ಬೆಂಗಳೂರು (ಜು. 21): ಅವರು ವಜ್ರಮುನಿ, ನಮ್ಮದು ‘ವಜ್ರುಮುನಿ’. ಹೆಸರಿನಲ್ಲಿರೋ ವ್ಯತ್ಯಾಸ ತಿಳಿಯದೆ ಸುಖಾಸುಮ್ಮನೆ ಯಾಕೆ ವಿವಾದ ಮಾಡುತ್ತಾರೋ ಗೊತ್ತಿಲ್ಲ. - ಹೀಗೆ ಕೊಂಚ ಸಿಟ್ಟು ಮತ್ತು ಅಸಮಾಧಾನದಿಂದಲೇ ಮಾತನಾಡಿದ್ದು ಭರತ್ ಚಕ್ರವರ್ತಿ.

ಇವರು ‘ವಜ್ರುಮುನಿ’ ಹೆಸರಿನ ನಿರ್ದೇಶಕ. ಈ ಹೆಸರಿಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅನುಮತಿ ಕೊಟ್ಟಾಗಿದೆ. ಆದರೂ ವಜ್ರಮುನಿ ಹೆಸರು ಯಾಕೆ ಎಂದು ಸುಮ್ಮನೆ ಗಲಾಟೆ ಮಾಡುತ್ತಿದ್ದಾರೆ ಹೊರತು, ಎರಡೂ ಹೆಸರಿನಲ್ಲಿರೋ ಬದಲಾವಣೆಯನ್ನು ಮಾತ್ರ ಯಾರೂ ಗುರುತಿಸುತ್ತಿಲ್ಲ ಎಂದು ಮೊನ್ನೆಯಷ್ಟೇ ಮಾಧ್ಯಮಗಳ ಮುಂದೆ ಬಂದು ಹೇಳಿಕೊಂಡರು ನಿರ್ದೇಶಕರು. ಆ ಮೂಲಕ ಚಿತ್ರದ ಹೆಸರಿನ ಸುತ್ತ ಎದ್ದಿರುವ ವಿವಾದಕ್ಕೆ ಸ್ಪಷ್ಟೀಕರಣ ಕೊಡುವ ಪ್ರಯತ್ನ ಮಾಡಿದರು.

‘ವಜ್ರಮುನಿ ಕನ್ನಡ ಚಿತ್ರರಂಗ ಕಂಡ ಅದ್ಭುತ ಕಲಾವಿದ ಎಂಬುದು ನಮಗೂ ಗೊತ್ತು. ಅವರ ಹೆಸರಿಟ್ಟುಕೊಂಡು ಸಿನಿಮಾ ಮಾಡುತ್ತಿಲ್ಲ. ಅಥವಾ ಅವರ ಹೆಸರನ್ನು ನಾವು ಬಳಸಿಕೊಳ್ಳುತ್ತಿಲ್ಲ. ನಮ್ಮ ಚಿತ್ರದ ಹೆಸರು ವಜ್ರುಮುನಿ. ವಜ್ರುಮುನೇಶ್ವರ ಸ್ವಾಮಿಯ ಹೆಸರು. ಚಿತ್ರದ ನಾಯಕನ ಅಪ್ಪ, ವಜ್ರುಮುನೇಶ್ವರನ ಪರಮಭಕ್ತರು. ಆ ದೇವರ ಕೃಪೆಯಿಂದ ಜನಿಸುವ ಮಗನಿಗೆ, ‘ವಜ್ರುಮುನಿ’ ಎಂದು ನಾಮಕರಣ ಮಾಡುತ್ತಾರೆ. ಎಲ್ಲರೂ ವಜ್ರು ಅಂತ ಪ್ರೀತಿಯಿಂದ ಕರೆಯುತ್ತಾರೆ. ಹೀಗಾಗಿ ಚಿತ್ರಕ್ಕೆ ವಜ್ರುಮುನಿ ಎಂದು ಹೆಸರಿಟ್ಟಿದ್ದೇವೆ.  ಒಂದು ವೇಳೆ  ಚಿತ್ರದಲ್ಲಿ ಖಳ ನಟ ವಜ್ರಮುನಿ ಅವರ ಕುರಿತಾಗಿ ಏನಾದರು ವಿಷಯ ಇದ್ದರೆ ಖಂಡಿತ ನಾವು ಈ ಚಿತ್ರವನ್ನೇ ಬಿಡುಗಡೆ ಮಾಡಲ್ಲ’ ಎಂದಿದ್ದು ನಿರ್ದೇಶಕ ಭರತ್ ಚಕ್ರವರ್ತಿ.

ಆಷಾಢ ಮುಗಿದ ಬಳಿಕ ಚಿತ್ರೀಕರಣ ಶುರುವಾಗಲಿದೆ. ಚಿತ್ರಕ್ಕೆ ರಾಜ್‌ಗೌತಮ್ ನಾಯಕ. ಮಂಗಳೂರು ಮೂಲದ ರಾಜ್ ಗೌತಮ್ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಆದರೆ, ಇದು ಮೊದಲ ಸಿನಿಮಾ. ರಕ್ಷಿತ್ ಶೆಟ್ಟಿ ತಂಡದಿಂದ ಬಂದಿರುವ ಯಶವಂತ್ ಶೆಟ್ಟಿ, ಹಳ್ಳಿಯಲ್ಲಿರುವ ರಗಡ್ ಹುಡುಗ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಈ ಚಿತ್ರವನ್ನು ನಿರ್ಮಿಸುತ್ತಿರುವ ಸಂಪತ್ ಕೂಡ ರಂಗಭೂಮಿ ಕಲಾವಿದ. ಅವರಿಗೆ ಈ ಚಿತ್ರದ ಕತೆ ಇಷ್ಟವಾಗಿ ನಿರ್ಮಾಪಕರಾಗಿದ್ದಾರೆ. ಬಕ್ಕೇಶ್ ಸಂಗೀತವಿದೆ. ಎಲ್.ಮೋಹನ್ ಛಾಯಾಗ್ರಹಣವಿದೆ ಎಂದು ಚಿತ್ರತಂಡ ಹೇಳಿಕೊಳ್ಳುವಲ್ಲಿಗೆ
‘ವಜ್ರುಮುನಿ’ ಹಾಗೂ ವಜ್ರಮುನಿ ನಡುವಿನ ವ್ಯತ್ಯಾಸ ಹೇಳಿ ವಿವಾದಕ್ಕೆ ತೆರೆ ಎಳೆದರು.