ಖ್ಯಾತ ಚಿತ್ರನಟ ಕಮಲ್ ಹಾಸನ್  ರಾಜಕೀಯ ಸೇರ್ಪಡೆಯ ಮಾತುಗಳು ಎಲ್ಲಡೆ ಸುದ್ದಿಯಾಗುತ್ತಿದೆ. ಅವರು ವಿವಿಧ ವಾಹಿನಿಗಳಿಗೆ ನೀಡಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ.

1) ಹೊಸ ರಾಜಕೀಯ ಪಕ್ಷ ಸ್ಥಾಪನೆ ಯಾವಾಗ?

ಕ: ಯಾವುದೇ ದಿನಾಂಕ ಕೊಡಲು ಸದ್ಯದ ಸ್ಥಿತಿಯಲ್ಲಿ ನನಗೆ ಸಾಧ್ಯವಿಲ್ಲ. ತುಂಬಾ ಸಿದ್ಧತೆ ಮಾಡಿಕೊಳ್ಳುವುದಿದೆ. ಇನ್ನೂ ಸಾಕಷ್ಟು ಕೆಲಸವಾಗಬೇಕು. ಏನು ಮಾಡುವುದಿದ್ದರೂ ಸರಿಯಾಗಿ ಮಾಡಬೇಕೆನ್ನುವ ನನ್ನಂತಹ ವ್ಯಕ್ತಿಗೆ ಸಿದ್ಧತೆ ಬಹಳ ಮುಖ್ಯ. ಇದೂ ಕೂಡ ಸಿನಿಮಾ ಬಿಡುಗಡೆಯಂತೆ. ಎಲ್ಲಾ ಸಿದ್ಧತೆ ಆಗದ ಹೊರತು ‘ಬಿಡುಗಡೆ’ ಸಾಧ್ಯವಿಲ್ಲ. ಸಿದ್ಧವಾಗುವುದಕ್ಕೂ ಮೊದಲೇ ಮುಂದೆ ಜಿಗಿದು ಮೂರ್ಖನಾಗುವ ವ್ಯಕ್ತಿ ನಾನಲ್ಲ.

2) ನಿಮ್ಮ ಗುರಿ ಏನು? ತಮಿಳುನಾಡಿನಮುಖ್ಯಮಂತ್ರಿಯಾಗುವುದಾ?

ಕ: ಕೆಲ ತಮಿಳು ಮಾಧ್ಯಮಗಳು ನನ್ನ ಇಂಗ್ಲಿಷ್ ಸಂದರ್ಶನವನ್ನು ತಪ್ಪಾಗಿ ಭಾಷಾಂತರ ಮಾಡಿ ನಾನು ಮುಖ್ಯಮಂತ್ರಿಯಾಗುವ ಗುರಿ ಇಟ್ಟುಕೊಂಡಿದ್ದೇನೆ ಎಂದು ಪ್ರಚಾರ ಮಾಡಿದವು. ಯಾರು ಅಧಿಕಾರದಲ್ಲಿರಬಾರದು ಎಂಬ ಬಗ್ಗೆ ನನಗೆ ಸ್ಪಷ್ಟತೆಯಿದೆ. ಆದರೆ, ಯಾರು ಅಧಿಕಾರ ನಡೆಸಬೇಕು ಎಂದು ನಿರ್ಧಾರ ಮಾಡಬೇಕಾದವರು ಜನರು. ನಾನು ಮುಖ್ಯಮಂತ್ರಿಯಾಗುತ್ತೇನೆ ಎಂದು ಘೋಷಿಸಿಕೊಂಡು ರಾಜಕೀಯಕ್ಕೆ ಬರುವುದು ನಾನು 100 ದಿನ ಓಡುವ ಸಿನಿಮಾ ಮಾಡುತ್ತೇನೆಂದು ಘೋಷಿಸಿಕೊಂಡು ಸಿನಿಮಾ ಶೂಟಿಂಗ್ ಆರಂಭಿಸಿದಂತೆ! ತಪ್ಪು ಮಾರ್ಗವಿದು.

3) ತಮಿಳುನಾಡಿನಲ್ಲಿ 234 ವಿಧಾನಸಭೆ ಕ್ಷೇತ್ರಗಳಿವೆ. ಎಲ್ಲಾಕ್ಷೇತ್ರಗಳಲ್ಲೂ ಹೊಸಬರನ್ನು ಕಣಕ್ಕಿಳಿಸುತ್ತೀರಾ?

ಕ: ಯುವಕರು, ಅರ್ಹರು ಹಾಗೂ ಸಮರ್ಥ ಹೊಸ ಮುಖಗಳನ್ನೇ ಎಲ್ಲಾ ಕ್ಷೇತ್ರಗಳಲ್ಲೂ ನಿಲ್ಲಿಸಬೇಕು ಎಂಬ ಚಿಂತನೆಯಿದೆ. ಅವರು ನನ್ನಂಥವರು, ನನ್ನನ್ನು ಇಷ್ಟಪಡುವವರು ಅಥವಾ ನಾನು ಇಷ್ಟಪಡುವವರೇ ಆಗಿರಬೇಕಿಲ್ಲ. ಅವರಲ್ಲಿ ಹೊಸತಿರಬೇಕು ಅಷ್ಟೆ.

4) ಆಮ್ ಆದ್ಮಿ ಪಕ್ಷ ನಿಮಗೆ ಮಾದರಿಯೇ? ಅಥವಾನಿಮ್ಮದೇ ಸಂಪೂರ್ಣ ಬೇರೆ ದಾರಿಯಾಗಿರುತ್ತದೆಯೇ?

ಕ: ಎಲ್ಲರನ್ನೂ ಭೇಟಿ ಮಾಡುತ್ತಿದ್ದೇನೆ. ಎಲ್ಲಾ ರಾಜಕೀಯ ಪಕ್ಷಗಳಿಂದಲೂ ಒಳ್ಳೆಯದನ್ನು ತೆಗೆದುಕೊಳ್ಳುತ್ತೇನೆ. ಹೊಸತಾಗಿ ಚಕ್ರ ಕಂಡುಹಿಡಿಯು ವ ಹುಚ್ಚು ಗುರಿ ನನಗಿಲ್ಲ. ಇರುವ ಚಕ್ರವನ್ನೇ ಸರಿಪಡಿಸುತ್ತೇನೆ.

5) ನೀವು ರಾಜಕೀಯವನ್ನು ಟೀಕಿಸುತ್ತಿದ್ದವರು. ಆದರೆಈಗ ನೀವೇ ರಾಜಕೀಯಕ್ಕೆ ಬರುತ್ತಿದ್ದೀರಿ?

ಕ: ಹೌದು, ನನಗೆ ರಾಜಕೀಯವೆಂದರೆ ಇಷ್ಟವಿರಲಿಲ್ಲ. ಆದರೆ ಯಾವತ್ತೂ ರಾಜಕಾರಣದ ಮೇಲೆ ಒಂದು ಕಣ್ಣಿಟ್ಟಿರುತ್ತಿದ್ದೆ. ನಾನು ರಾಜಕೀಯಕ್ಕೆ ಬರಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ ಅಂದುಕೊಂಡಿರಲಿಲ್ಲ. ಸುಮಾರು 25 ವರ್ಷದಿಂದ ನಿಧಾನವಾಗಿ ಈ ಸ್ಥಿತಿ ಬರುತ್ತ ಬರುತ್ತ ಈಗ ಅನಿವಾರ್ಯವಾಗಿ ನಾನು ರಾಜಕೀಯಕ್ಕೆ ಬರಲೇಬೇಕಾದ ಸನ್ನಿವೇಶ ನನ್ನ ಪಾಲಿಗೆ ನಿರ್ಮಾಣವಾಗಿದೆ. ಭ್ರಷ್ಟಾಚಾರ, ಕೋಮುವಾದ ಹಾಗೂ ದುರಾಡಳಿತ ಮಿತಿಮೀರಿದೆ. ಇದರಿಂದ

ಹೊರಬರಲು ಜನರು ದಾರಿ ಹುಡುಕುತ್ತಿದ್ದಾರೆ. ಹೀಗಾಗಿ ನಾನು ಸುಮ್ಮನಿರಲು ಸಾಧ್ಯವಿಲ್ಲ. ಇದೊಂದು ಧೈರ್ಯಶಾಲಿ ನಿರ್ಧಾರ. ಆದರೆ, ಆತುರದ ನಿರ್ಧಾರ ಖಂಡಿತ ಅಲ್ಲ.

6) ರಜನೀಕಾಂತ್ ಮೊದಲು ರಾಜಕೀಯಕ್ಕೆ ಬರುವಮಾತನಾಡಿದರು. ಅವರೇ ನಿಮಗೆ ಸ್ಫೂರ್ತಿಯಾದರೆ?

ಕ: ಇಲ್ಲ. ನನಗೂ ರಜನೀಕಾಂತ್ ಅವರಿಗೂ ಯಾವುದೇ ರೀತಿಯಲ್ಲೂ ಹೋಲಿಕೆಯಿಲ್ಲ. ಸಿನಿಮಾದಿಂದ ಹಿಡಿದು ಚಿಂತನೆಯ ಧಾಟಿಯವರೆಗೆ ಎಲ್ಲದರಲ್ಲೂ ನಾವು ಬೇರೆ. ಅವರ ರಾಜಕೀಯ ಮಾರ್ಗ ಕೂಡ ಬೇರೆಯೇ ಇರಬಹುದು. ಅವರ ಜತೆ ನಾನು ಪೈಪೋಟಿಗಿಳಿಯುವುದಿಲ್ಲ. ನಮ್ಮಿಬ್ಬರಲ್ಲಿ ಯಾರು ಗೆಲ್ಲುತ್ತಾರೆಂಬುದು ಚರ್ಚೆಯ ವಿಷಯ ಅಲ್ಲ. ನಮ್ಮಿಬ್ಬರಲ್ಲಿ ಜನರನ್ನು ಯಾರು ಗೆಲ್ಲಿಸುತ್ತಾರೆಂಬುದು ಜಿಜ್ಞಾಸೆಯಾಗಲಿ. ನಮ್ಮಿಬ್ಬರ ಹೆಸರು ಇಲ್ಲಿ ಮುಖ್ಯವಲ್ಲ.

7) ಕಮಲ್ ಬುದ್ಧಿವಂತ. ಆದರೆ, ಅವರು ಮಾಸ್ ಅಲ್ಲ, ಕ್ಲಾಸ್. ಅವರಲ್ಲಿ ಬಹಳ ಐಡಿಯಾ ಇದೆ, ಆದರೆ

ಜನರಿಗದು ಅರ್ಥವಾಗುವುದಿಲ್ಲ ಎಂಬ ಮಾತಿದೆಯಲ್ಲ?

ಕ: ಸಿನಿಮಾವನ್ನೂ ರಾಜಕೀಯವನ್ನು ಹೋಲಿಸುವುದು ತಪ್ಪು. ಗಾಂಧೀಜಿ ಮಾಸ್ ಆಗಿದ್ದರೆ ನಾನೂ ಮಾಸ್. ಅವರು ಕ್ಲಾಸ್ ಹಾಗೂ ಬುದ್ಧಿಜೀವಿ ಎಂದು ನೀವು ಹೇಳುವುದಾದರೆ ನಾನೂ ಬುದ್ಧಿಜೀವಿ.

8) ನೀವು ಮಾತನಾಡಿದಾಗಲೆಲ್ಲ ಹೆಚ್ಚಿನ ಸಲವಿವಾದವಾಗಿದೆ. ಮುಂದೆಯೂ ಹೀಗಾದರೆ?

ಕ: ನಾನು ನನ್ನ ಸಿನಿಮಾ ಅಭಿಮಾನಿಗಳಾಗಲೀ ಅಥವಾ ಯಾವುದೋ ವ್ಯಕ್ತಿಗೆ ಪ್ರಚಾರ ನೀಡಿ ದೊಡ್ಡವರನ್ನಾಗಿ ಮಾಡುವವರಾಗಲೀ ನನ್ನನ್ನು ಹಿಂಬಾಲಿಸಲಿ ಎಂದು ಬಯಸುತ್ತಿಲ್ಲ. ನಾನೇನು ಹೇಳಬೇಕೋ ಅದನ್ನು ಹೇಳಿಯೇ ಹೇಳುತ್ತೇನೆ. ನಾನು ಹೇಳದಿದ್ದರೆ ಬೇರೆ ಯಾರಾದರೂ ಅದನ್ನು ಹೇಳುತ್ತಾರೆ. ಯಾವುದು ಹೊರಬರಬೇಕೋ ಅದನ್ನು ಮುಚ್ಚಿಡಬಾರದು.

9) ನೀವು ಈಗಾಗಲೇ ತಮಿಳುನಾಡಿನಲ್ಲಿ ವಿರೋಧಪಕ್ಷದಂತೆ ಮಾತನಾಡುತ್ತಿದ್ದೀರಿ. ಇದು ರಾಜಕೀಯಕ್ಕೆ

ಬರುವುದರ ಸಿದ್ಧತೆಯೇ?

ಕ: ಅಲ್ಲ. ವಾಸ್ತವವಾಗಿ ಭ್ರಷ್ಟಾಚಾರ ಹಾಗೂ ಇತರ ಸಮಸ್ಯೆಗಳ ಬಗ್ಗೆ ಜನರು ಮಾತನಾಡಬೇಕು. ಆದರೆ, ಅವರು ತಮ್ಮ ತಮ್ಮ ಬದುಕಿನಲ್ಲಿ ಬ್ಯುಸಿ ಇದ್ದಾರೆ. ಹಾಗಾಗಿ ವಿರೋಧ ಪಕ್ಷದವರು ಗದ್ದಲ ಮಾಡುತ್ತಿದ್ದಾರೆ. ಆದರೆ ಈಗ ಯಾವುದು ವಿರೋಧ ಪಕ್ಷ, ಯಾವುದು ಆಡಳಿತ ಪಕ್ಷ ಎಂಬುದೇ ತಿಳಿಯದಷ್ಟು ಎಲ್ಲವೂ ಗಬ್ಬೆದ್ದುಹೋಗಿದೆ. ನನಗಿಂತ ಸಣ್ಣ ವಯಸ್ಸಿನವರನ್ನು ಜೊತೆಗೆ ಸೇರಿಸಿಕೊಂಡು ಈ ರಾಜಕೀಯ ಸಂಸ್ಕೃತಿಯನ್ನು ಸರಿಪಡಿಸುವುದು ನನ್ನ ಗುರಿ. ನನಗಿಂತ ಚಿಕ್ಕ ಜನಸಾಮಾನ್ಯ ಯುವಕರೇ ನನಗೆ ಗುರುಗಳು.

10) ನಿಮ್ಮ ರಾಜಕೀಯ ಸಿದ್ಧಾಂತ ಯಾವುದು?

ಕ: ಆಯ್ಕೆ ಮಾಡಿಕೊಳ್ಳಲು ಬಹಳಷ್ಟು ಸಿದ್ಧಾಂತಗಳಿವೆ. ಕೆಲ ಕಮ್ಯುನಿಸ್ಟ್ ಹಾಗೂ ಸಮಾಜವಾದಿ ಸಿದ್ಧಾಂತಗಳ ಅಭಿಮಾನಿ ನಾನು. ಅವುಗಳಲ್ಲಿ ಕೆಲವು ಯಶಸ್ವಿಯಾಗಿವೆ, ಕೆಲವು ವಿಫಲವಾಗಿವೆ. ವಿಫಲವಾಗಿರುವುವು ಏಕೆ ವಿಫಲವಾಗಿವೆ ಎಂಬುದನ್ನು ತಿಳಿದುಕೊಳ್ಳುವಷ್ಟು ವಯಸ್ಸು ನನಗಾಗಿದೆ! ಕೆಲವರು ನಾನು ಎಡ ಪಂಥೀಯ ಎನ್ನುತ್ತಾರೆ. ಜನರಿಗಾಗಿ ನಾನು ಹೊಂದಾಣಿಕೆ ಮಾಡಿಕೊಂಡು ಮಧ್ಯಮ ಮಾರ್ಗಕ್ಕೆ ಬಂದೇನು. ಇನ್ನೂ ನಿರ್ಧರಿಸಿಲ್ಲ. ಇಷ್ಟಕ್ಕೂ ಎಡಕ್ಕೆ ವಾಲುವುದು, ಬಲಕ್ಕೆ ವಾಲುವುದು ನನಗೆ ಮುಖ್ಯವಲ್ಲ. ಜನರ ಕಡೆ ವಾಲಬೇಕು ಎಂಬ ಗುರಿಯಷ್ಟೇ ನನ್ನದು.

11) ನಿಮ್ಮ ರಾಜಕೀಯದಲ್ಲಿ ಬಿಜೆಪಿಗೆ ಯಾವ ಸ್ಥಾನವಿರುತ್ತೆ?

ಕ: ಪ್ರಸ್ತುತ ಬಿಜೆಪಿಯವರು ಬಲದಲ್ಲಿ ಬಹಳ ಆಳಕ್ಕೆ ಹೋಗುತ್ತಿದ್ದಾರೆ. ನನ್ನ ಸಿದ್ಧಾಂತಕ್ಕೆ ಧಕ್ಕೆ ಬಾರದೆ, ಕೇವಲ ಆಡಳಿತದ ಕಾರಣಕ್ಕಾದರೆ ಅವರ ಜೊತೆ ಕೈಜೋಡಿಸಲು ಸಿದ್ಧ. ಅದು ರಾಜ್ಯದ ಹಿತದೃಷ್ಟಿಯಿಂದ ಆಗಿರಬೇಕು. ಆದರೆ, ನನ್ನ ಚಿಂತನಾ ಕ್ರಮ ಬಿಜೆಪಿಗೆ ಹಿಡಿಸುತ್ತದೆಯೋ ಇಲ್ಲವೋ ಗೊತ್ತಿಲ್ಲ. ರಾಜಕೀಯದಲ್ಲಿ ಅಸ್ಪಶ್ಯತೆಯಿಲ್ಲ.

12)ನೀವು ಗೆಲ್ಲುತ್ತೀರಿ ಎಂಬ ವಿಶ್ವಾಸ ನಿಜಕ್ಕೂ ಇದೆಯೇ?

ಕ: ಸದ್ಯಕ್ಕೆ ನನ್ನ ರಾಜಕೀಯ ಯೋಜನೆಗಳೇನು ಎಂಬುದು ನನಗೆ ಗೊತ್ತಿಲ್ಲ. ನಾನು ಏನು ಮಾಡುತ್ತೇನೆ, ಯಾವ ಬದಲಾವಣೆ ತರುತ್ತೇನೆ ಎಂಬುದೂ ನನಗೆ ಸ್ಪಷ್ಟವಿಲ್ಲ. ಆದರೆ, ಯಾರು ಗೆಲ್ಲಬಾರದು ಎಂಬುದು ನನಗೆ ಸ್ಪಷ್ಟವಿದೆ. ಯಾರನ್ನು ಗೆಲ್ಲಿಸಬೇಕೆಂಬುದು ಜನರಿಗೆ ಸ್ಪಷ್ಟವಿದೆ. ಒಂದು ಸಂಗತಿ ಬರೆದಿಟ್ಟುಕೊಳ್ಳಿ ಮುಂದಿನ ಚುನಾವಣೆಯಲ್ಲಿ ಯಾರು ಮರಳಿ ಗೆದ್ದು ಬರಬೇಕು ಎಂದುಕೊಂಡಿದ್ದಾರೋ ಅವರು ಖಂಡಿತ ಬರುವುದಿಲ್ಲ.

(ಕನ್ನಡಪ್ರಭ)