57ನೇ IFFI 2026 ನವೆಂಬರ್ 20ರಿಂದ 28ರವರೆಗೆ ಗೋವಾದಲ್ಲಿ ನಡೆಯಲಿದೆ. 'ಇಂಡಿಯನ್ ಪನೋರಮಾ' ವಿಭಾಗ 'ಧುರಂಧರ್' ಚಿತ್ರದೊಂದಿಗೆ ಆರಂಭವಾಗಲಿದ್ದು, ಬ್ರಿಕ್ಸ್ ದೇಶಗಳ ಸಿನಿಮಾಗಳ ವಿಭಾಗಕ್ಕೆ 'ರಾಮಾಯಣ' ಚಾಲನೆ ನೀಡಲಿದೆ. ಈ ಬಾರಿಯ ಉತ್ಸವದಲ್ಲಿ ಸ್ಪೇನ್ ಮತ್ತು ರಷ್ಯಾಗೆ ವಿಶೇಷ ಗೌರವ ನೀಡಲಾಗುತ್ತಿದೆ.

ನವದೆಹಲಿ (ನವೆಂಬರ್ 13): IFFI 2026 (ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ)ಕ್ಕೆ ದಿನಗಣನೆ ಶುರುವಾಗಿದೆ. 57ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಇದಾಗಿದ್ದು, ನವೆಂಬರ್ 20ರಿಂದ 28 ರವರೆಗೆ ಗೋವಾದಲ್ಲಿ ನಡೆಯಲಿದೆ. ವಿಶೇಷ ಅಂದರೆ 'ಇಂಡಿಯನ್ ಪನೋರಮಾ' ವಿಭಾಗವು ಬಾಲಿವುಡ್‌ನ ಧುರಂಧರ್ ಪ್ರದರ್ಶನದೊಂದಿಗೆ ಆರಂಭವಾಗಲಿದೆ. ಇನ್ನು BRICS ದೇಶಗಳ ಸಿನಿಮಾಗಳ ವಿಶೇಷ ವಿಭಾಗದಲ್ಲಿ 'ರಾಮಾಯಣ' ಸಿನಿಮಾ ಮೂಲಕ ಚಾಲನೆ ಸಿಗಲಿದೆ.

ಪನೋರಮಾ ವಿಭಾಗದಲ್ಲಿ ಏನೆಲ್ಲಾ ಇರಲಿದೆ?

57ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಬಗ್ಗೆ ಮಾಹಿತಿ ನೀಡಿರುವ ಎನ್‌ಎಫ್‌ಡಿಸಿ.. ಈ ಬಾರಿಯೂ ಆಯ್ಕೆ ಸಮಿತಿ ಮತ್ತು ತೀರ್ಪುಗಾರರು ಅತ್ಯುತ್ತಮ ಚಿತ್ರಗಳನ್ನು ಆಯ್ಕೆ ಮಾಡಿದ್ದಾರೆ. ಇಂಡಿಯನ್ ಪನೋರಮಾದ ಪೂರ್ಣ ಪ್ರಮಾಣದ ವಿಭಾಗದಲ್ಲಿ 'ಧುರಂಧರ್' ಮೊದಲ ಚಿತ್ರವಾಗಿ ಪ್ರದರ್ಶನಗೊಳ್ಳಲಿದೆ. ನಾನ್-ಫೀಚರ್ ವಿಭಾಗವು ಲಡಾಖಿ ಭಾಷೆಯ 'ಬಿಕಮಿಂಗ್' ಸಿನಿಮಾದೊಂದಿಗೆ ಆರಂಭವಾಗಲಿದೆ ಎಂದು ತಿಳಿಸಿದೆ. ಇನ್ನು ಇಂಡಿಯನ್ ಪನೋರಮಾ ವಿಭಾಗದಲ್ಲಿ ಒಟ್ಟು 25 ಫೀಚರ್ ಸಿನಿಮಾಗಳು ಮತ್ತು 20 ನಾನ್-ಫೀಚರ್ ಸಿನಿಮಾಗಳು ಪ್ರದರ್ಶನಗೊಳ್ಳಲಿವೆ.

ನವೆಂಬರ್ 20 ರಂದು ಉದ್ಘಾಟನಾ ಸಮಾರಂಭ ನಡೆಯಲಿದೆ. ಪಾವೆಲ್ ಪಾವ್ಲಿಕೋವ್‌ಸ್ಕಿ ನಿರ್ದೇಶನದ 2026ರ ಪೋಲಿಷ್ ಭಾಷೆಯ ಬಯೋಗ್ರಾಫಿಕಲ್ ಚಿತ್ರ Fatherland ಪ್ರದರ್ಶನಗೊಳ್ಳಲಿದೆ. ನವೆಂಬರ್ 28ರಂದು ಸಿಂಗಾಪುರದ We are all Strangers ಚಿತ್ರದೊಂದಿಗೆ ಉತ್ಸವಕ್ಕೆ ತೆರೆ ಬೀಳಲಿದೆ ಎಂದು ಎನ್‌ಎಫ್‌ಡಿಸಿ ತಿಳಿಸಿದೆ.

ಪ್ಲಾನ್ ಹೇಗಿದೆ?

  • ಚಿತ್ರೋತ್ಸವಕ್ಕೆ 137 ದೇಶಗಳಿಂದ ಬರೋಬ್ಬರಿ 1,900 ಸಿನಿಮಾಗಳು ಅರ್ಜಿ
  • 87 ದೇಶಗಳ 159 ಅಂತಾರಾಷ್ಟ್ರೀಯ ಸಿನಿಮಾಗಳು ಅರ್ಜಿ ಸಲ್ಲಿಕೆ
  • 18 ವಿವಿಧ ಭಾಷೆಗಳ 76 ಭಾರತೀಯ ಸಿನಿಮಾಗಳು ಪ್ರದರ್ಶನಕ್ಕೆ ಆಯ್ಕೆ
  • ಸ್ಪೇನ್ ಮತ್ತು ರಷ್ಯಾಗೆ ವಿಶೇಷ ಗೌರವ ನೀಡಲು ನಿರ್ಧಾರ ಮಾಡಲಾಗಿದೆ

ಅಂದರೆ ಈ ವರ್ಷ 'ಸ್ಪೇನ್' ದೇಶವನ್ನು ಗೌರವ ಅತಿಥಿ ರಾಷ್ಟ್ರವಾಗಿ ಆಯ್ಕೆ ಮಾಡಲಾಗಿದೆ. ಜೊತೆಗೆ 4 ಸ್ಪ್ಯಾನಿಷ್ ಸಿನಿಮಾಗಳು ಪ್ರದರ್ಶನಗೊಳ್ಳಲಿವೆ. ರಷ್ಯಾ ದೇಶವನ್ನ ಪಾಲುದಾರ ರಾಷ್ಟ್ರವಾಗಿ ಪರಿಗಣಿಸಲಾಗಿದೆ. ರಷ್ಯನ್ ಸಿನಿಮಾದ ಶ್ರೀಮಂತಿಕೆಯನ್ನು ತೋರಿಸುವ 4 ವಿಶೇಷ ಚಿತ್ರಗಳು ಪ್ರದರ್ಶನಗೊಳ್ಳಲಿವೆ. ಈ ಸಿನಿಮೋತ್ಸವದಲ್ಲಿ ಬ್ರಿಕ್ಸ್ ದೇಶಗಳ ಸಿನಿಮಾಗಳಿಗೆ ವಿಶೇಷ ಆದ್ಯತೆ ನೀಡಲಾಗಿದೆ.

ಭಾರತದ 'ರಾಮಾಯಣ' ಚಿತ್ರವು ಈ ವಿಭಾಗದ ಮೊದಲ ಸಿನಿಮಾವಾಗಿ ಪ್ರದರ್ಶನಗೊಳ್ಳಲಿದೆ. ಬ್ರಿಕ್ಸ್‌ನ ಎಲ್ಲಾ 11 ಸದಸ್ಯ ರಾಷ್ಟ್ರಗಳು ಹಾಗೂ ಪಾಲುದಾರ ದೇಶಗಳ ಸಿನಿಮಾಗಳು ಇಲ್ಲಿ ಪ್ರದರ್ಶನಗೊಳ್ಳಲಿವೆ. ವಿವಿಧ ದೇಶಗಳ ಕಥಾ ಶೈಲಿಯನ್ನು ಪ್ರೇಕ್ಷಕರು ಸವಿಯಲು ಇದು ಒಳ್ಳೆಯ ಅವಕಾಶ ಆಗಿದೆ.

Scroll to load tweet…