ಐಪಿಎಲ್ನ ಮೊದಲ ಸೀಸನ್ನಲ್ಲಿ ಕೆಕೆಆರ್ ಡ್ರೆಸ್ಸಿಂಗ್ ರೂಮ್ನಲ್ಲಿ ಸೌರವ್ ಗಂಗೂಲಿ ಅವರು ಶಾರುಕ್ ಖಾನ್ಗೆ ಅವರ ಯಶಸ್ಸಿನ ಗುಟ್ಟಿನ ಬಗ್ಗೆ ಪ್ರಶ್ನಿಸಿದ್ದರು. ಯಾವುದೇ ಹಿನ್ನೆಲೆ ಇಲ್ಲದಿದ್ದರೂ ಬಾಲಿವುಡ್ನಲ್ಲಿ ಕಿಂಗ್ ಖಾನ್ ಆಗಿ ಬೆಳೆದ ಹಿಂದಿನ ರಹಸ್ಯವನ್ನು ಶಾರುಕ್ ಬಿಚ್ಚಿಟ್ಟಿದ್ದರು. ತಮ್ಮ ಮೇಲಿನ ಅಪಾರ ನಂಬಿಕೆ ಹಾಗೂ ಛಲವೇ ತಮ್ಮ ಯಶಸ್ಸಿಗೆ ಕಾರಣ ಎಂದು ಅವರು ವಿವರಿಸಿದ ಘಟನೆಯನ್ನು ಗಂಗೂಲಿ ಸ್ಮರಿಸಿದ್ದಾರೆ.
ಬೆಂಗಳೂರು: ಬಾಲಿವುಡ್ ನಟ ಶಾರುಕ್ ಖಾನ್ ಇಂದು ಕೇವಲ ನಟನಲ್ಲ. ಜಗತ್ತಿನಾದ್ಯಂತ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿರುವ ಜಾಗತಿಕ ಐಕಾನ್. ದೆಹಲಿಯ ಸಾಮಾನ್ಯ ಕುಟುಂಬದಲ್ಲಿ ಬೆಳೆದು, ಮಂಗಳೂರಿನಲ್ಲಿ ಬಾಲ್ಯದ ದಿನಗಳನ್ನು ಕಳೆದ ಶಾರುಕ್ ಖಾನ್, ಕಿರುತೆರೆಯಲ್ಲಿ ವೃತ್ತಿಜೀವನ ಆರಂಭಿಸಿ, ಆ ಬಳಿಕ ಬಾಲಿವುಡ್ನ ಬಹುಬೇಡಿಕೆಯ ನಟನಾಗಿ ಬೆಳೆದು ನಿಂತ ಅವರ ಪಯಣ ಅಷ್ಟೇನು ಸುಲಭವಾಗಿರಲಿಲ್ಲ. ಇನ್ನು ಶಾರುಕ್ ಖಾನ್, ಐಪಿಎಲ್ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡದ ಮಾಲೀಕ ಕೂಡಾ ಹೌದು. ಇನ್ನು ಐಪಿಎಲ್ನ ಮೊದಲ ಮೂರು ಸೀಸನ್ಗಳಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡದ ಭಾಗವಾಗಿದ್ದ ದಿಗ್ಗಜ ಕ್ರಿಕೆಟಿಗ ಸೌರವ್ ಗಂಗೂಲಿ, ಡ್ರೆಸ್ಸಿಂಗ್ ರೂಮ್ನಲ್ಲಿ ಶಾರುಕ್ ಹೇಳಿದ ಮಾತು ಕೇಳಿ ತಬ್ಬಿಬ್ಬಾಗಿದ್ದರಂತೆ.
ಸೌರವ್ ಗಂಗೂಲಿ 2008ರಲ್ಲಿ ಕೆಕೆಆರ್ ತಂಡದ ನಾಯಕರಾಗಿದ್ದರು. ಚೊಚ್ಚಲ ಸೀಸನ್ನಲ್ಲಿ ಪಾಕಿಸ್ತಾನ ಕ್ರಿಕೆಟಿಗರೂ ಐಪಿಎಲ್ನಲ್ಲಿ ಪಾಲ್ಗೊಂಡಿದ್ದರು. ಇನ್ನು ಶಾರುಕ್ ಕುರಿತಂತೆ ಸೌರವ್ ಗಂಗೂಲಿ, ಖಾಸಗಿ ಕಾರ್ಯಕ್ರಮವೊಂದರಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ. 'ನನ್ನ ಅತ್ಯಂತ ಆತ್ಮೀಯ ಸ್ನೇಹಿತ, ಭಾರತದ ಪ್ರಖ್ಯಾತ ನಟ ಶಾರುಕ್ ಖಾನ್, ಕೋಲ್ಕತಾ ನೈಟ್ ರೈಡರ್ಸ್ ತಂಡದ ಮಾಲೀಕರಾಗಿದ್ದರು. ನನಗಿನ್ನೂ ನೆನಪಿದೆ, ಚೊಚ್ಚಲ ಸೀಸನ್ನಲ್ಲಿ ನಾವು ಈಡನ್ ಗಾರ್ಡನ್ಸ್ನಲ್ಲಿ ಆರ್ಸಿಬಿ ಎದುರು ಪಂದ್ಯವನ್ನಾಡುತ್ತಿದ್ದೆವು. ಆ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿತು. ಹೀಗಾಗಿ ನಾವೆಲ್ಲಾ ಡ್ರೆಸ್ಸಿಂಗ್ ರೂಮ್ನಲ್ಲಿದ್ದೆವು. ನಮ್ಮ ಕೆಕೆಆರ್ ತಂಡದಲ್ಲಿ ಹಲವು ಮಹಾನ್ ಆಟಗಾರರಿದ್ದರು. ತಂಡದಲ್ಲಿದ್ದ ಪಾಕಿಸ್ತಾನದ ಶೋಯೆಬ್ ಅಖ್ತರ್, ಡ್ರೆಸ್ಸಿಂಗ್ ರೂಮ್ನಲ್ಲಿ ಹಾಸ್ಯ ಚಟಾಕಿ ಸಿಡಿಸುವ ಮೂಲಕ ಎಲ್ಲರನ್ನು ರಂಜಿಸುತ್ತಿದ್ದರು. ಶಾರುಕ್ ಖಾನ್ ಕೂಡಾ ಡ್ರೆಸ್ಸಿಂಗ್ ರೂಮ್ನಲ್ಲಿರುತ್ತಿದ್ದರು. ಹೀಗಾಗಿ ಎಲ್ಲರೂ ಎಂಜಾಯ್ ಮಾಡುತ್ತಿದ್ದೆವು.
ಶಾರುಕ್ ಖಾನ್ ಸಕ್ಸಸ್ ಸೀಕ್ರೆಟ್
ಇನ್ನು ಆ ಪಂದ್ಯದ ದಿನದಂದು ಮಳೆಯ ಬ್ರೇಕ್ನಿಂದಾಗಿ ಈಡನ್ ಗಾರ್ಡನ್ಸ್ನ ಡ್ರೆಸ್ಸಿಂಗ್ ರೂಮ್ನ ಸೋಫಾ ಮೇಲೆ ನಾವೆಲ್ಲಾ ಕುಳಿತಿದ್ದೆವು. ಶೋಯೆಬ್ ಅಖ್ತರ್ ಬಿಟ್ಟ ಕಣ್ಣು ಮುಚ್ಚದೇ ಶಾರುಕ್ ಖಾನ್ ಅವರನ್ನೇ ನೋಡುತ್ತಿದ್ದರು. ಯಾಕೆಂದರೆ ಪಾಕಿಸ್ತಾನದಲ್ಲೂ ಅಖ್ತರ್, ಶಾರುಕ್ ಖಾನ್ ಹಾಡು ಸಿನಿಮಾ ನೋಡಿ ಬೆಳೆದಿದ್ದರು. ಒಬ್ಬೊಬ್ಬರು ಶಾರುಕ್ ಬಳಿ ಏನೇನೋ ಪ್ರಶ್ನೆಗಳನ್ನು ಕೇಳುತ್ತಿದ್ದರು. ಅದಕ್ಕೆ ಶಾರುಕ್ ಉತ್ತರಿಸುತ್ತಿದ್ದರು. ಹೀಗಿರುವಾಗ ನಾನು ಶಾರುಕ್ ಬಳಿ ಒಂದು ಪ್ರಶ್ನೆಯನ್ನು ಕೇಳಿದೆ. ಅದಕ್ಕೆ ಅವರು ಕೊಟ್ಟ ಉತ್ತರ ಇಂದಿಗೂ ನನ್ನ ಕಿವಿಯಲ್ಲಿ ಗುನುಗುತ್ತಿದೆ ಎಂದು ದಾದಾ ಆ ಕ್ಷಣವನ್ನು ಮೆಲುಕು ಹಾಕಿದ್ದಾರೆ.
ನೀವು ಫಿಲ್ಮ್ ಇಂಡಸ್ಟ್ರಿಗೆ ಒಬ್ಬಂಟಿಗರಾಗಿ ಬಂದಿರಿ. ನೀವೇನೂ ಕಪೂರ್ ಕುಟುಂಬದ ಹಿನ್ನೆಲೆಯವರಾಗಿರಲಿಲ್ಲ, ದೊಡ್ಡ ಪ್ರೊಡ್ಯೂಸರ್ಗಳಾಗಿದ್ದ ಖಾನ್ ಕುಟುಂಬದ ಹಿನ್ನೆಲೆಯಿಂದಲೂ ಬಂದವರಲ್ಲ ಅಥವಾ ಅಮಿತಾಬ್ ಬಚ್ಚನ್ ಅವರ ಕುಟುಂಬಸ್ಥರೂ ಅಲ್ಲ. ಅದಕ್ಕಿಂತ ಹೆಚ್ಚಾಗಿ ನೀವು ಹೃತ್ತಿಕ್ ರೋಷನ್ ಅವರಷ್ಟು ಚೆನ್ನಾಗಿ ಡ್ಯಾನ್ಸ್ ಕೂಡಾ ಮಾಡುವುದಿಲ್ಲ. ಹೃತ್ತಿಕ್ ಅವರ ಅರ್ಧದಷ್ಟು ಸುಂದರವಾಗಿ ಇಲ್ಲ. ಹೀಗಿದ್ದೂ ನೀವು ಯಶಸ್ಸು ಗಳಿಸಿದ್ದು ಹೇಗೆ ಎಂದು ದಾದಾ ಅವರನ್ನು ಪ್ರಶ್ನಿಸುತ್ತಾರೆ. ಅದಕ್ಕೆ ಅವರು ಕೊಟ್ಟ ಉತ್ತರ ಮರೆಯಲೂ ಸಾಧ್ಯವಿಲ್ಲ ಎಂದು ಸೌರವ್ ಹೇಳಿದ್ದಾರೆ.
ದಾದಾ ಪ್ರಶ್ನೆಗೆ ಕಿಂಗ್ ಖಾನ್ ಉತ್ತರ
ಇದಕ್ಕೆ ಉತ್ತರಿಸಿದ ಕಿಂಗ್ ಖಾನ್, 'ಸೌರವ್, ನಾನು ಮೊದಲ ಸಲ ಬಾಂಬೆಗೆ ಬಂದಾಗ, ಭಾಂದ್ರಾದ ಮರೀನ್ ಡ್ರೈವ್ನಲ್ಲಿ ಹಾಕಿದ ಬೆಂಚ್ ಮೇಲೆ ಕುಳಿತು ಸಂಜೆಯವರೆಗೂ ಸಾಕಷ್ಟು ಸಮಯ ಕಳೆದೆ. ಆ ಸಮಯದಲ್ಲಿ ನಾನು ಎರಡು ಶಪಥ ಮಾಡಿದೆ. ಒಂದು ನಾನು ಇದೇ ಜಾಗದಲ್ಲಿ ಒಂದು ಮನೆಯನ್ನು ಕೊಂಡುಕೊಳ್ಳುತ್ತೇನೆ. ಎರಡನೆಯದ್ದು, ಪ್ರತಿದಿನ ನಾನು ಬೆಳಗ್ಗೆ ಎದ್ದು ಕನ್ನಡಿ ನೋಡುವಾಗ, ನಾನು ಹೃತ್ತಿಕ್ ರೋಷನ್ ಅವರಷ್ಟು ಸುಂದರವಾಗಿಲ್ಲ. ನಾನು ಆಮೀರ್ ಖಾನ್ ಅವರಷ್ಟು ಚೆನ್ನಾಗಿ ನಟನೆ ಮಾಡುವುದಿಲ್ಲ. ನಾನು ಸಲ್ಮಾನ್ ಖಾನ್ ಅವರಂತೆ ವಿವಾದಗಳ ಮೂಲಕವೂ ಸುದ್ದಿಯಾದವನಲ್ಲ. ಆದರೆ ನನಗೇನೂ ಸಾಮರ್ಥ್ಯವಿದೆಯೋ ಅದರ ಬಗ್ಗೆ ನನಗೆ ಹೆಮ್ಮೆಯಿದೆ. ನನ್ನ ಸಾಮರ್ಥ್ಯವನ್ನು ನಾನು ಸಂಪೂರ್ಣವಾಗಿ ಬಳಸಿಕೊಂಡು ಎದ್ದು ನಿಲ್ಲುತ್ತೇನೆ. ಹಾಗೆಯೇ ಕನ್ನಡಿ ಮುಂದೆ ನಾನೇ ಬೆಸ್ಟ್ ಎಂದು ಪದೇ ಪದೇ ಹೇಳಿಕೊಳ್ಳುತ್ತೇನೆ ಎಂದು ಶಾರುಕ್ ಹೇಳಿದರು ಎಂದು ದಾದಾ ಹೇಳಿದ್ದಾರೆ.
ಅಂದಹಾಗೆ ಶಾರುಕ್ ಖಾನ್ 2001ರಲ್ಲಿ ಬಾಂಧ್ರಾದಲ್ಲಿ ತಾವು ಮಾಡಿದ ಶಪಥದಂತೆ 27,000 ಚದರಡಿಯ ವಿಲ್ಲಾ ವಿಯೆನ್ನಾ ಹೆಸರಿನ ಐಷಾರಾಮಿ ಬಂಗಲೆಯನ್ನು ಖರೀದಿಸಿದರು. ಇದಾದ ಬಳಿಕ ಆ ಬಂಗಲೆಗೆ 'ಮನ್ನತ್' ಎಂದು ಮರುನಾಮಕರಣ ಮಾಡಿದರು. ಶಾರುಕ್ ಖಾನ್ಗೆ 60 ವರ್ಷ ವಯಸ್ಸಾಗಿದ್ದರೂ ಇಂದಿಗೂ ಬಾಲಿವುಡ್ನ ಬಹುಬೇಡಿಕೆಯ ನಟರಾಗಿ ಗುರುತಿಸಿಕೊಂಡಿದ್ದಾರೆ.


