Asianet Suvarna News Asianet Suvarna News

ಸಿನಿಮಾ ಜಗತ್ತಲ್ಲಿ ಟ್ರೆಂಡ್ ಆಗ್ತಾ ಇದೆ ಹಾರರ್ ಮೂವಿ!

ದೆವ್ವಗಳಿಗೂ ಪ್ರೀತಿಯಿದೆ. ಜನರ ಮೇಲೆ ಕಾಳಜಿಯಿದೆ. ಕಾಲ ಬದಲಾದಂತೆ ಅವು ಕೂಡ ಬದಲಾಗಿವೆ. ವಿಕಾರ ರೂಪ ಹೊತ್ತು ದ್ವೇಷ, ಸೇಡು ಅಂತೆಲ್ಲ ಬೆಳ್ಳಿತೆರೆಯ ಮೇಲೆ ಕೆಂಡಕಾರುತ್ತಿದ್ದ ಅವುಗಳಿಗೂ ಈಗ ಮಾನವೀಯತೆಯ ಗುಣ ಬಂದಿದೆ. ವೈಯಕ್ತಿಕ ದ್ವೇಷಕ್ಕಿಂತ ಸಾಮಾಜಿಕ ಕಾಳಜಿ ಅವುಗಳಲ್ಲೂ ಕಾಣುತ್ತಿದೆ. ನಂಬಿದರೆ ನಂಬಿ ಬಿಟ್ಟರೆ ಬಿಡಿ, ಇದು ಈ ಕ್ಷಣಕ್ಕೆ ಹಾಸ್ಯವೆನಿಸಿದರೂ ಇದು ಹಾರರ್ ಜಗತ್ತಿನ ಸದ್ಯದ ಟ್ರೆಂಡ್!

Horror movie trend in Cinema industry

ಹಾರರ್ ಚಿತ್ರಗಳಿರದ ಚಿತ್ರರಂಗವೇ ಇಲ್ಲ. ಭಾರತೀಯ ಚಿತ್ರರಂಗವನ್ನೊಮ್ಮೆ ಹಿಂತಿರುಗಿ ನೋಡಿದ್ರೆ ದೆವ್ವಗಳದ್ದೂ ಸಿಂಹಪಾಲು ಇದೆ. ಅಂತೆಯೇ ಕನ್ನಡ ಚಿತ್ರರಂಗದಲ್ಲೂ ಈಗ ಹಾರರ್ ಸಿನಿಮಾಗಳದ್ದು ಟ್ರೆಂಡ್ ಆಗಿದೆ. ವಿಶೇಷ ಅಂದ್ರೆ ಸಿನಿಮಾ ಎನ್ನುವ ಬೆಳ್ಳಿತೆರೆಯ ಕೃಷಿ ಕಸುಬು ಬದಲಾದ ತಂತ್ರಜ್ಞಾನಕ್ಕೆ, ಪ್ರೇಕ್ಷಕರ ಅಭಿರುಚಿಗೆ ತಕ್ಕಂತೆ ಬದಲಾಗುತ್ತಿದೆ.

ಅದಕ್ಕೆ ತಕ್ಕಂತೆಯೇ ಹಾರರ್ ಸಿನಿಮಾಗಳನ್ನು ಕಟ್ಟುವ ಕಸುಬುಗಾರಿಕೆಯಲ್ಲೂ ಹೊಸ ಆವಿಷ್ಕಾರ ನಡೆದಿದೆ. ಮುರಿದು ಕಟ್ಟುವ ಸಾಹಿತ್ಯದ ಛಾತಿ ಇಲ್ಲೂ ಕಾಣುತ್ತಿದೆ. ಪ್ರೇಕ್ಷಕರನ್ನು ಬೆಚ್ಚಿ ಬೀಳಿಸಲು ವಿಕಾರ ರೂಪದ ಆಕೃತಿ, ಒಂಟಿ ಮನೆ ಮತ್ತು ಕತ್ತಲು, ಭಯ ಹುಟ್ಟಿಸುವ ಸೌಂಡ್ ಎಫೆಕ್ಟ್ ಜತೆಗೆ ಬಿಳಿ ಸೀರೆ ಮೋಹಿನಿಯರ ಸೇಡಿನ ಕತೆಗಳು ಈಗ ಯುನಿವರ್ಸಲ್ ತಿರುವು ಪಡೆದುಕೊಂಡಿವೆ. ಕನ್ನಡ ಚಿತ್ರರಂಗದ ಮಟ್ಟಿಗೆ ಅಂತಹ ಟ್ರೆಂಡ್ ‘ಯುಟರ್ನ್’ ಚಿತ್ರದ ಮೂಲಕ ಡೈವರ್ಟ್ ಆಗಿದೆ. ಕಳೆದ ವಾರ ತೆರೆ ಕಂಡ ‘ಕೆಲವು ದಿನಗಳ ನಂತರ’ ಚಿತ್ರದಲ್ಲೂ ಅದರ ಛಾಯೆ ಕಾಣಿಸಿಕೊಂಡಿದೆ. ಹಾಗಾದ್ರೆ ಹಾರರ್ ಸಿನಿಮಾಗಳು ಬದಲಾಗಿದ್ದು ಹೇಗೆ?

ಘಟನೆ 1
ಅದು ಡಬಲ್ ರಸ್ತೆಯ ಫ್ಲೈಓವರ್. ವಾಹನ ದಟ್ಟಣೆಯ ಜಾಗ. ಅಲ್ಲಿಯೇ ಕೆಲವರು ಅಡ್ಡ ತಿರುವಿಗೆ ಅಕ್ರಮವಾಗಿ ಜಾಗ ಮಾಡಿಕೊಂಡಿದ್ದಾರೆ. ಹಾಗೆ ಮಾಡಿದ್ರೆ ಅಲ್ಲಿ ಅಪಘಾತ ಖಚಿತ. ಆದರೂ, ಅದು ಕೆಲವರ ಬೇಜವಾಬ್ದಾರಿಯ ಅನಧಿಕೃತ ಹಾದಿ. ಅಕಸ್ಮಾತ್ ಮಗುವಿನೊಂದಿಗೆ ಅದೇ ಹಾದಿಯಲ್ಲಿ ಬೈಕ್ ಮೇಲೆ ಬಂದ ಓರ್ವ ಮಹಿಳೆ ಅಪಘಾತಕ್ಕೀಡಾಗುತ್ತಾಳೆ. ಆಕೆಯ ಸಾವಿಗೆ ಸಾರ್ವಜನಿಕರ ನಿರ್ಲಕ್ಷ್ಯವೇ ಕಾರಣ. ಒಂದು ವೇಳೆ ಜವಾಬ್ದಾರಿಯಿದ್ದ ಜನರು, ಹಾಗೆ ಅಡ್ಡ ಹಾದಿ ಸೃಷ್ಟಿಸದೇ ಹೋಗಿದ್ದರೆ ಆಕೆ ಅಲ್ಲಿ ಸಾಯುತ್ತಿರಲಿಲ್ಲ. ಆದರೂ ಅಂಥದೊಂದು ನಿರ್ಲಕ್ಷ್ಯಕ್ಕೆ ಆಕೆ ಬಲಿಯಾದಳು. ಅವಳದೇ ಆತ್ಮ ಅಲ್ಲಿ ಸಂಚರಿಸತೊಡಗಿತು.ತನ್ನ ಸಾವಿಗೆ ಕಾರಣರಾದವರ ಮೇಲೆ ಆಕೆಗೆ ಸೇಡು.\ ಹಾಗೊಂದು ಹಾರರ್ ಕತೆಯ ಮೂಲಕ ಜನರಲ್ಲಿ ಸಾಮಾಜಿಕ ಜವಾಬ್ದಾರಿ ಮತ್ತು ಕಾಳಜಿಯ ಕತೆ ಹೇಳಿದ್ದು ‘ಯು ಟರ್ನ್’ ಚಿತ್ರ.

ಘಟನೆ 2
ಅವರಿಬ್ಬರು ಗಂಡ-ಹೆಂಡತಿ. ಅವರಿಗೊಂದು ಮುದ್ದಾದ ಮಗು. ಕಾರು ಹತ್ತಿ  ಊರಿಗೆ ಹೊರಟವರು.ಅಕಸ್ಮಾತ್ ಕಾಡಿನ ಆ ಹಾದಿಯಲ್ಲಿ ಅಪಘಾತ ಸಂಭವಿಸಿದೆ. ಯಾವುದೋ ವಾಹನವೊಂದು ಅವರಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಮಗು ಜತೆಗೆ ಆ ದಂಪತಿ ಗಾಯಗೊಂಡು ರಕ್ತದ ಮಡುವಲ್ಲಿ ಬಿದ್ದಿದ್ದಾರೆ. ಅದೇ ದಾರಿಯಲ್ಲಿ ಟೆಕ್ಕಿಗಳ ತಂಡವೊಂದು ಪ್ರವಾಸಕ್ಕೆ ಹೊರಟಿದೆ. ಅವರ ಸಹಾಯ ಕೇಳುತ್ತಾರೆ ಅಪಘಾತಕ್ಕೆ ಸಿಲುಕಿದ ದಂಪತಿ. ಆದ್ರೆ, ಅದೆಲ್ಲ ನಮಗ್ಯಾಕೆ ಎನ್ನುವ ಅಸಡ್ಡೆ ಆ ಟೆಕ್ಕಿಗಳದ್ದು. ಮೋಜು ಮಸ್ತಿ ಮೂಡ್‌ನಲ್ಲಿದ್ದ ಆ ತಂಡ ನಿರ್ಲಕ್ಷ್ಯ ಮಾಡಿ ಅಲ್ಲಿಂದ ಹೊರಟು ಹೋಗುತ್ತದೆ.

ಒಂದು ವೇಳೆ ಅವರು ಸಹಾಯಕ್ಕೆ ಬಂದಿದ್ದರೆ, ಆ ಫ್ಯಾಮಿಲಿ ಬದುಕುಳಿಯುತ್ತಿತ್ತು.ಆದ್ರೆ ಅವರ ನಿರ್ಲಕ್ಷ್ಯದಿಂದಲೇ ಅಲ್ಲಿ ಮೂರು ಜೀವಗಳು ಬಲಿಯಾದವು. ಅದೇ ಆತ್ಮಗಳು ಸೇಡಿಗೆ ನಿಂತವು. ಸಾಮಾಜಿಕ ಕಾಳಜಿ ತೋರದ ಟೆಕ್ಕಿಗಳ ಬೆನ್ನು ಬಿದ್ದು ಪಾಠ ಕಲಿಸಿದವು. ಹೀಗೊಂದು ಸಂದೇಶ ಕೊಟ್ಟಿದ್ದು‘ ಕೆಲವು ದಿನಗಳ ನಂತರ ’ಚಿತ್ರ. - ಬದಲಾದ ಹಾರರ್ ಕತೆಗಳಿಗೆ ಇವರೆಡು ತಾಜಾ ಉದಾಹರಣೆ. ಈಗಲ್ಲಿ ವೈಯಕ್ತಿಕ ದ್ವೇಷ ತೆರೆಗೆ ಸರಿದಿದೆ. ವಂಚಿಸಿದವರೋ, ರೇಪ್ ಮಾಡಿದವರೋ ಅಥವಾ ಕೊಲೆ ಮಾಡಿದವನ ಮೇಲೋ ಸೇಡು ತೀರಿಸಿಕೊಳ್ಳಲು ಆತ್ಮದ ರೂಪದಲ್ಲಿ ಬರುತ್ತಿದ್ದ ಮೋಹಿನಿಯರ ಕತೆಗಳು ಈಗ ಕಮ್ಮಿ ಆಗುತ್ತಿವೆ. ಹಾರರ್ ಸ್ವರೂಪದಲ್ಲೇ ಜನರ ಸಾಮಾಜಿಕ ನಿರ್ಲಕ್ಷ್ಯ ವನ್ನು ತೋರಿಸುತ್ತಲೇ, ಸಾಮಾಜಿಕ ಸಂದೇಶ ಹೇಳ ಹೊರಟಿವೆ ಈಗಿನ ಹಾರರ್ ಸಿನಿಮಾಗಳು. ಆ ಮಟ್ಟಿಗೆ ಬೆಳ್ಳಿತೆರೆಯ ದೆವ್ವಗಳು ಯುನಿವರ್ಸಲ್ ಆಗಿವೆ.

ಕನ್ನಡದ ಮಟ್ಟಿಗೆ ದೆವ್ವ, ಭೂತದ ಹಾರರ್ ಸಿನಿಮಾಗಳೆಂದ್ರೆ ಬಿಳಿಸೀರೆಯೊಟ್ಟು , ಉದ್ದನೆಯ ಕೂದಲು ಬಿಟ್ಟುಕೊಂಡು ಗೆಜ್ಜೆ ಸಪ್ಪಳದೊಂದಿಗೆ ಕತ್ತಲಲ್ಲಿ ನಡೆದು ಹೋಗುವ ಮೋಹಿನಿಯರ ಕತೆಗಳೇ ಹೆಚ್ಚು. ಹೀಗಾಗಿ ದೆವ್ವ ಅಥವಾ ಮೋಹಿನಿಯರ ಸಿನಿಮಾ ಅಂದಾಕ್ಷಣ ‘ಜನ್ಮ ಜನ್ಮದ ಅನುಬಂಧ ’ಚಿತ್ರದ ‘ತಂಗಾಳಿಯಲ್ಲಿ ನಾನು ತೇಲಿ ಹೋದೆ...’ಎನ್ನುವ ಜನಪ್ರಿಯ ಗೀತೆ ನೆನಪಾಗುವುದು ಅಷ್ಟೇ ಸಹಜವಾಗಿತ್ತು. ಅತೃಪ್ತ ಆತ್ಮವೋ ಅಥವಾ ಪ್ರೀತಿಯಿಂದ ವಂಚಿತವಾದ ಆತ್ಮವೋ ಸತ್ತ ನಂತರ ದೆವ್ವ ಆಗಿ ಮೋಹಿನಿ ರೂಪದಲ್ಲಿ ಬಂದು ಕಾಡುತ್ತಿತ್ತು. ಅದು ಆ ಹೊತ್ತಿನ ಹಾರರ್ ಸಿನಿಮಾಗಳ ಕಥಾ ಹಂದರ. ‘ನಾ ನಿನ್ನ ಬಿಡಲಾರೆ’, ‘ಆಲೆಮನೆ’, ‘ಸಂಯುಕ್ತ’ ಸೇರಿದಂತೆ ಇಲ್ಲಿ ಹಲವು
ಸಿನಿಮಾಗಳು ಅಂಥದ್ದೇ ಕತೆಯಲ್ಲಿ ಗಮನ ಸೆಳೆದವು. ಆದ್ರೆ ಕಾಲಕ್ರಮೇಣ ಅದೂ ಕೂಡ ಬದಲಾಯಿತು.

ಹಾರರ್ ಎನ್ನುವ ಪದಕ್ಕೆ ತಕ್ಕಂತೆ ಹಾರರ್ ಸಿನಿಮಾಗಳಿರಬೇಕು, ಪ್ರೇಕ್ಷಕರನ್ನು ಬೆಚ್ಚಿ ಬೀಳಿಸಬೇಕು, ಪ್ರೇಕ್ಷಕರ ಕನಸಲ್ಲೂ ಬಂದು ನಿಲ್ಲುವಂತಿರಬೇಕು ಎನ್ನುವ ದಾಟಿಯಲ್ಲೇ ಹಾರರ್ ಸಿನಿಮಾಗಳಿಗೆ ಭಯಾನಕತೆಯ ಸ್ವರೂಪ ನೀಡಲಾಯಿತು. ಆಪ್ತಮಿತ್ರ, ಆಕ್ರಮಣ, ಕಲ್ಪನ ಸೇರಿದಂತೆ ಹಲವು ಚಿತ್ರಗಳು ಆ ಧಾಟಿಯಲ್ಲೇ ತೆರೆಗೆ ಬಂದವು. ಈಗಂತೂ ದೆವ್ವಗಳ ಸಿನಿಮಾಗಳದ್ದೇ ದೊಡ್ಡ ಟ್ರೆಂಡ್ ಆಗಿದೆ. ಗೆದ್ದ ಸಿನಿಮಾಗಳ ಪ್ರಭಾವಕ್ಕೆ ಸಿಲುಕುವ ಗಾಂಧಿನಗರದ ಮಂದಿ ಹಾರರ್ ಕೂಡ ಗೆಲ್ಲುವ ಫಾರ್ಮುಲಾ ಅಂತಲೇ ಭಾವಿಸಿದ್ದಾರೆ. ಅದು ಸತ್ಯವೂ ಹೌದು. ಭಯಾನಕತೆ ಹುಟ್ಟಿಸುವ ಹಾರರ್ ಸಿನಿಮಾಗಳು ಕೂಡ ಇಲ್ಲಿ ಗೆದ್ದಿವೆ. ಹಾಗಾಗಿಯೇ ಎರಡ್ಮೂರು ವರ್ಷಗಳಿಂದೀಚೆಗೆ ಹಾರರ್ ಸಿನಿಮಾಗಳ ಸಂಖ್ಯೆ ದೊಡ್ಡ ಮಟ್ಟದಲ್ಲಿದೆ.

ಆದ್ರೆ ಅವೆಲ್ಲವೂ ವೈಯಕ್ತಿಕ ದ್ವೇಷ, ಕೌಟುಂಬಿಕ ಕಲಹ ಅಥವಾ ಇನ್ನಾವುದೋ ಪರ್ಸನಲ್ ಜಿದ್ದಿನ ಸುತ್ತಲ ಕತೆಯಾಗಿ ಬಂದವು. ಈಗ ಆ ಟ್ರೆಂಡ್ ಮಗ್ಗಲು ಬದಲಿಸಿದೆ. ದೆವ್ವಗಳಿಗೂ ಮಾನವೀಯತೆಯ ಟಚ್ ನೀಡಲಾಗಿದೆ. ಇದುವರೆಗೂ ಅವಕ್ಕಿದ್ದ ವೈಯಕ್ತಿಕ ದ್ವೇಷ ಸಾಮಾಜಿಕರಣಗೊಂಡಿದೆ. ಅಮಾಯಕರನ್ನು ಬಲಿ ತೆಗೆದುಕೊಳ್ಳುವ ಜನರ ನಿರ್ಲಕ್ಷ್ಯಗಳ ವಿರುದ್ಧ ಎಚ್ಚರಿಸತೊಡಗಿವೆ. ಅಂಥದ್ದೇ ಕತೆಯಲ್ಲೀಗ ‘ಕೆಲವು ದಿನಗಳ ನಂತರ ’ಚಿತ್ರ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಕಾಲ ಎಲ್ಲರ ಕಾಳೆಯುತ್ತದೆ ಅನ್ನೋದು ಹಾರರ್‌ಸಿನಿಮಾಗಳ ಮಟ್ಟಿಗೂ ನಿಜ ಎನಿಸಿದೆ.  

Follow Us:
Download App:
  • android
  • ios