ಯಶ್‌ ಅಭಿನಯದ ‘ಕೆಜಿಎಫ್‌’ ಫೇ.5ರಿಂದ ಅಮೆಜಾನ್‌ ಪ್ರೈಮ್‌ ಆ್ಯಪ್‌ನಲ್ಲಿ ಪ್ರಸಾರವಾಗಲಿದೆ. ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಯ ಎಲ್ಲಾ ಆವೃತ್ತಿಗಳೂ ಅಮೆಜಾನ್‌ನಲ್ಲಿ ಬಿಡುಗಡೆಯಾಗುತ್ತಿದೆ. ಕನ್ನಡ ಚಿತ್ರವೊಂದು ಬಿಡುಗಡೆಯಾಗಿ ಐವತ್ತು ದಿನ ಪೂರೈಸುವ ಮೊದಲೇ ಡಿಜಿಟಲ್‌ ಪ್ಲಾಟ್‌ಫಾಮ್‌ರ್‍ನಲ್ಲಿ ಪ್ರಸಾರಗೊಳ್ಳುತ್ತಿರುವುದು ಇದೇ ಮೊದಲು.

ಕೆಜಿಎಫ್‌ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗುತ್ತಿರುವ ಸಂದರ್ಭದಲ್ಲೇ ಅಮೆಜಾನ್‌ ಪ್ರೈಮ್‌ ಸುಮಾರು 17 ಕೋಟಿ ರುಪಾಯಿ ನೀಡಿ ಡಿಜಿಟಲ್‌ ಹಕ್ಕು ಪಡೆದುಕೊಂಡಿತ್ತು. ಆ ಪ್ರಕಾರವೇ ಇದೀಗ ಸಿನಿಮಾ ಅಮೆಜಾನ್‌ನಲ್ಲಿ ಬಿಡುಗಡೆಯಾಗುತ್ತಿದೆ. ಚಿತ್ರಗಳು ಐವತ್ತು ದಿನ, ನೂರು ದಿನ ಓಡಿತು ಎಂಬ ಲೆಕ್ಕಾಚಾರ ಒಂದು ಕಾಲದಲ್ಲಿ ಮಹತ್ವದ್ದಾಗಿತ್ತು. ಆದರೆ ಇದೀಗ ಥಿಯೇಟರ್‌ಗಳಲ್ಲಿ ಪ್ರದರ್ಶನ ಕಾಣುತ್ತಿರುವ ‘ಕೆಜಿಎಫ್‌’ ಚಿತ್ರ ಆ್ಯಪ್‌ನಲ್ಲಿ ಪ್ರದರ್ಶನಗೊಳ್ಳುತ್ತಿರುವುದು ಹೊಸ ಥರ ಸಂಪ್ರದಾಯಕ್ಕೆ ನಾಂದಿ ಹಾಡಿದೆ.