ನಾಲ್ಕು ವರ್ಷ ಕಾದ ನೋವು, ದೊಡ್ಡ ಸಿನಿಮಾ ಸಿಕ್ಕ ಸಂಭ್ರಮ- ಇವೆರಡನ್ನೂ ಬೆರೆಸಿದ ಮಾತುಗಳಿವು. ಓವರ್‌ ಟು ಪ್ರಮೋದ್‌.

ಆಕಸ್ಮಿಕವಾಗಿ ಇಲ್ಲಿಗೆ ಬಂದೆ

ನನ್ನೂರು ಮದ್ದೂರು. ಸಿನಿಮಾ, ನಾಟಕದ ಯಾವುದೇ ಹಿನ್ನೆಲೆ ಇಲ್ಲ. ಸ್ಕೂಲ್‌ನಲ್ಲಿದ್ದಾಗಲೇ ನಟನೆಯ ಹುಚ್ಚಿತ್ತಾದರೂ, ನಟನಾಗುವ ನಂಬಿಕೆ ಇರಲಿಲ್ಲ. ಡಿಗ್ರಿ ಮುಗಿಯುವ ಹೊತ್ತಿಗೆ ಸೀರಿಯಲ್‌ಗಳಲ್ಲಿ ಅಭಿನಯಿಸುವ ಆಫರ್‌ ಬಂತು. ಅದು ತುಂಬಾ ಆಕಸ್ಮಿಕವಾದದ್ದು. ಅಷ್ಟರೊಳಗೆ ನಾಗಾಭರಣ ಅವರ ಬೆನಕ ರಂಗ ತಂಡ ಸೇರಿಕೊಂಡಿದ್ದೆ. ಅದೇ ಧೈರ್ಯದೊಂದಿಗೆ ಸೀರಿಯಲ್‌ ಜರ್ನಿ ಆರಂಭಿಸಿದೆ. ಸುವರ್ಣದಲ್ಲಿ ಬಂದ ‘ಲಕುಮಿ’ ಧಾರಾವಾಹಿ ನನ್ನ ಕರಿಯರ್‌ಗೆ ಟರ್ನಿಂಗ್‌ ಪಾಯಿಂಟ್‌. ಸೀರಿಯಲ್‌ ಹಿಟ್‌ ಆಯ್ತು. ‘ಗೀತಾ ಬ್ಯಾಂಗಲ್‌ ಸ್ಟೋರ್‌’ ಚಿತ್ರಕ್ಕೆ ಅವಕಾಶ ಬಂತು. ಅದು ನನ್ನ ಮೊದಲ ಸಿನಿಮಾ. ಚಿತ್ರಕ್ಕೆ ಒಳ್ಳೆಯ ವಿಮರ್ಶೆ ಸಿಕ್ಕಿತು. ಆದರೆ ಕಮರ್ಷಿಯಲ್‌ ಆಗಿ ಚಿತ್ರ ಗೆಲ್ಲಲಿಲ್ಲ. ಅದೇ ಕಾರಣವೋ ಏನೋ ಸಿನಿಮಾದ ಅವಕಾಶಗಳು ತೃಪ್ತಿ ಕೊಡಲಿಲ್ಲ, ಕಿರುತೆರೆಯಲ್ಲೇ ಮತ್ತೆ ಬ್ಯುಸಿ ಆಗುವಂತಾಯಿತು. ಮೂರ್ನಾಲ್ಕು ವರ್ಷ ಕಾದೆ ಕಾದೆ.

ದರ್ಶನ್‌ ಥರನೇ ಕಾಣ್ತೀಯಾ....

ಸಿನಿಮಾದ ಪ್ರಯತ್ನ ನಡೆದೇ ಇತ್ತು. ಒಂದಷ್ಟುಕತೆಗಳನ್ನು ಕೇಳಿದೆ. ‘ಪ್ರೀತಿ ಪ್ರಾಪ್ತಿರಸು’್ತ ಸಿನಿಮಾಗೆ ಹೀರೋ ಆದೆ. ಆದ್ರೆ ಆ ಸಿನಿಮಾ ಅರ್ಧದಲ್ಲೇ ನಿಂತು ಹೋಯಿತು. ಮತ್ತೆ ಕಿರುತೆರೆ ಕಡೆ ಮುಖ ಮಾಡಿದೆ. ‘ಚುಕ್ಕಿ’ ಸೀರಿಯಲ್‌ ಮಾಡುವಾಗ ಸುಂದರ್‌ ಸರ್‌ ಸಿಕ್ಕರು. ಅವರ ಮೂಲಕ ನಿರ್ಮಾಪಕರಾದ ಶ್ರುತಿ ನಾಯ್ಡು ಪರಿಚಯವಾಯಿತು. ಮೂರು ದಿವಸಗಳ ಅವಧಿಯ ಒಂದು ಪಾತ್ರಕ್ಕೆ ಆಯ್ಕೆಯಾದವನು, ಪರ್‌ಫಾರ್ಮೆನ್ಸ್‌ ಚೆನ್ನಾಗಿದೆ ಎನ್ನುವ ಕಾರಣಕ್ಕೆ ಮೂರು ತಿಂಗಳು ನಟಿಸಿದೆ. ಅಲ್ಲಿಂದ ‘ಪುನರ್‌ಮಿಲನ’ ಬಂತು. ಅಲ್ಲಿ ನೆಗೆಟಿವ್‌ ಕ್ಯಾರೆಕ್ಟರ್‌. ಅದು ಕೂಡ ಸೂಪರ್‌ ಹಿಟ್‌ ಆಯ್ತು. ‘ಮಹಾದೇವಿ’ ಸೀರಿಯಲ್‌ನಲ್ಲಿ ಈಶ್ವರ ಪಾತ್ರಕ್ಕೆ ಬಣ್ಣ ಹಚ್ಚಿದ್ದೆ. ‘ಸಂಜು ಮತ್ತು ನಾನು’ ಸೀರಿಯಲ್‌ ಮಾಡುತ್ತಿದ್ದಾಗ ಶ್ರುತಿ ಮೇಡಂ, ಸಿನಿಮಾದ ಬಗ್ಗೆ ಹೇಳಿದ್ರು. ‘ನೋಡ್ಲಿಕ್ಕೆ ದರ್ಶನ್‌ ಥರನೇ ಕಾಣ್ತೀಯಾ, ನೀನ್ಯಾಕೆ ಸಿನಿಮಾ ಮಾಡಬಾರದು..’ ಅಂದ್ರು. ಪ್ರೀಮಿಯರ್‌ ಪದ್ಮಿನಿ ಜರ್ನಿ ಶುರುವಾಯಿತು.

ದರ್ಶನ್, ಸುದೀಪ್, ಪುನೀತ್ ಯಾರು? ಏನಿದು ಜಗ್ಗೇಶ್ ಕಿರಿಕ್?

ನೀನೇ ಹೀರೋ ಅಂದಿದ್ರು...

ಶ್ರುತಿ ಮೇಡಂ ಒಂದೊಳ್ಳೆ ಸಿನಿಮಾ ಮಾಡ್ಬೇಕು ಅಂತಿದ್ರು. ರಮೇಶ್‌ ಇಂದಿರಾ ಸರ್‌ ಕತೆ ಬರೆದರು. ನೀನೇ ಹೀರೋ ಆದ್ರೆ ಚೆನ್ನಾಗಿರುತ್ತೆ ಅಂತಿದ್ರು. ಕತೆಯ ಸ್ವರೂಪ ಬೇರೆಯೇ ಇತ್ತು. ರೊಮ್ಯಾಂಟಿಕ್‌ ಕತೆ ಇದ್ರೆ ಚೆಂದ ಅನ್ನೋದು ಆಗಿದ್ದ ಅಭಿಪ್ರಾಯ. ಆದರೆ ರಮೇಶ್‌ ಸರ್‌ ಈ ಟ್ರೆಂಡ್‌ಗೆ ತಕ್ಕಂತೆ ಕತೆ ಬರೆದು ಮುಗಿಸಿದಾಗ ಚಿತ್ರದ ಮುಖ್ಯ ಪಾತ್ರಕ್ಕೆ ಜಗ್ಗೇಶ್‌ ಅವರೇ ಸೂಕ್ತ ಎನ್ನುವ ಅಭಿಪ್ರಾಯ ಬಂತು. ಅವರ ಜತೆಗೆ ಅಷ್ಟೇ ಮುಖ್ಯವಾದ ಒಂದು ಪಾತ್ರವಿತ್ತು. ಅದರಲ್ಲಿ ನೀನು ನಟಿಸು ಅಂತ ಮೇಡಂ ಹೇಳಿದ್ರು. ಅದು ತುಂಬಾ ಖುಷಿ ಕೊಡ್ತು. ಪಾತ್ರ ಹೇಗಿದ್ದರೇನು, ಜಗ್ಗೇಶ್‌ ಅವರಂತಹ ನಟರ ಜತೆಗೆ ಅಭಿನಯಿಸುವುದೇ ಒಂದು ಅದೃಷ್ಟ.

ಡ್ರೈವರ್‌ ನಂಜುಂಡ

ಪ್ರೀಮಿಯರ್‌ ಪದ್ಮಿನಿ ಒಂದು ವಿನೂತನ ಕಥಾ ಹಂದರದ ಚಿತ್ರ. ಇಲ್ಲಿ ರೊಮ್ಯಾನ್ಸ್‌, ಕಾಮಿಡಿ ಎನ್ನುವುದಕ್ಕಿಂತ ಎಮೋಷನ್‌ ಜಾಸ್ತಿಯಿದೆ. ಈ ಕತೆಯಲ್ಲಿ ನಾನೊಬ್ಬ ಡ್ರೈವರ್‌. ಹೆಸರು ನಂಜುಂಡ. ಮಂಡ್ಯದಿಂದ ಬೆಂಗಳೂರಿಗೆ ಬಂದವನು ಆತ. ಡ್ರೈವರ್‌ ಆಗುವ ಮುಂಚೆ ಆತ ಏನಾಗಿದ್ದ ಎನ್ನುವುದಕ್ಕೂ ಒಂದು ಇಂಟರೆಸ್ಟಿಂಗ್‌ ಕತೆಯಿದೆ. ಅದು ಸದ್ಯಕ್ಕೆ ಸಸ್ಪೆನ್ಸ್‌. ಡ್ರೈವರ್‌ ಆಗೋದು ಅವನ ಬಾಲ್ಯದ ಆಸೆ. ಬೆಂಗಳೂರಿಗೆ ಬಂದವನಿಗೆ ದುಬಾರಿ ಕಾರ್‌ ಓಡಿಸುವ ಹುಚ್ಚು. ಆದರೆ ಇಲ್ಲಿ ಆತನಿಗೆ ಸಿಕ್ಕಿದ್ದು ಪ್ರೀಮಿಯರ್‌ ಪದ್ಮಿನಿ ಕಾರ್‌ ಓಡಿಸುವ ಅವಕಾಶ. ನಿತ್ಯ ಜಗ್ಗೇಶ್‌ ಜತೆಗೆ ಕಾರ್‌ನಲ್ಲಿ ಸುತ್ತುವುದು ಆತನ ಕೆಲಸ. ಅವರಿಬ್ಬರ ಜರ್ನಿಯಲ್ಲಿ ನಡೆಯುವ ಸಂಭಾಷಣೆ, ತಮಾಷೆ ..ಅದ್ಭುತವಾಗಿದೆ. ನಿಜ ಜೀವನದಲ್ಲಿ ಪ್ರತಿಯೊಬ್ಬ ಡ್ರೈವರ್‌ಗೂ ಕನೆಕ್ಟ್ ಆಗುತ್ತದೆ. ತಮಾಷೆಯ ನಡುವೆಯೂ ತುಂಬಾ ಎಮೋಷನ್‌ ತುಂಬಿಕೊಂಡಿದೆ. ಸಿನಿಮಾ ನೋಡುವ ಚಾಲಕರು, ತಾವೇ ನಂಜುಂಡ ಎಂದು ಫೀಲ್‌ ಮಾಡುವುದು ಗ್ಯಾರಂಟಿ.

ಜಗ್ಗೇಶ್‌ ಕಂಡು ಭಯ ಆಗಿತ್ತು...

ಶೂಟಿಂಗ್‌ ಮೊದಲ ದಿನ ಆದ ಅನುಭವವೇ ಬೇರೆ. ಜಗ್ಗೇಶ್‌ ಸರ್‌ ಮುಂದೆ ನಿಂತು ಕ್ಯಾಮರಾ ಎದುರಿಸುವಾಗ ಭಯ ಶುರುವಾಯ್ತು. ನಿರ್ದೇಶಕರು ಆ್ಯಕ್ಷನ್‌ ಹೇಳಿದಾಗ ತಡವರಿಸುವಂತಹ ಸ್ಥಿತಿ ನನ್ನದಾಯಿತು. ಕೊನೆಗೆ ಜಗ್ಗೇಶ್‌ ಸರ್‌ ಹತ್ತಿರ ಬಂದರು. ‘ನೀನೊಬ್ಬ ನಟ, ಭಯ ಪಟ್ಟುಕೊಳ್ಳಬೇಡ, ಆರಾಮಾಗಿ ಆ್ಯಕ್ಟಿಂಗ್‌ ಮಾಡು, ಅದು ತಾನಾಗಿಯೇ ಸರಿ ಹೋಗುತ್ತೆ’ ಅಂದ್ರು. ಅವರು ಧೈರ್ಯ ಹೇಳಿದ ನಂತರ ಎಲ್ಲ ಸರಿ ಹೋಯ್ತು. ಒಂದು ಪಾತ್ರಕ್ಕೆ ಸಿದ್ಧರಾಗುವ ಅವರ ಬದ್ಧತೆ, ಸಮಯ ಪಾಲನೆ ನೋಡಿ ಅಚ್ಚರಿ ಪಟ್ಟೆ. ಕಲಾವಿದನಿಗೆ ಅದು ಮುಖ್ಯ ಅಂತ ಗೊತ್ತಾಗಿದ್ದು ಅವರನ್ನು ನೋಡಿದ ನಂತರವೇ. ಅವರ ಹಾಗೆಯೇ ಚಿತ್ರದ ಅಷ್ಟೂಕಲಾವಿದರು ಸಾಥ್‌ ಕೊಟ್ಟರು. ನನ್ನ ಪಾತ್ರ ಚೆನ್ನಾಗಿ ಬಂದಿದ್ದರೆ, ಅದಕ್ಕೆ ಅವರೆಲ್ಲ ಕಾರಣ.

ಸಾಕಷ್ಟುನಿರೀಕ್ಷೆ ಇಟ್ಟುಕೊಂಡಿದ್ದೇನೆ..

ಶೂಟಿಂಗ್‌ ಸೆಟ್‌ ಮನೆ ಥರನೇ ಇತ್ತು. ಯಾವತ್ತಿಗೂ ಬೇಸರದ ಅನುಭವ ಆಗಲಿಲ್ಲ. ಅದಕ್ಕೆ ಕಾರಣ ಶ್ರುತಿ ನಾಯ್ಡು ಅವರು ಆ ಚಿತ್ರದ ನಿರ್ಮಾಣಕ್ಕೆ ಕೊಟ್ಟಆದ್ಯತೆ. ಮೊದಲ ಸಿನಿಮಾ, ಯಾವುದು ಕಮ್ಮಿ ಎನಿಸಬಾರದು ಎನ್ನುವುದು ಅವರ ತಲೆಯಲ್ಲಿತ್ತು. ಎಲ್ಲವೂ ಅದ್ಧೂರಿಯಾಗಿಯೇ ಬರಬೇಕು ಅಂತಲೇ ಚಿತ್ರದ ಫ್ರೇಮ್‌ ಮೇಲೂ ಕಣ್ಣಿಟ್ಟಿರುತ್ತಿದ್ದರು. ಅದೀಗ ಸಿನಿಮಾದ ಮೇಕಿಂಗ್‌ನಲ್ಲಿ ಗೊತ್ತಾಗುತ್ತದೆ. ನಾವಿನ್ನೂ ಪೂರ್ತಿ ಸಿನಿಮಾ ನೋಡಿಲ್ಲ. ಆದರೆ ಡಬ್ಬಿಂಗ್‌ ಹಂತದಲ್ಲಿ ಅಷ್ಟೋ ಇಷ್ಟೋ ಸೀನ್‌ ನೋಡಿದ್ದೇನೆ. ಪ್ರತಿ ಸೀನು ಸುಂದರವಾಗಿ, ಅಚ್ಚುಕಟ್ಟಾಗಿ ಬಂದಿದೆ. ಕೆಲವು ಕಡೆ ಕಣ್ಣೀರು ತಂತು. ಒಂದೊಳ್ಳೆ ಸಿನಿಮಾದಲ್ಲಿ ಅಭಿನಯಿಸಿದ ಖುಷಿ ನನಗಿದೆ.

ನಿನ್ನ ಬಗ್ಗೆ ಗೊತ್ತು ಅಂದ್ರು ದರ್ಶನ್‌

ನೋಡ್ಲಿಕ್ಕೆ ದರ್ಶನ್‌ ಥರನೇ ಕಾಣ್ತೀಯಾ ಅಂತ ಶ್ರುತಿ ಮೇಡಂ ಆಗಾಗ ಹೇಳ್ತಿದ್ರು. ದರ್ಶನ್‌ ಅವರಿಗೂ ನಿನ್ನ ಬಗ್ಗೆ ಹೇಳಿದ್ದೇನೆ ಅಂತಲೂ ಹೇಳುತ್ತಿದ್ರು. ಆದರೂ ಒಮ್ಮೆಯೂ ನಾನು ದರ್ಶನ್‌ ಅವರನ್ನು ಭೇಟಿ ಮಾಡುವುದಕ್ಕೆ ಆಗಿರಲಿಲ್ಲ. ಆ ಅವಕಾಶ ಸಿಕ್ಕಿದ್ದು ‘ಪ್ರೀಮಿಯರ್‌ ಪದ್ಮಿನಿ’ ಆಡಿಯೋ ಲಾಂಚ್‌ ಸಂದರ್ಭ. ಕಾರ್ಯಕ್ರಮ ಮುಗಿದ ಮೇಲೆ, ಹತ್ತಿರ ಕರೆದು ಅಪ್ಪಿಕೊಂಡರು. ಇಲ್ಲ, ಚಿನ್ನ ನಿನ್ನ ಬಗ್ಗೆ ಕೇಳಿದ್ದೆ. ಈಗ ನೋಡಿ ಖುಷಿ ಆಯ್ತು. ಚೆನ್ನಾಗಿ ಬೆಳೆದು ನಿಲ್ಲು. ಏನಾದ್ರೂ ಹೆಲ್ಪ್‌ ಬೇಕಿದ್ರೆ ಕೇಳು ಅಂದ್ರು. ಆ ಕ್ಷಣ ನನ್ನನ್ನು ನಾನೇ ಮರೆತು ಬಿಟ್ಟೆ.