ನಟ ದರ್ಶನ್ ಕುಟುಂಬ ಹಾಗೂ ನಟ ಧನ್ವೀರ್ ನಡುವಿನ ವೈಯಕ್ತಿಕ ಭಿನ್ನಾಭಿಪ್ರಾಯ ತೀವ್ರಗೊಂಡಿದ್ದು, ದರ್ಶನ್ ಜೈಲಿನಿಂದ ಹೊರಬರುವುದು ಪತ್ನಿ ವಿಜಯಲಕ್ಷ್ಮಿಗೆ ಇಷ್ಟವಿಲ್ಲ ಎಂಬ ಆಡಿಯೋ ವೈರಲ್ ಆಗಿದೆ. ಇದರ ಬೆನ್ನಲ್ಲೇ ಧನ್ವೀರ್ ವಿರುದ್ಧ ಬಸವೇಶ್ವರನಗರ ಠಾಣೆಯಲ್ಲಿ ಬೆದರಿಕೆ ದೂರು ದಾಖಲಾಗಿದ್ದು, ಎರಡೂ ಕಡೆಯಿಂದ ಆರೋಪ-ಪ್ರತ್ಯಾರೋಪಗಳು ಮುಂದುವರಿದಿವೆ.

ಬೆಂಗಳೂರು: ಸ್ಯಾಂಡಲ್‌ವುಡ್ ನಟ ದರ್ಶನ್ ತೂಗುದೀಪ ಕುಟುಂಬ ಹಾಗೂ ನಟ ಧನ್ವೀರ್ ಗೌಡ ನಡುವಿನ ವೈಯಕ್ತಿಕ ಭಿನ್ನಾಭಿಪ್ರಾಯಗಳ ಸಮರ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಇದೀಗ ಧನ್ವೀರ್ ಸ್ನೇಹಿತ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ತುಣುಕೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ತೀವ್ರ ಚರ್ಚೆ ಹುಟ್ಟುಹಾಕಿದೆ. ಮತ್ತೊಂದು ಕಡೆ ಧನ್ವೀರ್ ವಿರುದ್ಧ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಬೆದರಿಕೆ ದೂರು ದಾಖಲಾಗಿದೆ.

ದರ್ಶನ್ ಪರ ನಿಂತಿದ್ದಕ್ಕೆ ಧನ್ವೀರ್‌ಗೆ ಸಂಕಷ್ಟ

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಅನಾಮಿಕ ವ್ಯಕ್ತಿಯೊಂದಿಗಿನ ಆಡಿಯೋ ಸಂಭಾಷಣೆಯಲ್ಲಿ, ಧನ್ವೀರ್ ಸ್ನೇಹಿತ ಎನ್ನಲಾದ ವ್ಯಕ್ತಿಯೊಬ್ಬರು ನೀಡಿರುವ ಹೇಳಿಕೆಗಳು ಚಿತ್ರರಂಗದಲ್ಲಿ ಸಂಚಲನ ಮೂಡಿಸಿವೆ. ನಟ ದರ್ಶನ್ ಜೈಲಿನಿಂದ ಹೊರಬರುವುದು ಸ್ವತಃ ಅವರ ಪತ್ನಿ ವಿಜಯಲಕ್ಷ್ಮಿ ಅವರಿಗೇ ಇಷ್ಟವಿಲ್ಲ ಎಂಬ ಅರ್ಥದಲ್ಲಿ ಫೋನ್ ಸಂಭಾಷಣೆ ನಡೆದಿದ್ದು, ಇದು ಚರ್ಚೆಯನ್ನು ಹುಟ್ಟುಹಾಕಿದೆ.

ಅಲ್ಲದೆ, ಸುಮಾರು ಒಂದೂವರೆ ಲಕ್ಷ ರೂಪಾಯಿ ಮೌಲ್ಯದ ಸಣ್ಣ ಕಾರು ಪ್ರಕರಣವೊಂದರಲ್ಲಿ ನಟ ಧನ್ವೀರ್ ಅವರನ್ನು ಬೇಕೆಂದೇ ಸಿಲುಕಿಸುವ ವ್ಯವಸ್ಥಿತ ಸಂಚು ನಡೆಯುತ್ತಿದೆ. ನಟ ದರ್ಶನ್ ಪರವಾಗಿ ಆರಂಭದಿಂದಲೂ ಧನ್ವೀರ್ ಗಟ್ಟಿಯಾಗಿ ನಿಂತಿದ್ದರಿಂದ, ಅವರನ್ನು ದರ್ಶನ್ ಅವರಿಂದ ದೂರವಿಡಲು ಮತ್ತು ಅವರ ಹೋರಾಟವನ್ನು ತಡೆಯಲು ಈ ರೀತಿ ಹುನ್ನಾರ ನಡೆಸಲಾಗುತ್ತಿದೆ ಎಂದು ಆಡಿಯೋದಲ್ಲಿ ಹೇಳಲಾಗಿದೆ. ಆದರೆ, ಈ ಕಾರಿಗೂ ಧನ್ವೀರ್ ಅವರಿಗೂ ಯಾವುದೇ ನೇರ ಸಂಬಂಧವಿಲ್ಲ ಎಂಬ ಮಾಹಿತಿಯೂ ಆಡಿಯೋದಲ್ಲಿ ಉಲ್ಲೇಖವಾಗಿದೆ.

ಬಸವೇಶ್ವರನಗರ ಠಾಣೆಯಲ್ಲಿ ಮತ್ತೊಂದು ದೂರು

ಇತ್ತ ವಿವಾದದ ಕಾವು ಏರುತ್ತಿದ್ದಂತೆಯೇ ನಟ ಧನ್ವೀರ್ ವಿರುದ್ಧ ಭೋಜರಾಜ ರೈ ಎಂಬುವವರು ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಎನ್‌ಸಿಆರ್ ದಾಖಲಿಸಿಕೊಂಡಿದ್ದಾರೆ. ಭೋಜರಾಜ ರೈ ನೀಡಿದ ದೂರಿನಲ್ಲಿ ವಿಜಯಲಕ್ಷ್ಮಿ ಅವರ ಮ್ಯಾನೇಜರ್ ನಾಗರಾಜ್ ನನಗೆ ಕರೆ ಮಾಡಿ, ರಾಜಾಜಿನಗರದಲ್ಲಿರುವ ನಟ ಧನ್ವೀರ್ ಮನೆಗೆ ಬರುವಂತೆ ತಿಳಿಸಿದ್ದರು. ನಾನು ಅಲ್ಲಿಗೆ ತೆರಳಿ ನಾಗರಾಜ್ ಅವರನ್ನು ನನ್ನ ಕಾರಿನಲ್ಲಿ ಕರೆದುಕೊಂಡು ಬಂದಿದ್ದೆ. ಆದರೆ, ಆ ನಂತರ ಧನ್ವೀರ್ ನಂಬರ್‌ನಿಂದ ನನ್ನ ಮೊಬೈಲ್‌ಗೆ ಬೆದರಿಕೆ ಸಂದೇಶಗಳು ಬಂದಿವೆ. 'ನೀನಿರುವ ಲೊಕೇಶನ್ ಕಳುಹಿಸು' ಎಂದು ಧನ್ವೀರ್ ಬೆದರಿಕೆ ಹಾಕಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಆರೋಪ - ಪ್ರತ್ಯಾರೋಪ

ವಿಶೇಷವೆಂದರೆ, ನಿನ್ನೆ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ಧನ್ವೀರ್ ತಂದೆ ತಿಮ್ಮೇಗೌಡ ಅವರು ವಿಜಯಲಕ್ಷ್ಮಿ ಹಾಗೂ ಅವರ ಬೆಂಬಲಿಗರ ವಿರುದ್ಧ ದೂರು ನೀಡಿದ್ದರು. ವಿಜಯಲಕ್ಷ್ಮಿ ಅವರು ಕೆಲ ವ್ಯಕ್ತಿಗಳೊಂದಿಗೆ ಮನೆಗೆ ಬಂದು ಗಲಾಟೆ ಮಾಡಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದರು. ಈ ದೂರು ದಾಖಲಾದ ಬೆನ್ನಲ್ಲೇ, ಈಗ ಭೋಜರಾಜ ರೈ ಅವರು ಧನ್ವೀರ್ ವಿರುದ್ಧ ಹೊಸ ದೂರು ದಾಖಲಿಸಿರುವುದು ಪ್ರಕರಣವನ್ನು ಇನ್ನಷ್ಟು ಗಂಭೀರಗೊಳಿಸಿದೆ.

ದರ್ಶನ್ ಕುಟುಂಬದ ಅತ್ಯಂತ ಆಪ್ತ ವಲಯದಲ್ಲಿದ್ದ ಧನ್ವೀರ್ ಹಾಗೂ ವಿಜಯಲಕ್ಷ್ಮಿ ಬೆಂಬಲಿಗರ ನಡುವಿನ ಈ ಸಂಘರ್ಷ ಹಾಗೂ ಆಡಿಯೋ ಬಾಂಬ್‌ಗಳು ಗಾಂಧಿನಗರದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿವೆ. ಪೊಲೀಸರು ಎರಡೂ ಕಡೆಯ ದೂರುಗಳನ್ನು ಆಧರಿಸಿ ತನಿಖೆ ಮುಂದುವರಿಸಿದ್ದಾರೆ.