‘ಮುಂಗಾರು ಮಳೆ ೨’ನಂತರ ನಿಜಕ್ಕೂ ಏನಾಯ್ತು?

ಅದು ನನ್ನ ಮೊದಲ ಸಿನಿಮಾ. ನಾಯಕಿ ನೇಹಾ ಶೆಟ್ಟಿ ಆಗಿದ್ದರೂ ಅಲ್ಲಿ ನನಗೂ ಸಿಕ್ಕಿದ್ದು ನಟನೆಗೆ ಅವಕಾಶ ಇರುವಂತಹ ಪಾತ್ರವೇ. ಅದಕ್ಕೆ ಒಳ್ಳೆಯ ರೆಸ್ಪಾನ್ಸ್ ಕೂಡ ಸಿಕ್ಕಿತ್ತು. ಆ ಮೂಲಕ ಒಂದಷ್ಟು ಆಫರ್ ಸಿಗಬಹುದು ಎನ್ನುವ ನಿರೀಕ್ಷೆಯೂ ಇತ್ತು. ಅದ್ಯಾಕೋ ಅದೃಷ್ಟ ಕೈ ಕೊಟ್ಟಿತು. ಕಾಲಿವುಡ್‌ಗೆ ಹೋದೆ. ಮಲಯಾಳಂನಲ್ಲಿ ಎರಡು ಸಿನಿಮಾ ಮಾಡಿದೆ. ತೆಲುಗಿನಲ್ಲೂ ‘ಕಾಶಿ’ ಹೆಸರಿನ ಸಿನಿಮಾದಲ್ಲಿ ಕಾಣಿಸಿಕೊಂಡೆ.

ಅದು ಸರಿ, ವಾಪಸ್ ಕನ್ನಡಕ್ಕೆ ಬಂದಿದ್ದು ಹೇಗೆ ?

ಕಲಾವಿದರಿಗೆ ಯಾವುದೇ ಭಾಷೆ, ಗಡಿ ರೇಖೆಗಳಿಲ್ಲ. ಅವಕಾಶಗಳು ಎಲ್ಲಿ ಇರುತ್ತೋ ಅಲ್ಲಿ ಬ್ಯುಸಿ ಆಗುವುದು ಸಹಜ. ಆದ್ರೂ, ಅಂತೂ ನಮ್ಮೂರಿಗೆ ಬಂದೆ ಅಂತ ಖುಷಿ ಆಗಿದೆ. ತಮಿಳು, ತೆಲುಗು ಹಾಗೂ ಮಲಯಾಳಂನಲ್ಲಿ ನಾನು ಅಭಿನಯಿಸಿದ ಸಿನಿಮಾಗಳನ್ನು ನೋಡಿಯೇ ‘ನೀವು ಕರೆ ಮಾಡಿದ ಚಂದದಾರರು’ ಚಿತ್ರದ ನಿರ್ದೇಶಕ ಮೋನಿಸ್ ಆಫರ್ ಕೊಟ್ಟರು. ಅಲ್ಲಿಂದ ಈಗ ಒಂದಾದ ಮೇಲೊಂದು ಅವಕಾಶಗಳು ಸಿಗುತ್ತಿವೆ.

‘ಸ್ಟ್ರೈಕರ್’ ಚಿತ್ರದ ಆಫರ್ ಬಂದಿದ್ದು ಹೇಗೆ, ಅಲ್ಲಿ ನಿಮ್ಮ ಕ್ಯಾರೆಕ್ಟರ್ ಎಂಥದ್ದು?

ಈ ಸಿನಿಮಾದಲ್ಲಿ ನಾನು ಅಭಿನಯಿಸಿದ್ದಕ್ಕೆ ಕಾರಣ ಚಿತ್ರದ ನಾಯಕ ನಟ ಪ್ರವೀಣ್ ತೇಜ್. ಕತೆ ಥ್ರಿಲ್ಲರ್ ಜಾನರ್ ಇಷ್ಟ ಆಯ್ತು. ಆ ತನಕ ನಾನು ಅಂತಹ ಕತೆಯಲ್ಲಿ ಆ ರೀತಿ ಯ ಪಾತ್ರ ಮಾಡಿರಲಿಲ್ಲ. ಚಿತ್ರದಲ್ಲಿ ನಾನು ನಾಯಕಿ ಅನ್ನೋದು ನಿಜ, ಆದ್ರೆ ತುಂಬಾ ಕಡಿಮೆ ಅವಧಿಯಲ್ಲಿ ಬಂದು ಹೋಗುವ ಪಾತ್ರ.

ನೀವು ಒಳ್ಳೆಯ ಕ್ರೀಡಾಪಟು ಅಂತೆ, ಹೌದಾ?

ಅಥ್ಲಿಟ್ ಹಾಗೂ ವಾಲಿಬಾಲ್ ನನ್ನ ನೆಚ್ಚಿನ ಕ್ರೀಡೆ. ದೈಹಿಕವಾಗಿ ನಾನಿಷ್ಟು ಫಿಟ್ ಆಗಿದ್ದೇನೆಂದರೆ ಅದಕ್ಕೆ ಮೂಲ ಕಾರಣವೇ ಸ್ಪೋರ್ಟ್ಸ್ ಹುಚ್ಚು. ಕಾಲೇಜು ದಿನಗಳಲ್ಲಿ ಬೆಸ್ಟ್ ವಾಲಿಬಾಲ್ ಪ್ಲೇಯರ್ ಎನ್ನುವ ಪಟ್ಟ ನಂದೇ ಆಗಿತ್ತು. ಆ ಮೂಲಕ ರಾಜ್ಯ ಮತ್ತು ರಾಷ್ಟ ಮಟ್ಟದ ಕ್ರೀಟಾ ಕೂಟಗಳಲ್ಲೂ ಸ್ಪರ್ಧೆ ಮಾಡಿದ್ದೇನೆ.

ಈಗ ಒಪ್ಪಿಕೊಂಡ ಸಿನಿಮಾಗಳು, ಬರುತ್ತಿರುವ ಆಫರ್ ಹೇಗಿವೆ?

ವಿಕ್ಕಿ ವರುಣ್ ಕಾಂಬಿನೇಷ್‌ನಲ್ಲಿ ರಂಗ ಬಿಇ ಎಂಟೆಕ್ ಚಿತ್ರಕ್ಕೆ ನಾನು ನಾಯಕಿ. ಈಗ ಅದಕ್ಕೆ ಚಿತ್ರೀಕರಣ ನಡೆಯುತ್ತಿದೆ. ಸರಿ ಸುಮಾರು ಅರ್ಧದಷ್ಟು ಚಿತ್ರೀಕರಣ ಆಗಿದೆ. ಹಾಡುಗಳ ಚಿತ್ರೀಕರಣಕ್ಕೆ ಸುಂದರ ತಾಣಗಳನ್ನು ಹಂಟ್  ಮಾಡುತ್ತಿದ್ದಾರೆ ನಿರ್ದೇಶಕರು. ಅದರ ಜತೆಗೆ ಒಂದೆರೆಡು ಸಿನಿಮಾಗಳ ಮಾತುಕತೆ ನಡೆದಿದೆ. ಫೈನಲ್ ಆಗಿಲ್ಲ.