ಮುಂಬೈ[ಜು.27]  ಖ್ಯಾತ ಬಾಲಿವುಡ್ ನಟ ಸಂಜಯ್ ದತ್ ಜೀವನಾಧಾರಿತ ಚಿತ್ರ 'ಸಂಜು' ಚಿತ್ರಕ್ಕೆ ಕಂಟಕ ಎದುರಾಗಿದ್ದು, ಚಿತ್ರದಲ್ಲಿ ತನ್ನ ಬಗ್ಗೆ ಸುಳ್ಳು ಮಾಹಿತಿ ನೀಡಲಾಗಿದೆ ಎಂದು ಭೂಗತ ಪಾತಕಿ ಅಬುಸಲೇಂ ಆರೋಪಿಸಿದ್ದಾನೆ.

ಮುಂಬೈ ಸರಣಿ ಬಾಂಬ್ ಸ್ಫೋಟ ಮತ್ತು ಅಕ್ರಮ ಶಸ್ತ್ರಾಸ್ತ್ರ ಪ್ರಕರಣದದಲ್ಲಿ ಜೈಲು ಪಾಲಾಗಿರುವ ಅಬುಸಲೇಂ ಸಂಜು ಚಿತ್ರ ತಯರಿಕರಿಗೆ ವಕೀಲರ ಮೂಲಕ ನೋಟಿಸ್ ನೀಡಿದ್ದಾನೆ. ಚಿತ್ರದಲ್ಲಿನ ಸಂಜು ಪಾತ್ರವನ್ನು ವೈಭವೀಕರಿಸಲು ತನ್ನ ಪಾತ್ರದ ಅವಹೇಳನ ಮಾಡಿರುವುದಲ್ಲದೇ ಕೆಟ್ಟದಾಗಿ ಚಿತ್ರಿಸಲಾಗಿದೆ ಎಂದು ಆರೋಪಿಸಿದ್ದಾನೆ.

ಚಿತ್ರ ತಂಡಕ್ಕೆ 15 ದಿನಗಳ ಕಾಲಾವಕಾಶ ನೀಡಲಾಗಿದೆ ಎಂದು ತಿಳಿದುಬಂದಿದೆ.  ಸಂಜಯ್ ದತ್ ಅವರ ವೈಯುಕ್ತಿಕ ಜೀವನ, ಸಿನಿಮಾ ವೃತ್ತಿ ಜೀವನ, ಅವರ ಗೆಳತಿಯರು ಮತ್ತು ಜೈಲು ವಾಸಗಳ ಕುರಿತು ಸಂಜು ಚಿತ್ರದಲ್ಲಿ ಸೂಕ್ಷ್ಮವಾಗಿ ಚಿತ್ರಿಸಲಾಗಿದೆ. ಅಂತೆಯೇ ಮುಂಬೈ ಸರಣಿ ಸ್ಫೋಟ ಮತ್ತು ಅಕ್ರಮ ಶಸ್ತ್ರಾಸ್ತ್ರ ಹೊಂದಿದ ಆರೋಪಕ್ಕೆ ಸಂಬಂಧಿಸಿದಂತೆ ಸಂಜಯ್ ದತ್ ಜೈಲು ಶಿಕ್ಷೆ ಅನುಭವಿಸಿದ್ದರು. ಗ್ಯಾಂಗ್ ಸ್ಟರ್ ಗಳ ಕುರಿತು ಚಿತ್ರದಲ್ಲಿ ಉಲ್ಲೇಖ ಬರುವಾಗ ಅಬುಸಲೇಂ ಪಾತ್ರ ಬಂದು ಹೋಗುತ್ತದೆ.