ತಮಿಳುನಾಡಿನಲ್ಲಿ ಸಿನಿಮಾ ಮತ್ತು ರಾಜಕೀಯದ ಮಿಕ್ಸ್ ಇತ್ತೀಚಿನ ದಿನಗಳಲ್ಲಿ ಹೊಸ ಹಂತಕ್ಕೆ ತಲುಪಿದೆ. ಮಾಜಿ ಸಚಿವರ ಈ 'ತ್ರಿಶಾ ಡಿಸಿಎಂ' ಹೇಳಿಕೆಗೆ ವಿಜಯ್ ಅವರ ಪಕ್ಷ ಯಾವ ರೀತಿ ತಿರುಗೇಟು ನೀಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಒಂದು ವೇಳೆ ತ್ರಿಶಾ ನಿಜವಾಗಿಯೂ ರಾಜಕೀಯಕ್ಕೆ ಬಂದರೆ, ಅದೊಂದು ದೊಡ್ಡ ತಿರುವು ಆಗುವುದರಲ್ಲಿ ಸಂಶಯವಿಲ್ಲ!

ನಟಿ ತ್ರಿಶಾ ಈಗ ಉಪಮುಖ್ಯಮಂತ್ರಿ? ಸಂಚಲನ ಮೂಡಿಸಿದ ಮಾಜಿ ಸಚಿವರ ಶಾಕಿಂಗ್ ಹೇಳಿಕೆ!

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ತಮಿಳುನಾಡು ಅಂದ್ರೇನೇ ಅಲ್ಲಿ ಸಿನಿಮಾ ಮತ್ತು ರಾಜಕೀಯಕ್ಕೆ ಅವಿನಾಭಾವ ಸಂಬಂಧ. ಎಂಜಿಆರ್, ಜಯಲಲಿತಾ ಕಾಲದಿಂದಲೂ ನಟ-ನಟಿಯರು ರಾಜ್ಯವನ್ನಾಳುತ್ತಾ ಬಂದಿದ್ದಾರೆ. ಈಗ ಈ ಸಾಲಿಗೆ ದಕ್ಷಿಣ ಭಾರತದ ಕನಸಿನ ಕನ್ಯೆ ತ್ರಿಶಾ ಕೃಷ್ಣನ್ (Trisha Krishnan) ಅವರ ಹೆಸರು ಸೇರ್ಪಡೆಯಾಗುತ್ತಿದೆಯೇ? ಹೌದು, ತಮಿಳುನಾಡು ರಾಜಕೀಯದಲ್ಲಿ ಈಗ 'DCM ತ್ರಿಶಾ' ಎಂಬ ಮಾತು ಜೋರಾಗಿ ಕೇಳಿಬರುತ್ತಿದೆ! ಇದು ನಿಜವೋ ಅಥವಾ ಕೇವಲ ರಾಜಕೀಯ ಗಿಮಿಕ್ಕೋ? ಈ ಸ್ಟೋರಿ ನೋಡಿ..

ಬೆಳ್ಳಿತೆರೆಯಿಂದ ಸಚಿವಾಲಯಕ್ಕೆ ತ್ರಿಶಾ ಎಂಟ್ರಿ?

ಕಳೆದ ಎರಡು ದಶಕಗಳಿಂದ ತಮಿಳು ಚಿತ್ರರಂಗವನ್ನು ಆಳುತ್ತಿರುವ ತ್ರಿಶಾ (Trisha Krishnan), ಇಂದಿಗೂ ಟಾಪ್ ಹೀರೋಯಿನ್. ಇತ್ತೀಚೆಗೆ 'ದಳಪತಿ' ವಿಜಯ್ (Thalapathy Vijay) ಜೊತೆ 'ಲಿಯೋ' ಚಿತ್ರದಲ್ಲಿ ಮಿಂಚಿದ್ದ ತ್ರಿಶಾ ಹೆಸರು ಈಗ ದಿಢೀರನೆ ರಾಜಕೀಯ ಅಖಾಡದಲ್ಲಿ ಕೇಳಿಬರುತ್ತಿದೆ. ಅದಕ್ಕೆ ಕಾರಣವಾಗಿದ್ದು ಎಐಎಡಿಎಂಕೆ (AIADMK) ಮಾಜಿ ಸಚಿವ ಉದಯಕುಮಾರ್ ಅವರು ನೀಡಿದ ಒಂದು ಸೆನ್ಸೇಷನಲ್ ಹೇಳಿಕೆ. "ಪರಿಸ್ಥಿತಿ ಹೀಗೆಯೇ ಮುಂದುವರಿದರೆ ನಾಳೆ ನಟಿ ತ್ರಿಶಾ ತಮಿಳುನಾಡಿನ ಉಪಮುಖ್ಯಮಂತ್ರಿಯಾದರೂ ಆಶ್ಚರ್ಯವಿಲ್ಲ" ಎಂದು ಅವರು ಹೇಳುವ ಮೂಲಕ ಬಾಂಬ್ ಸಿಡಿಸಿದ್ದಾರೆ. ಅವರ ಈ ಹೇಳಿಕೆ ಸಖತ್ ವೈರಲ್ ಆಗಿದೆ. ಜೊತೆಗೆ, ತ್ರಿಷಾ ಫ್ಯಾನ್ಸ್ ಸಖತ್ ಖುಷಿಗೆ ಕಾರಣವಾಗಿದೆ.

ವಿಜಯ್ ನಿರ್ಧಾರಕ್ಕೆ ವಿರೋಧ ಪಕ್ಷಗಳ ಕೆಂಗಣ್ಣು:

ತಮಿಳು ಸೂಪರ್ ಸ್ಟಾರ್ ವಿಜಯ್ ಅವರು ತಮ್ಮದೇ ಆದ 'ತಮಿಳಗ ವೆಟ್ರಿ ಕಳಗಂ' (TVK) ಪಕ್ಷವನ್ನು ಸ್ಥಾಪಿಸಿ ಸಕ್ರಿಯ ರಾಜಕೀಯಕ್ಕೆ ಧುಮುಕಿದ್ದಾರೆ. ಇತ್ತೀಚೆಗೆ ವಿಜಯ್ ಅವರು ಕರ್ನಾಟಕದ ಖ್ಯಾತ ಚಲನಚಿತ್ರ ನಿರ್ಮಾಪಕ ಮತ್ತು ಕೆವಿಎನ್ (KVN) ಪ್ರೊಡಕ್ಷನ್ಸ್ ಮುಖ್ಯಸ್ಥ ವೆಂಕಟ ನಾರಾಯಣ ಅವರನ್ನು ದೆಹಲಿಯಲ್ಲಿ ತಮಿಳುನಾಡು ಸರ್ಕಾರದ ವಿಶೇಷ ಪ್ರತಿನಿಧಿಯಾಗಿ ನೇಮಿಸುವಂತೆ ಶಿಫಾರಸು ಮಾಡಿದ್ದರು ಎನ್ನಲಾದ ಸುದ್ದಿ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ವಿಜಯ್ ಅಭಿನಯದ ಕೊನೆಯ ಚಿತ್ರವನ್ನು ನಿರ್ಮಿಸುತ್ತಿರುವ ಕಾರಣಕ್ಕಾಗಿ ನೆರೆಯ ರಾಜ್ಯದ ವ್ಯಕ್ತಿಗೆ ಇಂತಹ ದೊಡ್ಡ ಹುದ್ದೆ ನೀಡಲಾಗುತ್ತಿದೆ ಎಂದು ವಿರೋಧ ಪಕ್ಷಗಳು ಆರೋಪಿಸುತ್ತಿವೆ. ಈ ಸಂಗತಿ ತಮಿಳುನಾಡು ರಾಜಕಾರಣದಲ್ಲಿ, ಅದರಲ್ಲೂ ವಿರೋಧಪಕ್ಷಗಳ ಪಡಸಾಲೆಯಲ್ಲಿ ಸಿಕ್ಕಾಪಟ್ಟೆ ಸಂಚಲನ ಸೃಷ್ಟಿಸುತ್ತಿದೆ.

ವಿಡಂಬನೆಯೋ ಅಥವಾ ಭವಿಷ್ಯದ ಮುನ್ಸೂಚನೆಯೋ?

ಇದೇ ವಿಚಾರವನ್ನು ಇಟ್ಟುಕೊಂಡು ವಿಜಯ್ ಅವರನ್ನು ಕಾಲೆಳೆದಿರುವ ಮಾಜಿ ಸಚಿವ ಉದಯಕುಮಾರ್, "ವಿಜಯ್ ಅವರಿಗೆ ಕೇವಲ ಸಿನಿಮಾ ಗೆಳೆತನ ಮತ್ತು ಸಂಪರ್ಕಗಳೇ ಮುಖ್ಯವಾಗಿದೆ. 8 ಕೋಟಿ ಜನರಿರುವ ತಮಿಳುನಾಡಿನಲ್ಲಿ ಅವರಿಗೆ ಒಬ್ಬ ತಮಿಳಿಗ ಸಿಗಲಿಲ್ಲವೇ? ಸಿನಿಮಾ ಮಂದಿಗೆ ಹೀಗೆಯೇ ಪ್ರಮುಖ ಹುದ್ದೆಗಳನ್ನು ಹಂಚುತ್ತಾ ಹೋದರೆ, ಮುಂದಿನ ದಿನಗಳಲ್ಲಿ ನಟಿ ತ್ರಿಶಾ ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಿ ಪಕ್ಕದಲ್ಲಿ ಕೂರಿಸಿಕೊಂಡರೂ ಆಶ್ಚರ್ಯವಿಲ್ಲ" ಎಂದು ಕುಟುಕಿದ್ದಾರೆ. ಈ ಮಾತು ಇಡೀ ದೇಶದ ತುಂಬಾ ಪ್ರಚಾರ ಪಡೆಯುತ್ತಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಕಾಳ್ಗಿಚ್ಚಿನಂತೆ ಹಬ್ಬಿದೆ

ಈ ಹೇಳಿಕೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಕಾಳ್ಗಿಚ್ಚಿನಂತೆ ಹಬ್ಬಿದೆ. ವಿಜಯ್ ಮತ್ತು ತ್ರಿಶಾ ಜೋಡಿ ಬೆಳ್ಳಿತೆರೆಯ ಮೇಲೆ ಎಷ್ಟು ಫೇಮಸ್ಸೋ, ಈಗ ರಾಜಕೀಯವಾಗಿಯೂ ಅಷ್ಟೇ ಸದ್ದು ಮಾಡುತ್ತಿದೆ. ಅಭಿಮಾನಿಗಳಂತೂ "ಜಯಲಲಿತಾ ಅವರಂತೆ ತ್ರಿಶಾ ಕೂಡ ರಾಜಕೀಯಕ್ಕೆ ಬಂದರೆ ಅಡ್ಡಿಯಿಲ್ಲ" ಎಂದು ಕಾಮೆಂಟ್ ಮಾಡುತ್ತಿದ್ದರೆ, ರಾಜಕೀಯ ವಿಶ್ಲೇಷಕರು ಇದೊಂದು ಕೇವಲ ಟೀಕೆ ಅಷ್ಟೇ ಎನ್ನುತ್ತಿದ್ದಾರೆ.

ಒಟ್ಟಾರೆಯಾಗಿ, ತಮಿಳುನಾಡಿನಲ್ಲಿ ಸಿನಿಮಾ ಮತ್ತು ರಾಜಕೀಯದ ಮಿಕ್ಸ್ ಇತ್ತೀಚಿನ ದಿನಗಳಲ್ಲಿ ಹೊಸ ಹಂತಕ್ಕೆ ತಲುಪಿದೆ. ಮಾಜಿ ಸಚಿವರ ಈ 'ತ್ರಿಶಾ ಡಿಸಿಎಂ' ಹೇಳಿಕೆಗೆ ವಿಜಯ್ ಅವರ ಪಕ್ಷ ಯಾವ ರೀತಿ ತಿರುಗೇಟು ನೀಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಒಂದು ವೇಳೆ ತ್ರಿಶಾ ನಿಜವಾಗಿಯೂ ರಾಜಕೀಯಕ್ಕೆ ಬಂದರೆ, ದಕ್ಷಿಣ ಭಾರತದ ರಾಜಕೀಯ ಇತಿಹಾಸದಲ್ಲೇ ಅದೊಂದು ದೊಡ್ಡ ತಿರುವು ಆಗುವುದರಲ್ಲಿ ಸಂಶಯವಿಲ್ಲ! ಆದರೆ, ಸದ್ಯಕ್ಕೆ ಈ ಬಗ್ಗೆ ಯಾವುದೇ ಸ್ಪಷ್ಟತೆಯಿಲ್ಲ, ಕಾದು ನೋಡಬೇಕಷ್ಟೇ!