ಶರಣ್ ಸಿನಿಮಾ ಅಂದ್ರೆ ಕಾಮಿಡಿ ಖಚಿತ. ಅದೇ ಪ್ರಧಾನವೂ ಹೌದು. ಅಂಥದ್ದೇ ಮತ್ತೊಂದು ಸಿನಿಮಾ ‘ವಿಕ್ಟರಿ 2’.
ಯಾವುದೇ ನಿರೀಕ್ಷೆ ಇಟ್ಟುಕೊಳ್ಳದೆ,ದಿನದ ಕೆಲಸದ ಬೋರು, ಸಂಸಾರದ ಜಂಜಾಟಗಳ ಬೇಜಾರು ಅಂತೆಲ್ಲ ಹೋಗಿ ಕುಳಿತರೆ ಎಲ್ಲಾ ವರ್ಗದ ಪ್ರೇಕ್ಷಕರು ಒಂದಷ್ಟು ಕಾಲ ನಕ್ಕು ಬರಬಹುದಾದ ಸಿನಿಮಾ. ಆದರೆ ಕತೆ, ಅದರ ನಿರೂಪಣೆ ಅಂತೆಲ್ಲ ಯೋಚಿಸುತ್ತಾ ಹೋದಾಗ ಇನ್ನೇನೋ ಬೇಕಿತ್ತು, ಗಟ್ಟಿ ನಿರೂಪಣೆಯಾದರೂ ಸಾಕಿತ್ತು ಎಂದೆನಿಸುವುದು ಸಹಜ. ಆ ದೃಷ್ಟಿಯಲ್ಲಿ ‘ವಿಕ್ಟರಿ’ಯೋ ಅಥವಾ ಶರಣ್ ಅಭಿನಯದ ಇನ್ನಾವುದೋ ಹಿಂದಿನ ಸಿನಿಮಾಕ್ಕೋ ಇದನ್ನು ಕಂಪೇರ್ ಮಾಡಲು ಆಗದು. ಇದೇ ಬೇರೆಯದ್ದೇ ಸಿನಿಮಾ. ಇದು ಕೂಡ ನಗಿಸುತ್ತದೆ ಎನ್ನುವುದೇನೋ ನಿಜವಾದರೂ, ದಿಕ್ಕಾಪಾಲಾದ ಕತೆ, ಚೆಲ್ಲಾಪಿಲ್ಲಿ ಎನಿಸುವ ನಿರೂಪಣೆಯೇ ಇಲ್ಲಿ ಬೋರು, ಬೇಜಾರು.
ಇದೊಂದು ಸಿಂಪಲ್ ಕತೆ. ವಯಸ್ಸಾದ ತಂದೆ ಸಾಯುವ ಹೊತ್ತಲ್ಲಿ ಅಣ್ಣ-ತಮ್ಮಂದಿರ ನಡುವೆ ಆಸ್ತಿ ಕಲಹ ಶುರುವಾಗುತ್ತದೆ. ಆಸ್ತಿ ಕಲಹದಿಂದ ಆ ಮನೆಯ ಹಿರಿಯ ಮಗ (ಮಂಜುನಾಥ್ ಹೆಗಡೆ) ಮತ್ತು ಸೊಸೆ (ಅರುಣ
ಬಾಲರಾಜ್). ಆ ಹೊತ್ತಿಗೆ ಅವರಿಗಿದ್ದ ನಾಲ್ಕು ಗಂಡು ಮಕ್ಕಳು ಅವರಿಂದ ದೂರವಾಗಿ ದಿಕ್ಕಾಪಾಲಾಗಿರುತ್ತಾರೆ. ಕೊನೆಗೆ ಅವರೆಲ್ಲ ಹೇಗೆ ಒಂದಾಗುತ್ತಾರೆ, ತಮ್ಮ ಪೋಷಕರನ್ನು ಹೇಗೆ ಕಾಪಾಡುತ್ತಾರೆನ್ನುವುದು ಚಿತ್ರದ ಕತೆಯ ಒಂದು ಎಳೆ. ಅಸಲಿಗೆ ಈ ಕತೆ ತೆರೆದುಕೊಳ್ಳುವುದು ಫಸ್ಟ್‌ಹಾಫ್ ಮುಗಿಯುವ ಹೊತ್ತಿಗೆ. ಅಲ್ಲಿಯತನಕ ಶರಣ್, ತಬಲ ನಾಣಿ, ರವಿಶಂಕರ್ ಅವರದ್ದೇ ಹಾಸ್ಯೋತ್ಸವ. ಆಮೇಲೆ ಅವರಿಗೆ ಜತೆಯಾದವರು ಸಾಧು ಕೋಕಿಲ.
ಚಂದ್ರುನ ಮೊದಲ ರಾತ್ರಿಯ ಪ್ರಸಂಗದೊಂದಿಗೆ ಶುರುವಾಗುವ ಹಾಸ್ಯದ ಜರ್ನಿಗೆ ತಿರುವುಗಳ ಮೇಲೆ ತಿರುವುಗಳಿವೆ. ಕತೆಯ ಉದ್ದಕ್ಕೂ ಅಚ್ಚರಿ ಮೂಡಿಸುತ್ತಾ ಹೋಗುವ ನಿರ್ದೇಶಕರು, ಪ್ರತಿ ತಿರುವುಗಳಲ್ಲಿ ಶರಣ್ ಅವತಾರಗಳನ್ನು ಸೃಷ್ಟಿಸುತ್ತಾರೆ. ಅದೂ ನಾಲ್ಕು ಅವತಾರಗಳು. ಇದೇ ಮೊದಲ ಬಾರಿಗೆ ಶರಣ್ ಇಂತಹ ಪ್ರಯತ್ನದಲ್ಲಿ ಕಾಣಿಸಿಕೊಂಡಿದ್ದು, ಎಲ್ಲಾ ಅವತಾರಗಳಲ್ಲೂ ಪ್ರೇಕ್ಷಕರ ಮೆಚ್ಚಿಕೊಳ್ಳುವಂತೆ ಮಾಡುತ್ತಾರೆನ್ನುವುದು ವಿಶೇಷ. ಶರಣ್ ಅಭಿನಯದ ಅಷ್ಟೂ ಅವತಾರಗಳ ಮೂಲಕ ರವಿಶಂಕರ್, ಸಾಧುಕೋಕಿಲ ಸ್ತ್ರೀ ವೇಷಧಾರಿಗಳಾಗಿ ನಗಿಸುತ್ತಾರೆ.
ಈ ಚಿತ್ರದ ತಾರಾಗಣವೇ ಚಿತ್ರದ ಶಕ್ತಿ ಮತ್ತು ಗೆಲುವು.ಶರಣ್, ರವಿಶಂಕರ್, ಸಾಧುಕೋಕಿಲ, ತಬಲಾ ನಾಣಿ ನಗಿಸಲೆಂದೇ ಇರುವವರಂತೆ ಇದ್ದಾರೆ. ಅವರ ನಟನೆ ಮತ್ತು ಡೈಲಾಗ್ ಡೆಲಿವರಿ ಚಿತ್ರದ ಆಸ್ತಿ. ಸ್ತ್ರೀ ಪಾತ್ರಗಳಲ್ಲಿ ನಿಜ ಸ್ತ್ರೀ ಕಲಾವಿದರಿಗೆ ಸೆಡ್ಡು ಹೊಡೆಯುವ ಹಾಗೆ ನಟಿಸಿದ್ದಾರೆ. ಈ ಚಿತ್ರದ ಮತ್ತೊಂದು ಶಕ್ತಿ ಕಚಗುಳಿಯಿಡುವ ರಾಜಶೇಖರ್ ಅವರ ಸಂಭಾಷಣೆ ಮತ್ತು ಅರ್ಜುನ್ ಜನ್ಯಾ ಸಂಗೀತ. ಅದರಾಚೆ ಇಲ್ಲಿ ಕೊಂಚ ಕತೆಯೂ ಗೌಣವಾಗುತ್ತದೆ. ಇನ್ನೇನೋ ಬೇಕಿತ್ತು ಎನ್ನುವುದು ಮರೆತು ಹೋಗಿ, ನಗುವಿನ ಅಲೆಯೇ ಹೆಚ್ಚು ರಂಜಿಸುತ್ತಾ ಹೋಗುತ್ತದೆ.
ಗುರುಪ್ರಶಾಂತ್ ರೈ ಕ್ಯಾಮರಾದ ಜತೆಗೆ ಪ್ರತಿ ಸನ್ನಿವೇಶದ ಕಾಸ್ಟ್ಯೂಮ್ ಕಲರ್‌ಫುಲ್ ಆಗಿದೆ. ಒಂದಷ್ಟು ಕೊರತೆಗಳ ನಡುವೆಯೂ ನಿರ್ದೇಶಕ ಹಿರಿ ಸಂತು ಕಾಮಿಡಿ ಸಿನಿಮಾ ಕೂಡ ಮಾಡ ಬಲ್ಲರು ಎನ್ನುವ ಸಣ್ಣದೊಂದು ಭರವಸೆ ಹುಟ್ಟಿಸುತ್ತದೆ ಈ ಸಿನಿಮಾ.
ಚಿತ್ರ: ವಿಕ್ಟರಿ 2
ತಾರಾಗಣ: ಶರಣ್, ಅಪೂರ್ವ, ಅಶ್ಮಿತಾ ಸೂದ್, ರವಿಶಂಕರ್, ಸಾಧುಕೋಕಿಲ, ಕಲ್ಯಾಣಿ, ತಬಲ ನಾಣಿ
ನಿರ್ದೇಶನ: ಹರಿ ಸಂತು
ಸಂಗೀತ: ಅರ್ಜುನ್ ಜನ್ಯ
ಛಾಯಾಗ್ರಾಹಣ: ಗುರುಪ್ರಶಾಂತ್ ರೈ
ರೇಟಿಂಗ್: ***
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Nov 3, 2018, 10:21 AM IST