ಇಂದಿನ ಸಿನಿಮಾ ಹಾಡುಗಳು ಹಾಗೂ ನಾಯಕರು ಮಾಡುವ ರೋಲ್ಗಳು ಹೇಗೆ ಯುವಜನರನ್ನು ತಪ್ಪು ದಾರಿಗೆ ಎಳೆಯುತ್ತಿದೆ ಹಾಗೂ ಹಾಡುಗಳ ಅರ್ಥಗೊತ್ತಿಲ್ಲದೇ ಅತ್ಯಾ*ಚಾರಗಳನ್ನೂ ಸಂಭ್ರಮಿಸುವಂತೆ ಮಾಡುತ್ತಿದೆ ಎನ್ನುವ ಬಗ್ಗೆ ಪತ್ರಕರ್ತೆ ಸ್ವಾತಿ ತೀಕ್ಷ್ಣವಾಗಿ ಹೇಳಿದ್ದಾರೆ ನೋಡಿ...
ಹಲವು ದಶಕಗಳ ಸಿನಿಮಾ ಹಾಡುಗಳನ್ನೊಮ್ಮೆ ಕೇಳಿದರೆ ಅದರಲ್ಲಿ ಕೆಲವೇ ಕೆಲವು ಹಾಡುಗಳನ್ನು ಬಿಟ್ಟರೆ ಉಳಿದೆಲ್ಲವೂ ಅರ್ಥಗರ್ಭಿತವಾಗಿರುತ್ತಿದ್ದವು. ಇದೇ ಕಾರಣಕ್ಕೆ ಇಂದಿಗೂ ಅದು ಜನಮಾನಸದಲ್ಲಿ ನೆಲೆಯೂರಿ ನಿಂತಿದೆ. ಆದರೆ ಇಂದಿನ ಹಲವು ಹಾಡುಗಳನ್ನು ಕೇಳಿದರೆ ಅದು ಯಾವ ಭಾಷೆಯದ್ದೇ ಆಗಿರಬಹುದು, ಬರೀ ಡಬಲ್ ಮೀನಿಂಗ್ಗಳು, ಕೆಟ್ಟ ಅರ್ಥ ಕೊಡುವಂಥದ್ದು, ಲೈಂಗಿಕತೆಗೆ ಪ್ರಚೋದನೆ ನೀಡುವಂಥದ್ದು, ಅರ್ಥವೇ ಇಲ್ಲದ ಅಸಂಬದ್ಧ ಹಾಡುಗಳೇ ಹೆಚ್ಚು. ಇದೇ ಕಾರಣಕ್ಕಾಗಿ ಸಿನಿಮಾ ಬಂದು ಹೋಗುವಷ್ಟರಲ್ಲಿಯೇ ಆ ಹಾಡುಗಳು ಅಬ್ಬರಿಸಿ ಮರೆಯಾಗುತ್ತಿವೆ. ಕೆಲವು ಸಂದರ್ಭಗಳಲ್ಲಿ ಹಿನ್ನೆಲೆ ಸಂಗೀತ ಹಾಗೂ ನಟ-ನಟಿಯರ ಡಾನ್ಸ್ಗಳನ್ನಷ್ಟೇ ನೋಡಿ ಹಾಡುಗಳು ಹಿಟ್ ಆಗುವುದು ಇದೆ. ಅದರಲ್ಲಿನ ಅರ್ಥವೇ ಗೊತ್ತಿರದೇ ಚಿಕ್ಕ ಮಕ್ಕಳಿಂದ ಹಿಡಿದು ಎಲ್ಲರೂ ಡಾನ್ಸ್ ಮಾಡುವುದೇ ಮಾಡುವುದು, ರೀಲ್ಸ್ನಲ್ಲಿಯೂ ಅದೇ ಹಾಡನ್ನೇ ಉಪಯೋಗಿಸುವುದು ಇದೆ.
ಇದೀಗ ಇದರ ಬಗ್ಗೆಯೇ ಶಾಕಿಂಗ್ ವಿಷಯವೊಂದನ್ನು ರಿವೀಲ್ ಮಾಡಿದ್ದಾರೆ ಪತ್ರಕರ್ತೆ ಸ್ವಾತಿ ಗೋಯೆಲ್ ಶರ್ಮಾ. ಬಾಲಿವುಡ್ ಸೇರಿದಂತೆ ಕೆಲವು ಭಾಷೆಗಳ ಹಾಡುಗಳನ್ನು ಹೇಳಿರುವ ಅವರು ಅದರಲ್ಲಿ ಹೇಗೆ ರೇ*ಪ್ಗಳನ್ನು ವಿಜೃಂಭಿಸಲಾಗಿದೆ, ಹಾಗೂ ಅದರ ಅರ್ಥ ಗೊತ್ತಿಲ್ಲದೇ ಜನರು ಅದನ್ನು ಹೇಗೆ ಖುಷಿಯಿಂದ ಸ್ವೀಕರಿಸಿದ್ದಾರೆ ಎಂಬುದನ್ನು ಹೇಳಿದ್ದಾರೆ. ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಅವರ ಅಂಜಾಮ್ ಚಿತ್ರದ ಚನೇ ಕೀ ಖೇತ್ ಮೇ ಸೂಪರ್ಹಿಟ್ ಸಾಂಗ್ ಅನ್ನು ಉಲ್ಲೇಖಿಸಿರುವ ಅವರು, ಈ ಹಾಡಿನ ಮ್ಯೂಸಿಕ್ ತೆಗೆದು, ಮಾಧುರಿ ಆ ಡಾನ್ಸ್ ಹಾಡುವುದನ್ನು ತೆಗೆದು ಕೇವಲ ಲಿರಿಕ್ಸ್ ಕೇಳಿ... ಅದರಲ್ಲಿ ಆಕೆ ಗದ್ದೆಯಲ್ಲಿ ನನ್ನ ಮೇಲೆ ರೇ*ಪ್ ಆಗಿದೆ, ನನ್ನ ಯೌವನವನ್ನು ಹಾಳು ಮಾಡಿದರು ಎಂದು ಖುಷಿ ಖುಷಿಯಿಂದ ಹಾಡಿ ಡಾನ್ಸ್ ಮಾಡುತ್ತಾರೆ ಮಾಧುರಿ. ಎಷ್ಟೋ ಮಂದಿ ಇದನ್ನು ಹಾಡುತ್ತಾರೆ.
ಯಾವಾಗಾದ್ರೂ ಒಮ್ಮೆ ನಿಮಗೆ ಇದು ರೇ*ಪ್ ಸೆಲೆಬ್ರೇಷನ್ ಎನ್ನುವ ಬಗ್ಗೆ ತಿಳಿದಿದ್ಯಾ? ಅಂಥ ಮಾಧುರಿ ದೀಕ್ಷಿತ್ ಈಗ ಎಲ್ಲರ ಕಣ್ಮಣಿ. ಎಲ್ಲರೂ ಆಕೆಯನ್ನು ಆದರ್ಶ ಎನ್ನುತ್ತಾರೆ. ರಿಯಾಲಿಟಿ ಷೋನಲ್ಲಿ ರೇ*ಪ್ ಸೆಲೆಬ್ರೇಷನ್ ಮಾಡುವಾಕೆಯನ್ನು ಜಡ್ಜ್ ಮಾಡಿದ್ದಾರೆ ಎಂದು ಸ್ವಾತಿ. ಅದೇ ರೀತಿ ಸೋನಾಲಿ ಬೇಂದ್ರೆಯ ಭರತ್ಪುರ್ ಲುಟ್ಗಯೇ ಹಾಡು ಕೂಡ ಆ ಕಾಲದ ಸಕತ್ ಪಾಪ್ಯೂಲರ್ ಹಾಡಾಗಿತ್ತು. ಈ ಹಾಡಿನ ಲಿರಿಕ್ಸ್ ಅನ್ನು ಮಾತ್ರ ಗೂಗಲ್ ಮಾಡಿ ನೋಡಿ, ಅದರಲ್ಲಿಯೂ ಅತ್ಯಾ*ಚಾರದ ಸೆಲೆಬ್ರೇಷನ್ನೇ ಮಾಡಲಾಗಿದೆ. ಅದು ಕೂಡ ಎಲ್ಲರೂ ಖುಷಿಯಿಂದ ಹಾಡಿ ಹೊಗಳುತ್ತಿದ್ದಾರೆ ಎಂದು ತೀಕ್ಷ್ಮವಾಗಿ ಸಿನಿಮಾಗಳು ನಟ-ನಟಿಯರ ಮೂಲಕ ಹೇಗೆ ಅಪರಾಧಗಳನ್ನು ವೈಭವೀಕರಿಸುವಲ್ಲಿ, ಜನರ ತಲೆಗೆ ಇದನ್ನೇ ಬಿಡುವಲ್ಲಿ ಯಶಸ್ವಿಯಾಗುತ್ತಿದೆ ಎನ್ನುವುದನ್ನು ಸ್ವಾತಿ ಹೇಳಿದ್ದಾರೆ.
ಇದೇ ವೇಳೆ, ಎಲ್ಲಾ ಮದುವೆಗಳಲ್ಲಿ ಕೇಳಿಬರುವ ಬಬ್ಬುಮಾನ್ರ ಪಂಜಾಬಿ ಹಾಡೊಂದು ಸಕತ್ ಫೇಮಸ್ ಆಗಿದೆ. ಎಲ್ಲ ಮನೆಗಳವರು ಇದನ್ನು ಮದುವೆಯಲ್ಲಿ ಹಾಡಿ ಕುಣಿಯುತ್ತಾರೆ. ಇದರಲ್ಲಿ ಮದುವೆಯ ದಿನ ಮೂರನೆಯ ವ್ಯಕ್ತಿ ಬಂದು ಮದುಮಗಳನ್ನು ಅಪಹರಿಸಿಕೊಂಡು ಹೋದ ಎನ್ನುವ ಅರ್ಥ ಇದೆ. ಮದುವೆಯ ದಿನ ಇಂಥ ಹಾಡು ಹಾಕಿ ಕುಣಿಯಲಾಗುತ್ತದೆ ಎಂದಿದ್ದಾರೆ ಸ್ವಾತಿ. ಇವರು ಒಂದೆರಡು ಸಿನಿಮಾಗಳ ಉದಾಹರಣೆ ನೀಡಿದರೂ ಇಂದಿನ ಬಹುತೇಕ ಚಿತ್ರಗಳಲ್ಲಿ ನಟರು ಲಾಂಗು, ಮಚ್ಚು ಹಿಡಿದು ಕುಣಿದು ವಿಜೃಂಭಿಸುತ್ತಲೇ ಅವರ ಲಕ್ಷಾಂತರ ಅಭಿಮಾನಿಗಳ ತಲೆಯಲ್ಲಿಯೂ ಅದನ್ನೇ ತುಂಬುತ್ತಿರುವುದು ಹೊಸ ವಿಷಯವೇನಲ್ಲ. ಹಲವು ಯುವಕರು ಅಪರಾಧ ಕೃತ್ಯಗಳಲ್ಲಿ ಭಾಗಿಯಾದಾಗ ಅವರನ್ನು ಪೊಲೀಸರು ಅರೆಸ್ಟ್ ಮಾಡಿದಾಗ, ಇಂಥ ಚಿತ್ರ ನೋಡಿ ನಾನು ಆ ನಾಯಕನಂತೆ ಮಾಡಲು ಪ್ರಯತ್ನ ಮಾಡಿದೆ ಎಂದೇ ಹೇಳುವುದು ಕೂಡ ನಡೆಯುತ್ತಲೇ ಇದೆ. ಇಂದಿನವರಿಗೆ ಕ್ರಿಕೆಟ್ ತಾರೆಯರು, ಸಿನಿಮಾ ನಾಯಕರೇ ದೇವರಾಗಿರುವುದರಿಂದ ಅವರು ಹೇಗೆ ಆದರ್ಶವಾಗಿ ನಡೆದುಕೊಳ್ಳಬೇಕು ಎಂದು ಹಲವರು ಭಾಷಣ ಮಾಡುತ್ತಿದ್ದರೂ ಆ ಮಾತನ್ನು ಅವರಷ್ಟೇ ಕೇಳಬೇಕಾದ ಸ್ಥಿತಿಯೂ ಇದೆ.
