ಪುನೀತ್ ರಾಜ್ ಕುಮಾರ್ ಅವರಿಗೆ ಮಾತ್ರ ‘ಪವರ್ ಸ್ಟಾರ್’ ಅಂತ ಬಿರುದು ಬಂದಿದ್ದು ಅವರ ಅಭಿನಯದ ರಭಸಕ್ಕೆ, ಆ್ಯಕ್ಷನ್ ಸನ್ನಿವೇಶಗಳ ಅಬ್ಬರಕ್ಕೆ ಅನ್ನೋದು ಎಲ್ಲರಿಗೂ ಗೊತ್ತೇ ಇದೆ.

ನಟ ಪುನೀತ್ ರಾಜ್‌ಕುಮಾರ್ ಅಂದ್ರೆ ದೊಡ್ಮನೆಯ ಪಾಲಿಗೆ ಪ್ರೀತಿಯ ‘ಅಪ್ಪು’. ಆದ್ರೆ, ಅಭಿಮಾನಿಗಳ ಪಾಲಿಗೆ ಅವರು ‘ಪವರ್ ಸ್ಟಾರ್’ ಅಂತಲೇ ಫೇಮಸ್ಸು. ಅದು ಅಭಿಮಾನಿಗಳಿಂದಲೇ ಸಿಕ್ಕ ಪ್ರೀತಿಯ ಬಿರುದು. ಸಕ್ಸಸ್‌ಫುಲ್ ನಟರಿಗೆ ಇಂತಹ ಸ್ಟಾರ್ ಗಿರಿಗಳು ಸಿಕ್ಕಿದ್ದೇ ಅಭಿಮಾನಿಗಳಿಂದ. ಜತೆಗೆ ನಿರ್ದೇಶಕರಿಂದ. ಅವೆಲ್ಲ ಎಲ್ಲಿಂದ ಬರುತ್ತವೆ, ಹೇಗೆ ಬರುತ್ತವೆ ಸಾಕಷ್ಟು ಜನರಿಗೆ ಗೊತ್ತೇ ಇಲ್ಲ.

ಪುನೀತ್ ರಾಜ್ ಕುಮಾರ್ ಅವರಿಗೆ ಮಾತ್ರ ‘ಪವರ್ ಸ್ಟಾರ್’ ಅಂತ ಬಿರುದು ಬಂದಿದ್ದು ಅವರ ಅಭಿನಯದ ರಭಸಕ್ಕೆ, ಆ್ಯಕ್ಷನ್ ಸನ್ನಿವೇಶಗಳ ಅಬ್ಬರಕ್ಕೆ ಅನ್ನೋದು ಎಲ್ಲರಿಗೂ ಗೊತ್ತೇ ಇದೆ. ಆದ್ರೆ, ಫಾರ್ ದಿ ಫಸ್ಟ್ ಟೈಮ್ ಪುನೀತ್ ರಾಜ್ ಕುಮಾರ್ ಅವರನ್ನು ‘ಪವರ್ ಸ್ಟಾರ್ ’ಅಂತ ಕರೆದಿದ್ದೇ ಶಿವರಾಜ್ ಕುಮಾರ್ ಅವರಂತೆ. ಐದು ವರ್ಷದವರಿದ್ದಾಗಲೇ ಅಪ್ಪು ಅವರಲ್ಲಿದ್ದ ನಟನೆಯ ರಭಸ ನೋಡಿ, ಅಪ್ಪು ಅಂದ್ರೆ ‘ಪವರ್ ಸ್ಟಾರ್’ ಅಂದಿದ್ದರಂತೆ ಹ್ಯಾಟ್ರಿಕ್ ಹೀರೋ...!

ಶುಕ್ರವಾರ ಸಂಜೆ ‘ಅಂಜನಿಪುತ್ರ’ ಚಿತ್ರದ ಆಡಿಯೋ ಸೀಡಿ ಬಿಡುಗಡೆ ಹಾಗೂ ಪಿಆರ್‌ಕೆ ಆಡಿಯೋ ಸಂಸ್ಥೆಯ ಉದ್ಘಾಟನೆ ಸಮಾರಂಭದಲ್ಲಿ ಸ್ವತಃ ಶಿವರಾಜ್ ಕುಮಾರ್ ಅವರೇ ಈ ಸಂಗತಿ ಬಿಚ್ಚಿಟ್ಟು ಹೆಮ್ಮೆ ಪಟ್ಟರು. ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ದೊಡ್ಮನೆಯ ಅಷ್ಟೂ ಸದಸ್ಯರು ಸೇರಿದಂತೆ ಚಿತ್ರೋದ್ಯಮದ ಗಣ್ಯಾತಿಗಣ್ಯರು ಆಗಮಿಸಿದ್ದರು. ನಟ ಶಿವರಾಜ್ ಕುಮಾರ್ ಮುಖ್ಯ ಅತಿಥಿಯಾಗಿ ಬಂದಿದ್ದರು. ಆಡಿಯೋ ಬಿಡುಗಡೆಗೊಳಿಸಿ ಅವರು, ಮೈಕ್ ಹಿಡಿದು ಮಾತಿಗೆ ನಿಂತಾಗ ಪುನೀತ್ ಅಭಿ ಮಾನಿಗಳು ‘ಪವರ್ ಸ್ಟಾರ್ ಪವರಸ್ಟಾರ್’ಅಂತ ಜೋರಾಗಿ ಕೂಗುತ್ತಿದ್ದರು. ‘ಒಂದು ನಿಮಿಷ ತಡೀರಪ್ಪಾ.. ನನ್ ಮಾತು ಕೇಳಿ.

ಈಗ ನೀವೇನು ಹೇಳ್ತಾ ಇದ್ದೀರಲ್ಲ, ಪವರ್ ಸ್ಟಾರ್, ಪವರ್ ಸ್ಟಾರ್ ಅಂತ, ಅದನ್ನು ಅಪ್ಪುಗೆ ಮೊದಲು ಹೇಳಿದ್ದೇ ನಾನು. ಯಾಕಂದ್ರೆ, ನಾನು ಅವರ ಅಣ್ಣಾ.. ಟವರ್’ ಅಂತ ಶಿವಣ್ಣ ನಗುತ್ತಲೇ ಹೇಳಿದಾಗ ಸಭಿಕರಿಂದ ಭರ್ಜರಿ ಕರತಾಡನ ಕೇಳಿಬಂತು. ಪುನೀತ್‌ರಾಜ್ ಕುಮಾರ್ ಅವರ ನಟನೆಯ ಶ್ರದ್ಧೆ, ಬದ್ಧತೆಯನ್ನು ಶಿವರಾಜ್ ಕುಮಾರ್ ಮುಕ್ತ ಕಂಠದಿಂದ ಬಣ್ಣಿಸಿದರು.