ಈ ಮೊದಲೇ ಅಂದುಕೊಂಡಂತೆ ಆಗಸ್ಟ್‌ 8ರ ವರಮಹಾ ಲಕ್ಷ್ಮಿ ಹಬ್ಬಕ್ಕೆ ಈ ಚಿತ್ರ ತೆರೆಗೆ ಬರಬೇಕಿತ್ತು. ಆದರೆ ದರ್ಶನ್‌ ಅಭಿನಯದ ‘ಕುರುಕ್ಷೇತ್ರ’ ಚಿತ್ರವೂ ವರಮಹಾಲಕ್ಷ್ಮಿ ಹಬ್ಬದ ಸಂದರ್ಭದಲ್ಲೇ ಬಿಡುಗಡೆಯಾಗಲಿದೆ ಎಂದು ಆ ಚಿತ್ರದ ನಿರ್ಮಾಪಕ ಮುನಿರತ್ನ ಹೇಳಿಕೊಂಡಿದ್ದರು. ಎರಡು ದೊಡ್ಡ ಸಿನಿಮಾಗಳು ಮುಖಾಮುಖಿಯಾಗಲಿರುವುದರ ಬಗ್ಗೆ ಚಿತ್ರರಂಗ ಕುತೂಹಲ ತಾಳಿತ್ತು. ಆದರೆ ಈಗ ಆ ಆತಂಕ ಇಲ್ಲವಾಗಿದೆ.

‘ವರಮಹಾಲಕ್ಷ್ಮಿ ಹಬ್ಬಕ್ಕೆ ಅಂತ ನಾವು ಈ ಮೊದಲೇ ಅಂದುಕೊಂಡಿದ್ದೆವು. ಆದರೆ ಚಿತ್ರದ ಗ್ರಾಫಿಕ್ಸ್‌ ವರ್ಕ್ ಈಗಲೂ ಒಂದಷ್ಟುಬಾಕಿಯಿದೆ. ಐದು ಭಾಷೆಗಳಿಗೂ ಕೆಲಸ ಆಗಬೇಕಿದೆ. ಇದೆಲ್ಲ ಮುಂಬೈನಲ್ಲೇ ನಡೆಯುತ್ತಿದೆ. ಮುಂಬೈನಲ್ಲೀಗ ಮಳೆ ಸಮಸ್ಯೆ. ಹಾಗಾಗಿ ಗ್ರಾಫಿಕ್ಸ್‌ ವರ್ಕ್ಗೆ ಅಡಚಣೆ ಆಗಿದೆ. ಮುಂಬೈನಲ್ಲಿ ಮಳೆ ಯಾವಾಗ ಕಮ್ಮಿ ಆಗುತ್ತದೆಯೋ ಆ ನಂತರ ಈ ಕೆಲಸಗಳು ಕಂಪ್ಲೀಟ್‌ ಆಗುತ್ತವೆ. ಆಗಲೇ ರಿಲೀಸ್‌ ಯಾವಾಗ, ಏನು ಅಂತ ಒಂದು ನಿರ್ಧಾರಕ್ಕೆ ಬರಲು ಸಾಧ್ಯ. ಈಗಲೇ ನಿಗದಿತ ದಿನಾಂಕ ಹೇಳುವುದು ಕಷ್ಟ.- ಕೃಷ್ಣ, ನಿರ್ದೇಶಕ

ಸೆಪ್ಟೆಂಬರ್‌ 2ಕ್ಕೆ ಸುದೀಪ್‌ ಹುಟ್ಟುಹಬ್ಬದಂದೇ ಅವರ ಹುಟ್ಟುಹಬ್ಬದ ಕೊಡುಗೆಯಾಗಿ ‘ಪೈಲ್ವಾನ್‌’ ಚಿತ್ರವನ್ನು ಬಿಡುಗಡೆ ಮಾಡಿದರೆ ಹೇಗೆ ಎನ್ನುವ ಲೆಕ್ಕಾಚಾರ ಕೂಡ ಚಿತ್ರತಂಡದಲ್ಲಿದೆ ಎನ್ನುತ್ತಿವೆ ಮೂಲಗಳು. ಆದರೆ ಇದ್ಯಾವುದರ ಬಗ್ಗೆಯೂ ಚಿತ್ರದ ನಿರ್ದೇಶಕ ಕಮ್‌ ನಿರ್ಮಾಪಕ ಕೃಷ್ಣ ಗುಟ್ಟು ಬಿಟ್ಟು ಕೊಡುತ್ತಿಲ್ಲ.

‘ಪೈಲ್ವಾನ್’ ಪೋಸ್ಟರ್ ರಿಲೀಸ್; ಸುದೀಪ್ ಪತ್ನಿ ವಿಶ್ ಮಾಡಿದ್ದು ಹೀಗೆ

ಕೆಜಿಎಫ್‌ಗಿಂತಲೂ ಅಧಿಕ ಬೆಲೆಗೆ ಪೈಲ್ವಾನ್‌ ಆಡಿಯೋ ಹಕ್ಕು

‘ಪೈಲ್ವಾನ್‌’ ಚಿತ್ರದ ಆಡಿಯೋ ಹಕ್ಕು ಲಹರಿ ಸಂಸ್ಥೆಯ ಪಾಲಾಗಿದೆ. ಕನ್ನಡದ ಚಿತ್ರರಂಗದ ಮಟ್ಟಿಗೆ ದಾಖಲೆ ಎನ್ನುವ ಹಾಗೆ ಅತ್ಯಧಿಕ ಬೆಲೆಗೆ ಲಹರಿ ಸಂಸ್ಥೆ ‘ಪೈಲ್ವಾನ್‌’ ಆಡಿಯೋ ಹಕ್ಕುಗಳನ್ನು ಖರೀದಿಸಿದೆಯಂತೆ. ಮೂಲಗಳ ಪ್ರಕಾರ ಐದು ಭಾಷೆಗಳಲ್ಲಿನ ಆಡಿಯೋ ಹಕ್ಕುಗಳ ಮೊತ್ತ ‘ಕೆಜಿಎಫ್‌’ ಚಿತ್ರದ ಆಡಿಯೋ ಹಕ್ಕುಗಳ ಬೆಲೆಗಿಂತಲೂ ಅಧಿಕ ಎಂದು ಮೂಲಗಳು ತಿಳಿಸಿವೆ. ಅತ್ಯಧಿಕ ಬೆಲೆಗೆ ಖರೀದಿ ಮಾಡಿದ್ದೇವೆ ಎನ್ನುವುದನ್ನು ಲಹರಿ ಸಂಸ್ಥೆಯ ಮಾಲೀಕ ಲಹರಿ ವೇಲು ಅವರೇ ತಿಳಿಸಿದ್ದಾರೆ. ಜುಲೈ 27ಕ್ಕೆ ಆಡಿಯೋ ಲಾಂಚ್‌ ಕಾರ್ಯಕ್ರಮವೂ ಫಿಕ್ಸ್‌ ಆಗಿದೆ.