* ಇದನ್ನು ನಾನು ಒಪ್ಪಿಕೊಂಡಿದ್ದು ವರ್ಷದ ಹಿಂದೆಯೇ. ಆ ಹೊತ್ತಿಗೆ ನಾನು ‘ಕೆಜಿಎಫ್’ ಚಿತ್ರೀಕರಣ ಮುಗಿಸಿಕೊಂಡು ಬಂದಿದ್ದೆ. ಈ ನಿರ್ದೇಶಕರು ಹೇಳಿದ ಕತೆ ಸೊಗಸಾಗಿತ್ತು. ಪಾತ್ರವೂ ಅಷ್ಟೇ ಮುದ್ದಾಗಿತ್ತು. ಒಂದೊಳ್ಳೆ ಅವಕಾಶ ಅಂತ ಒಪ್ಪಿಕೊಂಡೆ. ಆದರೆ ಸೆಟ್ಗೆ ಹೋದಾಗ ಆ ಚಿತ್ರದಲ್ಲಿ ಮತ್ತೊಬ್ಬರು ನಾಯಕಿ ಇದ್ದಾರೆ ಅಂತ ಗೊತ್ತಾಯಿತು. ಯಾಕೋ ಬೇಡ ಎನಿಸುತ್ತಿತ್ತು, ಆದರೂ ನಾನೊಬ್ಬ ಕಲಾವಿದೆ. ಬೇಸರ ಪಟ್ಟುಕೊಳ್ಳಲಿಲ್ಲ. ಕೊಟ್ಟ ಅವಕಾಶವನ್ನು ಪ್ರಾಮಾಣಿಕವಾಗಿ ನಿಭಾಯಿಸಿದ್ದೇನೆ ಎನ್ನುವ ಖುಷಿಯಿದೆ.

* ‘ಕೆಜಿಎಫ್’ ನನ್ನ ಪಾಲಿಗೆ ಅದೃಷ್ಟದ ಅವಕಾಶ. ಸಾಮಾನ್ಯವಾಗಿ ಯುವ ನಟಿಯರು ವಯಸ್ಸಿಗೆ ಮೀರಿದ ಪಾತ್ರಗಳಲ್ಲಿ ಅಭಿನಯಿಸಲು ಇಚ್ಚಿಸುವುದಿಲ್ಲ. ಎಲ್ಲಿ ಆ ಪಾತ್ರಗಳಿಗೆ ಬ್ರಾಂಡ್ ಆಗಿ ಬಿಡುತ್ತೆವೋ ಎನ್ನುವ ಭಯ. ಆದರೆ, ಆ ಅವಕಾಶ ಬಂದಾಗ ನನಗೆ ಅಂತಹ ಯಾವುದೇ ಭಯ ಇರಲಿಲ್ಲ. ಪಾತ್ರಕ್ಕಿಂತ ಚಿತ್ರ ತಂಡದ ಮೇಲೆ ವಿಶ್ವಾಸವಿತ್ತು. ಹಾಗಾಗಿಯೇ ನನ್ನ ವಯಸ್ಸಿಗೂ ಮೀರಿದ ಪಾತ್ರಕ್ಕೆ ಬಣ್ಣ ಹಚ್ಚಿದ್ದೆ. ಅದು ಈ ಮಟ್ಟಕ್ಕೆ ಜನರಿಗೆ ತಲುಪುತ್ತೆ, ಪ್ರೇಕ್ಷಕರು ನನ್ನನ್ನು ಗುರುತಿಸುತ್ತಾರೆ ಅಂತಲೂ ಎಣಿಸಿರಲಿಲ್ಲ. ಆದರೆ ಈಗ ನಿರೀಕ್ಷೆಗೂ ಮೀರಿದ ಮೆಚ್ಚುಗೆ, ಪ್ರೀತಿ, ಜನಪ್ರಿಯತೆ ಆ ಪಾತ್ರಕ್ಕೆ ಸಿಕ್ಕಿದೆ. ಎಲ್ಲೇ ಹೋದರು ಜನ ಜನನ್ನು ‘ರಾಕಿ ಬಾಯ್ ಮದರ್’ ಅಂತಲೇ ಕರೆಯುತ್ತಾರೆ. ಆ ಮಟ್ಟಕ್ಕೆ ಆ ಪಾತ್ರ ನನಗೆ ನೇಮ್-ಫೇಮ್ ತಂದುಕೊಟ್ಟಿದೆಯೆಂದರೆ ನಾನು ಧನ್ಯೆ.

* ಒಂದೇ ತರಹದ ಪಾತ್ರಗಳಿಗೆ ಬ್ರಾಂಡ್ ಆಗುವುದು ನಂಗಿಷ್ಟ ಇಲ್ಲ. ಇಷ್ಟಾಗಿಯೂ ನಾನ್ನಿನ್ನು ಯುವ ನಟಿ. ಆ ತರಹದ ಪಾತ್ರ ಮಾಡುವುದಕ್ಕೆ ಇನ್ನು ಬೇಕಾದಷ್ಟು ಸಮಯವಿದೆ. ಮೇಲಾಗಿ ‘ಕೆಜಿಎಫ್’ ಚಾಪ್ಟರ್‌ 2ನಲ್ಲೂ ನಾನೇ ಮದರ್. ಹಾಗಾಗಿ ನಟನೆಗೆ ಹೆಚ್ಚು ಅವಕಾಶ ಇರುವಂತಹ ಬೇರೆ ತರಹದ ಪಾತ್ರಗಳ ಸಿಕ್ಕರೆ ಒಳ್ಳೆಯದು ಅಂತ ಕಾಯುತ್ತಿದ್ದೇನೆ. ಅವಕಾಶಗಳು ಸಾಕಷ್ಟು ಬರುತ್ತಿವೆ. ನಾನು ನಿರೀಕ್ಷಿಸಿದ ಪಾತ್ರಗಳು ಈ ತನಕ ಸಿಕ್ಕಿಲ್ಲ. ಹಾಗಾಗಿ ಯಾವುದೇ ಹೊಸ ಸಿನಿಮಾ ಒಪ್ಪಿಕೊಂಡಿಲ್ಲ .

* ಒಪ್ಪಿಕೊಂಡ ಧಾರಾವಾಹಿಗಳು ಮುಗಿದಿವೆ. ಧಾರವಾಹಿ ಸಾಕು ಅಂದುಕೊಂಡಿದ್ದೇನೆ. ಹೊಸ ಸಿನಿಮಾ ಕೂಡ ಒಪ್ಪಿಕೊಂಡಿಲ್ಲ. ಸದ್ಯಕ್ಕೆ ಕಲರ್ಸ್ ಕನ್ನಡದ ತಕಧಿಮಿತಾ ರಿಯಾಲಿಟಿ ಶೋದಲ್ಲಿದ್ದೇನೆ. ಡಾನ್ಸ್ ನಂಗಿಷ್ಟ. ನಾನು ಭರತ ನಾಟ್ಯನೃತ್ಯಗಾರ್ತಿ. ಹಾಗಾಗಿ ಈ ಅವಕಾಶ ಸಿಕ್ಕಾಗ ಬೇಡ ಎನ್ನಲಿಲ್ಲ. ಅಲ್ಲೂ ಒಳ್ಳೆಯ ರೆಸ್ಪಾನ್ಸ್ ಇದೆ. ಖುಷಿ ಆಗುತ್ತಿದೆ.