ನಟ ಟೈಗರ್ ಶ್ರಾಫ್ ಮೇಲೆ ನಡೆದ ಗುಂಡಿನ ದಾಳಿಯ ನಂತರ ಅವರ ಎದೆಯ ಮೇಲಿದ್ದ ಬ್ಯಾಂಡೇಜ್ ಕೇವಲ ಎರಡು ದಿನಗಳಲ್ಲಿ ಮಾಯವಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ವಕೀಲರೊಬ್ಬರು ಹಂಚಿಕೊಂಡ ಫೋಟೋದಿಂದ ಈ ವಿಚಾರ ಬಹಿರಂಗವಾಗಿದ್ದು, ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಅಲ್ಲದೆ, ಶೂಟರ್‌ಗಳ ಅಸಲಿ ಟಾರ್ಗೆಟ್ ಬೇರೊಬ್ಬ ವಿಐಪಿ ಆಗಿದ್ದರು ಎಂಬ ಆಘಾತಕಾರಿ ಸತ್ಯ ಪೊಲೀಸ್ ವಿಚಾರಣೆಯಿಂದ ತಿಳಿದುಬಂದಿದೆ.

ಮುಂಬೈ: ಟೈಗರ್ ಶ್ರಾಫ್​ ಮೇಲೆ ಮೊನ್ನೆ ಅರ್ಥಾತ್​ 18ರ ರಾತ್ರಿ ನಡೆದ ಗುಂಡಿನ ದಾಳಿ ಇಡೀ ಸಿನಿಮಾ ಇಂಡಸ್ಟ್ರಿ ಮಾತ್ರವಲ್ಲದೇ ದೇಶವನ್ನೇ ಬೆಚ್ಚಿಬೀಳಿಸಿದೆ. ಟೈಗರ್​ ಶ್ರಾಫ್​ ಅವರ ಎದೆ ಸೇರಿ ಹಲವು ಕಡೆಗಳಲ್ಲಿ ಗುಂಡು ಬಿದ್ದಿರುವುದಾಗಿ ವರದಿಯಾಗಿತ್ತು. ಈ ಸಂಬಂಧ ಬ್ಯಾಂಡೇಜ್​ ಕೂಡ ಹಾಕಲಾಗಿತ್ತು. ಎದೆಯ ಭಾಗ, ಕೈಗೆ ಸೇರಿದಂತೆ ದೇಹದ ಕೆಲವು ಕಡೆಗಳಲ್ಲಿ ಬ್ಯಾಂಡೇಜ್​ ಹಾಕಲಾಗಿತ್ತು. ಘಟನೆ ನಡೆದ ದಿನ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್​, ಉಪ ಮುಖ್ಯಮಂತ್ರಿ ಏಕನಾಥ ಶಿಂಧೆ ಸೇರಿದಂತೆ ಕೆಲವು ಗಣ್ಯರು ನಟನ ಮನೆಗೆ ಭೇಟಿ ಕೊಟ್ಟಾಗ ಆ ಚಿತ್ರಗಳಲ್ಲಿ ಎದೆ ಮೇಲೆ ಸೇರಿದಂತೆ ಕೆಲವು ಕಡೆಗಳಲ್ಲಿ ಗುಂಡು ಬಿದ್ದ ಜಾಗ ಎನ್ನಲಾದ ಕಡೆಗಳಲ್ಲಿ ಬ್ಯಾಂಡೇಜ್​ ಹಾಕಿದ್ದನ್ನು ನೋಡಬಹುದಾಗಿತ್ತು.

ಆದರೆ, ಎರಡೇ ಎರಡು ದಿನಗಳಲ್ಲಿ ಎದೆ ಮೇಲೆ ಗುಂಡು ಬಿದ್ದ ಜಾಗದ ಬ್ಯಾಂಡೇಜ್​ ಮಾಯವಾಗಿರುವ ಫೋಟೋಗಳು ವೈರಲ್​ ಆಗುತ್ತಿದ್ದು, ಇದು ಸಿಕ್ಕಾಪಟ್ಟೆ ಟ್ರೋಲ್​ ಆಗುತ್ತಿದೆ. ಹಾಗಿದ್ರೆ ಟೈಗರ್​ ಶ್ರಾಫ್​ ಎದೆ ಮೇಲೆ ಗುಂಡು ಬಿದ್ದಿದೆ ಎಂದು ಸುಳ್ಳು ಹೇಳಿದ್ರಾ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಸಿನಿಮಾದಲ್ಲಿ ಆ್ಯಕ್ಟ್​ ಮಾಡಿದಂತೆ ನಿಜ ಜೀವನದಲ್ಲಿಯೂ ಚೆನ್ನಾಗಿ ಆ್ಯಕ್ಟ್​ಮಾಡಿದ್ರು ಎಂದೆಲ್ಲಾ ಹೇಳಲಾಗುತ್ತಿದೆ. ಅಸಲಿಗೆ ಏನಾಗಿದೆ ಎನ್ನುವುದು ತಿಳಿದಿಲ್ಲ. ಆದರೆ ವೈರಲ್​ ಆಗ್ತಿರೋ ಫೋಟೋ ನೋಡಿ ಮಾತ್ರ ಎರಡೇ ದಿನಗಳಲ್ಲಿ ಇದು ಹೇಗೆ ಸಾಧ್ಯ ಎಂದು ಪ್ರಶ್ನಿಸುತ್ತಿದ್ದಾರೆ. ಕೈಮೇಲಿನ ಬ್ಯಾಂಡೇಜ್​ ಕೂಡ ಕಾಣಿಸುತ್ತಿಲ್ಲ. ಆದ್ದರಿಂದ ಇದು ಹೇಗೆ ಸಾಧ್ಯ ಎನ್ನುವುದು ಪ್ರಶ್ನೆ.

ವಕೀಲರಿಂದ ಫೋಟೋ ಶೇರ್​

ಅಷ್ಟಕ್ಕೂ, ವಕೀಲ ಆಶಿಶ್​ ಶೆಲಾರ್​ ಅವರು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ನಟನ ಮನೆಗೆ ಭೇಟಿ ಕೊಟ್ಟ ಫೋಟೋಸ್​ಶೇರ್​ ಮಾಡಿಕೊಂಡಿದ್ದಾರೆ. ಜುಹುವಿನಲ್ಲಿ ನಡೆದ ದುರದೃಷ್ಟಕರ ಗುಂಡಿನ ಘಟನೆಯ ನಂತರ ಟೈಗರ್ ಶ್ರಾಫ್ ಅವರನ್ನು ಭೇಟಿ ಮಾಡಿ ಅವರ ಯೋಗಕ್ಷೇಮ ವಿಚಾರಿಸಿದೆ. ಇಂತಹ ಹಿಂಸಾಚಾರಗಳಿಗೆ ನಮ್ಮ ಸಮಾಜದಲ್ಲಿ ಸ್ಥಾನವಿಲ್ಲ. ಅವರಿಗೆ ಶಕ್ತಿ ತುಂಬಿ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ ಎಂದು ಬರೆದುಕೊಂಡಿದ್ದಾರೆ. ಅವರು ತಮ್ಮ ಭೇಟಿಯ ಕೆಲವೊಂದು ಫೋಟೋಗಳನ್ನು ಶೇರ್​ ಮಾಡಿಕೊಂಡಿದ್ದು, ಅದರಲ್ಲಿ ಟೈಗರ್​ ಶ್ರಾಫ್​ ಎದೆ ಮೇಲಿನ ಬ್ಯಾಂಡೇಜೇ ಮಾಯವಾಗಿದ್ದು, ಇದು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿದೆ ಎನ್ನುತ್ತಿದ್ದಾರೆ ನೆಟ್ಟಿಗರು!

ಆರೋಪಿಗಳು ಹೇಳಿದ್ದೇನು?

ಅಸಲಿಗೆ ಶೂಟರ್‌ಗಳು ಮುಂಬೈಗೆ ಬಂದಿದ್ದು ಟೈಗರ್ ಶ್ರಾಫ್‌ಗಾಗಿ ಅಲ್ಲವೇ ಅಲ್ಲ. ಪೊಲೀಸರ ವಿಚಾರಣೆ ವೇಳೆ ಈ ಅಚ್ಚರಿಯ ಸತ್ಯವನ್ನು ಆರೋಪಿಗಳು ಬಾಯ್ಬಿಟ್ಟಿರುವುದಾಗಿಯೂ ವರದಿಯಾಗಿದೆ. ಬಂಧಿತರನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಅಸಲಿ ಕಥೆ ಹೊರಬಿದ್ದಿದೆ. ಮೂವರು ಆರೋಪಿಗಳು ಮುಂಬೈಗೆ ಬಂದಿದ್ದು ಬೇರೊಬ್ಬ ವಿಐಪಿಯನ್ನು ಮುಗಿಸಲು. ಆ ವಿಐಪಿ ಓಡಾಡುವ ಜಾಗಗಳಲ್ಲೆಲ್ಲಾ ಆರೋಪಿಗಳು ಹೊಂಚು ಹಾಕಿ ಕುಳಿತಿದ್ದರು. ಆದರೆ, ಆತನ ಮೇಲೆ ಅಟ್ಯಾಕ್ ಮಾಡುವುದು ಅಷ್ಟು ಸುಲಭವಲ್ಲ ಎಂಬುದು ಇವರಿಗೆ ಅರ್ಥವಾಗಿತ್ತು. ಇದೇ ಗ್ಯಾಪ್‌ನಲ್ಲಿ ಟೈಗರ್ ಶ್ರಾಫ್ ಫ್ಯಾನ್ಸ್ ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿದ್ದ ರೀಲ್ಸ್ ಇವರ ಕಣ್ಣಿಗೆ ಬಿದ್ದಿದೆ. ನಟನಿಗೆ ಯಾವುದೇ ಪೊಲೀಸ್ ಭದ್ರತೆ ಇಲ್ಲ ಎಂಬುದು ರೀಲ್ಸ್ ಮೂಲಕ ಗೊತ್ತಾದ ತಕ್ಷಣ, ತಮ್ಮ ಟಾರ್ಗೆಟ್ ಅನ್ನು ಟೈಗರ್ ಶ್ರಾಫ್ ಕಡೆಗೆ ಶಿಫ್ಟ್ ಮಾಡಿದ್ದಾರೆ ಎಂದು ಪೊಲೀಸ್ ಮೂಲಗಳನ್ನು ಉಲ್ಲೇಖಿಸಿ ಎನ್‌ಡಿಟಿವಿ ವರದಿ ಮಾಡಿದೆ. ಅದರ ಬಗ್ಗೆ ತನಿಖೆ ನಡೆಯಬೇಕಿದೆ ಅಷ್ಟೇ. ಆದರೆ ಈಗ ಬ್ಯಾಂಡೇಜ್​ ಮಾತ್ರ ಪ್ರಶ್ನೆಯಾಗಿಯೇ ಉಳಿದಿದೆ. ಟೈಗರ್ ಶ್ರಾಫ್​ ಗುಟ್ಕಾ ಜಾಹೀರಾತಿಗೆ ಬರುವ ಕಾರಣದಿಂದ ಅದನ್ನು ತಿಂದರೆ ಬೇಗ ಗಾಯ ವಾಸಿಯಾಗ್ತದೆ ಎಂದು ಹಲವರು ನಟನ ಕಾಲೆಳೆಯುತ್ತಿದ್ದಾರೆ. the_quad_news ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಇದನ್ನು ಶೇರ್​ ಮಾಡಲಾಗಿದೆ.