ರಾಜ್ಯ ಚಲನಚಿತ್ರ ಪ್ರಶಸ್ತಿಗಳ ಪೈಕಿ ಯಾವುದಾದರೊಂದು ಪ್ರಶಸ್ತಿಯನ್ನು ಇತ್ತೀಚೆಗೆ ಅಗಲಿದ ಕನ್ನಡದ ಹಿರಿಯ ನಟಿ ಬಿ.ಸರೋಜಾ ದೇವಿ ಅವರ ಹೆಸರಿನಲ್ಲಿ ನೀಡುವಂತೆ ನಟಿ ತಾರಾ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ.

ಬೆಂಗಳೂರು : ರಾಜ್ಯ ಚಲನಚಿತ್ರ ಪ್ರಶಸ್ತಿಗಳ ಪೈಕಿ ಯಾವುದಾದರೊಂದು ಪ್ರಶಸ್ತಿಯನ್ನು ಇತ್ತೀಚೆಗೆ ಅಗಲಿದ ಕನ್ನಡದ ಹಿರಿಯ ನಟಿ ಬಿ.ಸರೋಜಾ ದೇವಿ ಅವರ ಹೆಸರಿನಲ್ಲಿ ನೀಡುವಂತೆ ನಟಿ ತಾರಾ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ.

ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ನಟಿ ತಾರಾ ಅವರು ಈ ಕುರಿತು ಮನವಿ ಪತ್ರ ಸಲ್ಲಿಸಿದರು. ಈ ಮನವಿ ಪತ್ರದಲ್ಲಿ ಅವರು, ‘ಈಗಾಗಲೇ ಹಲವು ಸಾಧಕರ ಹೆಸರುಗಳಲ್ಲಿ ರಾಜ್ಯ ಸರ್ಕಾರ ಚಲನಚಿತ್ರ ಪ್ರಶಸ್ತಿ ನೀಡುತ್ತಿದೆ. ಈಗ ಹೊಸದಾಗಿ ಹಿರಿಯ ನಟಿ ಜಯಂತಿ ಅವರ ಹೆಸರಿನಲ್ಲೂ ಪ್ರಶಸ್ತಿ ನೀಡುವ ನಿರ್ಧಾರ ತೆಗೆದುಕೊಂಡಿರುವುದು ಸ್ವಾಗತಾರ್ಹ ಬೆಳವಣಿಗೆ. ಇತ್ತೀಚೆಗಷ್ಟೆ ನಿಧನರಾದ ಹಿರಿಯ ನಟಿ ಬಿ. ಸರೋಜಾ ದೇವಿ ಅವರು ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರು. ನಟನೆಯ ಜೊತೆಗೆ ಕಷ್ಟದಲ್ಲಿರುವ ಹಲವು ಕಲಾವಿದರಿಗೆ ಸಹಾಯ ಮಾಡಿದ್ದಾರೆ. ಅವರ ನಟನೆ ಮತ್ತು ಸಾಮಾಜಿಕ ಸೇವೆಯನ್ನು ಪರಿಗಣಿಸಿ ಅವರ ಹೆಸರಿನಲ್ಲೂ ರಾಜ್ಯ ಚಲನಚಿತ್ರ ಪ್ರಶಸ್ತಿ ನೀಡಿದರೆ ಉತ್ತಮ’ ಎಂದು ಅವರು ಹೇಳಿದ್ದಾರೆ.

ಸರೋಜಾದೇವಿ ಪ್ರತಿಮೆಗಿಂತ ಹೆಸರುಳಿಸುವ ಕೆಲಸ ಮಾಡ್ತೇವೆ

ಭಾರತ ಚಿತ್ರರಂಗದ ಅಭಿನಯ ಸರಸ್ವತಿ ಖ್ಯಾತಿಯ ನಟಿ ಬಿ. ಸರೋಜಾದೇವಿಯವರು ನನಗಿರುವ ಸಿನಿಮಾ ಮೇಲಿನ ಆಸಕ್ತಿಯನ್ನು ಕಂಡು ನಾನು ಮೊದಲ ಬಾರಿಗೆ ಸಚಿಒವನಾದಾಗ ಸಿನಿಮಾದಲ್ಲಿ ನಟಿಸುವಂತೆ ತಿಳಿಸಿದ್ದರು. ಅದು ಸಾಧ್ಯವಾಗಲಿಲ್ಲ. ನಮ್ಮ ಜಿಲ್ಲೆಯವರಾದ ಸರೋಜಾದೇವಿಯವರ ಕಲಾಸೇವೆಗಾಗಿ ಅವರ ಹೆಸರು ಶಾಶ್ವತವಾಗಿ ಉಳಿಯುವಂತೆ ಮಾಡಲು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಕಾರ್ಯಕ್ರಮ ರೂಪಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.

ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ದಶಾವಾರದಲ್ಲಿ ನಡೆದ ಬಿ. ಸರೋಜಾದೇವಿ ಅಂತಿಮ ಸಂಸ್ಕಾರದಲ್ಲಿ ಭಾಗವಹಿಸಿದ್ದ ಡಿಸಿಎಂ ಶಿವಕುಮಾರ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ನಾವೆಲ್ಲರೂ ಇಂದು ದಕ್ಷಿಣ ಭಾರತದ ಖ್ಯಾತ ನಟಿ ಬಿ. ಸರೋಜಾದೇವಿ ಅವರ ಅಂತಿಮ ಸಂಸ್ಕಾರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇವೆ. ಇವರು ದಕ್ಷಿಣ ಭಾರತದ ಖ್ಯಾತ ನಟರ ಜತೆ ತಲಾ 20 ರಿಂದ 25ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿ ಅಪಾರವಾದ ಕೀರ್ತಿ ಸಂಪಾದಿಸಿದ್ದಾರೆ. ಇಡೀ ಕರ್ನಾಟಕ ಸರ್ಕಾರ, ದಕ್ಷಿಣ ಭಾರತದ ಕಲಾವಿದರು ಅವರಿಗೆ ಗೌರವಪೂರ್ವಕವಾಗಿ ನಮನ ಅರ್ಪಿಸುವ ಕೆಲಸ ಮಾಡಿದ್ದೇವೆ ಎಂದು ತಿಳಿಸಿದರು.