ಗೌರಿ ಲಂಕೇಶ್ ನಟಿಸಿರುವ ಚಿತ್ರ ತೆರೆಗೆ

First Published 3, Aug 2018, 12:45 PM IST
Gauri Lankesh acting movie Summer Holidays come to screen
Highlights

ಕವಿತಾ ಲಂಕೇಶ್ ನಿರ್ದೇಶನದ ’ಸಮ್ಮರ್ ಹಾಲಿಡೇಸ್’ ತೆರೆಗೆ ಬರಲು ಸಿದ್ದವಾಗಿದೆ. ಈ ಸಿನಿಮಾದಲ್ಲಿ ಗೌರಿ ಲಂಕೇಶ್ ಕೂಡಾ ಅಭಿನಯಿಸಿದ್ದಾರೆ. 

ಮಕ್ಕಳನ್ನೇ ಮುಖ್ಯ ಭೂಮಿಕೆಯಲ್ಲಿಟ್ಟುಕೊಂಡು ಅರ್ಥಪೂರ್ಣವಾದ ಮಕ್ಕಳ ಸಿನಿಮಾಗಳು ತಯಾರಾಗುತ್ತಿವೆ. ಆ ಸಾಲಿಗೆ ಸೇರುವ ಸಿನಿಮಾ ‘ಸಮ್ಮರ್ ಹಾಲಿಡೇಸ್’. ಕವಿತಾ ಲಂಕೇಶ್ ತಮ್ಮ ನಿರ್ದೇಶನದ ಈ ಮಕ್ಕಳ ಚಿತ್ರವನ್ನು ಥಿಯೇಟರ್‌ಗಳಲ್ಲಿ ಬಿಡುಗಡೆ ಮಾಡುವುದಕ್ಕೆ ಹೊರಟಿದ್ದಾರೆ.

ಇಂಥ ಚಿತ್ರಕ್ಕೆ ಪ್ರೇಕ್ಷಕರಿಂದ ಯಾವ ರೀತಿಯ ಪ್ರಶಂಸೆ ಬರುತ್ತದೆ, ಹೇಗೆ ಸ್ವೀಕರಿಸುತ್ತಾರೆಂದು ಮೊದಲೇ ತಿಳಿಯುವುದಕ್ಕಾಗಿಯೇ 500 ಕ್ಕೂ ಹೆಚ್ಚು ಪೋಷಕರಿಗೆ ಹಾಗೂ ಮಕ್ಕಳಿಗೆ ಈಗಾಗಲೇ ಈ ಚಿತ್ರವನ್ನು ತೋರಿಸಿದ್ದಾರಂತೆ. ಚಿತ್ರ ನೋಡಿದವರು ಮೆಚ್ಚಿಕೊಂಡಿದ್ದಾರೆ. ಅದೇ ಉತ್ಸಾಹದಲ್ಲಿ ಇಂದು ಮಲ್ಟಿಪ್ಲೆಕ್ಸ್‌ಗಳಿಗೆ ‘ಸಮ್ಮರ್ ಹಾಲಿಡೇಸ್’ ಪ್ರವೇಶಿಸಲಿದೆ. ಈ ಸಂತಸವನ್ನು ಹೇಳಿಕೊಳ್ಳುವುದಕ್ಕಾಗಿಯೇ ನಿರ್ದೇಶಕಿ ಕವಿತಾ ಲಂಕೇಶ್ ತಮ್ಮ ತಂಡದ ಸಮೇತರಾಗಿ ಮಾಧ್ಯಮಗಳ ಮುಂದೆ ಬಂದರು.

ಚಿತ್ರದಲ್ಲಿ ತಾಯಿ ಪಾತ್ರದಲ್ಲಿ ಸುಮನ್ ನಗರ್‌ಕರ್ ಹಾಗೂ ಅತಿಥಿ ಪಾತ್ರಗಳಲ್ಲಿ ಪ್ರಕಾಶ್ ರೈ, ಪತ್ರಕರ್ತೆ ಗೌರಿ ಲಂಕೇಶ್ ನಟಿಸಿದ್ದಾರೆ. ಉಳಿದಂತೆ ಕವಿತಾ ಲಂಕೇಶ್ ಪುತ್ರಿ ಇಶಾ ಲಂಕೇಶ್, ಅದ್ವೈತ್, ಅಂಶ್ ಮುಂತಾದವರು ಕಾಣಿಸಿಕೊಂಡಿದ್ದಾರೆ. ‘ಇದು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ತೆಗೆದಿರುವ ಸಿನಿಮಾ.

ಶಾಲೆಯಲ್ಲಿ ಮುಖ್ಯ ಪರೀಕ್ಷೆ ಮುಗಿದ ನಂತರ ಶಾಲೆಗಳು ಇದೇ ಹೆಸರಿನಲ್ಲಿ ರಜಾ ಘೋಷಿಸುತ್ತವೆ. ರಜೆಯಲ್ಲಿ ಮಕ್ಕಳು ಏನೆಲ್ಲ ಮಾಡುತ್ತಾರೆ, ಅವರ ಸಾಹಸಗಳು, ಕನಸುಗಳು, ಇದರ ಸುತ್ತ ಪೋಷಕರ ಕತೆಗಳನ್ನು ಇಲ್ಲಿ ಹೇಳಲಾಗಿದೆ. ಪಿವಿಆರ್ ಫೋರಂ ಮೂಲಕ ಈ ಚಿತ್ರವನ್ನು ದೇಶಾದ್ಯಂತ ತೆರೆಗೆ  ತರಲಾಗುವುದು’ ಎಂದರು ಕವಿತಾ ಲಂಕೇಶ್.  

loader