ಹಲವು ಭಾಷೆಗಳ 900ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದ ಡಿಸ್ಕೋ ಶಾಂತಿ ಈಗ ಹೇಗಿದ್ದಾರೆ? ಅವರ ಹುಟ್ಟುಹಬ್ಬದ ಝಲಕ್ ಇಲ್ಲಿದೆ...
'ಸಿನಿಮಾಕ್ಕೆ ಅಗತ್ಯಬಿದ್ದರೆ ಸಿದ್ಧ...' ಎನ್ನುತ್ತಲೇ ಸಂಪೂರ್ಣ ದೇಹ ಪ್ರದರ್ಶನ ಮಾಡಲು ರೆಡಿ ಇರುವ ಕೆಲವು ನಟಿಯರು ಈಗ ಕಾಣಸಿಗುತ್ತಾರೆ, ಇನ್ನು ತುಂಡುಡುಗೆಯ ನಟಿಯರಂತೂ ಹೇಳುವುದೇ ಬೇಡ. ಅಗತ್ಯವಿಲ್ಲದಿದ್ದರೂ ಧಾರಾಳವಾಗಿ ಹೋದಲ್ಲಿ, ಬಂದಲ್ಲಿ ದೇಹ ಪ್ರದರ್ಶನ ಮಾಡುತ್ತಲೇ ಇರುತ್ತಾರೆ. ಆದರೆ ಮಾನ-ಮರ್ಯಾದೆ, ನಾಚಿಕೆ-ಅಂಜಿಕೆ ಎಂದು ಉಳಿಸಿಕೊಂಡಿದ್ದ ಕೆಲ ದಶಕಗಳ ಹಿಂದೆ, ಬೋಲ್ಡ್ ಆಗಿ ನಟಿಸಿ ಆಗಿನ ಕಾಲದ ಪಡ್ಡೆಗಳ ನಿದ್ದೆ ಕದ್ದವರು ನಟಿ ಡಿಸ್ಕೋ ಶಾಂತಿ. ಅಂದು ದೇಹ ಪ್ರದರ್ಶನ ಮಾಡುವುದಕ್ಕಾಗಿಯೇ, ಐಟಂ ಸಾಂಗ್ನಲ್ಲಿ ನಟಿಸುವುದಕ್ಕಾಗಿಯೇ ಬೆರಳೆಣಿಕೆ ನಟಿಯರು ಇದ್ದರು. ಹಾಗೆಂದು ಆ ನಟಿಯರು ಕೂಡ ಒಳಗಡೆ ಮೈಬಣ್ಣದ ಉಡುಪನ್ನು ತೊಟ್ಟಿಕೊಳ್ಳುತ್ತಿದ್ದರು. ಅಂಥ ನಟಿಯರ ಪೈಕಿ ಡಿಸ್ಕೋ ಶಾಂತಿ 1980 ರಿಂದ 1990ರವರೆಗೆ ಚಿತ್ರರಂಗವನ್ನು ಆಳಿದವರು. ಕನ್ನಡ ಮಾತ್ರವಲ್ಲದೇ ತಮಿಳು, ತೆಲುಗು, ಮಲಯಾಳಂ, ಹಿಂದಿ, ಓರಿಯಾ ಭಾಷೆಗಳಲ್ಲಿಯೂ ಕಾಣಿಸಿಕೊಂಡು 900ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿರುವ ಡಿಸ್ಕೋ ಶಾಂತಿಯನ್ನು ಈಗ ಜನರು ಮರೆತೇ ಬಿಟ್ಟಿದ್ದಾರೆ!
ಅಷ್ಟಕ್ಕೂ ಬಣ್ಣದ ಲೋಕವೇ ಹಾಗಲ್ಲವೆ? ಸುದ್ದಿಯಲ್ಲಿ ಇದ್ದರಷ್ಟೇ ಕಿಮ್ಮತ್ತು. ಇಲ್ಲದಿದ್ದರೆ ಅವರನ್ನು ನೋಡುವವರೇ ಇಲ್ಲ. ಅದೆಷ್ಟೋ ನಟ-ನಟಿಯರು ತಮ್ಮ ಜೀವನದ ಕೊನೆಗಾಲದಲ್ಲಿ ಅನಾಥ ಶವವಾಗಿರುವುದು ಇದೆ, ಬೀದಿ ಹೆಣವಾಗಿರುವುದೂ ಇದೆ. ಅನಾರೋಗ್ಯದಿಂದ ಬಳಲುತ್ತಿರುವಾಗ ಹಣಕ್ಕಾಗಿ ಪರದಾಡಿ, ಒಬ್ಬರೂ ನೋಡುವವರು ಇಲ್ಲದೇ ಉಸಿರು ಚೆಲ್ಲದವರೂ ಇದ್ದಾರೆ. ಕೆಲವು ತಾರೆಯರು ಮಾತ್ರ ಚಿತ್ರರಂಗದಿಂದ ದೂರವಾಗಿ ಸುಂದರ ಸಂಸಾರ ನಡೆಸುತ್ತಿದ್ದಾರೆ, ಕೆಲವರು ಒಂಟಿಯಾಗಿ ಬದುಕುತ್ತಿದ್ದಾರೆ. ಅಂಥವರಲ್ಲಿ ಒಬ್ಬರು ಡಿಸ್ಕೋ ಶಾಂತಿ. 60 ವರ್ಷ ವಯಸ್ಸಿನ ಡಿಸ್ಕೋ ಶಾಂತಿಯವರು ಈಚೆಗೆ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಅದರ ವಿಡಿಯೋ ವೈರಲ್ ಆಗಿದೆ. ಇದರಲ್ಲಿ ಶಾಂತಿ ಅವರನ್ನು ನೋಡಿದರೆ ಅಬ್ಬಾ ನಿಜಕ್ಕೂ ಇವರು ಅವರೇನಾ ಎಂದು ಎನ್ನಿಸುವುದು ಉಂಟು.
ಇನ್ನು ನಟಿಯ ಕುರಿತು ಹೇಳುವುದಾದರೆ, 1996ರಲ್ಲಿ ಡಿಸ್ಕೋ ಶಾಂತಿ ತೆಲುಗು ನಟ ಶ್ರೀಹರಿಯನ್ನು ಮದುವೆಯಾಗಿ, ಸಿನಿಮಾಗಳಲ್ಲಿ ನಟಿಸುವುದನ್ನು ಬಿಟ್ಟುಬಿಟ್ಟರು. ಈ ದಂಪತಿಗೆ ಎರಡು ಗಂಡು ಮಕ್ಕಳು ಮತ್ತು ಒಬ್ಬಳು ಮಗಳಿದ್ದಳು. ಆದರೆ ಮಗಳು ಅಕ್ಷರಾ ಹುಟ್ಟಿ ನಾಲ್ಕು ತಿಂಗಳಿಗೆ ತೀರಿಕೊಂಡಳು. ಇವಳ ನೆನಪಿನಲ್ಲಿ ಶಾಂತಿ ಕುಟುಂಬ ಅಕ್ಷರಾ ಫೌಂಡೇಶನ್ ಸ್ಥಾಪಿಸಿ ಆ ಮೂಲಕ ಹಳ್ಳಿಗಳಿಗೆ ಶುದ್ಧ ನೀರು ಮತ್ತು ಶಾಲೆಗೆ ಬೇಕಾದ ಸೌಕರ್ಯ ನೀಡುವ ಕೆಲಸ ಮಾಡುತ್ತಿದೆ. ಮೆಡ್ಚಲ್ ಎಂಬ ಪ್ರದೇಶದಲ್ಲಿನ ನಾಲ್ಕು ಹಳ್ಳಿಗಳನ್ನು ಡಿಸ್ಕೋ ಶಾಂತಿ ಕುಟುಂಬ ದತ್ತು ಪಡೆದಿದೆ. ಆದರೆ ಇದಕ್ಕೂ ಮುನ್ನ ಅಂದರೆ, 2013ರಲ್ಲಿ ಅವರ ಪತಿ ಶ್ರೀಹರಿ, ಹೃದಯಾಘಾತಕ್ಕೀಡಾಗಿ ಸಾವನ್ನಪ್ಪಿದಾಗ ನಟಿ ಜರ್ಜರಿತರಾಗಿ ಹೋದರು. ಇದಕ್ಕೂ ಮೊದಲು ಭಾವನನ್ನು ಕಳೆದುಕೊಂಡಿದ್ದರು ನಟಿ.
ಈ ಎರಡು ಸಾವುಗಳನ್ನು ನಟಿಗೆ ಅರಗಿಸಿಕೊಳ್ಳಲಾಗಲಿಲ್ಲ. ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಗಂಡನನ್ನು ಮರೆಯಲಾರದ ಶಾಂತಿ, ಕುಡಿತಕ್ಕೆ ಶರಣಾಗಿಬಿಟ್ಟರಯ, ಮನೆ, ಮಕ್ಕಳು ಯಾವುದರ ಬಗ್ಗೆಯೂ ಗಮನವಿಲ್ಲದೇ, ಮೂರು ಹೊತ್ತು ಕುಡಿತ, ಕುಡಿತ. ನಂತರ ಮಕ್ಕಳು ಅಮ್ಮನ ಬಳಿ ಅಂಗಲಾಚಿದಾಗ ತಮ್ಮ ತಪ್ಪು ಅರಿವಾಯಿತು ಶಾಂತಿ ಅವರಿಗೆ. ಕುಡಿತ ಬಿಟ್ಟರು.ಕೊನೆಗೆ, ಈ ಮಧ್ಯೆ ಹೈದರಾಬಾದ್ ಸಮೀಪ ಮೆಡ್ಚಲ್‌ನ ಸುತ್ತಮುತ್ತ ಅನೇಕ ಹಳ್ಳಿಗಳನ್ನು ದತ್ತು ಪಡೆದು, ಅಭಿವೃದ್ಧಿ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಶಾಂತಿ. ಮಕ್ಕಳಾದ ಮೇಘಶ್ಯಾಂ ಮತ್ತು ಶಶಾಂಕ್ ಅಮ್ಮನ ಬೆನ್ನಿಗೆ ನಿಂತಿದ್ದಾರೆ.
