯಿ ಅವರ ಸಸ್ಪೆನ್ಸ್ ಸಿಗ್ನೇಚರ್ ಬಿದ್ದರೆ ‘ಉದ್ಘರ್ಷ’ ಎನ್ನುವ ಚಿತ್ರ ತೆರೆ ಮೇಲೆ ಮೂಡುತ್ತದೆ. ಹಾಗಂತ ಇಡೀ ಸಿನಿಮಾ ಈ ಒಂದು ಸಾಲಿನಷ್ಟುಸರಳವಾಗಿಲ್ಲ. ಅವಳು ಅರೆಬೆತ್ತಲೆಯಲ್ಲೇ ಆತನನ್ನು ಪೈಶಾಚಿಕವಾಗಿ ಕೊಲೆ ಮಾಡಿದ್ದು ಯಾಕೆ? ಕೊಲೆಯಾಗಿದ್ದಾನೆಂದು ಎಂದುಕೊಂಡವನು ಬದುಕಿ ಬಂದಿದ್ದು ಯಾಕೆ? ಎಲ್ಲ ಸಾಕ್ಷಿಗಳು ಕಣ್ಣ ಮುಂದೆಯೇ ಇದ್ದರೂ ಪೊಲೀಸರು ಯಾಕೆ ಸುಖಾಸುಮ್ಮನೆ ಓಡಾಡುತ್ತಿದ್ದಾರೆ? ಬೋಟ್ ಹೌಸ್‌ನಲ್ಲಿ ರೇಪ್ ಆಂಡ್ ಕೊಲೆ ನಡೆಯುವುದು ಯಾಕೆ? ಹೀಗೆ ಹಲವು ಗೊಂದಲಗಳನ್ನು ಸೃಷ್ಟಿಸಿದ್ದಾರೆ. ಇವುಗಳಿಗೆ ನಿರ್ದೇಶಕರು ಇಟ್ಟಿಕೊಂಡಿರುವ ಹೆಸರು ಚಿತ್ರಕತೆಯಲ್ಲಿನ ಟ್ವಿಸ್ಟ್‌ಗಳು. ಪ್ರೇಕ್ಷಕ ಈ ಗೊಂದಲಗಳ ಗೋಪುರದ ಮೇಲೆ ಕೂತಿದ್ದರೆ, ನಿರ್ದೇಶಕ ತಮ್ಮ ಕತೆಯೊಂದಿಗೆ ಮಡಿಕೇರಿಯ ಕಾಡಿನಲ್ಲಿ ಸಿಕ್ಕಾಕಿಕೊಂಡಿರುತ್ತಾರೆ. ಇವರಿಬ್ಬರು ಆಚೆ ಬರುವುದು ಚಿತ್ರದ ಕ್ಲೈಮ್ಯಾಕ್ಸ್‌ನಲ್ಲೇ!
ಹೊಸ ವರ್ಷದ ಸೆಲೆಬ್ರೆಷನ್‌ಗೆ ಬಂದ ಪ್ರೇಮಿಗಳು, ಅಲ್ಲಿಗೆ ಬರುವ ಸುಪಾರಿ ಕಿಲ್ಲರ್‌ಗಳು. ಉದ್ಯಮಿಯ ಸಾವಿಗೆ ಮಾಡುವ ಪ್ಲಾನ್. ಆ ಉದ್ಯಮಿ ಬಚಾವ್ ಆಗಿ ಮತ್ತೊಬ್ಬನ ಕೊಲೆಯಾಗುವುದು. ಆ ಕೊಲೆಯನ್ನು ಚಿತ್ರೀಕರಣ ಮಾಡುವ ನಾಯಕಿ. ಆಕೆಯನ್ನು ಬೆನ್ನಟ್ಟಿಹೋಗುವ ರೌಡಿಗಳು, ಅವಳನ್ನು ಕಾಪಾಡುವುದಕ್ಕೆ ಬರುವ ನಾಯಕ. ಇವನ ನೆರವಿಗೆ ಬರುವ ಮತ್ತೊಬ್ಬ ನಟಿ. ಇವರನ್ನು ರಕ್ಷಿಸಬೇಕಾದ ಪೊಲೀಸ್ ಅಧಿಕಾರಿಯೇ ಕಿಲ್ಲರ್‌ಗಳ ಜತೆ ಸೇರುವುದು. ಈ ಅಂಶಗಳನ್ನು ನೀವು ನಿಮ್ಮ ತಿಳುವಳಿಕೆಗೆ ತಕ್ಕಂತೆ ಜೋಡಿಸಿಕೊಂಡರೆ ಕತೆಯ ಸಾಲು ಸಿಗುವ ಸಾಧ್ಯತೆಗಳಿವೆ. ಆದರೆ, ಇಷ್ಟನ್ನು ದಾಲ್ ಕಿಚಡಿಯಂತೆ ಹೇಳುವುದಕ್ಕೆ ನಿರ್ದೇಶಕರು ಹೆಚ್ಚು ಕಮ್ಮಿ ಅರ್ಧ ಡಜನ್ ಕೊಲೆಗಳನ್ನು ಮಾಡಿಸುತ್ತಾರೆ. ಇದು ಪಕ್ಕಾ ದೇಸಾಯಿ ಸಿನಿಮಾ ಎಂಬುದರಲ್ಲಿ ಎರಡು ಮಾತಿಲ್ಲ. ಅವರು ಕ್ಷಣ ಕ್ಷಣಕ್ಕೂ ಕನ್ಫ್ಯೂಸ್ ಮಾಡಿಸುತ್ತಾರೆ. ಒಂದು ದೃಶ್ಯ ಮತ್ತೊಂದು ದೃಶ್ಯಕ್ಕೆ ಜಂಪ್ ಆಗುವ ಹೊತ್ತಿಗೆ ಒಂದು ಕೊಲೆ ಮಾಡಿಸುತ್ತಾರೆ. ‘ನಾನು ಕ್ರೈಮ್ ಸಸ್ಪೆನ್ಸ್ ಸಿನಿಮಾ ಮಾಡುತ್ತಿದ್ದೇನೆ’ ಎಂದು ಪದೇ ಪದೇ ಪ್ರೇಕ್ಷಕನನ್ನು ನಂಬಿಸುವ ಸಾಹಸ ಮಾಡುತ್ತಾರೆ. ದೇಸಾಯಿ ಅವರ ಈ ಸಾಹಸ ಮೆಚ್ಚಿಕೊಂಡವರಿಗೆ ಮೃಷ್ಟಾನ್ನದಂತೆ ‘ಉದ್ಘರ್ಷ’ ಕಾಣುತ್ತದೆ.
ಚಿತ್ರ: ಉದ್ಘರ್ಷ
ತಾರಾಗಣ: ಅನೂಪ್ ಸಿಂಗ್ ಠಾಕೂರ್, ಸಾಯಿ ಧನ್ಸಿಕಾ, ಕಬೀರ್ ಸಿಂಗ್ ದುಹಾನ್, ಕಿಶೋರ್, ಶ್ರದ್ಧ ದಾಸ್, ತಾನ್ಯಾ ಹೋಪ್, ಪ್ರಭಾಕರ್, ಹರ್ಷಿಕಾ ಪೂಣಚ್ಚ
ನಿರ್ದೇಶನ: ಸುನೀಲ್ ಕುಮಾರ್ ದೇಸಾಯಿ
ನಿರ್ಮಾಣ: ದೇವರಾಜ್ ಆರ್
ಸಂಗೀತ: ಸಂಜೋಯ್ ಚೌಧರಿ
ಛಾಯಾಗ್ರಾಹಣ: ಪಿ ರಾಜನ್, ವಿಷ್ಣುವರ್ಧನ್
ಸರಿ, ಇಷ್ಟಕ್ಕೂ ಕತೆ ಏನು? ಅಂತ ಮತ್ತೆ ಕೇಳಿದರೆ, ‘ರಾಮ್‌ಗೋಪಾಲ್ ವರ್ಮಾ ಸಿನಿಮಾಗಳ ಹೀರೋಗಳ ಹೆಸರು ಹೇಳಿದಷ್ಟೆ, ದೇಸಾಯಿ ಅವರ ಚಿತ್ರಗಳ ಒಂದು ಸಾಲಿನ ಕತೆ ವಿವರಿಸುವುದು ಕಷ್ಟ’. ಪಾತ್ರದಾರಿಗಳ ನಡುವೆ ವಿಚಾರಕ್ಕೆ ಬಂದರೆ ಅವರು ನಟಿಸಿದ್ದಾರೆ ಎನ್ನುವುದಕ್ಕಿಂತ ನಿರ್ದೇಶಕರ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕಿದ್ದಾರೆ. ಆದರೆ, ವಿರಾಮದ ನಂತರ ಸಂಕಲನಕಾರ ಮಾತ್ರ ಸಾಧ್ಯವಾದಷ್ಟುನಿಧಾನವೇ ಪ್ರಧಾನ ಎನ್ನುವ ಸೂತ್ರಕ್ಕೆ ಅಂಟಿಕೊಳ್ಳುವ ಪರಿಣಾಮ, ನೋಡಗನ ತಾಳ್ಮೆ ಜತೆ ಚಿತ್ರಕತೆ ಡಿಸ್ಕೋ ಡ್ಯಾನ್ಸ್ ಮಾಡಿಸುತ್ತದೆ. ಪಿ ರಾಜನ್ ಹಾಗೂ ವಿಷ್ಣುವರ್ಧನ್ ಛಾಯಾಗ್ರಾಹಣ ದೇಸಾಯಿ ಅವರ ಕನಸಿನ ಚಿತ್ರವನ್ನು ಕೊಂಚ ಹೆಚ್ಚಾಗಿ ಲಿಫ್ಟ್ ಮಾಡುತ್ತದೆ.