ರಿಲೀಸ್ ಆದ ಮೂರೇ ದಿನದಲ್ಲಿ ವಿಶ್ವಮಟ್ಟದಲ್ಲಿ 500 ಕೋಟಿ ರು. ಕ್ಲಬ್ ಸೇರುವ ಮೂಲಕ ಧುರಂಧರ್ 2 ಹೊಸ ದಾಖಲೆ ಬರೆದಿದೆ. ಸದ್ಯಕ್ಕೀಗ ಸಿನಿಮಾದ ಒಟ್ಟು ಗಳಿಕೆ 505 ಕೋಟಿ ರು.ಗೂ ಅಧಿಕ ಎಂದು ಅಂದಾಜಿಸಲಾಗಿದೆ.
‘ಧುರಂಧರ್ ದಿ ರಿವೆಂಜ್’ ಸಿನಿಮಾ ಬಾಕ್ಸಾಫೀಸ್ ಕೊಳ್ಳೆಹೊಡೆದಿದೆ. ರಿಲೀಸ್ ಆದ ಮೂರೇ ದಿನದಲ್ಲಿ ವಿಶ್ವಮಟ್ಟದಲ್ಲಿ 500 ಕೋಟಿ ರು. ಕ್ಲಬ್ ಸೇರುವ ಮೂಲಕ ಹೊಸ ದಾಖಲೆ ಬರೆದಿದೆ. ಸದ್ಯಕ್ಕೀಗ ಸಿನಿಮಾದ ಒಟ್ಟು ಗಳಿಕೆ 505 ಕೋಟಿ ರು.ಗೂ ಅಧಿಕ ಎಂದು ಅಂದಾಜಿಸಲಾಗಿದೆ. ಸುಮಾರು 340 ಕೋಟಿ ರು.ಗೂ ಅಧಿಕ ಕಲೆಕ್ಷನ್ ಭಾರತದಲ್ಲೇ ಆಗಿದೆ.
ಸದ್ಯ ಈ ಸಿನಿಮಾ ಯಶ್ ನಟನೆಯ ‘ಕೆಜಿಎಫ್ 2’, ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಸಿನಿಮಾಗಳು ಮೂರನೇ ದಿನ ಗಳಿಕೆ ಮಾಡಿದ್ದಕ್ಕಿಂತ ಅಧಿಕ ಮೊತ್ತವನ್ನು ಪೇರಿಸಿದೆ. ರಣವೀರ್ ಸಿಂಗ್ ನಟನೆಯ ಈ ಸಿನಿಮಾದ ಬಗ್ಗೆ ಅವರ ಪತ್ನಿ, ಸ್ಟಾರ್ ನಟಿ ದೀಪಿಕಾ ಪಡುಕೋಣೆ ಮೌನವಾಗಿರುವುದು ಚರ್ಚೆಗೆ ಕಾರಣವಾಗಿದೆ.
‘ಧುರಂಧರ್ 2’ ಗೆ ವಿಶ್ವಾದ್ಯಂತ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಶೀಘ್ರ 1000 ಕೋಟಿ ರು. ಕ್ಲಬ್ ಸೇರುವ ವಿಶ್ವಾಸವಿದೆ. ಈ ಸಿನಿಮಾದ ಮೊದಲ ಭಾಗ ಗಳಿಕೆಯಲ್ಲಿ 1000 ಕೋಟಿ ರು.ಗಳ ಗಡಿ ದಾಟಿತ್ತು. ರಣವೀರ್ ಸಿಂಗ್, ಅರ್ಜುನ್ ರಾಂಪಾಲ್, ಸಂಜಯ್ ದತ್, ರಾಕೇಶ್ ಬೇಡಿ ಮೊದಲಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.
ರಿಷಬ್, ರಿಕ್ಕಿ ಕೇಜ್ ಶ್ಲಾಘನೆ
ಸ್ಟಾರ್ ನಟ ರಿಷಬ್ ಶೆಟ್ಟಿ ‘ಧುರಂಧರ್ 2 ಆರಂಭದಿಂದ ಕೊನೆಯವರೆಗೆ ಪ್ರೇಕ್ಷಕನನ್ನು ಹಿಡಿದಿಟ್ಟುಕೊಳ್ಳುವ ಸಿನಿಮಾ. ಪ್ರತೀ ಫ್ರೇಮ್ ಸಾಕ್ಷಾತ್ ಯುದ್ಧದ ಅನುಭವ ನೀಡುತ್ತದೆ. ಇದು ಸೀಕ್ವಲ್ ಅಲ್ಲ, ಇಲ್ಲಿ ಅದ್ಭುತವೊಂದು ಸೃಷ್ಟಿಯಾಗಿದೆ. ಆದಿತ್ಯ ಧರ್ ಸಿನಿಮಾ ನಿರೂಪಿಸಿದ ಬಗೆ ಅತ್ಯುತ್ತಮ. ಕಟ್ಟಿಕೊಟ್ಟ ಪ್ರತೀ ವಿವರವೂ ಸೊಗಸಾಗಿದೆ’ ಎಂದು ಹಾಡಿಹೊಗಳಿದ್ದಾರೆ. ಗ್ರ್ಯಾಮಿ ಪ್ರಶಸ್ತಿ ವಿಜೇತ ರಿಕ್ಕಿ ಕೇಜ್ ಅವರೂ ಈ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ.
ಆದಿತ್ಯ ಧರ್ ಮತ್ತೆ ಪತ್ರ
ಸಿನಿಮಾ ಕೊನೆಯಾಗುತ್ತಿದ್ದಂತೆ ಎದ್ದು ಹೋಗಬೇಡಿ, ಕೊನೆಯ ಹೆಸರುಗಳು ಬರುವ ತನಕ ನೋಡಿ, ಕೊನೆಯಲ್ಲೊಂದು ದೃಶ್ಯ ಅಡಗಿದೆ ಎಂದು ನಿರ್ದೇಶಕ ಆದಿತ್ಯ ಧರ್ ಪತ್ರ ಬರೆದು ತಿಳಿಸಿದ್ದಾರೆ. ಹಾಗೇ ಕಥೆ ಬಹಿರಂಗ ಮಾಡಿ ಸಿನಿಮಾ ತಂಡದ ಶ್ರಮವನ್ನು ಮಣ್ಣುಪಾಲು ಮಾಡದಿರಿ ಎಂದೂ ಮನವಿ ಮಾಡಿದ್ದಾರೆ.
ಶೋಲೆಗಿಂತಲೂ ಅದ್ಭುತ ಎಂದ ಆರ್‌ಜಿವಿ
ಸಿನಿಮಾ ನೋಡಿ ಹಾಡಿ ಹೊಗಳಿರುವ ರಾಮ್ ಗೋಪಾಲ್ ವರ್ಮಾ ಈ ಸಿನಿಮಾ ‘ಶೋಲೆ’ಯಂಥ ಕ್ಲಾಸಿಕ್ ಚಿತ್ರಗಳಿಗಿಂತಲೂ100 ಪಟ್ಟು ಅದ್ಭುತವಾಗಿದೆ ಎಂದಿದ್ದಾರೆ.


