ಬಿಗ್​ಬಾಸ್​ 12ನೇ ಸೀಸನ್​ ಆರಂಭಕ್ಕೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಮುಂದಿನ ಸೀಸನ್​ ಶುರು ಯಾವಾಗ? ಕೆಲವು ಕಂಡೀಷನ್​ ಹಾಕಿ ನಿರೂಪಣೆಗೆ ಪುನಃ ಬರಲು ಸುದೀಪ್​ ಒಪ್ಪಿಕೊಂಡ್ರಾ? ಏನಿದು ವಿಷ್ಯ? 

ಬಿಗ್​ಬಾಸ್​ 11 ಮುಕ್ತಾಯ ಆಗಿದ್ದು, 12ನೇ ಸೀಸನ್​ಗಾಗಿ ಬಿಗ್​ಬಾಸ್​ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ. ಆದರೆ ಈ ಬಾರಿ ಅಭಿಮಾನಿಗಳಿಗೆ ಸಾಕಷ್ಟು ಬೇಸರ ಮೂಡಿಸಿರೋದು ತಮ್ಮ ನೆಚ್ಚಿನ ಕಿಚ್ಚ ಸುದೀಪ್​ ಅವರು, ತಮ್ಮದು ಇದೇ ಕೊನೆಯ ಬಿಗ್​ಬಾಸ್​ ನಿರೂಪಣೆ ಎಂದು ಹೇಳಿರುವ ಕಾರಣಕ್ಕೆ. ಮುಂದಿನ ಷೋನಲ್ಲಿ ಸುದೀಪ್​ ಅವರು ತಾವು ಹೋಸ್ಟ್​ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರೂ, ಈ ಬಗ್ಗೆ ಇನ್ನೂ ಬೇರೆ ಬೇರೆ ರೀತಿಯ ಸುದ್ದಿಗಳು ಸದ್ದು ಮಾಡುತ್ತಲೇ ಇವೆ. ಆದರೂ ಸದ್ಯದ ಮಟ್ಟಿಗೆ ನೋಡುವುದಾದರೆ, ಇದು ಸುದೀಪ್​ ಅವರ ಕೊನೆಯ ಬಿಗ್​ಬಾಸ್​ ಷೋ ಎನ್ನಿಸಿಕೊಂಡಿದೆ. ಆದ್ದರಿಂದ ಅವರ ಅಸಂಖ್ಯ ಅಭಿಮಾನಿಗಳಿಗೆ ಇದು ನಿರಾಸೆಯುಂಟುಮಾಡಿದೆ. ಸುದೀಪ್​ ಅವರು ಇಲ್ಲದ ಬಿಗ್​ಬಾಸ್​ ಊಹಿಸಿಕೊಳ್ಳುವುದೂ ಕಷ್ಟ ಎನ್ನುವುದು ಎಲ್ಲರ ಅಭಿಮತ.

ಇದರ ನಡುವೆಯೇ, ಬಿಗ್​ಬಾಸ್​ 12ರ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ಭಾರಿ ಚರ್ಚೆ ಶುರುವಾಗಿದೆ. ಸುದೀಪ್​ ಅವರೇ ಈ ಷೋ ಅನ್ನು ಕೂಡ ನಡೆಸಿಕೊಡಲಿದ್ದಾರೆ. ಇದಕ್ಕಾಗಿ ಅವರು ಕೆಲವು ಕಂಡೀಷನ್​ ಹಾಕಿದ್ದಾರೆ. ಕಂಡೀಷನ್​ಗೆ ಒಪ್ಪಿದರೆ ಸುದೀಪ್​ ಅವರೇ ನಡೆಸಿಕೊಡಲಿದ್ದಾರೆ ಎಂಬೆಲ್ಲಾ ಗಾಳಿಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಸಾಲದು ಎನ್ನುವುದಕ್ಕೆ ಸುದೀಪ್​ ಅವರ ಹಾಕಿರುವ ಷರತ್ತುಗಳ ಬಗ್ಗೆಯೂ ಉಲ್ಲೇಖಿಸಲಾಗಿದೆ. ಸುದೀಪ್​ ಅವರು, ವಿವಾದಿತ ಸ್ಪರ್ಧಿಗಳನ್ನು ಆರಿಸಬಾರದು, ಕನ್ನಡಿಗರಿಗೆ ಆದ್ಯತೆ ಕೊಡಬೇಕು, ಲೀಗಲ್​ ಟೀಮ್​ ಚೆನ್ನಾಗಿರಬೇಕು, ಕನ್ನಡವೇ ವೇದಘೋಷಾಗಬೇಕು, ಮನೆಯು ತುಂಬಾ ಕಲರ್​ಫುಲ್​ ಆಗಿರಬೇಕು ಎಂದೆಲ್ಲಾ ಷರತ್ತು ಹಾಕಿದ್ದಾರಂತೆ.

ಅಷ್ಟಕ್ಕೂ ಬಿಗ್​ಬಾಸ್​ ಎಂದರೇನೇ ಅಲ್ಲಿ ವಿವಾದಿತರಿಗೇ ಮೊದಲ ಆದ್ಯತೆ ಎನ್ನುವುದು ಎಲ್ಲ ಭಾಷೆಗರಿಗೂ ಗೊತ್ತಿದ್ದದ್ದೇ. ಹೆಚ್ಚೆಚ್ಚು ಕಾಂಟ್ರವರ್ಸಿ ಮಾಡಿಕೊಂಡವರಿಗೆ ಹೆಚ್ಚೆಚ್ಚು ಆದ್ಯತೆ ಎನ್ನುವುದು ಈ ಹಿಂದೆ ನಡೆದ ಬಿಗ್​ಬಾಸ್​ ಸ್ಪರ್ಧಿಗಳನ್ನು ನೋಡಿದರೆ ತಿಳಿದುಬರುತ್ತದೆ. ಹೊರಗಡೆ ಸಿಕ್ಕಾಪಟ್ಟೆ ವಿವಾದ ಸೃಷ್ಟಿಸಿ, ಒಂದೆರಡು ಬಾರಿ ಜೈಲಿಗೆ ಹೋಗಿ... ಹೀಗೆ ಏನೆಲ್ಲಾ ವಿವಾದ ಸೃಷ್ಟಿಸಿಕೊಂಡವರಿಗೆ ಆದ್ಯತೆ ನೀಡುವ ಮೂಲಕ ಅವರೆಲ್ಲಾ ಇಂದು ಸಮಾಜದ ಕಣ್ಣಿಗೆ ಹೀರೋಗಳಾಗಿ ಮಿಂಚುತ್ತಿದ್ದಾರೆ. ಇಂಥವರನ್ನು ತಂದರೆ ಮಾತ್ರ ಬಿಗ್​ಬಾಸ್​ಗೆ ವೀಕ್ಷಕರು ಹೆಚ್ಚುವುದು ಎಂದು ಎಲ್ಲರಿಗೂ ತಿಳಿದದ್ದೇ. ಆದರೆ ಸುದೀಪ್​ ಅವರು ಈ ಬಾರಿ ವಿವಾದಿತರು ಬೇಡ ಎಂದಿದ್ದಾರೆ ಎನ್ನುವುದು ನೆಟ್ಟಿಗರ ಅಭಿಪ್ರಾಯ!

ಆದರೆ ಈ ಬಗ್ಗೆ ಸುದೀಪ್​ ಆಗಲೀ, ವಾಹಿನಿಯಾಗಲೀ ಯಾವುದೇ ಹೇಳಿಕೆ ನೀಡಲಿಲ್ಲ. ಬಿಗ್​ಬಾಸ್​ 12 ಯಾವಾಗ ಆರಂಭ ಆಗಲಿದೆ ಎನ್ನುವ ಬಗ್ಗೆಯೂ ಇದುವರೆಗೆ ಮಾಹಿತಿ ಇಲ್ಲ. ಮುಂದಿನ ಸೀಸನ್​ಗೆ ತಾವು ಬರುವುದೇ ಇಲ್ಲ ಎಂದು ಸುದೀಪ್​ ಅವರು ಅಷ್ಟು ಖಡಕ್ಕಾಗಿ ಹೇಳಿರುವ ಕಾರಣದಿಂದ ಅವರು ತಮ್ಮ ಮಾತನ್ನು ಮೀರುವುದಿಲ್ಲ ಎನ್ನುವುದೂ ಅವರ ಅಭಿಮಾನಿಗಳಿಗೆ ತಿಳಿದಿದೆ. ಇದರ ಹೊರತಾಗಿಯೂ ಸೋಷಿಯಲ್​ ಮೀಡಿಯಾದಲ್ಲಿ ಮನಸ್ಸಿಗೆ ಬಂದಂತೆ ಪೋಸ್ಟ್​ಗಳನ್ನು ವೈರಲ್​ ಮಾಡಲಾಗುತ್ತಿದೆ. ಅಷ್ಟಕ್ಕೂ ಸುದೀಪ್​ ಅವರು, ಬಿಗ್ ಬಾಸ್ ಕಾರ್ಯಕ್ರಮವನ್ನು ಸುಮಾರು 11 ವರ್ಷಗಳಿಂದ ಎಂಜಾಯ್ ಮಾಡಿದ್ದೀನಿ. ನೀವು ತೋರಿಸಿರುವ ಪ್ರೀತಿಗೆ ಧನ್ಯವಾದಗಳು. ಸೀಸನ್ 11ರ ಫಿನಾಲೆ ನನ್ನ ಕೊನೆ ಹೋಸ್ಟ್‌ ಆಗಿರಲಿದೆ. ನಿಮ್ಮನ್ನು ಆದಷ್ಟು ಮನೋರಂಜಿಸುವ ಪ್ರಯತ್ನ ಮಾಡುತ್ತೀನಿ. ಖಂಡಿತಾ ಮರೆಯಲಾಗದ ಜರ್ನಿ ಇದು. ಅದ್ಭುತವಾಗಿ ಹ್ಯಾಂಡಲ್‌ ಮಾಡಿದ್ದೀನಿ. ಧನ್ಯವಾದಗಳು ಕಲರ್ಸ್ ಕನ್ನಡ ಈ ಅವಕಾಶವನ್ನು ಕೊಟ್ಟಿದ್ದಕ್ಕೆ' ಎಂದು ಜಾಲತಾಣದಲ್ಲಿ ಬರೆದುಕೊಳ್ಳುವ ಮೂಲಕ ಬಿಗ್​ಬಾಸ್​ಗೆ ವಿದಾಯ ಹೇಳಿದ್ದರು.