ದರ್ಶನ್ ಶಿಷ್ಯ ನಟ ಧನ್ವೀರ್ ಹಾಗೂ ದರ್ಶನ್ ಪತ್ನಿ ವಿಜಯಲಕ್ಷ್ಮಿ ನಡುವಿನ ಗುದ್ದಾಟ ತೀವ್ರಗೊಂಡಿದೆ. ಇದೀಗ ನಟ ಧನ್ವೀರ್ ಕೆರಳಿದ್ದಾರೆ. ನೇರವಾಗಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ವಿರುದ್ಧ ಹೇಳಿಕೆ ನೀಡಿದ್ದಾರೆ. ಇಷ್ಟೇ ಅಲ್ಲ ವಿಜಯಲಕ್ಷ್ಮಿ ಸೇರಿ ನಾಲ್ವರ ವಿರುದ್ದ ದೂರು ನೀಡಿದ್ದಾರೆ.

ಬೆಂಗಳೂರು (ಅ.24) ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲಿನಲ್ಲಿದ್ದರೆ, ಇತ್ತ ದರ್ಶನ್ ಬಿಡುಗಡೆಗೆ ಪತ್ನಿ ವಿಜಯಲಕ್ಷ್ಮಿ ಸೇರಿದಂತೆ ಹಲವರು ಪ್ರಯತ್ನಿಸಿರುವುದು ಗೊತ್ತೆ ಇದೆ. ಆದರೆ ನಟ ದರ್ಶನ್ ಶಿಷ್ಯ ನಟ ಧನ್ವೀರ್ ಸ್ಫೋಟಕ ಹೇಳಿಕೆ ನೀಡಿದ್ದಾರೆ. ನಟ ದರ್ಶನ್ ಬಿಡುಗಡೆಗೆ ಕೆಲವರು ತೋರಿಕೆಗೆ ನಾಟಕ ಮಾಡುತ್ತಿದ್ದಾರೆ. ದರ್ಶನ್ ಬಿಡುಗಡೆ ಅವರಿಗೆ ಬೇಡ ಎಂದು ನಟ ಧನ್ವೀರ್ ಹೇಳಿದ್ದಾರೆ. ಇತ್ತ ವಿಜಯಲಕ್ಷ್ಮಿ, ವಿಜಲಕ್ಷ್ಮಿ ಮ್ಯಾನೇಜರ್ ನಾಗರಾಜ್ ಸೇರಿದಂತೆ ನಾಲ್ವರು ವಿರುದ್ಧ ದೂರು ದಾಖಲಿಸಿದ್ದಾರೆ.

ಏಷ್ಯಾನೆಟ್ ಸುವರ್ಣನ್ಯೂಸ್ ಜೊತೆ ಮಾತನಾಡಿದ ನಟ ಧನ್ವೀರ್, ನಟ ದರ್ಶನ್ ಪ್ರಕರಣದಲ್ಲಿ ಹಲವರು ಡಬಲ್ ಗೇಮ್ ಆಡುತ್ತಿದ್ದಾರೆ. ಈ ಪೈಕಿ ವಿಜಯಲಕ್ಷ್ಮಿ ಅಡ್ಡಾಗಾಲು ಹಾಕುತ್ತಿದ್ದಾರೆ. ಎಫ್ಎಸ್ಎಲ್ ರಿಪೋರ್ಟ್‌ನಲ್ಲಿ ಎಲ್ಲವೂ ಬಯಲಾಗುತ್ತೆ. ದರ್ಶನ್ ಭೇಟಿಗೆ ನನಗೆ ಅವಕಾಶ ನೀಡುತ್ತಿಲ್ಲ. ನನ್ನ ಮನೆಗೆ ರೌಡಿಗಳನ್ನು ವಿಜಯಲಕ್ಷ್ಮಿ ಕಳುಹಿಸಿದ್ದಾರೆ ಎಂದು ಧನ್ವೀರ್ ಹೇಳಿದ್ದಾರೆ. ವಿಜಯಲಕ್ಷ್ಮಿ ನನ್ನ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದಾರೆ ಎಂದು ನೇರವಾಗಿ ವಿಜಯಲಕ್ಷ್ಮಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ದರ್ಶನ್ ಜೈಲಿನಿಂದ ಬಿಡುಗಡೆಗೆ ನಾನು ಪ್ರಯತ್ನಿಸುತ್ತಿದ್ದೇನೆ. ಆದರೆ ವಿಜಯಲಕ್ಷ್ಮಿ ಇದಕ್ಕೆ ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಏಷ್ಯಾನೆಟ್ ಸುವರ್ಣನ್ಯೂಸ್ ಜೊತೆ ಮಾತನಾಡಿದ್ದಾರೆ.

ಧನ್ವೀರ್ ತಂದೆಯಿಂದ ದೂರು ದಾಖಲು

ದರ್ಶನ್ ಪ್ರಕರಣ ಕುರಿತು ಕೋಲಾಹಲ ಸೃಷ್ಟಿಯಾಗಿದೆ. ವಿಜಯಲಕ್ಷ್ಮಿ ಮ್ಯಾನೇಜರ್ ನಿನ್ನೆಯಷ್ಟೇ ಧನ್ವೀರ್ ವಿರುದ್ಧ ದೂರು ನೀಡಿದ್ದರು. ಈ ಕುರಿತು ಬಹಿರಂಗ ಹೇಳಿಕೆ ನೀಡಿದ ಬೆನ್ನಲ್ಲೇ ಇಂದು ಧನ್ವೀರ್ ಮನೆಗೆ ರೌಡಿಗಳನ್ನು ಕಳುಹಿಸಿ ಹಲ್ಲೆಗೆ ಮುಂದಾಗಿದ್ದಾರೆ ಎಂಬ ಗಂಭೀರ ಆರೋಪವನ್ನು ಧನ್ವೀರ್ ಮಾಡಿದ್ದಾರೆ. ವಿಜಲಕ್ಷ್ಮಿ ರೌಡಿಗಳಿಗೆ ಕರೆ ಮಾಡಿ ನಮ್ಮ ಮನೆಗೆ ಕಳುಹಿಸಿದ್ದಾರೆ. ಮನೆಗೆ ಬಂದು ಬೆದರಿಕೆ ಹಾಕಿದ್ದಾರೆ ಎಂದು ಧನ್ವೀರ್ ತಂದೆ ದೂರು ನೀಡಿದ್ದಾರೆ.

ಧನ್ವೀರ್ ಜೊತೆ ಮಾತನಾಡಲು ಎಂದು ಬಂದು ಬೆದರಿಕೆ ಹಾಕಿದ್ದಾರೆ ಎಂದು ಧನ್ವೀರ್ ತಂದೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಗೌರವ್ ಶೆಟ್ಟಿ ಎಂಬಾತನ ಮೂಲಕ ರೌಡಿಗಳನ್ನ ಕರೆಸಿರುವ ಆರೋಪ ಮಾಡಿದ್ದಾರೆ. ಗೌರವ್ ಶೆಟ್ಟಿ ಹೆಸರು ಸಾಕ್ಷಿಗಳಿಗೆ ಬೆದರಿಕೆ ಹಾಕಿದ ಪ್ರಕರಣದಲ್ಲೂ ಕೇಳಿಬಂದಿತ್ತು. ಈ ವೇಳೆ ಕಾಮಾಕ್ಷಿಪಾಳ್ಯದಲ್ಲಿ ಗೌರವ್ ಶೆಟ್ಟಿ ವಿರುದ್ದ ದೂರು ದಾಖಲಾಗಿತ್ತು. ಇದೀಗ ಗೌರವ್ ಶೆಟ್ಟಿ ಮೂಲಕ ಇಬ್ಬರು ರೌಡಿಗಳು ಮನೆಗೆ ಬಂದು ಬೆದರಿಕೆ ಹಾಕಿದ್ದಾರೆ ಎಂದು ಧನ್ವೀರ್ ತಂದೆ ರಾರಾಜಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ದರ್ಶನ್ ಪತ್ನಿ ವಿಜಯಲಕ್ಷ್ಮಿ ಸೇರಿ ನಾಲ್ವರ ವಿರುದ್ಧ ದೂರು ದಾಖಲು ಮಾಡಲಾಗಿದೆ. ವಿಜಯಲಕ್ಷ್ಮಿ, ನಾಗರಾಜ್, ಭೋಜ, ಬಟಾಲಿ ಪ್ರಮೋದ್ ವಿರುದ್ದ ದೂರು ನೀಡಿದ್ದಾರೆ. ಪ್ರಕರಣ ಇದೀಗ ತಾರಕಕ್ಕೇರಿದೆ. ಒಂದೆಡೆ ಬಹಿರಂಗ ಹೇಳಿಕೆಗಳು ನಟ ದರ್ಶನ್ ಪ್ರಕರಣದಲ್ಲಿ ಮುಳುವಾಗುತ್ತಿದೆ. ಇದೀಗ ವಿಜಯಲಕ್ಷ್ಮಿ ವಿರುದ್ಧವೇ ಗಂಭೀರ ಆರೋಪಗಳನ್ನು ನಟ ಧನ್ವೀರ್ ಮಾಡಿದ್ದಾರೆ. ನಟ ದರ್ಶನ್ ಪರ ಹೇಳಿಕ ನೀಡುತ್ತಾ, ಜೈಲಿನಲ್ಲಿ ದರ್ಶನ್ ಭೇಟಿಯಾಗಿ ಮಾತನಾಡುತ್ತಿದ್ದ ಧನ್ವೀರ್ ಇದೀಗ ದರ್ಶನ್ ಪತ್ನಿ ವಿಜಯಲಕ್ಷ್ಮಿ ವಿರುದ್ಧವೇ ತಿರುಗಿ ಬಿದ್ದಿದ್ದಾರೆ. ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದೆ.