Jyothika Chandramukhi: 2005ರಲ್ಲಿ ತೆರೆಕಂಡು 804 ದಿನಗಳ ಕಾಲ ಪ್ರದರ್ಶನ ಕಂಡು ದಾಖಲೆ ಬರೆದ ‘ಚಂದ್ರಮುಖಿ’ ಸಿನಿಮಾದ ಹಿಂದೆ ಹಲವು ಅಚ್ಚರಿಯ ಸಂಗತಿಗಳಿವೆ. ಕನ್ನಡದಲ್ಲಿ ವಿಷ್ಣುವರ್ಧನ್ ‘ಹೌಲಾ ಹೌಲಾ’ ಎಂದಿದ್ದರೆ, ರಜನಿಕಾಂತ್ ‘ಲಕಲಕ’ ಎಂದಿದ್ದು ಹೇಗೆ? ಜ್ಯೋತಿಕಾಗೆ ‘ಚಂದ್ರಮುಖಿ’ ಪಾತ್ರ ಸಿಕ್ಕಿದ್ದು ಹೇಗೆ? ಇಲ್ಲಿದೆ ಆ ರೋಚಕ ಕಥೆ.

ಭಾರತೀಯ ಚಿತ್ರರಂಗದ ಸಾರ್ವಕಾಲಿಕ ಬ್ಲಾಕ್‌ಬಸ್ಟರ್ ಸಿನಿಮಾಗಳಲ್ಲಿ ಒಂದಾದ ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ ‘ಚಂದ್ರಮುಖಿ’ (2005) ಸಿನಿಮಾದ ಹಿಂದಿನ ಹಲವು ಅಪರೂಪದ ಮತ್ತು ಕುತೂಹಲಕಾರಿ ಸಂಗತಿಗಳು ಇದೀಗ ಗಮನ ಸೆಳೆಯುತ್ತಿವೆ. ಕನ್ನಡದಲ್ಲಿ ವಿಷ್ಣುವರ್ಧನ್ ನಟನೆಯ ‘ಆಪ್ತಮಿತ್ರ’ ಚಿತ್ರದ ಯಶಸ್ಸಿನ ಬಳಿಕ ತಮಿಳಿನಲ್ಲಿ ತಯಾರಾದ ‘ಚಂದ್ರಮುಖಿ’ ಚಿತ್ರದಲ್ಲಿ ಶೀರ್ಷಿಕೆಯಿಂದ ಹಿಡಿದು ನಾಯಕಿಯ ಆಯ್ಕೆಯವರೆಗೆ ನಡೆದ ರೋಚಕ ಘಟನೆಗಳ ವಿವರ ಇಲ್ಲಿದೆ.

‘ನಾಗವಲ್ಲಿ’ ಬದಲು ‘ಚಂದ್ರಮುಖಿ’, ‘ಹೌಲಾ ಹೌಲಾ’ ಬದಲು ‘ಲಕಲಕ’

ಕನ್ನಡದಲ್ಲಿ ಡಾ. ವಿಷ್ಣುವರ್ಧನ್ ಅವರು ‘ಹೌಲಾ ಹೌಲಾ’ ಎಂಬ ಮ್ಯಾನರಿಸಂ ಬಳಸುತ್ತಿದ್ದರು. ಆದರೆ ತಮಿಳಿನಲ್ಲಿ ಅದಕ್ಕಿಂತಲೂ ಹೆಚ್ಚು ‘ಹೆವಿ’ ಆಗಿರುವ ಮ್ಯಾನರಿಸಂ ಬೇಕು ಎಂದು ನಿರ್ಧರಿಸಲಾಯಿತು. ಅದೇ ರೀತಿ ‘ನಾಗವಲ್ಲಿ’ ಎಂಬ ಹೆಸರನ್ನೂ ಬದಲಿಸಿ, ಅದಕ್ಕಿಂತ ಪ್ರಭಾವಶಾಲಿಯಾಗಿರುವ ‘ಚಂದ್ರಮುಖಿ’ ಎಂದು ಹೆಸರಿಡಲಾಯಿತು. ಇನ್ನು ರಜನಿಕಾಂತ್ ಅವರು ಬಾಲ್ಯದಲ್ಲಿ ಮರಾಠಿ ನಾಟಕವೊಂದರಲ್ಲಿ ನಟಿಸುತ್ತಿದ್ದಾಗ ಬಳಸುತ್ತಿದ್ದ ‘ಲಕಲಕ ಲಕಲಕ’ ಎಂಬ ನಿರ್ದಿಷ್ಟ ಪದ (Catchphrase) ಈ ಸಿನಿಮಾಗೆ ತಂದು ಬಳಸಿಕೊಂಡರು. ಅದು ಚಿತ್ರದ ಹೈಲೈಟ್ ಆಯಿತು.

ಸಿಮ್ರಾನ್ 3 ದಿನ ಶೂಟಿಂಗ್ ಮಾಡಿದ ಬಳಿಕ ಜ್ಯೋತಿಕಾ ಎಂಟ್ರಿ!

ಚಂದ್ರಮುಖಿ ಪಾತ್ರಕ್ಕೆ ಮೊದಲು ಸ್ನೇಹಾ, ಸಿಮ್ರಾನ್ ಮತ್ತು ರೀಮಾ ಸೇನ್ ಎಂಬ ಮೂವರು ನಟಿಯರ ಹೆಸರುಗಳನ್ನು ಪರಿಗಣಿಸಲಾಗಿತ್ತು. ಅದರಲ್ಲಿ ಅಂತಿಮವಾಗಿ ಸಿಮ್ರಾನ್ ಆಯ್ಕೆಯಾದರು. ರಜನಿಕಾಂತ್ ಪಕ್ಕದಲ್ಲಿ ನಯನತಾರಾ ನಟಿಸುತ್ತಿದ್ದರೆ, ಸಿಮ್ರಾನ್ ಜೊತೆ ಚಿತ್ರೀಕರಣವೂ ಆರಂಭವಾಗಿ 3 ದಿನಗಳ ಶೂಟಿಂಗ್ ಸಹ ಮುಗಿದಿತ್ತು. ಆದರೆ ಅದೇ ಸಮಯದಲ್ಲಿ ಸಿಮ್ರಾನ್ ಗರ್ಭಿಣಿಯಾಗಿರುವ ವಿಚಾರ ತಿಳಿದುಬಂದಿತು. ಚಿತ್ರಕ್ಕೆ ಹೆಚ್ಚಿನ ದಿನಗಳ ಕಾಲ್‌ಶೀಟ್ ಅಗತ್ಯವಿದ್ದ ಕಾರಣ ಅವರಿಗೆ ಮುಂದುವರಿಯಲು ಸಾಧ್ಯವಾಗಲಿಲ್ಲ. ಆಗ ಮೊದಲೇ ಜ್ಯೋತಿಕಾ ಅವರ ಹಣೆಯಲ್ಲಿ ಬರೆದಿದ್ದಂತೆ ಆ ಪಾತ್ರ ಅವರಿಗೆ ಒಲಿದುಬಂತು. ಜ್ಯೋತಿಕಾ ಕೂಡ ಆ ಪಾತ್ರ ಮಾಡಲು ಉತ್ಸುಕರಾಗಿದ್ದರಿಂದ ‘ಚಂದ್ರಮುಖಿ’ಯಾಗಿ ಮಿಂಚಿದರು.

ತೆಲುಗು ರಿಮೇಕ್ ಮಿಸ್ ಆಗಿ ಡಬ್ಬಿಂಗ್‌ನಲ್ಲೂ ದಾಖಲೆ!

ಮೂಲ ಮಲಯಾಳಂನ ‘ಮಣಿಚಿತ್ರತಾಳ್’ ಚಿತ್ರದ ನಟಿ ಶೋಭನಾ ಅವರು, ಈ ಹಿಂದೆ ತೆಲುಗಿನಲ್ಲಿ ‘ಮಿಸ್ಟರ್ ಪೆಳ್ಳಾಂ’ ಹಾಗೂ ‘ಶ್ರೀಕಾರಂ’ ಸಿನಿಮಾಗಳನ್ನು ನಿರ್ಮಿಸಿದ್ದ ಪಾರ್ಥಸಾರಥಿ ಅವರಿಗೆ ‘ಮಣಿಚಿತ್ರತಾಳ್’ ಡಿವಿಡಿ ನೀಡಿ, "ಇದು ತುಂಬಾ ಚೆನ್ನಾಗಿದೆ, ತೆಲುಗಿನಲ್ಲಿ ರಿಮೇಕ್ ಮಾಡಿ" ಎಂದು ಸಲಹೆ ನೀಡಿದ್ದರಂತೆ. ಆದರೆ ಅವರು ಆಸಕ್ತಿ ತೋರಿಸಲಿಲ್ಲ. ನಂತರ ಕರುಣಾಕರ್ ರೆಡ್ಡಿ, ಮಹೇಶ್ ಬಾಬು ಮತ್ತು ರಮೇಶ್ ಬಾಬು ಸೇರಿ ತಮಿಳಿನ ‘ಚಂದ್ರಮುಖಿ’ಯನ್ನು ತೆಲುಗಿಗೆ ಡಬ್ ಮಾಡಿದರು. ತೆಲುಗಿನಲ್ಲೂ ನೇರ ತೆಲುಗು ಸಿನಿಮಾದಷ್ಟೇ ಕಲೆಕ್ಷನ್ ಮಾಡಿ ಹಿಂದೆಂದೂ ಕಂಡು ಕೇಳರಿಯದ ವಸೂಲಿಯ ಮಳೆ ಸುರಿಸಿತು.

1944ರ ದಾಖಲೆ ಮುರಿದ 804 ದಿನಗಳ ಪ್ರದರ್ಶನ

ಚೆನ್ನೈನಲ್ಲಿರುವ ಶಿವಾಜಿ ಗಣೇಶನ್ ಅವರ ಸ್ವಂತ ಚಿತ್ರಮಂದಿರ ‘ಶಾಂತಿ ಥಿಯೇಟರ್’ನಲ್ಲಿ ‘ಚಂದ್ರಮುಖಿ’ ಸಿನಿಮಾ ಬರೋಬ್ಬರಿ 804 ದಿನಗಳ ಕಾಲ ಪ್ರದರ್ಶನ ಕಂಡಿತು. ಈ ಹಿಂದೆ 1944ರಲ್ಲಿ ತ್ಯಾಗರಾಜ ಭಾಗವತರ್ ನಟನೆಯ ‘ಹರಿದಾಸ್’ ಸಿನಿಮಾ ಸುಮಾರು 768ಕ್ಕೂ ಹೆಚ್ಚು ದಿನ ಪ್ರದರ್ಶನಗೊಂಡಿದ್ದ ದಾಖಲೆಯನ್ನು 2005ರಲ್ಲಿ ರಜನಿಕಾಂತ್ ಅವರ ‘ಚಂದ್ರಮುಖಿ’ ಬ್ರೇಕ್ ಮಾಡಿತು.