Om Shanti Om: ಓಂ ಶಾಂತಿ ಓಂ ಸಿನಿಮಾದಲ್ಲಿ ಶಾಂತಿಪ್ರಿಯಾ ಪಾತ್ರಕ್ಕೆ ದೀಪಿಕಾ ಪಡುಕೋಣೆ ಜೀವ ತುಂಬಿದ್ದರು. ಆದರೆ, ಈ ಪಾತ್ರಕ್ಕಾಗಿ ನಿರ್ದೇಶಕಿ ಫರಾ ಖಾನ್ ಅವರು ದೀಪಿಕಾಗೆ ಕೊಟ್ಟ ಟ್ರೈನಿಂಗ್ ಹೇಗಿತ್ತು ಗೊತ್ತಾ?
ಫರಾ ಖಾನ್ ನಿರ್ದೇಶನದ 'ಓಂ ಶಾಂತಿ ಓಂ' ಸಿನಿಮಾ ಯಾರಿಗೆ ತಾನೇ ನೆನಪಿಲ್ಲ? ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ನಟನೆಯ ಈ ಸಿನಿಮಾ ಇವತ್ತಿಗೂ ಹಲವರ ಫೇವರಿಟ್. ಈ ಚಿತ್ರದ ಬಿಜಿಎಂ ಕೇಳಿದ್ರೆ ಈಗಲೂ ಒಂದು ರೀತಿ ನಾಸ್ಟಾಲ್ಜಿಕ್ ಫೀಲ್ ಬರುತ್ತೆ. ಪ್ರೀತಿ ಮತ್ತು ಪುನರ್ಜನ್ಮದ ಮೇಲಿನ ನಂಬಿಕೆಯನ್ನು ಈ ಸಿನಿಮಾ ಅದ್ಭುತವಾಗಿ ಕಟ್ಟಿಕೊಟ್ಟಿತ್ತು.
ಇದು ದೀಪಿಕಾ ಪಡುಕೋಣೆ ಅವರ ಮೊದಲ ಬಾಲಿವುಡ್ ಸಿನಿಮಾ. ಈ ಚಿತ್ರದ 'ಶಾಂತಿಪ್ರಿಯಾ' ಪಾತ್ರಕ್ಕಾಗಿ ಅವರು ಸಖತ್ ಟ್ರೈನಿಂಗ್ ಪಡೆದಿದ್ದರು. ಫರಾ ಖಾನ್ ಅವರು ದೀಪಿಕಾಳನ್ನು ಆಕ್ಟಿಂಗ್ ಸ್ಕೂಲ್‌ಗೆ ಸೇರಿಸಿದ್ದರು, ಆದರೆ ಕಥೆ ಅಷ್ಟಕ್ಕೇ ಮುಗಿಯಲಿಲ್ಲ. ಇತ್ತೀಚೆಗೆ ನಟಿ ದಿಯಾ ಮಿರ್ಜಾ ಅವರ ಅಡುಗೆ ವ್ಲಾಗ್ ಒಂದರಲ್ಲಿ ಭಾಗವಹಿಸಿದ್ದ ಫರಾ, ಈ ಸೀಕ್ರೆಟ್ ರಿವೀಲ್ ಮಾಡಿದ್ದಾರೆ.
ಸಂಭಾಷಣೆ ವೇಳೆ, ತನಗೆ ನಟಿಯಾಗಿ ಮೊದಲ ಸಿನಿಮಾ ಮಾಡುವಾಗ ಯಾವುದೇ ಟ್ರೈನಿಂಗ್ ಸಿಕ್ಕಿರಲಿಲ್ಲ ಅಂತ ದಿಯಾ ಮಿರ್ಜಾ ಹೇಳಿಕೊಂಡರು. ಬದಲಾಗಿ, ದಿನಕ್ಕೆ 27-28 ಗಂಟೆಗಳ ಕಾಲ ದುಡಿಸಿಕೊಂಡು ಸುಸ್ತು ಮಾಡಿದ್ದರು ಎಂದರು. "ನೀವು ಲಾಂಚ್ ಮಾಡಿದ ಕಲಾವಿದರಿಗೆ ವರ್ಕ್‌ಶಾಪ್, ಆಕ್ಟಿಂಗ್ ಕ್ಲಾಸ್, ಡ್ಯಾನ್ಸ್ ಕ್ಲಾಸ್, ಮಾತುಗಾರಿಕೆ ತರಬೇತಿ ಎಲ್ಲವನ್ನೂ ಕೊಡಿಸುತ್ತಿದ್ದೀರಿ ಅಂತ ಕೇಳಿದ್ದೇನೆ. ನನಗೆ ಆ ರೀತಿ ಯಾವುದೂ ಸಿಕ್ಕಿರಲಿಲ್ಲ," ಎಂದು ದಿಯಾ ಹೇಳಿದರು.
ದೀಪಿಕಾಗೆ ಫರಾ ಕೊಟ್ಟ ಟ್ರೈನಿಂಗ್ ಹೇಗಿತ್ತು?
ಇದಕ್ಕೆ ಪ್ರತಿಕ್ರಿಯಿಸಿದ ಫರಾ, 'ಓಂ ಶಾಂತಿ ಓಂ' ಸಿನಿಮಾಗಾಗಿ ದೀಪಿಕಾಗೆ ತಾನು ನೀಡಿದ ತರಬೇತಿಯನ್ನು ವಿವರಿಸಿದರು. "ದೀಪಿಕಾಳನ್ನು ನಾನು ಎಷ್ಟು ಕಾಳಜಿಯಿಂದ ನೋಡಿಕೊಂಡೆ. ಮೊದಲಿಗೆ, 3-4 ತಿಂಗಳು ಅನುಪಮ್ ಖೇರ್ ಅವರ ಆಕ್ಟಿಂಗ್ ಕ್ಲಾಸ್‌ಗೆ ಕಳುಹಿಸಿದೆ. ನಂತರ ಕಥಕ್ ಕ್ಲಾಸ್‌ಗೆ ಸೇರಿಸಿದೆ. ಅಷ್ಟೇ ಅಲ್ಲ, ನಾವು ಸಾಕಷ್ಟು ಲುಕ್ ಟೆಸ್ಟ್‌ಗಳನ್ನು ಮಾಡಿದೆವು," ಎಂದು ಫರಾ ಹೇಳಿದರು.
ಫರಾ ಇನ್ನೊಂದು ಮುಖ್ಯವಾದ ವಿಷಯವನ್ನೂ ಹೇಳಿದರು. "ದೀಪಿಕಾಳ ಶೂಟಿಂಗ್ ಅನ್ನು ನಾನು 10 ದಿನ ತಡವಾಗಿ ಶುರು ಮಾಡಿದೆ. ಮೊದಲ 10 ದಿನ ನೀನು ಸೆಟ್‌ಗೆ ಬಾ, ಸುಮ್ಮನೆ ಕೂರು. ಶಾರುಖ್ ಖಾನ್ ಹೇಗೆ ಕೆಲಸ ಮಾಡುತ್ತಾರೆ, ಶ್ರೇಯಸ್ ತಲ್ಪಾಡೆ ಹೇಗೆ ನಟಿಸುತ್ತಾರೆ ಅಂತ ನೋಡಿ ಕಲಿ ಅಂತ ಹೇಳಿದ್ದೆ," ಎಂದು ಫರಾ ಆ ದಿನಗಳನ್ನು ನೆನಪಿಸಿಕೊಂಡರು.
ಓಂ ಶಾಂತಿ ಓಂ ಬಗ್ಗೆ
2007ರಲ್ಲಿ ಬಿಡುಗಡೆಯಾದ ಈ ಸಿನಿಮಾ ಹಿಂದಿ ಚಿತ್ರರಂಗದ ಅತ್ಯಂತ ಯಶಸ್ವಿ ಮತ್ತು ಜನಪ್ರಿಯ ಚಿತ್ರಗಳಲ್ಲಿ ಒಂದಾಗಿದೆ. ಈ ಒಂದೇ ಚಿತ್ರದಿಂದ ದೀಪಿಕಾ ಪಡುಕೋಣೆ ರಾತ್ರೋರಾತ್ರಿ ಸ್ಟಾರ್ ಆದರು.


