ಮೆಗಾಸ್ಟಾರ್ ಚಿರಂಜೀವಿ ತಮ್ಮ ಯೌವನದ ದಿನಗಳಲ್ಲಿ ಚಿತ್ರರಂಗದಲ್ಲಿ ಅವಕಾಶ ಪಡೆಯಲು ಎದುರಿಸಿದ ಸವಾಲುಗಳು ಮತ್ತು ದುಶ್ಚಟಗಳಿಂದ ದೂರವುಳಿದ ಕಥೆಯನ್ನು ಹಂಚಿಕೊಂಡಿದ್ದಾರೆ. ಯುವಕರಿಗೆ ಮಾದಕ ವ್ಯಸನದ ವಿರುದ್ಧ ಹೋರಾಡಲು ಮತ್ತು ದೃಢ ನಿರ್ಧಾರದಿಂದ ಗುರಿ ತಲುಪಲು ಸ್ಫೂರ್ತಿದಾಯಕ ಸಂದೇಶ ನೀಡಿದ್ದಾರೆ.
ಯಾವುದೇ ಕ್ಷೇತ್ರ ಇರಬಹುದು, ಯಶಸ್ಸು ಅಷ್ಟು ಸುಲಭಕ್ಕೆ ಸಿಗುವ ವಸ್ತು ಅಲ್ಲ. ಭಾರತೀಯ ಚಿತ್ರರಂಗದ 'ಮೆಗಾಸ್ಟಾರ್' ಆಗಿ ಮಿಂಚುತ್ತಿರುವ ಚಿರಂಜೀವಿ ತಮ್ಮ ಬದುಕಿನ ಪರಿಶ್ರಮ, ಶಿಸ್ತು ಮತ್ತು ದೃಢ ನಿರ್ಧಾರದ ಕಥೆಯನ್ನ ತೆರೆದಿಟ್ಟಿದ್ದಾರೆ. ಇತ್ತೀಚೆಗೆ ಹೈದರಾಬಾದ್ನಲ್ಲಿ 'ನಶಾ ಮುಕ್ತ ಭಾರತ' ಅಭಿಯಾನದ ಸಮಾರೋಪ ಸಮಾರಂಭ ನಡೆಯಿತು. ಈ ವೇಳೆ ತಮಗೆ ಆಗಿರುವ ಕಹಿ ಅನುಭವ ಹಂಚಿಕೊಂಡಿದ್ದಾರೆ. ಅವರ ಅನುಭವ ಮತ್ತು ಮಾತುಗಳು ಇವತ್ತಿನ ಯುವ ಪೀಳಿಗೆಗೆ ಸ್ಫೂರ್ತಿಯ ಕಥೆಯಾಗಿ ನಿಲ್ಲೊದ್ರಲ್ಲಿ ಯಾವುದೇ ಅನುಮಾನ ಇಲ್ಲ.
ಸುಮಾರು 48 ವರ್ಷಗಳ ಹಿಂದಿನ ಕಥೆ. ಆಗ ನನಗೆ 22 ವರ್ಷ. ಹೀರೋ ಆಗಬೇಕೆಂಬ ಕನಸಿನೊಂದಿಗೆ ಚೆನ್ನೈನ ಫಿಲ್ಮ್ ಇನ್ಸ್ಟಿಟ್ಯೂಟ್ನಲ್ಲಿ ತರಬೇತಿ ಪಡೆಯುತ್ತಿದ್ದೆ. ನನ್ನ ಹೆಸರು ಪ್ರಸಾದ್. ಒಂದು ಸಂಜೆ ಗೆಳೆಯನೊಂದಿಗೆ ಚಹಾ ಕುಡಿಯಲು ಪಾಂಡಿ ಬಜಾರ್ಗೆ ಹೋಗಿದ್ದೆ. ಅಲ್ಲಿ ಸಿನಿಮಾ ರಂಗದ ಕೆಲವು ಜೂನಿಯರ್ ಕಲಾವಿದರು ಮತ್ತು ಇತರರು ಸಿಕ್ಕರು.
ಕಲಾವಿದರೆಲ್ಲ ಸಿಕ್ಕ ಬೆನ್ನಲ್ಲೇ ನಾನು ಸ್ವಲ್ಪ ನರ್ವಸ್ ಆಗಿದ್ದೆ. ನೀವು ರಿಲ್ಯಾಕ್ಸ್ ಆಗಲು ಒಂದು ಬಿಯರ್ ಕುಡಿ ಎಂದು ಒತ್ತಾಯಿಸಿದರು. ನನಗೆ ನೀವು ಒತ್ತಾಯ ಮಾಡಬೇಡಿ, ನಾನು ಮದ್ಯಪಾನ ಮಾಡೋದಿಲ್ಲ ಎಂದು ಖಡಕ್ ಆಗಿ ನಿರಾಕರಿಸಿದೆ. ಆಗ ನನ್ನ ಗುಂಪಿನಲ್ಲಿದ್ದ ಸ್ನೇಹಿತರೆಲ್ಲ ಜೋರಾಗಿ ನಕ್ಕರು. ಸಿನಿಮಾ ಇಂಡಸ್ಟ್ರಿಯಲ್ಲಿ ಇದೆಲ್ಲಾ ಕಾಮನ್. ನೀನು ದೊಡ್ಡ ಪಾರ್ಟಿಗಳನ್ನು ಆಯೋಜಿಸಿ ಎಲ್ಲರೊಂದಿಗೆ ಬೆರೆಯಬೇಕು. ಹಾಗೆ ಮಾಡಿದರೆ ಒಳ್ಳೆಯ ಸಿನಿಮಾ ಅವಕಾಶಗಳು ಸಿಗುತ್ತವೆ. ಇಲ್ಲಿ ಇದೇ ರೂಢಿ ಎಂದಿದ್ದರು.
ಅದಕ್ಕೆ ನಾನು ಹೇಳಿದ್ದೆ. ನಾನು ಆಂಜನೇಯ ಸ್ವಾಮಿಯ ಭಕ್ತ. ಇಂತಹ ಕೆಲಸಗಳನ್ನು ಖಂಡಿತ ಮಾಡುವುದಿಲ್ಲ ಎಂದಿದ್ದೆ. ಅದಕ್ಕೆ ಅವರು ಬೇರೆಯದ್ದೇ ಹೇಳಿದ್ದರು. ನಿನ್ನಂತವರು ಎಷ್ಟೋ ಜನ ಹೀರೋ ಆಗಲು ಕಾಯುತ್ತಿದ್ದಾರೆ. ನೀನು ಹೇಗೆ ಹೀರೋ ಆಗುತ್ತೀಯ ನೋಡೋಣ ಎಂದು ನನ್ನ ಆತ್ಮವಿಶ್ವಾಸವನ್ನು ಕೆದಕಿದ್ದರು. ಅಲ್ಲದೇ ಆಗ ನನಗೆ ತುಂಬಾ ನೋವು ಆಯಿತು. ಅಲ್ಲಿಂದ ಎದ್ದು ಬಂದವನು ಮತ್ತೆ ಪಾಂಡಿ ಬಜಾರ್ಗೆ ಯಾವತ್ತೂ ಹೋಗಲಿಲ್ಲ. ಇದೇ ಅವಧಿಯಲ್ಲಿ ಚಿತ್ರರಂಗದ ಹಿರಿಯ ಕಲಾವಿದರೊಬ್ಬರು ನನಗೆ ಅಮೂಲ್ಯ ಸಲಹೆಗಳನ್ನ ನೀಡಿದರು.
ಅವರ ಮಾತು ಹೀಗಿತ್ತು.. ನೀನು ಅಂದುಕೊಂಡ ಗುರಿ ತಲುಪಬೇಕಾದರೆ ಕುದುರೆಗೆ ಕಣ್ಣುಪಟ್ಟಿ (Blinders) ಕಟ್ಟಿದಂತೆ ನಿನ್ನ ಗುರಿಯತ್ತ ಮಾತ್ರ ಗಮನಹರಿಸು. ಬೇರೆ ಯಾವುದೇ ಆಕರ್ಷಣೆಗಳಿಗೆ ಬಲಿಯಾಗಬೇಡ ಎಂದು ಸಲಹೆ ನೀಡಿದ್ದರು. ಅವರ ಮಾತು ನನಗೆ ತುಂಬಾ ಆಪ್ತ ಎನಿಸಿತು. ಗಾಧವಾದ ಪ್ರಭಾವ ಬೀರಿತು. ಅಲ್ಲಿಂದ ನಾನು ನಟನೆ ಮತ್ತು ಭವಿಷ್ಯದ ಮೇಲೆ ಮಾತ್ರ ಕೇಂದ್ರೀಕರಿಸಿದೆ. ಅದರ ಫಲವೇ ಇವತ್ತು ಮೆಗಾಸ್ಟಾರ್ ಆಗಿ ನಿಂತಿದ್ದೇನೆ ಎಂದು ಹೇಳುತ್ತಾರೆ. ಆಗ ಇಡೀ ಸಭಾಂಗಣ ಎದ್ದು ನಿಂತು ಜೋರಾಗಿ ಚಪ್ಪಾಳೆ ತಟ್ಟುತ್ತದೆ.
ಯವಕರಿಗೆ ಕಿವಿ ಮಾತು
ಇದೇ ವೇಳೆ ಮಾದಕ ವ್ಯಸನದ ವಿರುದ್ಧ ಧ್ವನಿ ಎತ್ತಿದ ಅವರು, ನಿಮ್ಮ ಸ್ನೇಹಿತರು ಯಾರಾದರೂ ಡ್ರಗ್ಸ್ ಅಥವಾ ದುಶ್ಚಟಗಳಿಗೆ ಬಲಿಯಾಗಿದ್ದರೆ ಅವರನ್ನು ದೂರ ತಳ್ಳಬೇಡಿ. ಅವರಿಗೆ ಧೈರ್ಯ ತುಂಬಿ, ಪುನರ್ವಸತಿ ಕೇಂದ್ರಗಳಿಗೆ (Rehab centres) ಕರೆದೊಯ್ದು ಚಿಕಿತ್ಸೆ ಕೊಡಿಸಿ. ಅವರ ಬದುಕನ್ನು ಸರಿಪಡಿಸಿ ಎಂದು ಯುವಕರಿಗೆ ಕರೆ ನೀಡಿದರು.


