ಇಂದು, 25 ಜುಲೈ 2025 ರಂದು ಇತ್ತೀಚೆಗೆ ನಮ್ಮನ್ನಗಲಿರುವ ಹಿರಿಯ ನಟಿ ಬಿ. ಸರೋಜಾದೇವಿ ವೈಕುಂಠ ಸಮಾರಾಧನೆ. ಈ ಕಾರ್ಯಕ್ರಮದಲ್ಲಿ ಚಿತ್ರರಂಗದ ಅನೇಕರು ಕಲಾವಿದರು ಸೇರಿದಂತೆ, ಸರೋಜಾದೇವಿ ಬಂಧು-ಬಾಂಧವರು, ರಾಜಕೀಯ ನಾಯಕರು, ಹಲವು ಗಣ್ಯರು ವೈಕುಂಠ ಸಮಾರಾಧನೆಯಲ್ಲಿ ಭಾಗಿ ಆಗಿದ್ದಾರೆ.

ಇಂದು, 25 ಜುಲೈ 2025 ರಂದು ಇತ್ತೀಚೆಗೆ ನಮ್ಮನ್ನಗಲಿರುವ ಹಿರಿಯ ನಟಿ ಬಿ. ಸರೋಜಾದೇವಿ (B Saroja Devi) ವೈಕುಂಠ ಸಮಾರಾಧನೆ. ಈ ಕಾರ್ಯಕ್ರಮದಲ್ಲಿ ಚಿತ್ರರಂಗದ ಅನೇಕರು ಕಲಾವಿದರು ಸೇರಿದಂತೆ, ಸರೋಜಾದೇವಿ ಬಂಧು-ಬಾಂಧವರು, ರಾಜಕೀಯ ನಾಯಕರು, ಹಲವು ಗಣ್ಯರು ವೈಕುಂಠ ಸಮಾರಾಧನೆಯಲ್ಲಿ ಭಾಗಿ ಆಗಿದ್ದಾರೆ. ಮಾಜಿ ಉಪ ಮುಖ್ಯ ಮಂತ್ರಿ ಸಿ ಅಶ್ವಥ್ ನಾರಾಯಣ ಸಹ ಭಾಗಿಯಾಗಿದ್ದಾರೆ. ಇದರಲ್ಲಿ ಭಾಗಿಯಾಗಿರುವ ನಟ-ನಿರ್ದೇಶಕ ಉಪೇಂದ್ರ ಅವರು, ಅಲ್ಲಿ ಒಂದು ಮಾತು ಹೇಳಿದ್ದಾರೆ. ಅದೀಗ ವೈರಲ್ ಆಗುತ್ತಿದೆ.

ಹಾಗಿದ್ದರೆ ನಟ ಉಪೇಂದ್ರ ಅವರು ಹೇಳಿದ್ದೇನು? ಈ ಬಗ್ಗೆ 'ಸರೋಜಾದೇವಿ ಇಲ್ಲದಿದ್ರೆ ನಾನು ಹೀರೋ ಆಗುತಿರಲಿಲ್ಲ.. A ಸಿನಿಮಾ ಬಿಡುಗಡೆ ಆಗೋದಕ್ಕೆ ಅವರೇ ಕಾರಣ. 'ಎ' ಸಿನಿಮಾ ಸೆನ್ಸಾರ್ ಆಗೋದಿಲ್ಲ ಅನ್ನೋ ಟೈಂನಲ್ಲಿ ಸಪೋರ್ಟ್ ಮಾಡಿದವರು ಅವರು. 'ಎ' ಸಿನಿಮಾನ ಮೆಚ್ಚಿ ಹೊಗಳಿದ ಮೊದಲಿಗರು ಸರೋಜಮ್ಮ, ಎ ಪಿಚ್ಚರ್ ಗೆ ಪ್ರೊತ್ಸಾಹ ನೀಡದೇ ಇದ್ದಿದ್ದರೆ ಇವತ್ತು ನಾನು ಹೀರೋ ಆಗಿರೋಕೆ ಅವಕಾಶ ಇರ್ತಿರಲಿಲ್ಲ' ಎಂದಿದ್ದಾರೆ. ಅಷ್ಟೇ ಅಲ್ಲ, ವಿಷ್ಣುವರ್ಧನ್ ಪ್ರಶಸ್ತಿ, ಡಾ.ರಾಜ್ ಕುಮಾರ್ ಪ್ರಶಸ್ತಿ ಹಾಗೆ ಬಿ ಸರೋಜಾದೇವಿ ಅವ್ರ ಹೆಸರಲ್ಲಿ ಪ್ರಶಸ್ತಿ ಆಗಬೇಕು' ಎಂದು ಕೂಡ ಹೇಳಿದ್ದಾರೆ ಉಪೇಂದ್ರ.

ಇನ್ನು, ಸಿ. ಅಶ್ವಥ್ ನಾರಾಯಣ ಅವರು 'ಸರೋಜದೇವಿ ಮಾಡಿರುವ ಚಿತ್ರರಂಗದ ಸೇವೆ ಹಲವರಿಗೆ ಮಾಧರಿ ಆಗಲಿ ಎಂದ ಅಶ್ವಥ್ ನಾರಾಯಣ್ ಅವರು 'ಮಲ್ಲೇಶ್ವರಂ 11 ನೇ ಮುಖ್ಯ ರಸ್ತೆಗೆ ಬಿ ಸರೋಜದೇವಿ ಹೆಸರು ನಾಮಕರಣ ಮಾಡುತ್ತೆವೆ' ಎಂದಿದ್ದಾರೆ. ಹಲವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಹಿರಿಯ ನಟಿ ಹೇಮಾ ಚೌಧರಿ ಕೂಡ ಸರೋಜಾದೇವಿ ವೈಕುಂಠ ಸಮಾರಾಧನೆಯಲ್ಲಿ ಪಾಲ್ಗೊಂಡು ಹಿರಿಯ ನಟಿಯನ್ನು ಸ್ಮರಿಸಿ ಮಾತನ್ನಾಡಿದ್ದಾರೆ.

ಕನ್ನಡ ಸಿನಿಮಾರಂಗದ ಅಭಿನಯ ಸರಸ್ವತಿ ಎಂದೇ ಹೆಸರಾಗಿದ್ದ ಸ್ಟಾರ್‌ ಹೀರೋಯಿನ್‌ ಹಾಗೂ ಬಹುಭಾಷಾ ನಟಿ ಬಿ. ಸರೋಜಾದೇವಿ ತಮ್ಮ 87ನೇ ವರ್ಷದಲ್ಲಿ ನಿಧನರಾದರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಕೆಲವು ವರ್ಷಗಳಿಂದ ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಂಡಿರಲಿಲ್ಲ.

ಸರೋಜಾ ದೇವಿ ಅವರ ವಿದ್ಯಾಭ್ಯಾಸ ಮಾಡಿದ್ದು ಬೆಂಗಳೂರಿನಲ್ಲಿ. ಸ್ಟಾರ್‌ ನಟಿಯಾಗಿ ಆಗಿನ ಕಾಲದಲ್ಲೇ ಶ್ರೀಮಂತಿಕೆಯ ಉತ್ತುಂಗವೇರಿದ್ದ ಬಿ.ಸರೋಜಾದೇವಿ ಅವರು ತಮ್ಮ ಶ್ರೀಮಂತಿಕೆಯನ್ನು ಯಾವುದೇ ವಿವಾದಗಳಿಲ್ಲದೆ ಹೇಗೆ ಮ್ಯಾನೇಜ್‌ ಮಾಡಲು ಸಾಧ್ಯವಾಯಿತು ಅನ್ನೋದರ ಬಗ್ಗೆಯೇ ಎಲ್ಲೆಡೆ ಕುತೂಹಲವಿದೆ. ಅದಕ್ಕೆ ಅವರೇ ಉತ್ತರವನ್ನು ಕೂಡ ಕೊಟ್ಟಿದ್ದಾರೆ.

ಅವರೇ ಸಂದರ್ಶನವೊಂದರಲ್ಲಿ ಹೇಳಿರುವ ಹಾಗೆ, 'ನಾನು ಐದನೇ ಕ್ಲಾಸ್‌ವರೆಗೆ ಮಾತ್ರ ಓದಿದ್ದೇನೆ. ಮುಂದೆ ಓದಲು ಸಾಧ್ಯವಾಗದೇ ಇದ್ದಿದ್ದರಿಂದ ಆದ ನಷ್ಟವನ್ನು ಈಗಲೂ ಕೂಡ ನಾನು ಅನುಭವಿಸುತ್ತಿದ್ದೇನೆ. ನಾನು ಯಾವಾಗಲೂ ಚೆನ್ನಾಗಿ ಓದಬೇಕೆಂದು ಬಯಸಿದ್ದೆ. ಇತ್ತೀಚಿನ ದಿನಗಳಲ್ಲಿ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ಸೇರಿಸಲಾಗುತ್ತದೆ. ಆದರೆ ಆ ದಿನಗಳಲ್ಲಿ ಅಂತಹ ಯಾವುದೇ ಆಯ್ಕೆಗಳೇ ಇದ್ದಿರಲಿಲ್ಲ. ನಾನು ಕನ್ನಡ ಮಾಧ್ಯಮ ಶಾಲೆಗಳಲ್ಲಿ ಓದಿದ್ದೆ.

ಹಲವರು ನನ್ನನ್ನು ತಪ್ಪಾಗಿ ಭಾವಿಸಬಹುದು ಆದರೆ ಕಲಾವಿದರು ಕನಿಷ್ಠ ಪಕ್ಷ ಲೆಕ್ಕಪತ್ರಗಳನ್ನು ಓದಲು ಅರ್ಥಮಾಡಿಕೊಳ್ಳಬೇಕು ಎಂಬ ಕಾರಣಕ್ಕಾಗಿ ಅವರು ಇಂಗ್ಲಿಷ್ ತಿಳಿದಿರಬೇಕು ಎಂದು ನಾನು ಬಲವಾಗಿ ಭಾವಿಸುತ್ತೇನೆ. ಇಲ್ಲದಿದ್ದರೆ ನಾವು ಮೋಸ ಹೋಗುವ ಸಾಧ್ಯತೆ ಹೆಚ್ಚು. ನನಗೆ ಇಂಗ್ಲಿಷ್ ತಿಳಿದಿರುವುದರಿಂದ ಮಾತ್ರ ನಾನು ನಿಮ್ಮೊಂದಿಗೆ ಮಾತನಾಡಬಲ್ಲೆ. ಇದಲ್ಲದೆ, ನಾನು ಇತರ ಭಾಷೆಯ ಚಲನಚಿತ್ರಗಳಲ್ಲಿ ಕೆಲಸ ಮಾಡುತ್ತಿದ್ದರಿಂದ ನಾನು ಇಂಗ್ಲಿಷ್ ಕಲಿಯಲೇಬೇಕಿತ್ತು ಮತ್ತು ನಾನು ಅದನ್ನು ಹೇಗೋ ನಿಭಾಯಿಸಿದೆ.

ನಾನು ಹರ್ಷ (ಶ್ರೀಹರ್ಷ) ಅವರನ್ನು ಮದುವೆಯಾದ ನಂತರ, ಅವರು ನನ್ನ ಜೀವನದುದ್ದಕ್ಕೂ ಈ ವಿಚಾರದಲ್ಲಿ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಂಡರು. ಏಕೆಂದರೆ ಹಣವಿಲ್ಲದೆ ಬದುಕಬೇಕಾದ ಮತ್ತು ಅಕ್ಷರಶಃ ರಸ್ತೆಯಲ್ಲಿ ಭಿಕ್ಷುಕನಂತೆ ನಡೆಯಬೇಕಾದ ಕಲಾವಿದರ ಕಷ್ಟವನ್ನು ಅವರು ತಿಳಿದಿದ್ದರು. ಅವರು ಯಾವಾಗಲೂ ಹೇಳುತ್ತಿದ್ದರು, 'ನನ್ನ ಪತ್ನಿ ಶ್ರೀಮತಿ ಹರ್ಷ ಯಾವಾಗಲೂ ಕಾರಿನಲ್ಲಿ ತಿರುಗಾಡಬೇಕು ಮತ್ತು ದೊಡ್ಡ ಬಂಗಲೆಯಲ್ಲಿ ವಾಸಿಸಬೇಕು. ಅವರು ಎಂದಿಗೂ ಹಣಕ್ಕಾ ಕೈ ಚಾಚಬಾರದು, ಬದಲಿಗೆ ಅವರ ಕೈ ಯಾವಾಗಲೂ ಬಡವರಿಗೆ ಸಹಾಯ ನೀಡುವಂತಿರಬೇಕು.' ಅವರು ನನಗಾಗಿ ತುಂಬಾ ಕಷ್ಟಪಟ್ಟಿದ್ದಾರೆ. ನಾನು ಅವರನ್ನು ನನ್ನ ದೇವರು ಎಂದು ಪರಿಗಣಿಸುತ್ತೇನೆ ಮತ್ತು ಅವರಂತಹ ವ್ಯಕ್ತಿಯನ್ನು ನನ್ನ ಜೀವನದಲ್ಲಿ ಪಡೆದಿರುವುದು ತುಂಬಾ ಅದೃಷ್ಟ' ಎಂದು ಬಿ.ಸರೋಜಾ ದೇವಿ ಹೇಳಿದ್ದರು.