‘ಆಜಾದ್ ಭಾರತ್’ 57ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಇಂಡಿಯನ್ ಪನೋರಮಾ ವಿಭಾಗಕ್ಕೆ ಆಯ್ಕೆಯಾಗಿದೆ. ನೀರಾ ಆರ್ಯ ಅವರ ಜೀವನಗಾಥೆ ಆಧಾರಿತ ಈ ಚಿತ್ರದಲ್ಲಿ ಶ್ರೇಯಸ್ ತಲ್ಪಾಡೆ ನೇತಾಜಿ ಪಾತ್ರದಲ್ಲಿ ನಟಿಸಿದ್ದಾರೆ.

ನ.20ರಿಂದ 28ರವರೆಗೆ ಗೋವಾದಲ್ಲಿ ನಡೆಯಲಿರುವ 57ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಪ್ರತಿಷ್ಠಿತ ಇಂಡಿಯನ್ ಪನೋರಮಾ ವಿಭಾಗಕ್ಕೆ ರೂಪಾ ಅಯ್ಯರ್ ನಿರ್ದೇಶಿಸಿ, ನಟಿಸಿರುವ ಐತಿಹಾಸಿಕ ಹಿಂದಿ ಚಲನಚಿತ್ರ ‘ಆಜಾದ್ ಭಾರತ್’ ಅಧಿಕೃತವಾಗಿ ಆಯ್ಕೆಯಾಗಿದೆ.

‘ಇಂಡಿಯನ್ ಪನೋರಮಾ’ ವಿಭಾಗಕ್ಕೆ ಬಂದಿದ್ದ ನೂರಾರು ಚಿತ್ರಗಳ ಪೈಕಿ 25 ಸಮಕಾಲೀನ ಭಾರತೀಯ ಸಿನಿಮಾಗಳನ್ನು ಪ್ರದರ್ಶನಕ್ಕೆ ಆಯ್ಕೆ ಮಾಡಲಾಗಿದ್ದು, ಅದರಲ್ಲಿ ‘ಆಜಾದ್ ಭಾರತ್’ ಕೂಡ ಸ್ಥಾನ ಪಡೆದಿರುವುದು ವಿಶೇಷವಾಗಿದೆ.

ಇದು ನಮಗೆ ಸಿಕ್ಕ ದೊಡ್ಡ ಗೌರವ

ಈ ಆಯ್ಕೆಯ ಕುರಿತು ಸಂತಸ ಹಂಚಿಕೊಂಡಿರುವ ರೂಪಾ ಅಯ್ಯರ್, ‘ಇದು ಇಡೀ ಚಿತ್ರತಂಡಕ್ಕೆ ಹೆಮ್ಮೆಯ ಕ್ಷಣ. ನೇತಾಜಿ ಸುಭಾಷ್ ಚಂದ್ರ ಬೋಸ್ ಮತ್ತು ಅವರ ಐಎನ್‌ಎ ತಂಡಕ್ಕೆ ಇದು ನಮ್ಮ ಹೃದಯಪೂರ್ವಕ ನಮನ. ಇದು ನಮಗೆ ಸಿಕ್ಕ ದೊಡ್ಡ ಗೌರವವಾಗಿದೆ’ ಎಂದು ಹೇಳಿದ್ದಾರೆ.

ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಹೆಚ್ಚು ಪ್ರಚಲಿತದಲ್ಲಿಲ್ಲದ, ಎಲೆಮರೆಯ ಕಾಯಿಯಂತಿದ್ದ ಅಪ್ರತಿಮ ನಾಯಕಿ ನೀರಾ ಆರ್ಯ ಅವರ ಜೀವನಾಧಾರಿತ ಕಥೆ ಈ ಚಿತ್ರದಲ್ಲಿದೆ. ಐಎನ್‌ಎಯ ಮೊದಲ ಮಹಿಳಾ ಗೂಢಚಾರಿಣಿ ಹಾಗೂ ಮಹಿಳಾ ಪಡೆ ಝಾನ್ಸಿ ರಾಣಿ ರೆಜಿಮೆಂಟ್‌ನಲ್ಲಿ ಸೇವೆ ಸಲ್ಲಿಸಿದ ನೀರಾ ಆರ್ಯ ಪಾತ್ರದಲ್ಲಿ ರೂಪಾ ಅಯ್ಯರ್ ಅಭಿನಯಿಸಿದ್ದಾರೆ.

ಗೌತಮ್ ಶ್ರೀವತ್ಸ ಸಂಗೀತ ಸಂಯೋಜನೆ

ನೇತಾಜಿ ಸುಭಾಷ್ ಚಂದ್ರ ಬೋಸ್ ಪಾತ್ರದಲ್ಲಿ ಖ್ಯಾತ ನಟ ಶ್ರೇಯಸ್ ತಲ್ಪಾಡೆ ಜೀವತುಂಬಿದ್ದಾರೆ. ಸುಚೇಂದ್ರ ಪ್ರಸಾದ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ರೂಪಾ ಅಯ್ಯರ್ ತಾವೇ ಕಥೆ, ಚಿತ್ರಕಥೆ ಬರೆದು, ನಿರ್ದೇಶಿಸಿ ಸಹ-ನಿರ್ಮಾಣವನ್ನೂ ಮಾಡಿದ್ದಾರೆ. ಗೌತಮ್ ಶ್ರೀವತ್ಸ ಸಂಗೀತ ಸಂಯೋಜನೆ ಮಾಡಿದ್ದಾರೆ.