ಯಶ್ ಮತ್ತು ರಣಬೀರ್ ಕಪೂರ್ ಅಭಿನಯದ ಮುಂಬರುವ 'ರಾಮಾಯಣ' ಚಿತ್ರದಲ್ಲಿ ಶೂರ್ಪನಖಿಯನ್ನು 'ಜನಸ್ಥಾನದ ರಾಜಕುಮಾರಿ' ಎಂದು ಪರಿಚಯಿಸಲಾಗಿದೆ. ಈ ಜನಸ್ಥಾನವು ಇಂದಿನ ಮಹಾರಾಷ್ಟ್ರದ ನಾಸಿಕ್ ಪ್ರದೇಶವಾಗಿದ್ದು, ಇಲ್ಲಿಯೇ ಲಕ್ಷ್ಮಣನು ಶೂರ್ಪನಖಿಯ ಮೂಗನ್ನು ಕತ್ತರಿಸಿದ್ದನು ಎಂಬ ಐತಿಹಾಸಿಕ ನಂಟಿದೆ.

ಯಶ್‌, ರಣಬೀರ್‌ ಕಪೂರ್‌ ಅಭಿನಯದ ರಾಮಾಯಣ ಚಿತ್ರವು ನವೆಂಬರ್‌ 5 ರಂದು ಬಿಡುಗಡೆ ಆಗಲಿದೆ. ಕಳೆದ ಜುಲೈನಲ್ಲಿ ಬಿಡುಗಡೆಯಾದ ಟ್ರೇಲರ್‌ನಲ್ಲಿ ರಾಕುಲ್ ಪ್ರೀತ್ ಸಿಂಗ್ ಅವರನ್ನು ರಾವಣನ ಸಹೋದರಿ ಶೂರ್ಪನಖಿಯಾಗಿ ʼPrincess of Janasthanʼ ಎಂಬ ಶೀರ್ಷಿಕೆಯೊಂದಿಗೆ ಪರಿಚಯಿಸಿದೆ. ಈ ಶೀರ್ಷಿಕೆಯು ಭಾರತದ ಪ್ರಸಿದ್ಧ ಸ್ಥಳವೊಂದಕ್ಕೆ ಸಂಪರ್ಕ ಹೊಂದಿದೆ.

ಕಥೆ ಏನು?

ಈ ಜನಸ್ಥಾನ ಮಹಾರಾಷ್ಟ್ರದ ನಾಶಿಕ್ ಪ್ರದೇಶಕ್ಕೆ ಲಿಂಕ್‌ ಹೊಂದಿದೆ. ನಾಶಿಕ್ ಸ್ವತಃ ರಾಮಾಯಣದಲ್ಲಿ ಬರುವ ಶೂರ್ಪನಖಿ ಮತ್ತು ಲಕ್ಷ್ಮಣರನ್ನು ಒಳಗೊಂಡ ಪ್ರಸಂಗಕ್ಕೆ ಸಂಬಂಧ ಹೊಂದಿದೆ. ನಾಸಿಕ್ ಜಿಲ್ಲಾಡಳಿತದ ಐತಿಹಾಸಿಕ ದಾಖಲೆಗಳ ಪ್ರಕಾರ, ಪ್ರದೇಶವು ಮೊದಲು ಜನಸ್ಥಾನ ಎಂದೇ ಗುರುತಿಸಿಕೊಂಡಿತ್ತು. ಇದು ಇಂದಿನ ನಾಸಿಕ್‌ನ ಗೋದಾವರಿ ನದಿಯ ದಡದಲ್ಲಿರುವ ಪಂಚವಟಿಯಲ್ಲಿ ರಾಮ, ಸೀತೆ ಮತ್ತು ಲಕ್ಷ್ಮಣರು ತಮ್ಮ ವನವಾಸದ ಸಮಯದಲ್ಲಿ ತಂಗಿದ್ದರು ಎಂದು ನಂಬಲಾದ ಸ್ಥಳವನ್ನ ಗುರುತಿಸುತ್ತದೆ.

ರಾಮಾಯಣದಲ್ಲಿ.. ಶೂರ್ಪನಖಿಯು ಕಾಡಿನಲ್ಲಿ ವಾಸಿಸುತ್ತಿದ್ದಾಗ ರಾಮ ಮತ್ತು ಲಕ್ಷ್ಮಣರನ್ನು ಭೇಟಿ ಆಗುತ್ತಾಳೆ. ಅವಳು ರಾಮನ ಬಳಿಗೆ ಹೋಗುತ್ತಾಳೆ. ರಾಮ ತಾನು ಏಕಪತ್ನಿ ವ್ರತಸ್ಥನೆಂದು ಹೇಳಿ ಆಕೆಯನ್ನು ತಿರಸ್ಕರಿಸುತ್ತಾನೆ. ನಂತರ ಲಕ್ಷ್ಮಣನ ಬಳಿ ಹೋಗುತ್ತಾಳೆ. ನೀನು ರಾಮನಬಳಿಯೇ ಹೋಗಬೇಕು ಎಂದು ಹಾಸ್ಯ ಮಾಡುತ್ತಾನೆ. ಆಗ ಶೂರ್ಪನಖಿ ಕೋಪಿಸಿಕೊಂಡು ಸೀತೆ ಮೇಲೆ ದಾಳಿಗೆ ಮುಂದಾಗುತ್ತಾಳೆ. ಆಗ ಲಕ್ಷ್ಮಣ ಕತ್ತಿಯಿಂದ ಶೂರ್ಪನಖಿ ಮೂಗನ್ನು ಕತ್ತರಿಸುತ್ತಾನೆ. ನಂತರ ಶೂರ್ಪನಖಿ ತನ್ನ ಸಹೋದರ ರಾವಣನ ಕಡೆಗೆ ತಿರುಗುತ್ತಾಳೆ. ಈ ಪ್ರಸಂಗವು ಸೀತೆಯ ಅಪಹರಣ ಮತ್ತು ಲಂಕಾದಲ್ಲಿ ಯುದ್ಧಕ್ಕೆ ಕಾರಣವಾಗುತ್ತದೆ.

ಇಲ್ಲಿ ಜನಸ್ಥಾನವು ರಾಮಾಯಣದಲ್ಲಿ ಬರುವ ವಿಶಾಲವಾದ ನಾಸಿಕ್ ಪ್ರದೇಶಕ್ಕೆ ಸಂಬಂಧಿಸಿದ ಒಂದು ಪ್ರಾಚೀನ ಹೆಸರು. ಇದು ನಾಸಿಕ್‌ ನಗರಕ್ಕೆ ಇರುವ ಮತ್ತೊಂದು ಹೆಸರು ಅಲ್ಲ. ಆದರೆ ನಾಶಿಕ್ ಎಂಬ ಹೆಸರು ಶೂರ್ಪನಖಿ ಕಥೆಯಿಂದ ಬಂದಿದೆ. ಸಂಸ್ಕೃತ ಪದ ನಾಸಿಕ ಎಂದರೆ ಮೂಗು ಎಂದರ್ಥ. ಸ್ಥಳೀಯ ದಂತಕಥೆಯ ಪ್ರಕಾರ.. ಲಕ್ಷ್ಮಣ ಶೂರ್ಪನಖಿಯ ಮೂಗನ್ನು ಕತ್ತರಿಸಿದ ನಂತರ ಈ ಸ್ಥಳವು ನಾಸಿಕ್ ಎಂದು ಕರೆಯಲ್ಪಟ್ಟಿತು. ಈ ಹೆಸರು ಅಂತಿಮವಾಗಿ ನಾಶಿಕ್ ಆಗಿ ವಿಕಸನಗೊಂಡಿತು ಎಂದು ಹೇಳಲಾಗುತ್ತದೆ.

ಇನ್ನು ಇಲ್ಲಿನ ನಾಸಿಕ್‌ಗೆ ಇದೊಂದೇ ವಿವರಣೆ ಅಲ್ಲ. ನಾಸಿಕ್ ಜಿಲ್ಲೆಯ ಪ್ರವಾಸೋದ್ಯಮದಲ್ಲಿ ನವಶಿಖಾ ಎಂದು ಕರೆಯಲಾಗಿದೆ. ಅಂದರೆ ಒಂಬತ್ತು ಬೆಟ್ಟಗಳಲ್ಲಿ ಹರಡಿರುವ ವಸಾಹತು. ಅಂದರೆ ಮರಾಠಿ ಸಂಪ್ರದಾಯವನ್ನು ವಿವರಿಸಲಾಗಿದೆ. ರಾಮಾಯಣದೊಂದಿಗೆ ನಾಶಿಕ್‌ನ ಸಂಪರ್ಕವು ಈ ಕಥೆಯನ್ನು ಮೀರಿ ವಿಸ್ತರಿಸುತ್ತದೆ. ಗೋದಾವರಿ ನದಿಯ ದಂಡೆಯಲ್ಲಿರುವ ಪಂಚವಟಿಯಲ್ಲಿ ರಾಮ, ಸೀತೆ ಮತ್ತು ಲಕ್ಷ್ಮಣರು ತಮ್ಮ ವನವಾಸದಲ್ಲಿ ಕಳೆದ ಒಂದು ಭಾಗದ ಸ್ಥಳವೆಂದು ಗುರುತಿಸಲಾಗುತ್ತದೆ.

ನಿತೇಶ್ ತಿವಾರಿ ನಿರ್ದೇಶಿಸಿದ ಚಿತ್ರವು ಎರಡು ಭಾಗಗಳಲ್ಲಿ ತೆರೆಗೆ ಬರಲಿದೆ. ನಮಿತ್ ಮಲ್ಹೋತ್ರಾ ಅವರು ಪ್ರೈಮ್ ಫೋಕಸ್ ಸ್ಟುಡಿಯೋಸ್ ಮೂಲಕ, DNEG ಮತ್ತು ಯಶ್ ಅವರ ಮಾನ್ಸ್‌ಸ್ಟರ್‌ ಮೈಂಡ್ ಕ್ರಿಯೇಷನ್ಸ್ ಸಹಯೋಗದೊಂದಿಗೆ ನಿರ್ಮಿಸಲಾಗಿದೆ. ಮುಖ್ಯ ತಾರಾಗಣದಲ್ಲಿ ರಾಮನಾಗಿ ರಣಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ, ರಾವಣನಾಗಿ ಯಶ್, ಲಕ್ಷ್ಮಣನಾಗಿ ರವಿ ದುಬೆ, ಹನುಮಂತನಾಗಿ ಸನ್ನಿ ಡಿಯೋಲ್ ಮತ್ತು ಶೂರ್ಪನಖಾ ಪಾತ್ರದಲ್ಲಿ ರಾಕುಲ್ ಪ್ರೀತ್ ಸಿಂಗ್ ಇದ್ದಾರೆ. ದಶರಥನಾಗಿ ಅರುಣ್ ಗೋವಿಲ್, ಕೈಕೇಯಿಯಾಗಿ ಲಾರಾ ದತ್ತಾ, ಮಂಥರೆಯಾಗಿ ಶೀಬಾ ಚಡ್ಡಾ, ಕೈಕಸಿಯಾಗಿ ಶೋಬನಾ, ವಿದ್ಯುತ್ಜಿಹ್ವನಾಗಿ ವಿವೇಕ್ ಒಬೆರಾಯ್ ಮತ್ತು ಇಂದ್ರನಾಗಿ ಕುನಾಲ್ ಕಪೂರ್ ಕಾಣಿಸಿಕೊಂಡಿದ್ದಾರೆ.

ಎರಡು ಭಾಗಗಳ ಈ ಪ್ರಾಜೆಕ್ಟ್‌ನ ಬಜೆಟ್‌ 4,000 ಕೋಟಿ ರೂಪಾಯಿ ಎಂದು ಹೇಳಲಾಗಿದೆ. ರಾಮಾಯಣ: ರೈಸ್ ಆಫ್ ಎ ಲೆಜೆಂಡ್ ಎಂಬ ಶೀರ್ಷಿಕೆಯ ಮೊದಲ ಭಾಗವು ನವೆಂಬರ್ 5, 2026 ರಂದು ದೀಪಾವಳಿಯ ಆಸುಪಾಸಿನಲ್ಲಿ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಎರಡನೇ ಭಾಗವನ್ನು 2027 ರ ದೀಪಾವಳಿಗೆ ಯೋಜಿಸಲಾಗಿದೆ.