ಕನಕಪುರ ರಸ್ತೆಯಲ್ಲಿ ಹರಿಖೋಡೆಯವರ ಎಸ್ಟೇಟ್‌ ದಾಟಿ ಮುಂದೆ ಹೋದರೆ ಆರ್ಟ್‌ ಆಫ್‌ ಲಿವಿಂಗ್‌ ಆಶ್ರಮ ಸಿಗುತ್ತದೆ. ಅದನ್ನು ದಾಟಿ ಸ್ವಲ್ಪ ಮುಂದೆ ಹೋದರೆ ಅಲ್ಲೇ ಇದೆ ರವಿಕಿರಣ್‌ ಎಸ್ಟೇಟ್‌. ಗೇಟು ದಾಟಿ ಒಳಗೆ ಹೋದರೆ ಅಲ್ಲಿ ತಂಡಕ್ಕೆ ತಂಡವೇ ಸಂಭ್ರಮದಿಂದ ಓಡಾಡುತ್ತಿತ್ತು. ಅಷ್ಟುಸಂಭ್ರಮ ಯಾಕೆ ಅಂದ್ರೆ ಆ ಸಿನಿಮಾದ ಹೆಸರೇ ಮದುವೆ ದಿಬ್ಬಣ. ಮದುವೆಯ ಆಸುಪಾಸಿನಲ್ಲಿ ಜರುಗುವುದರಿಂದ ಸಂಭ್ರಮವೋ ಸಂಭ್ರಮ.

ಬೆಂಗಳೂರು(ಮಾ.31): ಕನಕಪುರ ರಸ್ತೆಯಲ್ಲಿ ಹರಿಖೋಡೆಯವರ ಎಸ್ಟೇಟ್‌ ದಾಟಿ ಮುಂದೆ ಹೋದರೆ ಆರ್ಟ್‌ ಆಫ್‌ ಲಿವಿಂಗ್‌ ಆಶ್ರಮ ಸಿಗುತ್ತದೆ. ಅದನ್ನು ದಾಟಿ ಸ್ವಲ್ಪ ಮುಂದೆ ಹೋದರೆ ಅಲ್ಲೇ ಇದೆ ರವಿಕಿರಣ್‌ ಎಸ್ಟೇಟ್‌. ಗೇಟು ದಾಟಿ ಒಳಗೆ ಹೋದರೆ ಅಲ್ಲಿ ತಂಡಕ್ಕೆ ತಂಡವೇ ಸಂಭ್ರಮದಿಂದ ಓಡಾಡುತ್ತಿತ್ತು. ಅಷ್ಟುಸಂಭ್ರಮ ಯಾಕೆ ಅಂದ್ರೆ ಆ ಸಿನಿಮಾದ ಹೆಸರೇ ಮದುವೆ ದಿಬ್ಬಣ. ಮದುವೆಯ ಆಸುಪಾಸಿನಲ್ಲಿ ಜರುಗುವುದರಿಂದ ಸಂಭ್ರಮವೋ ಸಂಭ್ರಮ.

ಎದುರಿಗೆ ಸಿಕ್ಕವರು ಈ ಮದುವೆ ನಡೆಸುತ್ತಿರುವವರು. ನಿರ್ದೇಶಕ ಎಸ್‌.ಉಮೇಶ್‌. ‘ತುಂಬಿದ ಮನೆ' ಸಿನಿಮಾದಂತಹ ಕ್ಲಾಸಿಕ್‌ ಸಿನಿಮಾ ಕೊಟ್ಟಹಿರಿಯ ನಿರ್ದೇಶಕ. ಅವರ ಹಿಂದೆ ನಿಂತಿದ್ದು ಹಣಕಾಸು ಸಚಿವ ಅಂದ್ರೆ ಪ್ರೊಡ್ಯೂಸರ್‌ ಬ.ನಾ. ರವಿ. ಅವರ ಜೊತೆಗೆ ಕಿರುತೆರೆ ಸಾಮ್ರಾಟ್‌ ರವಿಕಿರಣ್‌, ಪುಟ್ಟಗೌರಿಯ ಅಜ್ಜಿ ಪಾತ್ರಧಾರಿ ಚಂದ್ರಕಲಾ, ನಾಯಕ ನಟ ಅಭಿಷೇಕ್‌, ನಾಯಕ ನಟಿ ಸೋನಲ್‌ ಮೋಂಟೆರೋ ಇದ್ದರು. ಮಿಸ್‌ ಆಗಿದ್ದು ಕಾಮಿಡಿ ಕಿಲಾಡಿ ಕೆಆರ್‌ ಪೇಟೆ ಶಿವರಾಜ್‌. ಅವರು ಈ ಸಿನಿಮಾದಲ್ಲಿ ಹುಡು­ ಗಿಯ ಸೋದರ ಮಾವ­ ನಾಗಿ ನಟಿಸುತ್ತಿದ್ದಾರೆ.

ಮೊದಲು ಮಾತಿಗಿಳಿ­ದಿದ್ದು ನಿರ್ದೇಶ ಉಮೇಶ್‌. ‘ತುಂಬಿದ ಮನೆ ಸಿನಿಮಾದ ನಂತರ ಒಂದೊಳ್ಳೆ ಸಿನಿಮಾ ಮಾಡುತ್ತಿ­ದ್ದೇನೆ. ಇದು ಕಮರ್ಷಿ­ಯಲ್‌ ಮತ್ತು ಆರ್ಟ್‌ ಎರಡೂ ಪ್ರಕಾರಗಳ ಸ್ವಭಾವ­ವನ್ನು ಒಳಗೊಂಡಿರುವ ಕಾಮಿಡಿ ಮತ್ತು ಸೆಂಟಿ­ಮೆಂಟ್‌ ಸಿನಿಮಾ. ಒಳ್ಳೆಯ ನಿರ್ಮಾಪಕರಿ­ದ್ದಾರೆ. ಸಿನಿಮಾ ಚೆನ್ನಾಗಿ ಮೂಡಿ ಬರಲಿದೆ'.

ನಿರ್ಮಾಪಕರ ಸಾಧನೆಯ ಕತೆ

ಕೇಳುತ್ತಾ ತಲೆ ದೂಗುತ್ತಿದ್ದರು ನಿರ್ಮಾಪಕ ಬ.ನಾ. ರವಿ. ಕುಣಿಗಲ್‌ನ ಬಂಡಿಹಳ್ಳಿಯ ಈತ ನಿರ್ಮಾಪಕನಾದ ಕತೆಯೇ ಇಂಟರೆಸ್ಟಿಂಗು. ಮೊದಲು ಗಾರ್ಮೆಂಟ್‌ ಕೆಲಸದಲ್ಲಿದ್ದರು. ದುಡ್ಡು ಕೂಡಿಟ್ಟು ಪಾನ್‌ ಶಾಪ್‌ ಹಾಕಿದರು. ಅದರಲ್ಲಿ ಯಶಸ್ಸು ಸಿಕ್ಕಿತು. ಆಮೇಲೆ ಮೊಬೈಲ್‌ ಲಿಂಕ್‌ ಎಂಬ ಮೊಬೈಲ್‌ ಶಾಪ್‌ ಶುರು ಮಾಡಿದರು. ಅದರಲ್ಲೂ ಅದೃಷ್ಟಕೈಹಿಡಿಯಿತು. ಈಗ ಬೆಂಗಳೂರಲ್ಲಿ ನಾಲ್ಕೈದು ಅಂಗಡಿಗಳಿವೆ. ಒಂದ್ಸಲ ರಾಜಕೀಯಕ್ಕೂ ಕೈ ಹಾಕಿದ್ದಾರೆ. ಈಗ ಚಿತ್ರರಂಗದಲ್ಲಿ ಸಾಧಿಸಬೇಕು ಅಂತ ಬಂದಿದ್ದಾರೆ.

15 ವರ್ಷದ ನಂತರ ಹಿರಿತೆರೆಯಲ್ಲಿ ರವಿಕಿರಣ್‌

ಸಿನಿಮಾದ ಮೂಲಕ 15 ವರ್ಷದ ನಂತರ ಸಿನಿಮಾಗೆ ಬಣ್ಣ ಹಚ್ಚಿದ್ದಾರೆ ರವಿಕಿರಣ್‌. ಒಂದಷ್ಟುವರ್ಷಗಳ ಕಾಲ ಕಿರುತೆರೆಯನ್ನು ಆಳಿದ ರವಿಕಿರಣ್‌ ಬಹುವರ್ಷಗಳ ನಂತರ ಮತ್ತೆ ಹಿರಿತೆರೆ ಕಡೆಗೆ ಬಂದಿದ್ದಾರೆ. ಕೇಳಿದ್ದಕ್ಕೆ ‘ಉಮೇಶ್‌ ನಂಗೆ ಮೂವತ್ತು ವರ್ಷಗಳ ಪರಿಚಯ. ಅವರು ತುಂಬಾ ಕೇಳಿಕೊಂಡರು ಅಂತ ಒಪ್ಪಿಕೊಂಡಿದ್ದೇನೆ' ಎಂದರು. ಹೊಸ ವಿಗ್ಗು, ಡಿಫರೆಂಟಾದ ಮೀಸೆ ಬೇರೆ ಅಂಟಿಸಿಕೊಂಡಿದ್ದಾರೆ. ಉಳಿದಂತೆ ಏನೇನಿದೆ ಅನ್ನೋದನ್ನು ದಿಬ್ಬಣದಲ್ಲೇ ನೋಡಬೇಕು.
ದಿಬ್ಬಣದಲ್ಲಿರುವವರು.

ಅಂದಹಾಗೆ ಈ ಸಿನಿಮಾದ ಕತೆ ಬನಾ ರವಿಯವರದೇ. ಚಿತ್ರಕತೆಯನ್ನು ಹಂಸರಾಜ್‌ ಬರೆದಿದ್ದಾರೆ. ಎಟಿ ರವೀಶ್‌ ಸಂಗೀತ ನಿರ್ದೇಶಿಸುತ್ತಿದ್ದಾರೆ. ಕಡೆಗೆ ನಿರ್ದೇಶಕರು ಒಂದು ಕತೆ ಹೇಳಿದರು. ಕಾಮಿಡಿ ಕಿಲಾಡಿ ಶಿವರಾಜ್‌ ಅವರನ್ನೇ ಹೀರೋ ಆಗಿ ಅಂತ ಕೇಳಿಕೊಂಡರಂತೆ. ಆದರೆ ಅವರು ದಯವಿಟ್ಟು ಬಿಟ್ಟು ಬಿಡಿ ಎಂದು ಓಡಿಹೋದರಂತೆ. ಈ ಮೂಲಕ ಶಿವರಾಜ್‌ ಅವರಿಗೆ ಸೆನ್ಸ್‌ ಆಫ್‌ ಹ್ಯೂಮರ್‌ ಮಾತ್ರ ಅಲ್ಲ ತಮ್ಮನ್ನು ತಾವು ನಿಯಂತ್ರಣದಲ್ಲಿಟ್ಟುಕೊಳ್ಳುವ ಕಲೆಯೂ ಕರಗತವಾಗಿದೆ ಎಂದು ನಂಬಬಹುದು.

ವರದಿ: ರಾಜೇಶ್ ಶೆಟ್ಟಿ, ಕನ್ನಡ ಪ್ರಭ