ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಬಳ್ಳಾರಿಯ ಕನಕ ದುರ್ಗಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಹರಕೆ ತೀರಿಸಿದ್ದಾರೆ. ಇದೇ ವೇಳೆ ಅವರು ಶಾಸಕ ಭರತ್ ರೆಡ್ಡಿ ಅವರನ್ನೂ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಬಳ್ಳಾರಿ: ನಟ ದರ್ಶನ್ ತೂಗುದೀಪ ಪತ್ನಿ ವಿಜಯಲಕ್ಷ್ಮಿ ಟೆಂಪಲ್ ರನ್ ಮುಂದುವರಿದಿದೆ. ಇತ್ತೀಚೆಗೆ ಚಿಕ್ಕಬಳ್ಳಾಪುರದ ಇಶಾ ಆದಿಯೋಗಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದ ಅವರು, ಇದೀಗ ಬಳ್ಳಾರಿಯ ಕನಕ ದುರ್ಗಮ್ಮ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.
ಹರಕೆ ತೀರಿಸಿದ ದರ್ಶನ್ ಪತ್ನಿ
ಮಧ್ಯಾಹ್ನದ ವೇಳೆಯಲ್ಲಿ ದಿಢೀರನೆ ದೇವಸ್ಥಾನಕ್ಕೆ ಆಗಮಿಸಿದ ವಿಜಯಲಕ್ಷ್ಮಿ, ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಕುಂಕುಮಾರ್ಚನೆ ಮಾಡಿಸಿದ್ದಾರೆ. ಈ ಭೇಟಿ ಹರಕೆಯ ಹಿನ್ನೆಲೆಯಲ್ಲಿ ನಡೆದಿದೆ ಎನ್ನಲಾಗಿದೆ. ದರ್ಶನ್ ಬಳ್ಳಾರಿ ಜೈಲಿನಲ್ಲಿದ್ದ ಸಂದರ್ಭದಲ್ಲಿ ವಿಜಯಲಕ್ಷ್ಮಿ ಅವರು ದುರ್ಗಮ್ಮ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ದರ್ಶನ್ ಜೈಲಿನಿಂದ ಬಿಡುಗಡೆಯಾದರೆ ದೇವಿಗೆ ಸೀರೆ ಉಡಿಸಿ, ಕುಂಕುಮಾರ್ಚನೆ ಮಾಡಿಸುವುದಾಗಿ ಹರಕೆ ಹೊತ್ತಿದ್ದರು ಎನ್ನಲಾಗಿದೆ. ಇದೀಗ ದೇವಸ್ಥಾನಕ್ಕೆ ಭೇಟಿ ನೀಡುವ ಮೂಲಕ ಹರಕೆ ತೀರಿಸಿದ್ದಾರೆ.
ಶಾಸಕ ಭರತ್ ರೆಡ್ಡಿ ಭೇಟಿ
ಇದೇ ವೇಳೆ ಬಳ್ಳಾರಿ ನಗರ ಶಾಸಕರ ಕಚೇರಿಯಲ್ಲಿ ಶಾಸಕ ಭರತ್ ರೆಡ್ಡಿಯನ್ನೂ ಭೇಟಿಯಾಗಿದ್ದಾರೆ. ಶಾಸಕರನ್ನು ಭೇಟಿ ಮಾಡಿದ ದರ್ಶನ್ ಪತ್ನಿ ವಿಜಯಲಕ್ಷ್ಮಿ ಕೆಲ ಕಾಲ ಮಾತಕತೆ ನಡೆಸಿದರು. ಬಳಿಕ ಅಲ್ಲಿಂದ ತೆರಳಿದ್ದಾರೆ. ಇದೊಂದು ಸೌಜನ್ಯಯುತ ಭೇಟಿ ಎಂದು ಭರತ್ ರೆಡ್ಡಿ ಕಚೇರಿ ಮೂಲಗಳು ಸ್ಪಷ್ಟನೆ ನೀಡಿವೆ. ಶಾಸಕ ಕಚೇರಿಗೆ ವಿಜಯಲಕ್ಷ್ಮೀ ಭೇಟಿ ನೀಡಿರೋ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಸಮಯವನ್ನು ನಂಬಿ
ಇತ್ತೀಚಿನ ದಿನಗಳಲ್ಲಿ ವಿಜಯಲಕ್ಷ್ಮಿ ಅವರ ದೇವಸ್ಥಾನ ಭೇಟಿಗಳು ಗಮನ ಸೆಳೆಯುತ್ತಿವೆ. ಕೆಲ ದಿನಗಳ ಹಿಂದೆ ಚಿಕ್ಕಬಳ್ಳಾಪುರದ ಇಶಾ ಆದಿಯೋಗಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದರು. ಬಳಿಕ ಸಾಮಾಜಿಕ ಜಾಲತಾಣದಲ್ಲಿ 'ಸಮಯವನ್ನು ನಂಬಿರಿ' ಎಂಬ ಸಂದೇಶವನ್ನೂ ಹಂಚಿಕೊಂಡಿದ್ದರು. ಇದೀಗ ಬಳ್ಳಾರಿಯ ಕನಕ ದುರ್ಗಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿರುವುದು ಮತ್ತೆ ಸುದ್ದಿಯಾಗಿದೆ. ವಿಜಯಲಕ್ಷ್ಮಿ ಅವರ ನಿರಂತರ ದೇವಾಲಯ ಭೇಟಿಗಳು ಅಭಿಮಾನಿಗಳ ಗಮನ ಸೆಳೆದಿವೆ.
ಜೈಲಿನಲ್ಲಿರುವ ದರ್ಶನ್
ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಅವರನ್ನು ಬಿಡಿಸಿಕೊಂಡು ಬರಲು ವಿಜಯಲಕ್ಷ್ಮೀ ತುಂಬಾ ಕಷ್ಟಪಡುತ್ತಿದ್ದಾರೆ. ತೀವ್ರ ಬೆನ್ನುನೋವಿನ ಸಮಸ್ಯೆಯಿಂದ ಬಳಲುತ್ತಿರುವ ದರ್ಶನ್ಗೆ ಚಿಕಿತ್ಸೆ ನೀಡಲು ನ್ಯಾಯಾಲಯ ಸಮ್ಮತಿಸಿದೆ. ಸದ್ಯಕ್ಕೆ ಅವರನ್ನು ಹೊರಗಿನ ಆಸ್ಪತ್ರೆಗೆ ಸ್ಥಳಾಂತರಿಸದೆ, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲೇ ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರಿಂದ ಫಿಸಿಯೋಥೆರಪಿ ಸೇರಿದಂತೆ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ.
ದರ್ಶನ್ ಅವರಿಗೆ ಬೆನ್ನುನೋವಿದ್ದರೂ ಸದ್ಯ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಜೈಲು ಅಧಿಕಾರಿಗಳು ಸೆಷನ್ಸ್ ಕೋರ್ಟ್ಗೆ ವೈದ್ಯಕೀಯ ವರದಿ ಸಲ್ಲಿಸಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೋರಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆ ನವೆಂಬರ್ 30ಕ್ಕೆ ಮುಂದೂಡಿಕೆಯಾಗಿದೆ. ಅಂದರೆ ನಾಳೆ ವಿಚಾರಣೆಗೆ ಬರಲಿದೆ.


