ಜಯಪ್ರಕಾಶ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಬನ’ ತುಳು ಸಿನಿಮಾ ಪ್ರೇಕ್ಷಕರಿಂದ ಭರ್ಜರಿ ಮೆಚ್ಚುಗೆ ಪಡೆಯುತ್ತಿದೆ. ಮಂಗಳೂರಿನಲ್ಲಿ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿರುವ ಚಿತ್ರಕ್ಕೆ ವಿವಿಧ ವರ್ಗದ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಪತ್ರಕರ್ತ ಜಯಪ್ರಕಾಶ್‌ ಶೆಟ್ಟಿ ಅವರು ಪ್ರಮುಖ ಪಾತ್ರದಲ್ಲಿ ನಟಿಸಿರುವ ತುಳು ಭಾಷೆಯ ‘ಬನ’ ಚಿತ್ರವು ಹೌಸ್‌ಫುಲ್‌ ಪ್ರದರ್ಶನ ಕಾಣುತ್ತಿದೆ. ವಾರ ಮಧ್ಯಮದಲ್ಲೂ ಮಂಗಳೂರಿನ ಭಾರತ್‌ ಸಿನಿಮಾಸ್‌ನಲ್ಲಿ ಹೌಸ್‌ಫುಲ್‌ ಆಗುತ್ತಿರುವುದಕ್ಕೆ ಚಿತ್ರತಂಡ ಸಂಭ್ರಮ ವ್ಯಕ್ತಪಡಿಸಿದೆ. ಚಿತ್ರವನ್ನು ನೋಡಿ ಎಲ್ಲಾ ಧರ್ಮದ ಪ್ರೇಕ್ಷಕ ವರ್ಗದ ಜನರು ಮೆಚ್ಚಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ನಟಿಸಿರುವ ಜಯಪ್ರಕಾಶ್‌ ಶೆಟ್ಟಿ ಅವರ ಜೊತೆಗೆ ಫೋಟೋ ತೆಗೆಸಿಕೊಳ್ಳುತ್ತಿರುವುದು ಚಿತ್ರದ ಯಶಸ್ಸಿಗೆ ಸಾಕ್ಷಿ.

ಇತ್ತೀಚೆಗೆ ಮಂಗಳೂರಿನ ಭಾರತ್‌ ಮಾಲ್‌ನಲ್ಲಿ ಎಂಐಟಿಇ ಕಾಲೇಜಿನ ವಿದ್ಯಾರ್ಥಿಗಳು ಒಟ್ಟಿಗೆ ‘ಬನ’ ಚಿತ್ರವನ್ನು ನೋಡಿ ಮೆಚ್ಚಿಕೊಂಡಿದ್ದಾರೆ. ಈ ಕುರಿತು ಮಾತನಾಡಿದ ಜಯಪ್ರಕಾಶ್‌ ಶೆಟ್ಟಿ, ‘ನಮ್ಮ ಬನ ಚಿತ್ರವನ್ನು ಎಂಐಟಿಇ ಕಾಲೇಜಿನ ವಿದ್ಯಾರ್ಥಿಗಳು ಸಿನಿಮಾ ನೋಡಿ ಮೆಚ್ಚುಗೆ ಮಾತುಗ‍ಳನ್ನು ಆಡಿದರು. ನನ್ನ ಜೊತೆಗೆ ಫೋಟೋ ತೆಗೆಸಿಕೊಂಡು ಸಂಭ್ರಮಿಸಿದರು. ಇದು ನನಗೆ ವಿಶೇಷ ಅನುಭವ ಮತ್ತು ನಮ್ಮ ಚಿತ್ರದ ಯಶಸ್ಸಿಗೆ ಸಾಕ್ಷಿ.

ಭಾವನೆಗಳ ಸಂಗಮ

ಅದರಲ್ಲೂ ಮುಸ್ಲಿಂ ವಿದ್ಯಾರ್ಥಿಗಳು ಕೂಡ ಸಿನಿಮಾ ನೋಡಿ ನನ್ನ ಜೊತೆಗೆ ಫೋಟೋ ತೆಗೆಸಿಕೊಂಡಿದ್ದು ಮೊದಲು. ಬುಕ್‌ ಮೈ ಶೋನಂತಹ ಪ್ರತಿಷ್ಠಿತ ಆನ್‌ಲೈನ್‌ ಪ್ಲಾಟ್‌ಫಾರಂನಲ್ಲಿ ನಮ್ಮ ಚಿತ್ರಕ್ಕೆ 10ಕ್ಕೆ 10 ರೇಟಿಂಗ್‌ ಕೊಟ್ಟಿದ್ದಾರೆ. ಆ ಮೂಲಕ ಸಿನಿಮಾ ಎಲ್ಲಾ ವರ್ಗದ ಜನರಿಗೆ ಕನೆಕ್ಟ್‌ ಆಗುತ್ತಿದೆ. ತುಳು ಚಿತ್ರರಂಗದಲ್ಲಿ ಹೊಸ ನಿರೀಕ್ಷೆ ಮೂಡಿಸಿರುವ ‘ಬನ’ ತುಳು ಸಿನಿಮಾ ಅಕ್ಟೋಬರ್‌ 23ರಂದು ತೆರೆಕಂಡಿತ್ತು. ‘ಬನ’ ಕೇವಲ ಸಿನಿಮಾವಲ್ಲ, ಭಾವನೆಗಳ ಸಂಗಮ.

ಆಡಂಬರವಿಲ್ಲದ ಸರಳ ನಿರೂಪಣೆ, ಮನಮುಟ್ಟುವ ಕಥೆ, ಸಹಜ ಅಭಿನಯ, ಸುಂದರ ಸಂಗೀತ ಹಾಗೂ ಹಿನ್ನೆಲೆ ಸಂಗೀತ ಚಿತ್ರದ ಪ್ರಮುಖ ಆಕರ್ಷಣೆಗಳಾಗಿವೆ. ಕಥೆಯೇ ನಿಜವಾದ ನಾಯಕನಾಗಿ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತದೆ. ಸಿನಿಮಾದ ಪ್ರತಿಯೊಂದು ಸನ್ನಿವೇಶವೂ ಪ್ರೇಕ್ಷಕರ ಮನಸ್ಸಿನಲ್ಲಿ ಭಾವನೆಗಳನ್ನು ಮೂಡಿಸುವಂತೆ ರೂಪುಗೊಂಡಿದೆ. ವಿಶೇಷವಾಗಿ ಚಿತ್ರದ ಅಂತ್ಯ ಪ್ರೇಕ್ಷಕರ ಮನಸ್ಸಿನಲ್ಲಿ ದೀರ್ಘಕಾಲ ಉಳಿಯುವ ಅನುಭವ ನೀಡುತ್ತದೆ’ ಎನ್ನುತ್ತಾರೆ.

ಉತ್ತಮ ಉದಾಹರಣೆ

‘ನಮ್ಮ ಚಿತ್ರಕ್ಕೆ ಎಲ್ಲ ಧರ್ಮಗಳ ಬಂಧುಗಳಿಂದಲೂ ಪ್ರೀತಿ, ಪ್ರೋತ್ಸಾಹ ಮತ್ತು ಮೆಚ್ಚುಗೆ ವ್ಯಕ್ತವಾಗುತ್ತಿರುವುದು ವಿಶೇಷ. ಭಾಷೆ ಮತ್ತು ಧರ್ಮದ ಗಡಿಗಳನ್ನು ಮೀರಿ ಒಂದು ಒಳ್ಳೆಯ ಕತೆ ಜನರನ್ನು ಹೇಗೆ ಒಗ್ಗೂಡಿಸಬಲ್ಲದು ಎಂಬುದಕ್ಕೆ ಈ ಚಿತ್ರ ಉತ್ತಮ ಉದಾಹರಣೆಯಾಗಿದೆ. ತುಳು ಸಂಸ್ಕೃತಿ, ಮಾನವೀಯ ಭಾವನೆಗಳು ಹಾಗೂ ಕುಟುಂಬದ ಸಂಬಂಧಗಳನ್ನು ಒಳಗೊಂಡಿರುವ ‘ಬನ’ ಚಿತ್ರತಂಡದ ಪ್ರಯತ್ನಕ್ಕೆ ಪ್ರೇಕ್ಷಕರಿಂದ ದೊರೆಯುತ್ತಿರುವ ಬೆಂಬಲ ಹೊಸ ಹುರುಪು ನೀಡಿದೆ.

ಒಳ್ಳೆಯ ಕಥೆಗಳನ್ನು ಪ್ರೀತಿಸುವ ಪ್ರತಿಯೊಬ್ಬರೂ ಚಿತ್ರಮಂದಿರಕ್ಕೆ ಭೇಟಿ ನೀಡಿ ‘ಬನ’ ಚಿತ್ರವನ್ನು ವೀಕ್ಷಿಸಿ, ಚಿತ್ರತಂಡವನ್ನು ಪ್ರೋತ್ಸಾಹಿಸಿ’ ಎಂಬುದು ಜಯಪ್ರಕಾಶ್‌ ಶೆಟ್ಟಿ ಅವರ ಮನವಿ. ಮನೋರ್‌ ರೈ ವೈಪಾಲ ನಿರ್ಮಾಣದ, ನಿತಿನ್‌ ರೈ ಕುಕ್ಕುವಳ್ಳಿ ನುಳಿಯಾಲು ನಿರ್ದೇಶನದ ಈ ಚಿತ್ರದಲ್ಲಿ ರೂಪಿಕಾ ವರ್ಕಾಡಿ, ನಿಹಾಲ್‌ ರೈ, ಕೃತಿ ಶ್ರೀನಿವಾಸನ್‌ ಪೂಜಾರಿ, ಶರತ್‌ ಆಳ್ವ, ಪ್ರಿಯಾ ಶೆಟ್ಟಿ, ವಿಜಯಹರಿ ರೈ ಮುಂತಾದವರು ನಟಿಸಿದ್ದಾರೆ.