‘ಕೆಲವು ಸ್ಕ್ರಿಪ್ಟ್‌ಗಳನ್ನು ನಾವು ಆರಿಸುತ್ತೇವೆ. ಇನ್ನು ಕೆಲವು ಸಂದರ್ಭಗಳಲ್ಲಿ ಸ್ಕ್ರಿಪ್ಟ್‌ಗಳು ನಮ್ಮನ್ನು ಆರಿಸುತ್ತವೆ. ಕೆಜಿಎಫ್ ಚಿತ್ರ ನಮ್ಮನ್ನು ಆರಿಸಿಕೊಂಡಿತು. ಹಿಂದಿಯಲ್ಲಿ ಈ ಸಿನಿಮಾ ವಿತರಿಸುವುದಕ್ಕೆ ನಮಗೆ ಖುಷಿ ಇದೆ. ಕೆಜಿಎಫ್ ಅದ್ಭುತ ಕತೆ ಮತ್ತು ಸುಂದರವಾದ ವಿಶುವಲ್ಸ್ ಹೊಂದಿದೆ. ನಾನೂ ಯಶ್ ಥರ ಗಡ್ಡ ಬಿಡಬೇಕು ಅಂದುಕೊಂಡಿದ್ದೇನೆ.’

ಈ ಮಾತು ಹೇಳಿದ್ದು ಬಾಲಿವುಡ್‌ನ ಯಶಸ್ವಿ ನಟ, ನಿರ್ಮಾಪಕ ಫರ್ಹಾನ್ ಅಖ್ತರ್. ಹಿಂದಿಯ ಎರಡನೇ ಟ್ರೈಲರ್ ಬಿಡುಗಡೆ ಮಾಡಿದ ಸಂದರ್ಭದಲ್ಲಿ ಫರ್ಹಾನ್ ಅವರು ಕೆಜಿಎಫ್, ಯಶ್ ಮತ್ತು ಚಿತ್ರತಂಡವನ್ನು ಮೆಚ್ಚಿಕೊಂಡರು. ಇಂಟರೆಸ್ಟಿಂಗ್ ಅಂದ್ರೆ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಈ ಟ್ರೈಲರ್ 1 ಮಿಲಿಯನ್ ಹಿಟ್ಸ್ ಪಡೆದುಕೊಂಡಿದೆ. ಅಲ್ಲಿಗೆ ಬಾಲಿವುಡ್‌ನಲ್ಲಿ ಯಶ್ ಹವಾ ಶುರುವಾಗಿಬಿಟ್ಟಿದೆ.

ಎಲ್ಲೆಲ್ಲೂ ‘ಸಲಾಂ ರಾಕಿ ಭಾಯ್’ ಸದ್ದು...ಯುಟ್ಯೂಬ್‌ನಲ್ಲಿ ಕೆಜಿಎಫ್‌ ಕಮಾಲ್!

ಪ್ರಮೋಷನ್ ಕಾರ್ಯಕ್ರಮದ ಭಾಗವಾಗಿಯೇ ಚಿತ್ರದ ನಾಯಕ ನಟ ಯಶ್, ನಾಯಕಿ ಶ್ರೀನಿಧಿ ಶೆಟ್ಟಿ, ನಿರ್ಮಾಪಕ ವಿಜಯ್ ಕಿರಗಂದೂರು ಎರಡು ದಿನಗಳ ಕಾಲ ಮುಂಬೈನಲ್ಲಿದ್ದರು. ಈ ಕುರಿತು ಮಾತನಾಡಿದ ಹೊಂಬಾಳೆ ಫಿಲ್ಮ್ಸ್‌ನ ಕಾರ್ತಿಕ್ ಗೌಡ, ‘ಬಾಲಿವುಡ್ ನಟರಂತೆಯೇ ಯಶ್ ಅವರನ್ನು ಮುಂಬೈಯಲ್ಲಿ ಸ್ವಾಗತಿಸಲಾಯಿತು. ಅದು ನಮಗೆ ದೊಡ್ಡ ಬಲ ನೀಡಿತು’ ಎನ್ನುತ್ತಾರೆ.

ಕೆಜಿಎಫ್ ಮುಂಬೈನಲ್ಲಿ ಎಷ್ಟು ಚಿತ್ರಮಂದಿರಗಳಲ್ಲಿ ತೆರೆ ಕಾಣುತ್ತಿದೆ ಎನ್ನುವುದು ಇನ್ನು ನಿಖರವಾಗಿಲ್ಲ. ಆದರೆ ಚಿತ್ರಕ್ಕೆ ಈಗಲೇ ಭಾರೀಬೇಡಿಕೆ ಬಂದಿದೆ ಎನ್ನುವ ಮಾತನ್ನು ವಿತರಕ ಫರ್ಹಾನ್ ಅಖ್ತರ್ಹೇಳಿಕೊಂಡಿದ್ದಾರೆ. ಸದ್ಯಕ್ಕೀಗ ಸಿಕ್ಕಿರುವ ರೆಸ್ಪಾನ್ಸ್ ನೋಡಿದರೆ, ಮುಂಬೈನಲ್ಲಿ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ‘ಕೆಜಿಎಫ್’ ತೆರೆ ಕಾಣುವುದು ಗ್ಯಾರಂಟಿ. ಅದರಾಚೆ, ಪುಣೆ, ನಾಸಿಕ್ ಸೇರಿದಂತೆ ದೇಶದ ಉಳಿದ ಮಹಾ ನಗರಗಳಲ್ಲೂ ಬೇಡಿಕೆ ಇದೆ. ಅಲ್ಲೆಲ್ಲಚಿತ್ರಮಂದಿರಗಳೂ ಈಗಷ್ಟೇ ಕನ್‌ಫರ್ಮ್ ಆಗುತ್ತಿವೆ ಎನ್ನುವ ಮಾಹಿತಿ ಅಲ್ಲಿನ ವಿತರಕ ಸಂಸ್ಥೆಯಿಂದ ಸಿಕ್ಕಿರುವುದಾಗಿ ಚಿತ್ರತಂಡ ಹೇಳುತ್ತಿದೆ.