1990ರ ದಶಕದ ಜನಪ್ರಿಯ ಕನ್ನಡ ನಟ ಸುನೀಲ್ ಅವರ ಜೀವನ ಕಥನ. 30ನೇ ವಯಸ್ಸಿನಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಸಾವು, ಮಾಲಾಶ್ರೀ ಅವರ ಜೊತೆಗೆಗಿನ ಒಡನಾಟದ ಬಗ್ಗೆ ಆಪ್ತರು, ಸಂಬಂಧಿಕರು ಹಂಚಿಕೊಂಡ ಯಾರೂ ತಿಳಿದಿರದ ಮಾಹಿತಿ. ಮತ್ತು ಅಪರೂಪದ ಫೋಟೋ ಕಲೆಕ್ಷನ್.
1990ರ ದಶಕದ ಆರಂಭದಲ್ಲಿ ತಮ್ಮ ಸೌಮ್ಯ ವ್ಯಕ್ತಿತ್ವ, ಸೈಡ್ ರೋಲ್, ಲವರ್ ಬಾಯ್ ಪಾತ್ರಗಳು, ನಾಯಕ ನಟನಾಗಿ ಕನ್ನಡ ಪ್ರೇಕ್ಷಕರ ಮನಗೆದ್ದಿದ್ದ ಸ್ಪುರದ್ರೂಪಿ ನಟ ಸುನೀಲ್. 'ಶ್ರುತಿ', 'ಬೆಳ್ಳಿ ಮೋಡಗಳು', 'ತವರು ಮನೆ ಉಡುಗೊರೆ'ಯಂತಹ ಹಿಟ್ ಚಿತ್ರಗಳ ಮೂಲಕ ಮನೆಮಾತಾಗಿದ್ದ ಈ ಹ್ಯಾಂಡ್ಸಮ್ ನಟನ ವೃತ್ತಿಜೀವನ ಮತ್ತು ಬದುಕು ಕೇವಲ 30ನೇ ವಯಸ್ಸಿನಲ್ಲಿ ಸಂಭವಿಸಿದ ದುರಂತ ಕಾರು ಅಪಘಾತದಲ್ಲಿ ಅಂತ್ಯವಾಯ್ತು. ಈಗ ಅವರು ಇರುತ್ತಿದ್ದರೆ 62 ವರ್ಷವಾಗಿರುತ್ತಿತ್ತು. ಅವರ ಹುಟ್ಟು, ಸಿನಿಮಾರಂಗದ ಪ್ರವೇಶ, ಯಶಸ್ಸು ಹಾಗೂ ಆ ಕಪ್ಪು ಚುಕ್ಕೆಯಂತಿದ್ದ ಭಾನುವಾರದ ಅಪಘಾತದ ಬಗ್ಗೆ ಅವರ ಅಳಿಯ ಅಂದರೆ ಸಹೋದರಿಯ ಮಗ, ಭಾವ, ಆಪ್ತರು ಯೂಟ್ಯೂಬ್ ಚಾನೆಲ್ ಗಳಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ.
ಕರಾವಳಿಯ ಹುಡುಗ 'ರಾಮಕೃಷ್ಣ' ಸುನೀಲ್ ಆದ ಕಥೆ
ಸುನೀಲ್ ಅವರು ಏಪ್ರಿಲ್ 1, 1964 ರಂದು ಮಂಗಳೂರಿನಲ್ಲಿ ಜನಿಸಿದರು. ಅವರ ನಿಜವಾದ ಹೆಸರು ರಾಮಕೃಷ್ಣ ಮಲ್ಲಿ. ಅಜ್ಜನ ಮೇಲಿದ್ದ ಅಪಾರ ಪ್ರೀತಿಯಿಂದಾಗಿ ಅವರಿಗೆ ಅಜ್ಜನ ಹೆಸರನ್ನೇ ಇಡಲಾಗಿತ್ತು. ಪ್ರಥಮ ಹಾಗೂ ದ್ವಿತೀಯ ತರಗತಿಯನ್ನು ಮಂಗಳೂರಿನಲ್ಲಿ ಮುಗಿಸಿದ ನಂತರ, ಭೂಸುಧಾರಣಾ ಕಾಯ್ದೆಯ ಪರಿಣಾಮವಾಗಿ ಕುಟುಂಬವು ಉಡುಪಿ ಜಿಲ್ಲೆಯ ಬಾರ್ಕೂರು ಸಮೀಪದ ಸೈಬರ್ಕಟ್ಟೆಗೆ ಸ್ಥಳಾಂತರಗೊಂಡಿತು. ಸೈಬರ್ಕಟ್ಟೆಯ ಪ್ರಾಥಮಿಕ ಶಾಲೆಯಲ್ಲಿ 3 ರಿಂದ 7ನೇ ತರಗತಿ ಹಾಗೂ ಬಾರ್ಕೂರಿನ ನ್ಯಾಷನಲ್ ಜೂನಿಯರ್ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ ಪೂರೈಸಿದರು. ಆ ಕಾಲದಲ್ಲಿ ಯಾವುದೇ ಬಸ್ ಸೌಕರ್ಯವಿಲ್ಲದ ಕಾರಣ ಪ್ರತಿದಿನ 5-6 ಕಿಲೋಮೀಟರ್ ನಡೆದುಕೊಂಡೇ ಶಾಲೆಗೆ ಹೋಗುತ್ತಿದ್ದರು.

ಯಕ್ಷಗಾನ ಕಲಾವಿದರಾಗಿದ್ದ ಸುನೀಲ್, ಚಿಕ್ಕಂದಿನಲ್ಲೇ ಸಾಲಿಗ್ರಾಮ ಮಕ್ಕಳ ಮೇಳದಲ್ಲಿ ತರಬೇತಿ ಪಡೆದು ಸಣ್ಣಪುಟ್ಟ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದರು. ಪಿಯುಸಿ ನಂತರ ಬೆಂಗಳೂರಿನ ಆರ್ವಿ ಇಂಜಿನಿಯರಿಂಗ್ ಕಾಲೇಜಿಗೆ ಸೇರ್ಪಡೆಯಾದರು. ಇಂಜಿನಿಯರಿಂಗ್ 3ನೇ ವರ್ಷದಲ್ಲಿದ್ದಾಗ ಮನೆಯವರಿಗೆ ತಿಳಿಸದೆ 'ಫೋಟೋ ಕಾಮಿಕ್ಸ್' ಮ್ಯಾಗಜೀನ್ಗಳಲ್ಲಿ ಮಾಡೆಲ್ ಆಗಿ ಭಾಗವಹಿಸಲು ಪ್ರಾರಂಭಿಸಿದರು.
ದ್ವಾರಕೀಶ್ ಅವರು 'ಶ್ರುತಿ' ಚಿತ್ರಕ್ಕೆ ಹೊಸ ಮುಖಗಳ ಹುಡುಕಾಟದಲ್ಲಿದ್ದಾಗ ಆಡಿಷನ್ ನೀಡಿದ ರಾಮಕೃಷ್ಣ ಸೆಲೆಕ್ಟ್ ಆದರು. ಚಿತ್ರರಂಗದಲ್ಲಿ ಈಗಾಗಲೇ ರಾಮಕೃಷ್ಣ ಹೆಸರಿನ ಹಿರಿಯ ನಟರೊಬ್ಬರು ಇದ್ದ ಕಾರಣ, ದ್ವಾರಕೀಶ್ ಅವರ ಸೂಚನೆಯಂತೆ ತಮ್ಮ ಹೆಸರನ್ನು 'ಸುನೀಲ್' ಎಂದು ಮರುನಾಮಕರಣ ಮಾಡಿಕೊಂಡರು. 1990ರಲ್ಲಿ ತೆರೆಕಂಡ 'ಶ್ರುತಿ' ಸಿನಿಮಾ ಸೂಪರ್ ಹಿಟ್ ಆಯಿತು. ನಂತರ 1990 ರಿಂದ 1994ರ ಕೇವಲ 3.5 - 4 ವರ್ಷಗಳ ಅವಧಿಯಲ್ಲಿ ಅವರು ತುಳು, ತೆಲುಗು ಸೇರಿದಂತೆ ಬರೋಬ್ಬರಿ 33 ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
ಮೃತ್ಯುವನ್ನು ಎರಡೆರಡು ಬಾರಿ ಗೆದ್ದು ಬಂದಿದ್ದ ಸುನೀಲ್!
ಸಿನಿಮಾ ರಂಗದಲ್ಲಿದ್ದಾಗ ಸುನೀಲ್ ಎರಡು ಬಾರಿ ಪವಾಡಸದೃಶವಾಗಿ ಸಾವಿನಿಂದ ಪಾರಾಗಿದ್ದರು. ವಿಜಯಶಾಂತಿ ಸೇರಿದಂತೆ ಹಲವು ತಾರೆಯರಿದ್ದ ವಿಮಾನ ತಿರುಪತಿಯಲ್ಲಿ ತುರ್ತು ಲ್ಯಾಂಡಿಂಗ್ ಆದಾಗ ಸುನೀಲ್ ಸೇರಿ ಹಲವಾರು ತಾರೆಯರು ಬಚಾಬ್ ಆಗಿದ್ದರು. 'ಸ್ನೇಹದ ಕಡಲಲ್ಲಿ' ಚಿತ್ರದ ಶೂಟಿಂಗ್ ಮುಗಿಸಿ ಬೆಂಗಳೂರಿಗೆ ಮರಳುವಾಗ ಅವರು ಪ್ರಯಾಣಿಸುತ್ತಿದ್ದ ಓಮ್ನಿ ವಾಹನ ಪಲ್ಟಿಯಾಗಿ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದರು.
ಜುಲೈ 24, 1994, ಚಿತ್ರರಂಗಕ್ಕೆ ಕರಿ ನೆರಳು
ಕನ್ನಡ ಚಿತ್ರರಂಗದ ಅಂದಿನ ಸ್ಟಾರ್ ನಟಿ ಮಾಲಾಶ್ರೀ ಮತ್ತು ಸುನೀಲ್ ಇಬ್ಬರೂ ಅತ್ಯಂತ ಆಪ್ತರಾಗಿದ್ದರು. ಮಾಲಾಶ್ರೀ ನಟಿಸಿದ ಬಹುತೇಕ ಸಿನೆಮಾಗಳಲ್ಲಿ ಅವರೇ ನಾಯಕಾಗಿದ್ದರು. ತೆರೆಯ ಮೇಲೆ ನೋಡಿದ್ದ ಈ ಜೋಡಿಯನ್ನು ರಿಯಲ್ ಜೋಡಿಯಾಗಲಿದ್ದಾರೆ ಎಂದೇ ಹೇಳುತ್ತಿದ್ದರು. ಅವರ ಸಂಬಂಧಿಕರ ಪ್ರಕಾರ ಸುನೀಲ್ ಮತ್ತು ಮಾಲಾಶ್ರೀ ಒಬ್ಬರನ್ನೊಬ್ಬರು ತುಂಬಾ ಹಚ್ಚಿಕೊಂಡಿದ್ದರು. ಅವರ ಊರಿನ ಮನೆಗೆ ಮಾಲಾಶ್ರೀ ಆಗಾಗ ಭೇಟಿಯಾಗಿ ತಂಗುತ್ತಿದ್ದರು. 1994ರ ಜುಲೈ ತಿಂಗಳಿನಲ್ಲಿ ಬಾಗಲಕೋಟೆ ಸಮೀಪ ಹೊಸಪೇಟೆ ಭಾಗದಲ್ಲಿ ಬಸವರಾಜು ಅವರ ನಾಟಕ ಕಂಪನಿಯ ಕಾರ್ಯಕ್ರಮವೊಂದಕ್ಕೆ ನಟಿ ಮಾಲಾಶ್ರೀ ಹಾಗೂ ಸುನೀಲ್ ಮುಖ್ಯ ಅತಿಥಿಗಳಾಗಿ ತೆರಳಿದ್ದರು. ರಾತ್ರಿ ಕಾರ್ಯಕ್ರಮ ಮುಗಿದಾಗ ಸುನೀಲ್ ತೀವ್ರ ಸುಸ್ತಾಗಿದ್ದರಿಂದ ಅಲ್ಲಿಯೇ ತಂಗಲು ಬಯಸಿದ್ದರು. ಆದರೆ ಕಾರು ಚಾಲಕ ಕೃಷ್ಣ, ಮಾರನೇ ದಿನ ತನ್ನ ಮಗಳ ಹುಟ್ಟುಹಬ್ಬವಿದ್ದ ಕಾರಣ ರಾತ್ರಿಯೇ ಹೊರಡಲು ಮನವಿ ಮಾಡಿದ್ದರು. ಚಾಲಕನ ವಿನಂತಿಗೆ ಒಪ್ಪಿದ ಸುನೀಲ್, ರಾತ್ರಿ ಸುಮಾರು 1 ಗಂಟೆಯ ವೇಳೆಗೆ ಹೊಸಪೇಟೆಯಿಂದ ಕಾಂಟೆಸ್ಸಾ (Contessa) ಕಾರಿನಲ್ಲಿ ಬೆಂಗಳೂರಿಗೆ ಹೊರಟರು. ಕಾರಿನ ಮುಂಭಾಗದಲ್ಲಿ ಚಾಲಕ ಕೃಷ್ಣ ಹಾಗೂ ಸುನೀಲ್ ಅವರ ಸಂಬಂಧಿ ಸಚಿನ್ ಕುಳಿತಿದ್ದರೆ, ಹಿಂಭಾಗದ ಸೀಟಿನಲ್ಲಿ ಸುನೀಲ್ ಮತ್ತು ನಟಿ ಮಾಲಾಶ್ರೀ ಜೊತೆಗೆ ಕುಳಿತಿದ್ದರು.

ರಾತ್ರಿ 3:30ರ ವರೆಗೆ ಎಲ್ಲರೂ ಮಾತನಾಡುತ್ತಲೇ ಬಂದಿದ್ದರು. ಭಾನುವಾರ ಮುಂಜಾನೆ 4:00 ಗಂಟೆಯ ಸುಮಾರಿಗೆ ಚಿತ್ರದುರ್ಗದ ಬಳಿ ತಮಿಳುನಾಡಿನ ಲಾರಿಯೊಂದು ವೇಗವಾಗಿ ಬಂದು ಕಾರಿಗೆ ನೇರವಾಗಿ ಗುದ್ದಿದೆ. ಲಾರಿ ಡಿಕ್ಕಿಯಾದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಯಿತು.
ಚಾಲಕ ಕೃಷ್ಣ ಸ್ಥಳದಲ್ಲೇ ಸಾವನ್ನಪ್ಪಿದನು. ಚಾಲಕನ ಹಿಂಬದಿಯಲ್ಲಿದ್ದ ಸುನೀಲ್ ಅವರ ದೇಹಕ್ಕೆ ತೀವ್ರ ಗಾಯಗಳಾಗಿ, ಕೆಳಭಾಗ ಸಂಪೂರ್ಣ ತುಂಡಾಗಿ ನಜ್ಜುಗುಜ್ಜಾಗಿತ್ತು. ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲೇ ಸುನೀಲ್ ಪ್ರಾಣ ಪಕ್ಷಿ ಹಾರಿಹೋಯಿತು. ಮಾಲಾಶ್ರೀ ಹಾಗೂ ಸಚಿನ್ ತೀವ್ರ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾದರು.
ನೆನಪಾಗಿ ಉಳಿದ ಕರಾವಳಿಯ ನಕ್ಷತ್ರ
ಸುನೀಲ್ ಅವರ ಮೃತದೇಹವನ್ನು ಉಡುಪಿ ಜಿಲ್ಲೆಯ ಬಾರ್ಕೂರು ಸಮೀಪದ ಎಡ್ತಾಡಿಯಲ್ಲಿರುವ ಅವರ ಸ್ವಂತ ಮನೆಗೆ ತರಲಾಯಿತು. ಸುರಿಯುವ ಭಾರಿ ಮಳೆಯ ನಡುವೆಯೂ ಸಾವಿರಾರು ಅಭಿಮಾನಿಗಳು ಹಾಗೂ ನಟ ರವಿಶಂಕರ್ (ಸಾಯಿ ಕುಮಾರ್ ಸಹೋದರ), ಗುರುದತ್ ಸೇರಿದಂತೆ ಚಿತ್ರರಂಗದ ಆಪ್ತ ಮಿತ್ರರು ಅಂತಿಮ ದರ್ಶನ ಪಡೆದರು. ಅರುಮುಗಂ ನಟ ರವಿಶಂಕರ್ ಅವರು ಅಂದಿನ ಕಾಲದಲ್ಲೇ ಸುನೀಲ್ ಅವರ ಅತ್ಯಾಪ್ತರು.
ಅಭಿಮಾನಿಗಳ ಆಗ್ರಹದ ಮೇರೆಗೆ ಅವರ ಅಗ್ನಿ ಸ್ಪರ್ಶ ಮಾಡಿದ ಸ್ಥಳದಲ್ಲಿ ಸಣ್ಣ ಸೌಧ ನಿರ್ಮಿಸಲಾಗಿದೆ. ಸುನೀಲ್ ಅವರ ಒಡನಾಡಿಗಳು ಮತ್ತು ಕುಟುಂಬಸ್ಥರು ಇಂದಿಗೂ ಅವರನ್ನು ನೆನೆದು ಭಾವುಕರಾಗುತ್ತಾರೆ. ರಾಜಕೀಯದ ಬಗ್ಗೆ ತೀವ್ರ ಆಸಕ್ತಿ ಹೊಂದಿದ್ದ ಸುನೀಲ್ ಜೀವಂತವಾಗಿದ್ದರೆ ಉತ್ತಮ ನಟನಷ್ಟೇ ಅಲ್ಲದೆ, ಯಶಸ್ವಿ ನಿರ್ಮಾಪಕ ಜೊತೆಗೆ ರಾಜಕಾರಣಿಯಾಗುತ್ತಿದ್ದರು ಎಂಬುದು ಅವರ ಆಪ್ತರ ಅಭಿಪ್ರಾಯ. ಕೇವಲ 30 ವರ್ಷಕ್ಕೆ ಇಹಲೋಕ ತ್ಯಜಿಸಿದರೂ, ತಮ್ಮ ಅಪರೂಪದ ಅಭಿನಯದ ಮೂಲಕ ಸುನೀಲ್ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಶಾಶ್ವತವಾಗಿ ಉಳಿದಿದ್ದಾರೆ.











