ನಟ ಧ್ರುವ ಸರ್ಜಾ ಅವರ ‘ಪೊಗರು’ ಸಿನಿಮಾ ಯಾವಾಗ ಶುರುವಾಗುತ್ತದೆ? ಗೊತ್ತಿಲ್ಲ. ಉದಯ್ ಮೆಹ್ತಾ ನಿರ್ಮಾಣದ ಸಿನಿಮಾ ಯಾವಾಗ ಸೆಟ್ಟೇರುತ್ತೇ? ಅದೂ ಗೊತ್ತಿಲ್ಲ. ಆದರೆ, ಇದರ ನಡುವೆ ಧ್ರುವ ಸರ್ಜಾ ಅವರಿಗೊಂದು ಸಿನಿಮಾ ನಿರ್ಮಾಣ ಮಾಡುವುದಕ್ಕೆ ಅರ್ಜುನ್ ಸರ್ಜಾ ಅವರೇ ಮುಂದಾಗಿದ್ದಾರೆಂಬ ಸುದ್ದಿ ಇದೆ.
ನಟ ಧ್ರುವ ಸರ್ಜಾ ಅವರ ‘ಪೊಗರು’ ಸಿನಿಮಾ ಯಾವಾಗ ಶುರುವಾಗುತ್ತದೆ? ಗೊತ್ತಿಲ್ಲ. ಉದಯ್ ಮೆಹ್ತಾ ನಿರ್ಮಾಣದ ಸಿನಿಮಾ ಯಾವಾಗ ಸೆಟ್ಟೇರುತ್ತೇ? ಅದೂ ಗೊತ್ತಿಲ್ಲ. ಆದರೆ, ಇದರ ನಡುವೆ ಧ್ರುವ ಸರ್ಜಾ ಅವರಿಗೊಂದು ಸಿನಿಮಾ ನಿರ್ಮಾಣ ಮಾಡುವುದಕ್ಕೆ ಅರ್ಜುನ್ ಸರ್ಜಾ ಅವರೇ ಮುಂದಾಗಿದ್ದಾರೆಂಬ ಸುದ್ದಿ ಇದೆ.
ಅಳಿಯನ ಚಿತ್ರಕ್ಕೆ ಮಾವನೇ ನಿರ್ಮಾಣದ ಸಾರಥ್ಯ ವಹಿಸಿ ಕೊಳ್ಳುವ ಸುದ್ದಿಗಳು ಗಟ್ಟಿಯಾಗಿ ಕೇಳಿಬರುತ್ತಿದೆ. ಅರ್ಜುನ್ ಸರ್ಜಾ ಈಗಾಗಲೇ ಶ್ರೀ ರಾಮ್ ಫಿಲಮ್ಸ್ ಇಂಟರ್‌ನ್ಯಾಷನಲ್ ಬ್ಯಾನರ್‌ನಲ್ಲಿ ‘ಪ್ರೇಮ ಬರಹ’ ಚಿತ್ರವನ್ನು ತಾವೇ ನಿರ್ದೇಶಿಸಿ, ನಿರ್ಮಾಣ ಮಾಡುತ್ತಿರುವುದು, ಈ ಚಿತ್ರದ ಮೂಲಕ ತಮ್ಮ ಪುತ್ರಿ ಐಶ್ವರ್ಯ ಅರ್ಜುನ್ ಅವರನ್ನು ನಾಯಕಿಯಾಗಿ ಕನ್ನಡಕ್ಕೆ ಪರಿಚಯಿಸುತ್ತಿರುವುದು ಎಲ್ಲರಿಗೂ ಗೊತ್ತಿದೆ.
ಈ ಸಿನಿಮಾ ನಂತರ ಮತ್ತೆ ಅರ್ಜುನ್ ಸರ್ಜಾ ಅವರು ಕನ್ನಡದಲ್ಲಿ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಾರೆಯೇ ಎನ್ನುವ ಕುತೂಹಲಕ್ಕೆ ಧ್ರುವ ಸರ್ಜಾ ಹೆಸರು ಕೇಳಿಬರುತ್ತಿದೆ. ಅರ್ಥಾತ್ ‘ಪ್ರೇಮ ಬರಹ’ ಸಿನಿಮಾ ತೆರೆಗೆ ಬಂದು ಹೋದ ಮೇಲೆ ತಮ್ಮ ಅಳಿಯನ ಚಿತ್ರವನ್ನು ಘೋಷಣೆ ಮಾಡುವ ಯೋಚನೆಯಲ್ಲಿದ್ದಾರೆ ಅರ್ಜುನ್ ಸರ್ಜಾ ಎನ್ನುವ ಮಾಹಿತಿಗಳು ಇವೆ.
ಹಾಗಾದರೆ ಧ್ರುವ ಅವರ ಎಷ್ಟನೇ ಚಿತ್ರಕ್ಕೆ ಅರ್ಜುನ್ ಸರ್ಜಾ ನಿರ್ಮಾಣ ಸಾರಥ್ಯ ವಹಿಸಲಿದ್ದಾರೆ? ಅಂದುಕೊಂಡಂತೆ ಆದರೆ, ಧ್ರುವ ಸರ್ಜಾ ಅವರ ಆರನೇ ಚಿತ್ರಕ್ಕೆ ಅರ್ಜುನ್ ಸರ್ಜಾ ನಿರ್ಮಾಪಕರಾಗಲಿದ್ದಾರೆ. ಯಾಕೆಂದರೆ ‘ಪೊಗರು’ ಸಿನಿಮಾ ಮುಗಿದ ಮೇಲೆ ಉದಯ್ ಮೆಹ್ತಾ ನಿರ್ಮಾಣದ ಇನ್ನೂ ಹೆಸರಿಡದ ಚಿತ್ರ ಇದೆ. ಈ ಸಿನಿಮಾಗಳು ಮುಗಿಸಿದರೆ ಅಲ್ಲಿಗೆ ಐದು ಸಿನಿಮಾಗಳು ಮುಗಿಯಲಿವೆ. ಆರನೇ ಚಿತ್ರವನ್ನು ತಮ್ಮದೇ ಶ್ರೀರಾಮ್ ಫಿಲಮ್ಸ್ ಇಂಟರ್‌ನ್ಯಾಷನಲ್ ಬ್ಯಾನರ್‌ನಲ್ಲಿ ನಿರ್ಮಾಣ ಮಾಡುವ ಯೋಚನೆ ಇದೆ.
ಒಂದು ವೇಳೆ ಈಗಾಗಲೇ ಒಪ್ಪಿಕೊಂಡಿರುವ ‘ಪೊಗರು’ ಹಾಗೂ ಉದಯ್ ಮೆಹ್ತಾ ಸಿನಿಮಾಗಳ ತಡವಾದರೂ ಅಥವಾ ಕತೆ ಸೂಕ್ತ ಅನಿಸದೆ ಹೋದರೆ ಎರಡೂ ಚಿತ್ರಗಳ ಗ್ಯಾಪ್ ನಲ್ಲೇ ಅರ್ಜುನ್ ಸರ್ಜಾ ನಿರ್ಮಾಣದ ಸಿನಿಮಾ ಸೆಟ್ಟೇರುವ ಸಾಧ್ಯತೆಗಳಿವೆ.
ಆದರೆ, ‘ಪ್ರೇಮ ಬರಹ’ ಬಿಡುಗಡೆ ಹಾಗೂ ಧ್ರುವ ಒಪ್ಪಿಕೊಂಡಿರುವ ಎರಡು ಚಿತ್ರಗಳ ಮೇಲೆ ಅರ್ಜುನ್ ಸರ್ಜಾ ನಿರ್ಮಾಣದ ಸಿನಿಮಾ ನಿಂತಿದೆ. ಹೀಗಾಗಿ ತಾವು ನಿರ್ಮಿಸಲಿರುವ ಚಿತ್ರಕ್ಕೆ ಯಾರು ನಿರ್ದೇಶಕರಾಗಬೇಕು, ಅದರ ಹೆಸರು ಸೇರಿದಂತೆ ಬೇರೆ ವಿಷಯಗಳು ಹೊರಗೆ ಹೇಳುತ್ತಿಲ್ಲ. ಆದರೆ, ಧ್ರುವಗಾಗಿ ಅರ್ಜುನ್ ಸರ್ಜಾ ಒಂದು ಸಿನಿಮಾ ನಿರ್ಮಾಣ ಮಾಡುವುದಂತೂ ಗ್ಯಾರಂಟಿ.
