ನಾಗರಹಾವು ಚಿತ್ರದಲ್ಲಿ ದಿಗಂತ್‌ ಹೀರೋ! ಆದರೆ, ಚಿತ್ರ ಬಿಡುಗಡೆಯಾದರೂ ದಿಗಂತ್‌ ಎಲ್ಲೂ ಕಾಣಿಸುತ್ತಲೇ ಇಲ್ಲ. ಚಿತ್ರದ ಪ್ರಚಾರ ಶುರುವಾದಾಗಿನಿಂದಲೂ ದಿಗಂತ್‌ ಹೆಚ್ಚುಕಮ್ಮಿ ನಾಪತ್ತೆಯಾಗಿದ್ದರು. ಚಿತ್ರದ ಯಾವುದೇ ಪೋಸ್ಟರ್‌'ನಲ್ಲೂ ದಿಗಂತ್‌ ಇಲ್ಲ. ಕೆಲ ದಿನಗಳ ಹಿಂದೆಯಷ್ಟೆ ‘ನಾಗರಹಾವು ಚಿತ್ರದ ನಿರ್ಮಾಪಕರು ನಿಗದಿಪಡಿಸಿದ ಸಂಭಾವನೆಯನ್ನು ಪೂರ್ತಿ ಸಂದಾಯ ಮಾಡಿಲ್ಲ' ಎಂದು ಬೇಸರ ತೋಡಿಕೊಂಡಿದ್ದರು. ಈ ಬೇಸರಕ್ಕೆ ನಿರ್ಮಾಪಕರೂ ಉತ್ತರಿಸಿ, ‘ದಿಗಂತ್‌ ಅರೋಪಗಳು ಸುಳ್ಳು' ಎಂದಿದ್ದೆಲ್ಲವೂ ಹಳೇಕತೆ. ಈ ನಾಪತ್ತೆ, ಆ ಸ್ಪಷ್ಟನೆಗಳನ್ನೇ ಮುಂದಿಟ್ಟುಕೊಂಡು ‘ನಾಗರಹಾವು' ಬಿಡುಗಡೆಯಾದ ಮೇಲೆ ದಿಗಂತ್‌'ರನ್ನು ಸಂಪರ್ಕಿಸಿದಾಗ ಅವರು ಹೇಳಿದ್ದಿಷ್ಟು...
‘ನಿಜ ಹೇಳಬೇಕೆಂದರೆ, ನಾನು ನಾಗರಹಾವು ಚಿತ್ರದಲ್ಲಿ ನಟಿಸಿದ್ದೇನೆ ಎಂಬುದಷ್ಟೇ ಗೊತ್ತು. ಇವತ್ತು ಬಿಡುಗಡೆಯಾಗಿದೆ ಅಂತ ಗೊತ್ತಾಯಿತು. ಸಿನಿಮಾ ಹೇಗಿದೆ? ನನ್ನ ಪಾತ್ರ ಯಾವ ರೀತಿ ಮೂಡಿಬಂದಿದೆ? ಇಡೀ ಚಿತ್ರದಲ್ಲಿ ಏನು ಮಾಡಿದ್ದಾರೆ ಅಂತ ನನಗೆ ಗೊತ್ತೇ ಇಲ್ಲ. ನನಗೆ ಕತೆ ಹೇಳಿದ್ದು ಬೇರೆ, ಅವರು ಮಾಡಿದ್ದು ಬೇರೆ ಎಂಬುದಷ್ಟೆನಾನು ಹೇಳಬಲ್ಲೆ. ಆದರೆ, ಒಬ್ಬ ನಟನಾಗಿ ನಾನು ತೋಡಿಕೊಂಡ ಬೇಸರವನ್ನೇ ಬೇರೆ ರೀತಿ ತಿರುಚಿ ‘ವಿಷ್ಣುವರ್ಧನ್‌ ವಿರುದ್ಧ ದಿಗಂತ್‌ ಮಾತನಾಡುತ್ತಿದ್ದಾರೆ. ಇವರೇನು ವಿಷ್ಣುಗಿಂತ ದೊಡ್ಡ ನಟನಾ?' ಎಂದು ನನ್ನ ಮೇಲೆಯೇ ಗೂಬೆ ಕೂರಿಸಲಾಯಿತು. ಅಲ್ಲದೆ ವಿಷ್ಣು ಅಭಿಮಾನಿಗಳನ್ನೂ ನನ್ನ ವಿರುದ್ಧ ಎತ್ತಿ ಕಟ್ಟಿದರು. ನಾನು ಚಿತ್ರದ ಬಗ್ಗೆ ಏನೇ ಮಾತನಾಡಿದರೂ ಹೀಗೆ ವಿಷ್ಣು ಅವರನ್ನು ಮುಂದಿಟ್ಟುಕೊಂಡು ನನ್ನ ಮೇಲೆ ಇಲ್ಲಸಲ್ಲದ ಅರೋಪಗಳನ್ನು ಮಾಡತೊಡಗಿದರು'.
‘ಅಷ್ಟಕ್ಕೂ ನಾನು ವಿಷ್ಣು ಸರ್‌ ಬಗ್ಗೆ ಎಲ್ಲೂ ಮಾತನಾಡಿಯೇ ಇಲ್ಲ. ಚಿತ್ರದ ಪೋಸ್ಟರ್‌ಗಳಲ್ಲಿ ಅವರ ಫೋಟೋ ಬಳಸುವ ವಿಚಾರವಾಗಲೀ, ಗ್ರಾಫಿಕ್ಸ್‌ ಮೂಲಕ ಅವರನ್ನು ಮರು ಸೃಷ್ಟಿಸುವ ಬಗ್ಗೆಯಾಗಲಿ ನನಗೆ ಯಾವ ಅಭ್ಯಂತರವೂ ಇರಲಿಲ್ಲ. ಆದರೆ, ಚಿತ್ರ ಶುರುವಾದಾಗ ಹೇಳಿದ ಕತೆಯನ್ನು ಬದಲಾಯಿಸುವಾಗ ಆ ಬದಲಾವಣೆಗಳನ್ನು ನನ್ನ ಗಮನಕ್ಕೆ ಯಾರೂ ತರಲೇ ಇಲ್ಲ. ಈ ಬಗ್ಗೆ ಆ ಚಿತ್ರದ ನಾಯಕನಾಗಿ ನಾನು ಕೇಳಿದ್ದೇನೆ ಅಷ್ಟೆ. ಆ ನಂತರ ನನ್ನನ್ನು ಚಿತ್ರತಂಡದಿಂದ ದೂರ ಇಟ್ಟರು. ಹೀಗಾಗಿ ಸಿನಿಮಾ ಮುಗಿದ ಮೇಲೆ ಡಬ್ಬಿಂಗ್‌ ಮಾಡುವಾಗಷ್ಟೆನನ್ನ ಪಾತ್ರವನ್ನು ನೋಡಿದ್ದೇನೆ. ಅದೇ ರೀತಿ ಈಗ ಚಿತ್ರದಲ್ಲಿ ಇದೆಯೇ? ಗೊತ್ತಿಲ್ಲ. ಹೋಗ್ಲಿ ಸಿನಿಮಾ ಹೇಗಿದೆ? ಅದೂ ಗೊತ್ತಿಲ್ಲ. ಯಾಕೆಂದರೆ ಸಿನಿಮಾ ಮಾಡುವಾಗ ಹೇಳಿದ ಕತೆ ಬೇರೆ, ಸಿನಿಮಾ ಮುಗಿಯುವ ಹೊತ್ತಿಗೆ ಆದ ಕತೆಯೇ ಬೇರೆ'!
‘ಚಿತ್ರದಿಂದ ನನ್ನನ್ನು ಅವರು ದೂರ ಇಟ್ಟಿದ್ದರೂ ನಾನು ನಾಗರಹಾವು ನೋಡುತ್ತೇನೆ. ನನ್ನ ತಂದೆ, ತಾಯಿ ಜತೆಗೇ ಹೋಗಿ ನೋಡುತ್ತೇನೆ. ಯಾಕೆಂದರೆ ಇದು ನನ್ನ ಸಿನಿಮಾ. ಒಬ್ಬ ನಟನಾಗಿ ನನ್ನ ಚಿತ್ರವನ್ನು ನಾನು ನೋಡುತ್ತೇನೆ. ಚಿತ್ರ ನೋಡಿದ ಮೇಲೆ ಉಳಿದಿದ್ದನ್ನು ಮಾತನಾಡುತ್ತೇನೆ'!

(ಕೃಪೆ: ಕನ್ನಡಪ್ರಭ)