‘ವಾರಣಾಸಿ’ ಸಿನಿಮಾದ ಕಥೆಯ ಬಗ್ಗೆ ನಿರ್ದೇಶಕ ಎಸ್‌ಎಸ್ ರಾಜಮೌಳಿ ಮಹತ್ವದ ಸುಳಿವು ನೀಡಿದ್ದಾರೆ. ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ ಮತ್ತು ಪೃಥ್ವಿರಾಜ್ ಸುಕುಮಾರನ್ ನಟನೆಯ ಈ ಸಿನಿಮಾ ಸೈನ್ಸ್‌ಫಿಕ್ಷನ್ ಅಲ್ಲ.

ಎಸ್‌ಎಸ್ ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ ‘ವಾರಣಾಸಿ’ ಸಿನಿಮಾ ಈಗಾಗಲೇ ಭಾರೀ ಹೈಪ್ ಸೃಷ್ಟಿಸಿದೆ. ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ ಹಾಗೂ ಪೃಥ್ವಿರಾಜ್ ಸುಕುಮಾರನ್ ಅವರ ಕಾಂಬಿನೇಷನ್‌ನ ಈ ಸಿನಿಮಾದ ಪ್ರತಿಯೊಂದು ಅಪ್‌ಡೇಟ್‌ಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಈ ನಡುವೆ ಸ್ವತಃ ರಾಜಮೌಳಿ ಅವರೇ ‘ವಾರಣಾಸಿ’ ಚಿತ್ರದ ಕಥೆಯ ಎಳೆಯ ಬಗ್ಗೆ ಒಂದಷ್ಟು ಕುತೂಹಲಕಾರಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಬ್ರೆಜಿಲ್‌ನಲ್ಲಿ ನಡೆದ 50ನೇ ಸಾವೊ ಪಾಲೊ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾಗವಹಿಸಿ ಪ್ರತಿಷ್ಠಿತ ಪ್ರಶಸ್ತಿ ಸ್ವೀಕರಿಸಿದ ರಾಜಮೌಳಿ, ಅಲ್ಲಿಯೇ ‘ವಾರಣಾಸಿ’ ಸಿನಿಮಾದ ಚಿತ್ರೀಕರಣ ಹಾಗೂ ಕಥೆಯ ಕುರಿತು ಮಾತನಾಡಿದ್ದಾರೆ. ಸಿನಿಮಾ ಚಿತ್ರೀಕರಣ ಬಹುತೇಕ ಅಂತಿಮ ಹಂತಕ್ಕೆ ತಲುಪಿದ್ದು, ಇನ್ನೂ ಸುಮಾರು 10 ದಿನಗಳಲ್ಲಿ ಶೂಟಿಂಗ್ ಪೂರ್ಣಗೊಳ್ಳಲಿದೆ ಎಂದು ತಿಳಿಸಿದ್ದಾರೆ.

ಒಂದೇ ಕಥೆಯಲ್ಲಿ ಆರು-ಏಳು ಸಿನಿಮಾಗಳ ಅನುಭವ!

‘ವಾರಣಾಸಿ’ ಸಿನಿಮಾ ಮಾಡುವ ಸಂದರ್ಭದಲ್ಲಿ ಎದುರಾದ ದೊಡ್ಡ ಸವಾಲಿನ ಬಗ್ಗೆಯೂ ರಾಜಮೌಳಿ ಮಾತನಾಡಿದ್ದಾರೆ. ಆರು ಅಥವಾ ಏಳು ವಿಭಿನ್ನ ಸಿನಿಮಾಗಳ ರೀತಿಯ ಕಥಾ ಅಂಶಗಳನ್ನು ಒಂದೇ ಸಿನಿಮಾದಲ್ಲಿ ಹೆಣೆದು ಒಂದು ಸಮಗ್ರ ಕಥೆಯಾಗಿ ರೂಪಿಸುವುದು ಅತ್ಯಂತ ಸವಾಲಿನ ಕೆಲಸವಾಗಿತ್ತು ಎಂದು ಹೇಳಿದ್ದಾರೆ.

ಹಾಗಾದರೆ ‘ವಾರಣಾಸಿ’ ಚಿತ್ರದ ಅಸಲಿ ಕಥೆ ಏನು?

ರಾಜಮೌಳಿ ನೀಡಿರುವ ಸುಳಿವಿನ ಪ್ರಕಾರ, ನೋವು ಹಾಗೂ ಸಂಘರ್ಷದಿಂದ ದೂರವಾಗಿರುವ ತಂದೆ-ಮಗನ ಸಂಬಂಧ ಮತ್ತೆ ಹೇಗೆ ಒಂದಾಗುತ್ತದೆ ಎಂಬ ಭಾವನಾತ್ಮಕ ಅಂಶದ ಸುತ್ತ ಚಿತ್ರದ ಕಥೆ ಸಾಗಲಿದೆ. ಇದರ ಜೊತೆಗೆ ಒಂದು ಸುಂದರವಾದ ಪ್ರೇಮಕಥೆಯೂ ಸಿನಿಮಾದ ಪ್ರಮುಖ ಆಕರ್ಷಣೆಯಾಗಿರಲಿದೆ ಎಂದು ಅವರು ತಿಳಿಸಿದ್ದಾರೆ.

ಇದು ಸೈನ್ಸ್‌ಫಿಕ್ಷನ್ ಅಲ್ಲ; ಮಿಥಾಲಾಜಿಕಲ್ ಫ್ಯಾಂಟಸಿ!

‘ವಾರಣಾಸಿ’ ಸಿನಿಮಾ ಸೈನ್ಸ್‌ಫಿಕ್ಷನ್ ಚಿತ್ರ ಎಂಬ ಮಾತುಗಳು ಈ ಹಿಂದೆ ಕೇಳಿಬಂದಿದ್ದವು. ಆದರೆ ಇದೀಗ ರಾಜಮೌಳಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಇದು ಸೈನ್ಸ್‌ಫಿಕ್ಷನ್ ಸಿನಿಮಾ ಅಲ್ಲ. ರಾಮಾಯಣದ ಹಿನ್ನೆಲೆಯೊಂದಿಗೆ ಬೆಸೆದುಕೊಂಡಿರುವ ಅದ್ಧೂರಿ ಮಿಥಾಲಾಜಿಕಲ್ ಫ್ಯಾಂಟಸಿ ಸಿನಿಮಾ ಎಂದು ಅವರು ಹೇಳಿದ್ದಾರೆ. ಇದೇ ಕಾರಣಕ್ಕೆ ಚಿತ್ರದ ಕಥೆ ಹಾಗೂ ಜಗತ್ತು ಪ್ರೇಕ್ಷಕರಲ್ಲಿ ಮತ್ತಷ್ಟು ಕುತೂಹಲ ಮೂಡಿಸಿದೆ. ಪೌರಾಣಿಕ ಅಂಶಗಳು, ಫ್ಯಾಂಟಸಿ ಲೋಕ ಹಾಗೂ ಭಾವನಾತ್ಮಕ ಕಥಾಹಂದರವನ್ನು ರಾಜಮೌಳಿ ತಮ್ಮದೇ ಶೈಲಿಯಲ್ಲಿ ಹೇಗೆ ತೆರೆಮೇಲೆ ಕಟ್ಟಿಕೊಡಲಿದ್ದಾರೆ ಎಂಬ ನಿರೀಕ್ಷೆ ಹೆಚ್ಚಾಗಿದೆ.

ಮಹೇಶ್ ಬಾಬು ಪಾತ್ರವೇನು? ರಾಜಮೌಳಿ ಕೊಟ್ಟ ಸುಳಿವು!

ಚಿತ್ರದಲ್ಲಿ ಮಹೇಶ್ ಬಾಬು ‘ರುದ್ರ’ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದ್ದು, ಶ್ರೀರಾಮನ ಪಾತ್ರದಲ್ಲಿಯೂ ಅವರು ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಪ್ರಿಯಾಂಕಾ ಚೋಪ್ರಾ ‘ಮಂದಾಕಿನಿ’ ಪಾತ್ರದಲ್ಲಿ ಹಾಗೂ ಪೃಥ್ವಿರಾಜ್ ಸುಕುಮಾರನ್ ‘ಕುಂಭ’ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಆಫ್ರಿಕಾದಿಂದ ಅಂಟಾರ್ಕ್ಟಿಕಾ, ಉಗರ್‌ಬತಿ ಗುಹೆಗಳಿಂದ ವಾರಣಾಸಿವರೆಗೆ ಸಾಗುವ ಕಥೆಯಲ್ಲಿ ಟೈಮ್ ಟ್ರಾವೆಲ್ ಅಂಶಗಳೂ ಇರಲಿವೆ ಎನ್ನಲಾಗಿದೆ. ಸಿನಿಮಾದಲ್ಲಿರುವ ಪ್ರತಿಯೊಂದು ಎಪಿಸೋಡ್ ಕೂಡ ಒಂದೊಂದು ಪ್ರತ್ಯೇಕ ಸಿನಿಮಾದ ಅನುಭವ ನೀಡುವಷ್ಟು ಅದ್ಧೂರಿಯಾಗಿರಲಿದೆ ಎಂಬ ಸುಳಿವನ್ನು ರಾಜಮೌಳಿ ನೀಡಿದ್ದಾರೆ.

ಚಿತ್ರೀಕರಣ ಮುಗಿಯಲು ಇನ್ನು 10 ದಿನ ಮಾತ್ರ!

ಸದ್ಯ ‘ವಾರಣಾಸಿ’ ಚಿತ್ರದ ಶೂಟಿಂಗ್ ಅಂತಿಮ ಹಂತದಲ್ಲಿದೆ. ಇನ್ನೂ ಸುಮಾರು 10 ದಿನಗಳಲ್ಲಿ ಚಿತ್ರೀಕರಣ ಪೂರ್ಣಗೊಳ್ಳಲಿದೆ ಎಂದು ರಾಜಮೌಳಿ ತಿಳಿಸಿದ್ದಾರೆ. ಜೊತೆಗೆ ಈ ಸಿನಿಮಾವನ್ನು ಬ್ರೆಜಿಲ್‌ನಲ್ಲಿಯೂ ಖಂಡಿತವಾಗಿ ಬಿಡುಗಡೆ ಮಾಡುವುದಾಗಿ ಸ್ಪಷ್ಟಪಡಿಸಿದ್ದಾರೆ. ಆದರೆ ಸಿನಿಮಾ ಬಿಡುಗಡೆ ದಿನಾಂಕದ ವಿಚಾರದಲ್ಲಿ ಮಾತ್ರ ರಾಜಮೌಳಿ ಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ. ಏಪ್ರಿಲ್ 7 ಎಂಬ ದಿನಾಂಕದ ಬಗ್ಗೆ ಕೇಳಿದಾಗಲೂ ನಿಖರವಾಗಿ ಉತ್ತರಿಸದೆ ‘ಅದಷ್ಟು ಬೇಗ’ ಎಂದು ಹೇಳಿ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.

ಇನ್ನು ‘ವಾರಣಾಸಿ’ ಸೈನ್ಸ್‌ಫಿಕ್ಷನ್ ಅಲ್ಲ, ರಾಮಾಯಣದ ಹಿನ್ನೆಲೆಯ ಮಿಥಾಲಾಜಿಕಲ್ ಫ್ಯಾಂಟಸಿ ಸಿನಿಮಾ ಎಂಬ ರಾಜಮೌಳಿ ಅವರ ಮಾತುಗಳು ಇದೀಗ ಸಿನಿಪ್ರೇಮಿಗಳ ಗಮನ ಸೆಳೆದಿವೆ. ತಂದೆ-ಮಗನ ಭಾವನಾತ್ಮಕ ಸಂಬಂಧ, ಪ್ರೇಮಕಥೆ, ಪೌರಾಣಿಕ ಹಿನ್ನೆಲೆ, ಟೈಮ್ ಟ್ರಾವೆಲ್ ಮತ್ತು ಅದ್ಧೂರಿ ಫ್ಯಾಂಟಸಿ ಜಗತ್ತು. ಇವೆಲ್ಲವೂ ಒಂದೇ ಸಿನಿಮಾದಲ್ಲಿ ಹೇಗೆ ಮೂಡಿಬರಲಿದೆ ಎಂಬುದೇ ಸದ್ಯದ ದೊಡ್ಡ ಕುತೂಹಲ.