ಡ್ರಿಂಕ್ಸ್ ಪಾರ್ಟಿಗೆ ಹೋಗಲಿಲ್ಲ ಎನ್ನುವ ಒಂದೇ ಕಾರಣಕ್ಕೆ ನನ್ನನ್ನು ಚಿತ್ರದಿಂದ ತೆಗೆದು ಹಾಕಿದ್ದಾರೆ. ಇದನ್ನು ನಾನು ಅಷ್ಟು ಸುಲಭಕ್ಕೆ ಬಿಡುವುದಿಲ್ಲ, ನನಗೆ ನ್ಯಾಯ ಸಿಗಬೇಕು. ಅಲ್ಲಿ ತನಕ ನಿರ್ದೇಶಕರ ವಿರುದ್ಧ ನನ್ನ ಸಮರ...! ಹೀಗೆಂದು ಗುಡುಗಿದ್ದಾರೆ ಬಿಗ್‌ಬಾಸ್ ಖ್ಯಾತಿಯ ನಟಿ ಜಯಶ್ರೀ ರಾಮಯ್ಯ.

ಇದಕ್ಕೆ ಕಾರಣವಾಗಿದ್ದು ‘ನಟ-ನಟಿಯರು ಬೇಕಾಗಿದ್ದಾರೆ’ಎನ್ನುವ ಚಿತ್ರದ ವಿವಾದ. ‘ಕಾಸ್ಟಿಂಗ್ ಕೌಚ್’ ಎನ್ನುವ ಭೂತ ಚಿತ್ರೋದ್ಯಮದಲ್ಲಿ ದೊಡ್ಡ ಸದ್ದು ಮಾಡುತ್ತಿರುವಾಗಲೇ, ‘ನಟ-ನಟಿಯರು ಬೇಕಾಗಿದ್ದಾರೆ’ ಎನ್ನುವ ಚಿತ್ರತಂಡ ನಟಿ ಜಯಶ್ರೀ ಅವರನ್ನು ಚಿತ್ರದಿಂದ ತೆಗೆದು ಹಾಕಿರುವುದು ದೊಡ್ಡ ವಿವಾದ ಸೃಷ್ಟಿಸಿದೆ. ಆ ಚಿತ್ರದ ನಿರ್ದೇಶಕ ಮಂಜು ಹೆದ್ದೂರ್ ವಿರುದ್ಧ ಈಗಾಗಲೇ ಕರ್ನಾಟಕ ಚಲನಚಿತ್ರ ವಾಣಿಜ್ಯಮಂಡಳಿಗೆ ದೂರು ಕೊಟ್ಟಿದ್ದಾರೆ ಜಯಶ್ರೀ.‘ಮುಂದಿನದು ಉಗ್ರ ಹೋರಾಟ, ನನಗೆ ನ್ಯಾಯ ಸಿಗಬೇಕು, ಅಲ್ಲಿ ತನಕ ಸಮರ’ ಅಂತ ಗುಡುಗಿದ್ದಾರೆ. 

ಹಾಗಾದ್ರೆ ಆಗಿದ್ದೇನು? ಚಿತ್ರತಂಡ ಜಯಶ್ರೀ ಅವರನ್ನು ಕಿತ್ತು ಹಾಕಿದ್ದೇಕೆ? ಒವರ್ ಟು ಜಯಶ್ರೀ ರಾಮಯ್ಯ.  ‘ಬಿಗ್‌ಬಾಸ್’ಗೆ ಹೋಗಿ ಬಂದ ನಂತರ ಇಮ್ರಾನ್ ಸರ್ದಾರಿಯಾ ನಿರ್ದೇಶನದ ‘ಉಪ್ಪು ಹುಳಿ ಖಾರ’ ಚಿತ್ರದಲ್ಲಿ ಅಭಿನಯಿಸಿದ್ದೆ. ಇದಾದ ನಂತರ ನನಗೆ ‘ನಟ-ನಟಿಯರು ಬೇಕಾಗಿದ್ದಾರೆ ’ಚಿತ್ರದ ಆಫರ್ ಬಂತು. ಕೊರಿಯೋಗ್ರಾಫರ್ ಪ್ರೇಮ್ ಎಂಬುವವರು ಈ ಚಿತ್ರದ ಬಗ್ಗೆ ಹೇಳಿದ್ದರು. ಪಾತ್ರ ಚೆನ್ನಾಗಿದ್ದರೆ ಅಭಿನಯಿಸುತ್ತೇನೆ ಅಂತಲೂ ನಾನು ಅವರ ಬಳಿ ಹೇಳಿದ್ದೆ. 

ಆದಾದ ನಂತರ ನಿರ್ದೇಶಕ ಮಂಜು ಹೆದ್ದೂರ್ ಅವರು ನನ್ನನ್ನು ಭೇಟಿ ಮಾಡಿದ್ದರು. ಸಿದ್ಧು ಮೂಲಿಮನಿ ಎನ್ನುವವರು ನಾಯಕರಾಗಿ ಅಭಿನಯಿಸುತ್ತಿದ್ದಾರೆ. ಅವರ ಜೋಡಿಯಾಗಿ ಚಿತ್ರದ ನಾಯಕಿಯನ್ನಾಗಿ ನಿಮ್ಮನ್ನೇ ಆಯ್ಕೆ ಮಾಡಿಕೊಳ್ಳಲು ನಿರ್ಧರಿಸಿದ್ದೇವೆ ಎಂದಿದ್ದರು. ಆಗಲೇ ನಾನು ಚಿತ್ರದಲ್ಲಿನ ಪಾತ್ರದ ಬಗ್ಗೆಯೂ ಕೇಳಿದ್ದೆ. ಆಡಿಷನ್ ಟೆಸ್ಟ್‌ಗೆ ಎರಡು ದಿವಸ ಮಾಟೆಂಜ್ ಶೂಟಿಂಗ್ ಇರುತ್ತೆ ಅಂದ್ರು .
ಅದಕ್ಕೂ ಓಕೆ ಅಂದು ಮುಗಿಸಿದೆ. ಅಲ್ಲಿಂದ ಒಂದು ದಿವಸ ರಾತ್ರಿ ಫೋನ್ ಮಾಡಿ, ಫೋಟೋ ಹಾಗೂ ಪರಫಾರ್ಮೆನ್ಸ್ ವಿಡಿಯೋ ಇದ್ದರೆ ಕಳುಹಿಸಿ ಅಂತ ಕೇಳಿದ್ದರು. ತತ್‌ಕ್ಷಣವೇ ಕಳುಹಿಸಲು ಇಂಟೆರ್‌ನೆಟ್ ಪ್ರಾಬ್ಲಂ ಇತ್ತು. ಹಾಗಾಗಿ ಬೆಳಗ್ಗೆ ಕಳುಹಿಸುತ್ತೇನೆ ಅಂದಿದ್ದೆ. ಕೊನೆಗೊಂದು ದಿನ ಅದೆಲ್ಲ ಬೇಕಾಗಿಲ್ಲ, ನೀವೇ ಹೀರೋಯಿನ್ ಅಂತ ಫೈನಲ್ ಮಾಡಿಕೊಂಡಿದ್ದೇವೆ ಅಂದ್ರು. ಕಾಸ್ಟ್ಯೂಮ್ ಖರೀದಿ ಕೂಡ ಆಯ್ತು.

 ಅಲ್ಲಿಂದ ಇನ್ನೇನು ಸಿನಿಮಾ ಶುರುವಾಗಬಹುದು ಅಂತಂದು ಕೊಂಡಿದ್ದಾಗ ಎರಡು ತಿಂಗಳು ಲೇಟಾಗುತ್ತೆ ಅಂತ ನಿರ್ದೇಶಕರೇ ಹೇಳಿದ್ದರು. ಆ ಸಮಯಕ್ಕಾಗಿ ಕಾಯುತ್ತಿದ್ದಾಗ ನನ್ನ ಜಾಗಕ್ಕೆ ಬೇರೆಯವರು ಬಂದಿದ್ದಾರೆ. ಕೇಳಿದರೆ, ನಿಮ್ಮನ್ನು ತೆಗೆದು ಹಾಕಲಾಗಿದೆ ಎಂದರು. ನಿರ್ದೇಶಕ ಮಂಜು ಹೆದ್ದೂರ್ ಈಗದಕ್ಕೆ ಬೇರೆಯಾದೇ ಕಾರಣ ನೀಡುತ್ತಿದ್ದಾರೆ. ಪರ್  ಫಾರ್ಮೆನ್ಸ್ ವಿಡಿಯೋ ಕೇಳಿದ್ದೆವು. ಅವರು ಅದನ್ನು ಕಳುಹಿಸಿಕೊಡಲಿಲ್ಲ. ಅದಕ್ಕಾಗಿ ಅವರನ್ನು ಚಿತ್ರದಿಂದ ಕೈಬಿಟ್ಟಿದ್ದೇವೆ ಎನ್ನುತ್ತಿದ್ದಾರೆ. ಆದರೆ ನಿಜವಾದ ಕಾರಣ ಅದಲ್ಲ. ಚಿತ್ರಕ್ಕೆ ನಾನು ನಾಯಕಿ ಆಗಿ ಒಪ್ಪಿಕೊಂಡ ಮೇಲೆ, ಚಿತ್ರೀಕರಣ ಒಂದಷ್ಟು ತಡವಾಗಿ ಶುರುವಾಗುತ್ತೆ ಅಂದ್ರು, ಅದಕ್ಕೂ ಓಕೆ ಪರವಾಗಿಲ್ಲ ಅಂದೆ. ಈ ನಡುವೆ ರಾತ್ರಿ ಹೊತ್ತು ಫೋನ್‌ಕಾಲ್ ಮಾಡುತ್ತಿದ್ದರು. ಔಟ್‌ಸೈಟ್ ಮಾತಾಡ್ಲಿಕ್ಕೆ ಸಿಗೋಣ ಅಂತಿದ್ದರು. ಮತ್ತೊಂದು ದಿನ ಡ್ರಿಂಕ್ಸ್ ಪಾರ್ಟಿಗೆ ಕರೆದಿದ್ದರು. ಅದಕ್ಕೆ ನಾನು ಹೋಗಿರಲಿಲ್ಲ. ಚಿತ್ರದಿಂದ ನನ್ನನ್ನು ತೆಗೆದು ಹಾಕಿದ್ದಕ್ಕೆ ನಿಜವಾದ ಕಾರಣವೇ ಅದು.

ನ್ಯಾಯ ಸಿಗುವವರೆಗೂ ನನ್ನ ಹೋರಾಟ

ಪ್ರತಿ ಸಿನಿಮಾ ಒಪ್ಪಿಕೊಳ್ಳುವಾಗ ಪಾತ್ರ ಮತ್ತು ಕತೆ ಏನು ಅನ್ನೋದನ್ನು ನೋಡಿಯೇ ನೋಡುತ್ತೇನೆ. ಈ ಚಿತ್ರ ಒಪ್ಪಿಕೊಳ್ಳುವಾಗಲೂ ಪಾತ್ರ ಒಪ್ಪಿಗೆ ಆದ ನಂತರವೇ ನಾನು ಒಪ್ಪಿಕೊಂಡಿದ್ದೆ. ಕಾಸ್ಟ್ಯೂಮ್ ಖರೀದಿಗೆ ಹೋದಾಗ ತುಂಬಾನೆ ಚೆನ್ನಾಗಿದೆ, ಹಾಗಿದ್ದೀರ, ಹೀಗಿದ್ದೀರ ಅಂತೆಲ್ಲ ಹೇಳಿದ್ದರು. ಅದೆಲ್ಲವೂ ಆಗಿ, ಏಕಾಏಕಿ ಕೈ ಬಿಟ್ಟಿರುವುದರ ಮರ್ಮ ಗೊತ್ತಾಗುತ್ತಿಲ್ಲ. 

ನನಗೆ ಗೊತ್ತಿರುವ ಹಾಗೆ, ಅವರ ಬೇಡಿಕೆಗೆ ನಾನು ಒಪ್ಪಿಕೊಂಡಿಲ್ಲ ಎನ್ನುವುದೇ ಆಗಿದೆ. ಇದರ ವಿರುದ್ಧ ನಾನೀಗ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ಕೊಟ್ಟಿದ್ದೇನೆ. ಈ ರೀತಿಯ ಮೋಸ ಇನ್ನೊಬ್ಬರಿಗೆ ಆಗಬಾರದು ಎನ್ನುವುದು ನನ್ನ ಉದ್ದೇಶ. ವಾಣಿಜ್ಯ ಮಂಡಳಿ ಇದನ್ನು ಯಾವ ರೀತಿ ತೆಗೆದುಕೊಳ್ಳುತ್ತೆ ಅಂತ ಕಾಯುತ್ತಿದ್ದೇನೆ. ನಾನು ಮಾತ್ರ ಸುಮ್ಮನಿರೋದಿಲ್ಲ. ನ್ಯಾಯ ಸಿಗುವವರೆಗೂ ನನ್ನ ಹೋರಾಟ.