Mayamruga title song: ಪತ್ನಿ ವೆಂಕಮ್ಮ ಮಾತಿಗೆ ಕಟ್ಟುಬಿದ್ದು ಕೆ.ಎಸ್. ನರಸಿಂಹಸ್ವಾಮಿ ಬರೆದಿದ್ದ ಪದ್ಯ, ಮರುದಿನ ಅವರ ಜೇಬಿನಲ್ಲೇ ಸಿಕ್ಕಿತ್ತು! ಆ ಪದ್ಯಕ್ಕೆ ಸ್ಟುಡಿಯೋದಲ್ಲಿ ಸಿ. ಅಶ್ವತ್ಥ್ ಕೇವಲ 1.5 ನಿಮಿಷದಲ್ಲಿ ರಾಗ ಸಂಯೋಜನೆ ಮಾಡಿದ್ದರು! 30 ವರ್ಷಗಳಾದರೂ ಅಜರಾಮರವಾಗಿರುವ ಈ ಗೀತೆ ಹುಟ್ಟಿದ ಅಚ್ಚರಿಯ ಕಥೆ ಇಲ್ಲಿದೆ.

ಕನ್ನಡ ಕಿರುತೆರೆ ಇತಿಹಾಸದಲ್ಲಿ ಅಜರಾಮರವಾಗಿ ಉಳಿದಿರುವ ‘ಮಾಯಾಮೃಗ’ ಧಾರಾವಾಹಿಯ ಶೀರ್ಷಿಕೆ ಗೀತೆಗೆ ಈಗಲೂ ಅಪಾರ ಅಭಿಮಾನಿಗಳಿದ್ದಾರೆ. ಆದರೆ 30 ವರ್ಷಗಳಾದರೂ ತನ್ನ ಜನಪ್ರಿಯತೆಯನ್ನು ಉಳಿಸಿಕೊಂಡಿರುವ ಈ ಅದ್ಭುತ ಹಾಡು ಹುಟ್ಟಿದ್ದು ಹೇಗೆ ಗೊತ್ತಾ? ಕವಿ ಕೆ.ಎಸ್. ನರಸಿಂಹಸ್ವಾಮಿ ಅವರು ಪದ್ಯ ಬರೆಯಲು ನಿರಾಕರಿಸಿದ್ದರಿಂದ ಹಿಡಿದು, ಗಾಯಕ-ಸಂಯೋಜಕ ಸಿ. ಅಶ್ವತ್ಥ್ ಅವರು ಕೇವಲ ಒಂದೂವರೆ ನಿಮಿಷದಲ್ಲಿ ಈ ಹಾಡಿಗೆ ರಾಗ ಸಂಯೋಜನೆ ಮಾಡಿದ ರೋಚಕ ಪ್ರಸಂಗವನ್ನು ನಿರ್ದೇಶಕರಾದ ಶೇಷಾದ್ರಿ ಮತ್ತು ಟಿ.ಎನ್. ಸೀತಾರಾಮ್ (ಟಿ.ಎನ್.ಎಸ್) ಅವರು ಸಾಹಿತ್ಯ ಗೋಷ್ಠಿಯೊಂದರಲ್ಲಿ ಮೆಲುಕು ಹಾಕಿದ್ದಾರೆ.

‘ಸಾಹಿತ್ಯದಲ್ಲಿ ಸೃಜನಶೀಲತೆಯ ಬೆರಗು’ ಎಂಬ ಗೋಷ್ಠಿಯಲ್ಲಿ ಮಾತನಾಡಿದ ಇವರಿಬ್ಬರೂ 30 ವರ್ಷಗಳ ಹಿಂದಿನ ಆ ಅಪರೂಪದ ಸೃಜನಶೀಲತೆಯ ಕ್ಷಣವನ್ನು ಹೀಗೆ ವಿವರಿಸಿದರು...

ಪತ್ನಿ ವೆಂಕಮ್ಮ ಮಾತಿಗೆ ಕಟ್ಟುಬಿದ್ದು ಪದ್ಯ ಬರೆದ ಕೆಎಸ್‌ನ!

ಸುಮಾರು 30 ವರ್ಷಗಳ ಹಿಂದೆ ‘ಮಾಯಾಮೃಗ’ ಧಾರಾವಾಹಿ ಆರಂಭಿಸುವಾಗ ಶೇಷಾದ್ರಿ, ಟಿ.ಎನ್. ಸೀತಾರಾಮ್ ಹಾಗೂ ಶ್ರೀನಿವಾಸ್ ಅವರು ಬನಶಂಕರಿ ವಾಟರ್ ಟ್ಯಾಂಕ್ ಬಳಿಯಿದ್ದ ಕವಿ ಕೆ.ಎಸ್. ನರಸಿಂಹಸ್ವಾಮಿ (ಕೆಎಸ್‌ನ) ಅವರ ಮನೆಗೆ ಹೋಗಿದ್ದರು. ಧಾರಾವಾಹಿಗೆ ಅವರ ಖ್ಯಾತಿಯೂ ಸಿಗಲಿ ಎಂಬ ಉದ್ದೇಶದಿಂದ ಹೊಸ ಪದ್ಯ ಬರೆದುಕೊಡುವಂತೆ ಕೇಳಿಕೊಂಡರು.

ಅದರಲ್ಲಿಯೂ, "ಇದು ಮೂರು ಹೆಣ್ಣು ಮಕ್ಕಳ ಕಥೆ; ಒಂದು ಸಾಲಿನಲ್ಲಿ ‘ಮಾಯಾಮೃಗ, ಮಾಯಾಮೃಗ, ಮಾಯಾಮೃಗ’ ಎಂದು ಮೂರು ಬಾರಿ ಬರುವಂತೆ ಪದ್ಯ ಬರೆದುಕೊಡಿ" ಎಂದು ಬೇಡಿಕೆ ಇಟ್ಟರು. ಇದಕ್ಕೆ ಕೆಎಸ್‌ನ ಅವರು, "ಇಲ್ಲಿವರೆಗೂ ಯಾರೂ ನನಗೆ ಹೀಗೆ ಹೇಳಿರಲಿಲ್ಲ, ನೀವೇ ಹೇಳಿದ್ದನ್ನು ನಾನು ಬರೆಯಬೇಕಾ? ನನ್ನ ‘ಮೈಸೂರು ಮಲ್ಲಿಗೆ’ ಪುಸ್ತಕದಲ್ಲಿರುವ ಯಾವುದಾದರೂ ಪದ್ಯ ಬಳಸಿಕೊಳ್ಳಿ" ಎಂದು ನಿರಾಕರಿಸಿದರು. ಆಗ ನೆರವಿಗೆ ಬಂದವರೇ ಅವರ ಪತ್ನಿ ವೆಂಕಮ್ಮ. "ಪಾಪ ಹುಡುಗರು ಏನೋ ಬಂದಿದ್ದಾರೆ, ಒಂದು ಬರೆದುಕೊಡಬಾರದೇ?" ಎಂದು ಅವರು ಹೇಳಿದಾಗ, ಕೆಎಸ್‌ನ ಮರುದಿನ ಬರುವಂತೆ ತಿಳಿಸಿದರು.

ಮರುದಿನ ಬೆಳಗ್ಗೆ ಹೋದಾಗ ಕೆಎಸ್‌ನ ಅವರಿಗೆ ಸ್ವಲ್ಪ ಅರೆಮರವು ಆವರಿಸಿ, ತಾವು ಬರೆದಿದ್ದನ್ನೇ ಮರೆತಂತಿತ್ತು. ಪತ್ನಿ ವೆಂಕಮ್ಮ "ರಾತ್ರಿಯೆಲ್ಲಾ ಕೂತು ಬರೆದರಲ್ಲ ರೀ" ಎಂದು ನೆನಪಿಸಿದಾಗ ಇಡೀ ಮನೆಯಲ್ಲೆಲ್ಲಾ ಹುಡುಕಾಡಿ ಚೀಟಿ ಕಳೆದುಹೋಯಿತು ಎಂದುಕೊಂಡರು. ಕೊನೆಗೆ ಜೇಬಿಗೆ ಕೈ ಹಾಕಿದಾಗ, ಮೂರು ಚರಣಗಳ ‘ಮಾಯಾಮೃಗ’ ಪದ್ಯ ಬರೆದಿದ್ದ ಆ ಪುಟ್ಟ ಹಾಳೆ ಅವರ ಜೇಬಲ್ಲೇ ಸಿಕ್ಕಿತು!

‘ಚೊಂಬು ಎತ್ತಿಕೊಂಡು ಹೋಗುತ್ತೆ’ ಎಂದಿದ್ದ ಅಶ್ವತ್ಥ್, 1.5 ನಿಮಿಷದಲ್ಲಿ ರಾಗ ಹಾಕಿದ್ದೇಗೆ?

ಮಧ್ಯಾಹ್ನ ಒಂದೂವರೆಯ ವೇಳೆಗೆ ಕೆಎಸ್‌ನ ಅವರಿಂದ ಆ ಪದ್ಯವನ್ನು ಪಡೆದ ಟಿ.ಎನ್. ಸೀತಾರಾಮ್ ಅವರು, ಅದಕ್ಕೆ ಸಂಗೀತ ಮಾಡಿಸಲು ಸಿ. ಅಶ್ವತ್ಥ್ ಅವರನ್ನು ಹುಡುಕಿಕೊಂಡು ಅರವಿಂದ ಸ್ಟುಡಿಯೋಗೆ ಹೋದರು. ಆಗಷ್ಟೇ ಹಾಡು ಮುಗಿಸಿ ಊಟಕ್ಕೆ ಹೊರಡುತ್ತಿದ್ದ ಅಶ್ವತ್ಥ್ ಅವರ ಬಳಿ ಟಿ.ಎನ್.ಎಸ್, "ಒಂದು ಧಾರಾವಾಹಿ ಮಾಡ್ತಿದ್ದೀವಿ, ನಿನ್ನ ಸಂಗೀತ ಬೇಕು" ಎಂದರು.

"ಎಷ್ಟು ಎಪಿಸೋಡ್?" ಎಂದು ಅಶ್ವತ್ಥ್ ಕೇಳಿದಾಗ, "300 ಎಪಿಸೋಡ್ ಆಗಬಹುದು" ಎಂದು ಟಿ.ಎನ್.ಎಸ್ ಹೇಳಿದರು. ತಕ್ಷಣವೇ ಅಶ್ವತ್ಥ್, "ಚೊಂಬು ಎತ್ತಿಕೊಂಡು ಹೋಗುತ್ತೆ! 300 ಎಪಿಸೋಡ್ ಯಾವನು ನೋಡ್ತಾನೆ? ಬೇಡ ಬೇಡ" ಎಂದು ಸಾರಾಸಗಟಾಗಿ ತಿರಸ್ಕರಿಸಿದರು.

ಆಗ ಟಿ.ಎನ್.ಎಸ್ ಅವರು, "ಇದನ್ನು ಬರೆದಿದ್ದು ಕೆ.ಎಸ್. ನರಸಿಂಹಸ್ವಾಮಿಯವರು!" ಎಂದರು. ಅಷ್ಟರಲ್ಲೇ ‘ಮೈಸೂರು ಮಲ್ಲಿಗೆ’ ಹಾಡುಗಳಿಂದ ಅಪಾರ ಖ್ಯಾತಿ ಪಡೆದಿದ್ದ ಅಶ್ವತ್ಥ್ ತಕ್ಷಣವೇ "ಕೆ.ಎಸ್. ನರಸಿಂಹಸ್ವಾಮಿಯವರಾ? ಕೊಡಿ ಇಲ್ಲಿ!" ಎಂದು ಹಾಳೆಯನ್ನು ಕೈಗೆತ್ತಿಕೊಂಡರು. 100 ಅಡಿ ದೂರದಲ್ಲಿದ್ದ ಸೋಫಾದ ಕಡೆಗೆ ಮಾತನಾಡಲು ನಡೆದುಕೊಂಡು ಹೋಗುತ್ತಲೇ, ದಾರಿಯಲ್ಲಿ ಸಿಕ್ಕ ಹಾರ್ಮೋನಿಯಂ ಮುಂದೆ ಕುಳಿತು ಪದ್ಯವನ್ನು ನೋಡುತ್ತಾ "ಮಾಯಾಮೃಗ... ಮಾಯಾಮೃಗ... ಮಾಯಾಮೃಗ ..." ಎಂದು ಹಾಡಿ "ಆಗ್ಲೇನಾ?" ಎಂದು ಕೇಳಿದರು. ಟಿ.ಎನ್.ಎಸ್ "ಫಸ್ಟ್ ಕ್ಲಾಸ್!" ಎಂದರು.

ಹೀಗೆ ಕೇವಲ ಒಂದೂವರೆ ನಿಮಿಷದಲ್ಲಿ ಕಂಪೋಸ್ ಆದ ಆ ಹಾಡು, ಇಂದಿಗೂ—30 ವರ್ಷಗಳ ನಂತರವೂ—ಕನ್ನಡಿಗರ ಮನದಲ್ಲಿ ಅತ್ಯಂತ ಜನಪ್ರಿಯ ಗೀತೆಯಾಗಿ ಜೀವಂತವಾಗಿದೆ. "ಆದರೆ ಇಂದು ಆ ಹಾಡು ಬರೆದ ನರಸಿಂಹಸ್ವಾಮಿಯವರೂ ಇಲ್ಲ, ರಾಗ ಹಾಕಿದ ಅಶ್ವತ್ಥ್ ಅವರೂ ಇಲ್ಲ" ಎಂದು ಟಿ.ಎನ್. ಸೀತಾರಾಮ್ ಭಾವುಕರಾಗಿ ನೆನೆದರು.