Asianet Suvarna News Asianet Suvarna News

ಕನ್ನಡ ರಾಜ್ಯೋತ್ಸವ: ಆಲೂರು ವೆಂಕಟರಾಯರು, ಬೇಂದ್ರೆ, ಕುವೆಂಪು- ಇವರ ಕೊಡುಗೆ ಅಪಾರ!

ಇಂದು ನಾವು ನವೆಂಬರ್‌ ಒಂದರಂದು ಕರ್ನಾಟಕ ರಾಜ್ಯೋತ್ಸವ ಆಚರಿಸಿಕೊಳ್ಳಬೇಕಿದ್ದರೆ, ಅದರ ಹಿಂದೆ ಕರ್ನಾಟಕವನ್ನು ಒಂದು ರಾಜ್ಯವಾಗಿ ರೂಪುಗೊಳಿಸಲು, ಏಕೀಕರಣಗೊಳಿಸಲು ಹೋರಾಡಿದ ಹಲವಾರು ಮಂದಿಯ ಕೊಡುಗೆಯಿದೆ. ಅವರಲ್ಲಿ ಸಾಹಿತಿಗಳೂ, ರಾಜಕಾರಣಿಗಳೂ, ಸಮಾಜ ಸುಧಾರಕರೂ ತುಂಬಾ ಮಂದಿ ಇದ್ದಾರೆ. ಅಂಥವರು ಯಾರ್ಯಾರು, ಅವರೇನು ಮಾಡಿದರು ಅಂತ ನೋಡೋಣ.
 

How poets and writers formed kannada rajyotsava agitation
Author
First Published Oct 28, 2022, 11:53 AM IST

ಕನ್ನಡ ಮಾತನಾಡುವ ಜನರನ್ನು ಒಂದೇ ಆಡಳಿತದ ಅಡಿ ತರಲು ನಡೆದ ಹೋರಾಟವೇ ಕರ್ನಾಟಕ ಏಕೀಕರಣ ಹೋರಾಟ. ಮುಂಬಯಿ, ಹೈದರಾಬಾದ್‌, ಮದ್ರಾಸ್ ಎಂದು‌ ಹರಿದು ಹಂಚಿಹೋಗಿದ್ದ ಕನ್ನಡ ನಾಡಿಗರನ್ನು ಒಂದಾಗಿಸಿ, 1956ರ ನವೆಂಬರ್ 1ರಂದು ಮೈಸೂರು ರಾಜ್ಯ ಅಸ್ತಿತ್ವಕ್ಕೆ ಬಂತು. ಕರ್ನಾಟಕದ ಏಕೀಕರಣಕ್ಕಾಗಿ ಹೋರಾಡಿದವರಲ್ಲಿ ಹುಯಿಲಗೋಳ ನಾರಾಯಣರಾವ್, ಆಚಾರ್ಯ ಬಿ.ಎಂ. ಶ್ರೀ ಕಂಠಯ್ಯ, ಕುವೆಂಪು, ಅ.ನ. ಕೃಷ್ಣರಾಯರು, ಆಲೂರು ವೆಂಕಟರಾಯರು, ಡೆಪ್ಯುಟಿ ಚೆನ್ನಬಸಪ್ಪ, ಮಂಗಳವೇಡೆ ಶ್ರೀನಿವಾಸರಾಯರು, ಹುಲ್ಲೂರು ಶ್ರೀನಿವಾಸ ಜೋಯಿಸ, ಕೆಂಗಲ್ ಹನುಮಂತಯ್ಯ, ಗೋರೂರು ರಾಮಸ್ವಾಮಿ ಅಯ್ಯಂಗಾರ್, ಹಾರನಹಳ್ಳಿ ರಾಮಸ್ವಾಮಿ, ಕಡಿದಾಳ್ ಮಂಜಪ್ಪ, ಪಾಟೀಲ್ ಪುಟ್ಟಪ್ಪ, ಎಚ್.ಎಸ್. ದೊರೆಸ್ವಾಮಿ, ಉತ್ತಂಗಿ ಚೆನ್ನಪ್ಪ, ಕೋ. ಚೆನ್ನಬಸಪ್ಪ, ಮುಂತಾದವರ ಕೊಡುಗೆ ಸ್ಮರಣೀಯವಾದುದು.

ಆಲೂರು ವೆಂಕಟರಾಯರು (Aluru venkatarao)
1890ರಲ್ಲಿ ಧಾರವಾಡದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘದ ಸ್ಥಾಪನೆಯೊಂದಿಗೆ ಏಕೀಕರಣ ಚಳುವಳಿಗೆ ಸಂಘಟನಾತ್ಮಕ ಬೆಂಬಲ ದೊರಕಿತು. ಬೆನಗಲ್ ರಾಮರಾಯರು, ಆಲೂರು ವೆಂಕಟರಾಯರು ಕರ್ನಾಟಕ ಏಕೀಕರಣ ಕುರಿತು ಉಪನ್ಯಾಸಗಳು, ಲೇಖನಗಳ ಮೂಲಕ ಜನ ಜಾಗೃತಿ ಮೂಡಿಸುವ ಪ್ರಯತ್ನ ನಡೆಸಿದರು. ಇವರು 1922 ನವೆಂಬರ್‌ನಲ್ಲಿ ʼಜಯಕರ್ನಾಟಕʼ ಪತ್ರಿಕೆಯನ್ನು ಪ್ರಾರಂಭಿಸಿದರು. ಈ ಪತ್ರಿಕೆ ಆರು ವರ್ಷ ನಡೆಯಿತು. ಈ ಪತ್ರಿಕೆಗೆ ಬೆಟಗೇರಿ ಕೃಷ್ಣಶರ್ಮ, ದ.ರಾ.ಬೇಂದ್ರೆ ಮೊದಲಾದ ಶ್ರೇಷ್ಠ ಸಾಹಿತಿಗಳು ಸಹಸಂಸ್ಥಾಪಕ ಸಂಪಾದಕರಾಗಿ ಕೆಲಸ ಮಾಡಿದ್ದಾರೆ. ಇದರಂತೆಯೆ ಕನ್ನಡಿಗ, ಕರ್ಮವೀರ ಮೊದಲಾದ ಪತ್ರಿಕೆಗಳ ಸಂಪಾದಕತ್ವವನ್ನು ಸಹ ವಹಿಸಿಕೊಂಡಿದ್ದರು. ಇವರು ಆರಂಭಿಸಿದ ʼಗ್ರಂಥಕರ್ತರ ಸಮಾವೇಶʼ ಮುಂದೆ ಕರ್ನಾಟಕ ಸಾಹಿತ್ಯ ಪರಿಷತ್ತಿನ ನಿರ್ಮಾಣಕ್ಕೆ ನಾಂದಿಹಾಡಿತು. ಕರ್ನಾಟಕ ಇತಿಹಾಸ ಮಂಡಲದ ಸ್ಥಾಪನೆ, ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆ, ಕರ್ನಾಟಕ ವಿಶ್ವವಿದ್ಯಾನಿಲಯದ ಕಲ್ಪನೆ, ವಿಜಯನಗರ ಮಹೋತ್ಸವ, ನಾಡಹಬ್ಬದ ಯೋಜನೆ, ಕರ್ನಾಟಕ ವಿದ್ಯಾವರ್ಧಕ ಸಂಘ(ಧಾರವಾಡ), ಈ ಎಲ್ಲಾ ಯೋಜನೆಗಳಲ್ಲಿ ಆಲೂರು ವೆಂಕಟರಾಯರು ಮಹತ್ವದ ಪಾತ್ರ ವಹಿಸಿದ್ದಾರೆ. ʼಹೀಗಾಗಿಯೇ ಇವರನ್ನು  ʼಕನ್ನಡದ ಕುಲಪುರೋಹಿತʼ ಎಂದು ಸಂಮಾನಿಸಲಾಗಿದೆ.

ಹುಯಿಲಗೋಳ ನಾರಾಯಣರಾಯರು (huyilagola narayana rao)
ಬೆಳಗಾವಿಯಲ್ಲಿ ಮಹಾತ್ಮಾ ಗಾಂಧಿ ಅವರ ಅಧ್ಯಕ್ಷತೆಯಲ್ಲಿ 1924ರಲ್ಲಿ ನಡೆದ ರಾಷ್ಟ್ರೀಯ ಕಾಂಗ್ರೆಸ್‌ನ ಮಹಾಧಿವೇಶನದ ಸಂದರ್ಭದಲ್ಲಿ ಕರ್ನಾಟಕ ಏಕೀಕರಣಕ್ಕೆ ವಿಶೇಷ ಚಾಲನೆ ದೊರೆಯಿತು. ಕರ್ನಾಟಕ ಸಭೆಯ ಮೊದಲ ಪರಿಷತ್ತು ಬೆಳಗಾವಿಯಲ್ಲಿ ಅದೇ ವರ್ಷ ಸರ್ ಸಿದ್ದಪ್ಪ ಕಂಬಳಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಆ ಸಂದರ್ಭದಲ್ಲಿ ಹುಯಿಲಗೋಳ ನಾರಾಯಣರಾಯರು ರಚಿಸಿದ 'ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು' ಗೀತೆಯನ್ನು ಮೊದಲ ಬಾರಿಗೆ ಹಾಡಲಾಯಿತು. ಇದು ಮುಂದೆ ಏಕೀಕರಣ ಚಳವಳಿಯ ಸ್ಫೂರ್ತಿಗೀತೆಯಾಯಿತು.

ಬಿ.ಎಂ. ಶ್ರೀಕಂಠಯ್ಯ (B M Srikantayya)
ಬಿ.ಎಂ. ಶ್ರೀಕಂಠಯ್ಯನವರು ʼಕನ್ನಡ ನಾಡಿಗೆ ಕನ್ನಡವೇ ಸರ್ವಸ್ವʼ ಎಂಬ ಮಂತ್ರವನ್ನು ನೀಡಿದರು. ಅವರು ಕನ್ನಡನಾಡಿನಾದ್ಯಂತ, ಹೊರನಾಡುಗಳಲ್ಲಿಯೂ ಸಂಚರಿಸಿ ಕರ್ನಾಟಕ ಏಕೀಕರಣದ ರೂವಾರಿ ಎನಿಸಿದರು. ಅಲ್ಲಲ್ಲಿ ಕರ್ನಾಟಕ ಸಂಘಗಳನ್ನು ಸ್ಥಾಪಿಸಿ ಹಿಂದೆ ಇದ್ದ ಕನ್ನಡ ಸಂಸ್ಥೆಗಳಿಗೆ ಪುನರ್‌ಚೇತನ ನೀಡಿ, ಕನ್ನಡ ಸಾಹಿತ್ಯ ಪರಿಷತ್‌ನ ಅಂಗಸಂಸ್ಥೆಗಳನ್ನಾಗಿ ಮಾಡಿಕೊಂಡು ಕನ್ನಡ ಪ್ರಜ್ಞೆಯನ್ನು ಮೂಡಿಸಿದರು. ತನ್ಮೂಲಕ ಕರ್ನಾಟಕ ಏಕೀಕರಣಕ್ಕೆ ಜನಮಾನಸವನ್ನು ಅಣಿಗೊಳಿಸಿದರು.

Kannada Rajyostva: ಕನ್ನಡ ನಾಡನ್ನು ಒಗ್ಗೂಡಿಸಿದ ಕನ್ನಡಿಗರ ಹೆಮ್ಮೆಯ ದಿನ ಕನ್ನಡ ರಾಜ್ಯೋತ್ಸವ

ಅ.ನ. ಕೃಷ್ಣರಾಯರು (A Na Krishnarao)
ತಮ್ಮ ಜೀವಮಾನದುದ್ದಕ್ಕೂ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಹೋರಾಡಿದರು. ಅದಕ್ಕಾಗಿ ಕರ್ನಾಟಕದಲ್ಲೆಲ್ಲಾ ಸುತ್ತಾಡಿದರು. ತಮ್ಮ ಚಳುವಳಿ, ಭಾಷಣಗಳ ಮೂಲಕ ಕನ್ನಡಿಗರನ್ನು ಹುರಿದುಂಬಿಸಿದರು. ಕನ್ನಡಿಗರಲ್ಲಿ ಸುಪ್ತವಾಗಿದ್ದ ಸ್ವಾಭಿಮಾನವನ್ನು ಜಾಗೃತಗೊಳಿಸಿದರು. ಕನ್ನಡ ಚಿತ್ರಗಳಿಗೆ ಚಿತ್ರಮಂದಿರಗಳು ಸಿಗದಿದ್ದ ಕಾಲದಲ್ಲಿ ಅನಕೃ ಅದಕ್ಕಾಗಿ ಹೋರಾಟ ನಡೆಸಿದರು. ಅನಕೃ ಅವರ ಚಳುವಳಿಯಿಂದ ಬೆಂಗಳೂರಿನ ಅಲಂಕಾರ್ ಚಿತ್ರಮಂದಿರದಲ್ಲಿ ಮೊತ್ತ ಮೊದಲ ಬಾರಿಗೆ ಕನ್ನಡ ಚಿತ್ರ ಪ್ರದರ್ಶನಗೊಂಡಿತು. ಕರ್ನಾಟಕದಲ್ಲಿ ತಮಿಳು ಹಾಡುಗಾರರ ಪಾರಮ್ಯವನ್ನೂ ಅವರು ವಿರೋಧಿಸಿ, ಕನ್ನಡಿಗರಿಗೆ ವೇದಿಕೆ ಹೆಚ್ಚಿಸಿದರು.

Gandhada Gudi ಅಪ್ಪು ಕನಸಿನ ದೃಶ್ಯ ಪಯಣ: ಅಮೋಘವರ್ಷ

ಬೇಂದ್ರೆ, ಕುವೆಂಪು, ಜನಪ್ರಿಯ ಹಾಡುಗಳು (Bendre, kuvempu)
ಕನ್ನಡದ ಹಿರಿಯ ಕವಿಗಳಾದ ಬೇಂದ್ರೆ, ಕುವೆಂಪು, ಡಿ.ಎಸ್.ಕರ್ಕಿ ಮುಂತಾದವರು ಕನ್ನಡಪ್ರೇಮದ ಹಾಡುಗಳು ಚಳವಳಿಯಲ್ಲಿ ಜನಪ್ರಿಯವಾಗಿ ಮೊಳಗಿದವು. ಚಳವಳಿಗೆ ಸ್ಫೂರ್ತಿ ನೀಡುವ ಗೀತೆಯಾಗಿ ಡಾ.ಡಿ.ಎಸ್. ಕರ್ಕಿ ಅವರ "ಹಚ್ಚೇವು ಕನ್ನಡದ ದೀಪ ಸಿರಿನುಡಿಯ ದೀಪ" ಜನಪ್ರಿಯವಾಯಿತು. ಹುಯಿಲುಗೋಳ ನಾರಾಯಣರಾಯರ "ಉದಯವಾಗಲಿ ನಮ್ಮ ಚಲುವ ಕನ್ನಡ ನಾಡು" ಗೀತೆಯಂತೂ ಪ್ರತಿಯೊಬ್ಬ ಕನ್ನಡಿಗರ ಮಂತ್ರವಾಯಿತು. ರಾಷ್ಟ್ರಕವಿ ಕುವೆಂಪು ಅವರ "ಬಾರಿಸು ಕನ್ನಡ ಡಿಂಡಿಮವ" ಕವನ ಕನ್ನಡ ಭಾಷಿಕರ ಸ್ಪೂರ್ತಿಯ ಚಿಲುಮೆಯಾಯಿತು. ನೂರಾರು ಕವಿಗಳು, ಸಾಹಿತಿಗಳು ಕನ್ನಡ ಏಕೀಕರಣದ ಕನಸನ್ನು ನನಸಾಗಿಸುವ ಕವನಗಳನ್ನು ರಚಿಸಿ ವೇದಿಕೆಗಳಲ್ಲಿ ವಾಚಿಸಿದರು. ಶಿವರಾಮ ಕಾರಂತ, ಕಯ್ಯಾರ ಕಿಞ್ಞಣ್ಣ ರೈ, ಬೆಟಗೇರಿ ಕೃಷ್ಣಶರ್ಮ, ಪಾಟೀಲ ಪುಟ್ಟಪ್ಪ, ಶಂಬಾ ಜೋಶಿ, ಮಾಸ್ತಿ ವೆಂಕಟೇಶ ಅಯ್ಯಂಗಾರ, ಶ್ರೀರಂಗ, ತಿ.ತಾ.ಶರ್ಮ, ಹರ್ಡೇಕರ ಮಂಜಪ್ಪ ಮುಂತಾದ ಸಾಹಿತಿಗಳೆಲ್ಲಾ ನಾಡಿನಾದ್ಯಂತ ಓಡಾಡಿ, ಭಾಷಣ ಮಾಡಿ, ಬರೆದು ಹಂಚಿ, ಜನಮನಕ್ಕೆ ಸ್ಫೂರ್ತಿ ನೀಡಿದ ಪರಿಣಾಮವೇ ಕರ್ನಾಟಕ ಏಕೀಕರಣವಾಯಿತು.

Follow Us:
Download App:
  • android
  • ios