- ರಾಜೇಶ್ ಶೆಟ್ಟಿ

‘ಅಲ್ನೋಡಿ ಶೂಟಿಂಗ್‌ ಸ್ಟಾರ್‌!’

ಗಂಭೀರವಾಗಿ ಮಾತನಾಡುತ್ತಿದ್ದ ಸುದೀಪ್‌ ಆಕಾಶದತ್ತ ಕೈ ತೋರಿಸಿದರು. ಅವರ ಧ್ವನಿಯಲ್ಲಿದ್ದ ಎಕ್ಸೈಟ್‌ಮೆಂಟ್‌ ನಮಗೂ ತಾಕಿತು. ಹಿಂದೆ ತಿರುಗಿ ನೋಡುವಷ್ಟರಲ್ಲಿ ಉಲ್ಕೆಯೊಂದು ಆಕಾಶದಿಂದ ಹಾಗೇ ಜಾರಿ ಬಿದ್ದು ಹೋಗಿಯಾಗಿತ್ತು. ನಮಗೆ ಅದೃಷ್ಟವಿರಲಿಲ್ಲ.

ಅದು ಜೆಪಿ ನಗರದ ಅವರ ಮನೆಯ ಟೆರೇಸು. ಆಗಷ್ಟೇ ಸೂರ್ಯ ಮುಳುಗತೊಡಗಿದ್ದ. ಕತ್ತಲು ಇಂಚಿಂಚೇ ಆವರಿಸುತ್ತಿತ್ತು. ಸುದೀಪ್‌ ನಾಲ್ಕೈದು ಕ್ಯಾಂಡಲ್‌ಗಳಂಥ ದೀಪವನ್ನು ಬೆಳಗಿಸಿಟ್ಟಿದ್ದರು. ಮಂದ ಬೆಳಕು.

‘ಕತ್ತಲೆ ಕತ್ತಲೆಯೇ ಆಗಿರಬೇಕು ನನಗೆ. ದೊಡ್ಡ ದೊಡ್ಡ ಬಲ್ಬ್‌ಗಳನ್ನು ಬೆಳಗಿ ಕತ್ತಲನ್ನು ಬೆಳಗಾಗಿಸುವುದು ನನಗಿಷ್ಟವಿಲ್ಲ. ನನ್ನ ಮನೆ ಇರುವುದು ಹೀಗೇ. ರಾತ್ರಿ ರಾತ್ರಿಯಂತೆ ಇರಬೇಕು. ಪ್ರತಿಯೊಬ್ಬರ ದೂರಾಲೋಚನೆಗಳು ಕಟ್‌ ಆಗುವುದೇ ರಾತ್ರಿಯಲ್ಲಿ. ದೂರದಲ್ಲಿರುವವರು ದೂರ ಹೋಗಿ ಜೀವಕ್ಕೆ ಹತ್ತಿರ ಇರುವವರು ಮಾತ್ರ ಕಾಣಿಸುತ್ತಾರೆ.’

ಪತ್ನಿ ಬಳಿ ಸಾಲ ಪಡೆದಿದ್ದ ಕಿಚ್ಚ ಸುದೀಪ್!

ಹಾಗೆ ಹೇಳಿ ಸುಮ್ಮನಾದರು ಸುದೀಪ್‌. ಅವತ್ತು ಅವರು ಎಷ್ಟುಒಳ್ಳೆ ಮೂಡಿನಲ್ಲಿದ್ದರು ಎಂದರೆ ಅವರ ಮಾತಿನಲ್ಲಿ ಕ್ರಿಕೆಟ್‌, ಕಿಚನ್‌, ಸಂಬಂಧ, ಪ್ರೀತಿಸುವ ಸಿನಿಮಾ, ಮೆಚ್ಚಿನ ಗೆಳೆಯರು, ಮುದ್ದಿನ ಮಗಳು, ತನ್ನ ಹಠ ಪ್ರೀತಿ ಸಿಟ್ಟು ಎಲ್ಲವೂ ಬಂದು ಹೋದವು. ಸುದೀಪ್‌ ಮಾತಾಡುತ್ತಲೇ ಹೀರೋವಾಗಿ, ಕ್ರಿಕೆಟರ್‌ ಆಗಿ, ತಂದೆಯಾಗಿ, ಗೆಳೆಯನಾಗಿ, ಕುಕ್‌ ಆಗಿ, ವಿದ್ಯಾರ್ಥಿಯಾಗಿ, ಒಂಚೂರು ಫಿಲಾಸಫರ್‌ ಆಗಿ ಬದಲಾಗುತ್ತಾ ಹೋಗುತ್ತಿದ್ದರು.

ಪೈಲ್ವಾನ್‌ ಮತ್ತು ಬದಲಾದ ಜೀವನ ಪದ್ಧತಿ

ಹೀಗೆ ಒಂದು ದಿನ ದೀಪ ಹಚ್ಚಿಕೊಂಡು ಕೂತಿದ್ದೆ. ಒಬ್ಬ ಸ್ಪೋಟ್ಸ್‌ರ್‍ ವ್ಯಕ್ತಿಯ ಬಗ್ಗೆ ಸಿನಿಮಾ ಮಾಡಬೇಕು ಅಂತ ಸುಮ್ಮನೇ ಹೇಳಿದ್ದೆ. ಕೃಷ್ಣ ಅದನ್ನು ಅಷ್ಟೊಂದು ಸೀರಿಯಸ್ಸಾಗಿ ತಗೋತಾರೆ ಅಂತ ಗೊತ್ತಿರ್ಲಿಲ್ಲ. ಎರಡು ವಾರದ ನಂತರ ಬಂದರು. ಪೈಲ್ವಾನ್‌ ಅಂತ ಸಿನಿಮಾ ಎಂದರು. ನಾನು ಕತೆ ಕೇಳಿ ನನ್ನಿಂದ ಆಗಲ್ಲ ಎಂದುಬಿಟ್ಟೆ. ಆಮೇಲೆ ಯೋಚನೆ ಮಾಡಿದೆ. ನನ್ನ ಬಾಡಿ ಚೆಕಪ್‌ ಮಾಡಿಸಿಕೊಂಡೆ. ಎರಡು ದಿನ ಬಿಟ್ಟು ಕೃಷ್ಣನನ್ನು ಬರಹೇಳಿ ನಂಗೊಂಚೂರು ಟೈಮ್‌ ಬೇಕು, ದೇಹ ಸಿದ್ಧಗೊಳಿಸಬೇಕು ಕೊಡ್ತೀಯಾ ಎಂದೆ. ಕೃಷ್ಣ ಸರಿ ಎಂದರು. ಅಲ್ಲಿಂದ ಬದಲಾಯಿತು ಜೀವನ.

ಸುದೀಪ್‌ ಮಾತೆಲ್ಲವೂ ದೇಹದ ಬಗ್ಗೆ ಇತ್ತು. ದೇಹದ ಬಗ್ಗೆ ಮಾತಾಡುವಾಗೆಲ್ಲ ಅವರ ಕಾನ್ಫಿಡೆನ್ಸು ಒಂಚೂರು ಜಾಸ್ತಿಯಾದ ಹಾಗೆ ಭಾಸವಾಗುತ್ತಿತ್ತು.

‘ಇಷ್ಟುದಿನ ಬುದ್ಧಿಗೆ ಜಾಸ್ತಿ ಕೆಲಸ ಕೊಡುತ್ತಿದ್ದೆ. ಅದಕ್ಕೆ ಈ ಸಲ ದೇಹಕ್ಕೆ ಸ್ವಲ್ಪ ಕೆಲಸ ಕೊಟ್ಟೆ. ಫಿಟ್‌ ಆಗುವುದು ಸುಲಭವಲ್ಲ. ತೂಕ ಇಳಿಸಬೇಕು, ದೇಹ ಶೇಪ್‌ ಬರಬೇಕು, ಆಮೇಲೆ ಬಿಲ್ಡ್‌ ಮಾಡಬೇಕು. ನನಗೆ ಜಿಮ್‌ ಇಷ್ಟಇರಲಿಲ್ಲ. ಸ್ವಿಮ್ಮಿಂಗ್‌, ಬ್ಯಾಡ್ಮಿಂಟನ್‌ ಕ್ರಿಕೆಟ್‌ ಅಂದ್ರೆ ಸಾಕು ನಾನು ಖುಷಿಯಿಂದ ಹೋಗ್ತೀನಿ. ಆದ್ರೆ ಜಿಮ್‌. ಊಹೂಂ. ಆದರೆ ಈಗ ಬೇರೆ ದಾರಿ ಇರಲಿಲ್ಲ. ತಿನ್ನುವ ಆಹಾರ ಕಂಟ್ರೋಲ್‌ ಮಾಡಬೇಕಿತ್ತು. ಹಾಗಂತ ನಾನು ಫುಡೀ ಆಗಿರಲಿಲ್ಲ. ಊಟದಲ್ಲಿ ಶಿಸ್ತಿರಲಿಲ್ಲ. ಸಿಕ್ಕಿದೆಲ್ಲಾ ತಿನ್ನುತ್ತಿದ್ದೆ. ಒನ್‌ ಫೈನ್‌ ಡೇ ನಾನು ಬದಲಾಗಬೇಕು ಅನ್ನಿಸ್ತು. ಅವತ್ತಿನಿಂದ ಇವತ್ತಿನವರೆಗೆ ಡಯಟ್‌ ಬ್ರೇಕ್‌ ಮಾಡಿಲ್ಲ. ಉಪ್ಪಿಲ್ಲದ ಊಟ ತಿನ್ನುತ್ತಿದ್ದೇನೆ. ದೇಹ ಬದಲಾಗಿದೆ. ಜೀವನವೂ ಬದಲಾಗಿದೆ. ಈಗಲೂ ನನಗೆ ಜಿಮ್‌ ಇಂಟರೆಸ್ಟ್‌ ಇಲ್ಲ. ಆದರೆ ಜಿಮ್‌ ಅಡಿಕ್ಷನ್‌ ಆಗಿದೆ. ಕ್ಯಾಮೆರಾ ಮುಂದೆ ನಿಂತಾಗ ಈಗ ಇರುವ ಕಾನ್ಫಿಡೆನ್ಸೇ ಬೇರೆ. ಈ ಒಂದೂವರೆ ವರ್ಷದಲ್ಲಿ ನಾನು ಏನು ಮಾಡಿದ್ದೇನೋ ನನಗೆ ಅದು ತುಂಬಾ ದೊಡ್ಡದು. ಅದರ ಫಲ ಪೈಲ್ವಾನ್‌ ಚಿತ್ರದಲ್ಲಿ ಕಾಣುತ್ತದೆ.

ಕರುಳು ಸಮಸ್ಯೆ: ಸಹಾಯಕ್ಕೆ ಕಿಚ್ಚನ ಅಂಗಲಾಚಿದ ಫ್ಯಾನ್

ಇಂಗ್ಲೆಂಡಲ್ಲಿ ರಾಷ್ಟ್ರಗೀತೆ ಕೇಳಿದರೆ ಮೈಜುಮ್‌ ಎನ್ನುತ್ತದೆ

ಸುದೀಪ್‌ ಕ್ರಿಕೆಟ್‌ ವ್ಯಾಮೋಹಿ. ಕ್ರಿಕೆಟ್‌ ಮಾತು ಬಂದ್ರೆ ಸಾಕು ಅವರ ಖುಷಿ ದುಪ್ಪಟ್ಟಾಗುತ್ತದೆ. ಮೊನ್ನೆ ತಾನೇ ಇಂಗ್ಲೆಂಡಿಗೆ ಹೋಗಿ ಕ್ರಿಕೆಟ್‌ ಆಡಿ, ಕ್ರಿಕೆಟ್‌ ನೋಡಿ ಬಂದ ಸುದೀಪ್‌ಗೆ ಇಂಗ್ಲೆಂಡು, ಕ್ರಿಕೆಟು, ಧೋನಿ ಎಲ್ಲದರ ಬಗ್ಗೆ ಪ್ರೀತಿ.

‘ಲಾರ್ಡ್ಸ್ ಮೈದಾನದಲ್ಲಿ ನಿಲ್ಲುವುದೇ ಒಂದು ಖುಷಿ. ಅಲ್ಲಿ ಮೈದಾನಗಳಲ್ಲಿ ನಿಂತು ಕ್ರಿಕೆಟ್‌ ನೋಡುವುದಿದೆಯಲ್ಲ, ನಾನು ಸಿಕ್ಕಾಪಟ್ಟೆಖುಷಿ ಪಟ್ಟೆ. ಆ ನೆಲದಲ್ಲಿ ನಿಂತಾಗ ಇದ್ದಕ್ಕಿದ್ದಂತೆ ರಾಷ್ಟ್ರಗೀತೆ ಮೊಳಗಿದರೆ ಮೈ ಜುಮ್‌ ಎನ್ನುತ್ತದೆ. ಆ ರೋಮಾಂಚನವನ್ನು ನಾನಲ್ಲಿ ಅನುಭವಿಸಿದೆ. ಅಲ್ಲಿನ ಗ್ರೌಂಡುಗಳು ಇಲ್ಲಿಗಿಂತ ಬೇರೆಯೇ. ಎಲ್ಲರೂ ಕ್ರಿಕೆಟ್‌ ಆಸ್ವಾದಿಸುತ್ತಿರುತ್ತಾರೆ. ಕೈಯಲ್ಲಿ ಕೋಕ್‌, ಕಣ್ಣಲ್ಲಿ ಕ್ರಿಕೆಟ್‌, ಮನಸ್ಸಲ್ಲಿ ಆನಂದ. ಸಂತೋಷಕ್ಕೆ ಇನ್ನೇನು ಬೇಕು.’

ಧೋನಿ ಅಸಾಮಾನ್ಯರು

ಅಷ್ಟುಹೊತ್ತಿಗೆ ಮಾತು ಇಂಡಿಯನ್‌ ಕ್ರಿಕೆಟ್‌ ಟೀಮ್‌ ಕಡೆಗೆ ಹೊರಳಿತ್ತು. ಧೋನಿ ಸ್ಲೋ ಆಡುತ್ತಾರೆ ಅನ್ನುವ ಟೀಕೆ ಬಗ್ಗೆ ಮಾತು ಬಂತು. ಸುದೀಪ್‌ ಗಂಭೀರರಾದರು.

‘ದೂರ ನಿಂತು ಮಾತನಾಡುವುದು ಸುಲಭ ಸಾರ್‌. ಆ ಗ್ರೌಂಡಲ್ಲಿ ನಿಂತು ಆಡುವುದಿದೆಯಲ್ಲ, ಅದಕ್ಕೆ ಬೇರೆಯದೇ ಮನಸ್ಥಿತಿ ಬೇಕು. ನಾವು ಕ್ರಿಕೆಟ್‌ ಆಡುವಾಗಲೇ ಭಯಂಕರ ಪ್ರೆಷರ್‌ ಇರುತ್ತದೆ. ಅಂಥದ್ದರಲ್ಲಿ ಅಲ್ಲಿ ಆಡುವುದು ಧೋನಿ. ಅವರು ಪಿಚ್‌ಗೆ ಬಂದಾಗ ಹೇಗಿದೆ ಪಿಚ್‌ ಅಂತ ನೋಡುತ್ತಾರೆ. ಸ್ವಲ್ಪ ಹೊತ್ತಲ್ಲೇ ಅರ್ಥ ಮಾಡಿಕೊಂಡು ತಮ್ಮ ಆಟ ಶುರು ಮಾಡುತ್ತಾರೆ. ಅವರು ಆಸಾಮಾನ್ಯ ಆಟಗಾರ.’

‘ಯಾರು ಈ ಸಲ ಫೈನಲ್‌ ತಲುಪುತ್ತಾರೆ, ಪ್ರಿಡಿಕ್ಷನ್‌ ಮಾಡಿದ್ದೀರಾ’ ಅಂತ ಪ್ರಶ್ನೆ ಬಂತು. ಅಷ್ಟೇ ವೇಗವಾಗಿ ‘ಇಲ್ಲ’ ಎಂದರು ಸುದೀಪ್‌.

‘ನಾನು ಈ ಕ್ಷಣವನ್ನು ಆಸ್ವಾದಿಸುತ್ತೇನೆ. ನಾಳೆ ಏನಾಗುತ್ತದೆ ಅಂತಲ್ಲ. ಇವತ್ತು ಆಟ ನೋಡ್ತಾ ಇದೀನಿ. ಖುಷಿ ಇದೆ. ಸಾಕಲ್ಲ. ನಾಳೆಯನ್ನು ನಾಳೆಯೇ ನೋಡೋಣ.’

ಮಾತಾಡುತ್ತಲೇ ಇದ್ದಕ್ಕಿದ್ದಂತೆ ಫಿಲಾಸಫರ್‌ ಇಣುಕೋದು ಶುದ್ಧ ಸುದೀಪ್‌ ಸ್ಟೈಲು.

ಅಡುಗೆಯೊಂದು ಧ್ಯಾನ

ಸುದೀಪ್‌ ಎಷ್ಟುಚೆಂದ ಕಿಚನ್‌ ರೆಡಿ ಮಾಡಿಟ್ಟುಕೊಂಡಿದ್ದಾರೆ ಎಂದರೆ ಅದನ್ನು ನೋಡಿದ ಯಾರಿಗೇ ಆದರೂ ಈ ಕಿಚನ್‌ ಮೇಲೆ ಪ್ರೀತಿಯುಂಟಾಗದೇ ಇರಲು ಸಾಧ್ಯವಿಲ್ಲ. ಅದಕ್ಕೆ ಕಾರಣ ಕಿಚ್ಚನ ಅಡುಗೆ ಪ್ರೀತಿ. ಅಡುಗೆಗೆ ಸಂಬಂಧಪಟ್ಟವಸ್ತುಗಳನ್ನು ಜಗತ್ತಿನ ಯಾವ್ಯಾವುದೋ ಮೂಲೆಯಿಂದ ತಂದು ಅಲ್ಲಿಟ್ಟಿದ್ದಾರೆ. ಅಲ್ಲೊಂದು ಬುಟ್ಟಿಯ ಥರದ ಬೆತ್ತದ ಪಾತ್ರಯೊಂದಿತ್ತು. ಮಾತಾಡುತ್ತಲೇ ಅದನ್ನು ಹೋಗಿ ತಂದ್ರು.

‘ಇದನ್ನು ಬ್ಯಾಂಕಾಕ್‌ನಿಂದ ತಂದೆ. ಅಲ್ಲಿ ಅನ್ನ ಬಸಿಯೋಕೆ ಇದನ್ನು ಬಳಸುತ್ತಾರೆ. ನಂಗೆ ಇಷ್ಟಆಯಿತು’ ಎಂದರು. ಇಂಟರೆಸ್ಟಿಂಗ್‌ ಅಂದ್ರೆ ಸುದೀಪ್‌ ಬ್ಯಾಂಕಾಕ್‌ಗೆ ಹೋಗಿದ್ದಾಗ ಅಲ್ಲಿ ಸುತ್ತಾಡುವುದಕ್ಕೆ ಬದಲು ಅಲ್ಲೊಂದು ಹೋಟೆಲ್‌ನಲ್ಲಿ ಬೇಕಿಂಗ್‌ ಕ್ಲಾಸಿಗೆ ಸೇರಿದ್ದರು. ಬೇಕರಿ ಐಟಂ ಮಾಡುವುದನ್ನು ಕಲಿತಿದ್ದರು.

‘ನಾನು ಎಗ್‌ನಲ್ಲೇ ಮೂವತ್ತು ಐಟಮ್‌ ಮಾಡ್ತೀನಿ. ನನಗೆ ಅಡುಗೆ ಮಾಡುವುದಿಷ್ಟ. ಹಾಗಂತ ನಾನು ತಿನ್ನೋದಿಲ್ಲ. ಸ್ನೇಹಿತರಿಗೆ ಮಾಡಿ ಕೊಡುತ್ತೇನೆ. ಬಿಗ್‌ ಬಾಸ್‌ ಕಾರ್ಯಕ್ರಮ ನಿರೂಪಣೆ ಯಾರು ಬೇಕಾದರೂ ಮಾಡಬಹುದು. ಆದರೆ ಅಲ್ಲಿ ಕಿಚನ್‌ ಪ್ರೋಗ್ರಾಮ್‌ ಮಾಡೋದು ಬೇರೆಯವರಿಗೆ ಆಗಲಿಕ್ಕಿಲ್ಲ.’

ಹೀಗೆ ಅಡುಗೆ ಬಗ್ಗೆ ಮಾತನಾಡಿದಾಗೆಲ್ಲಾ ಸುದೀಪ್‌ ಧ್ವನಿಯೇ ಬದಲಾಗುತ್ತದೆ. ಇದ್ದಕ್ಕಿದ್ದಂತೆ ಹಂಬಲ್‌ ಆಗುತ್ತದೆ. ಸುದೀಪ್‌ ಸಿನಿಮಾಗಿಂತ ಹೆಚ್ಚು ಅಡುಗೆಗೆ ಶರಣಾದಂತೆ ಭಾಸವಾಗುತ್ತದೆ.

ಒಂಚೂರು ಹಠ ಇದೆ ನಂಗೆ

‘ಕೆಲವರು ನೀವು ಆರೋಗಂಟ್‌ ಅಂತಾರಲ್ಲ’ ಎಂಬ ಪ್ರಶ್ನೆ ಬಂತು. ಥಟ್‌ ಅಂತ ಸುದೀಪ್‌ ನಿಲುವು ಬದಲಾಯಿತು. ಕೋಪ ಮಾಡಿಕೊಳ್ಳಬಹುದಾ ಎಂದೆನಿಸಿತು. ಧ್ವನಿ ಗಡುಸಾಯಿತು.

‘ನಾನು ಯಾರಿಗೂ ತೊಂದ್ರೆ ಕೊಟ್ಟಿರಲ್ಲ. ಬೈದಿರಲ್ಲ, ಹೊಡೆದಿರಲ್ಲ. ಯಾರೋ ಕಿರಿಕಿರಿ ಮಾಡಿದವರಿಗೆ ಒಂದು ಲುಕ್‌ ಕೊಟ್ಟು ಹೋಗಿರುತ್ತೇನೆ ಅಷ್ಟೇ. ಅವರು ನನಗೆ ತೊಂದರೆ ಕೊಟ್ಟಿದ್ದಾರೆ ಅಂತ ಅದರರ್ಥ. ನೀವು ಪ್ರೀತಿ ತೋರಿಸಿದ್ರೆ ಪ್ರೀತಿ ತೋರಿಸ್ತೀನಿ. ಸ್ಟೈಲ್‌ ಕೊಟ್ರೆ ಸ್ಟೈಲ್‌ ಕೊಡ್ತೀನಿ. ಅದು ಬಿಟ್ಟು ನೋವು ಮಾಡಿದ್ರೆ ನಾನು ನೋವು ಮಾಡಬಾರದು ಅಂದ್ರೆ ಹೇಗೆ. ಎಲ್ಲರೂ ಎಲ್ಲರೊಟ್ಟಿಗೂ ಚೆನ್ನಾಗಿರಲೇ ಬೇಕಾಗಿಲ್ಲ. ಅವರು ಒಳ್ಳೆಯವರೇ ಆಗಿರಬಹುದು. ಆದರೆ ನಮಗೆ ಆಗಿಬರಲ್ಲ ಅಷ್ಟೇ. ತೋರಿಕೆ ಲೈಫ್‌ ಇಲ್ಲ ನಂಗೆ. ಅವಮಾನ ಮಾಡಿದ್ರೆ ನಗಾಡ್ಕೊಂಡ್‌ ಇರೋಕಾಗಲ್ಲ. ಅಲ್ಲೇ ರಿಯಾಕ್ಟ್ ಮಾಡಿರ್ತೀನಿ. ಅದನ್ನು ಮನೆಗೆ ಹೋಗಿ ಯೋಚ್ನೆ ಮಾಡಿರಲ್ಲ. ಅಲ್ಲೇ ಬೈದು ಮರೆತು ಹೋಗಿಬಿಟ್ಟಿರ್ತೀನಿ. ನನ್ನನ್ನು ಕೋಟಿ ಕೋಟಿ ಜನ ಪ್ರೀತಿಸೋವಾಗ ಯಾರೋ ಐವತ್ತು ಜನ ನಾನು ಅರೋಗೆಂಟ್‌ ಅಂದ್ರೆ ಯಾಕಾದ್ರೂ ಕೇಳಿಸ್ಕೋಬೇಕು. ನಂಗೆ ಪ್ರೀತಿಸೋರು ಸಾಕು.’

ಇಷ್ಟುಹೇಳಿ ಒಂದು ಸಣ್ಣ ಮೌನ. ನಿಟ್ಟುಸಿರು. ಕಡೆಗೆ ಮತ್ತೊಂದು ಸಾಲು.

‘ಹಾಂ ಒಂಚೂರು ಹಠ ಇದೆ ನಂಗೆ.’

ಸುದೀಪ್‌ ಅಭಿಮಾನಿ ಪ್ರೀತಿ

‘ಕೆಲವರು ಇಷ್ಟಆದ್ರೆ ಅವರನ್ನು ತುಂಬಾ ಹತ್ತಿರ ಮಾಡಿಕೊಂಡು ಬಿಡ್ತೀನಿ. ಎತ್ತರದಲ್ಲಿ ಕೂರಿಸ್ತೀನಿ ಜೀವನದಲ್ಲಿ. ಒಮ್ಮೆ ಆಗಿ ಬರಲ್ಲ ಅಂದ್ರೆ ಜೀವನದಲ್ಲಿ ಯಾವಾಗ ಕಟ್‌ ಆದ್ರಿ ಅಂತ್ಲೇ ಗೊತ್ತಾಗಲ್ಲ. ಯಾರೇ ಆಗಲಿ ಕೊಟ್ಟಸ್ಥಾನ ಗೌರವಿಸೋಕೆ ಗೊತ್ತಿರಬೇಕು.’

ಸುದೀಪ್‌ ನೇರ ಮತ್ತು ನಿಷ್ಠುರ. ಮುಖದ ಮೇಲೆ ಹೊಡೆದಂತೆ ಮಾತನಾಡುವುದೂ ಗೊತ್ತು. ಪ್ರೀತಿ ತೋರಿಸುವುದೂ ಗೊತ್ತು. ಬದುಕು ಪಾಠ ಕಲಿಸಿದಂತೆ ಅವರ ಮಾತು. ಯಾರು ಇಲ್ಲದೆಯೇ ನಾನು ಇರಬಲ್ಲೆ ಎನ್ನುತ್ತಾರೆ. ಆದರೆ ಸ್ನೇಹಿತರನ್ನು, ತಮ್ಮ ಕಷ್ಟಕಾಲದಲ್ಲಿ ನೆರವಾದವರನ್ನು ಮತ್ತು ಅಭಿಮಾನಿಗಳನ್ನು ಯಾವತ್ತೂ ಮರೆಯುವುದಿಲ್ಲ ಎನ್ನುವುದಕ್ಕೆ ಮಾತಲ್ಲೇ ಸಾಕ್ಷಿ ಕೊಡುತ್ತಾರೆ.

‘ನನ್ನ ಕುಟುಂಬ ನನ್ನ ಶಕ್ತಿ. ನನ್ನ ಸ್ನೇಹಿತರು ನನ್ನ ಸಂಪಾದನೆ’ ಎಂದು ಮಾತನಾಡುವ ಅವರು ಅಭಿಮಾನಿಗಳ ವಿಚಾರ ಬಂದ್ರೆ ಬೇರೆಯೇ.

‘ಯಾರನ್ನೋ ಮೆಚ್ಚಿಸೋಕೆ ಏನೋ ಮಾತನಾಡುತ್ತಿರುತ್ತೀವಿ. ಸುಮ್ಮನೆ ಹರಟೆ ಹೊಡೆಯುತ್ತಿರುತ್ತೇವೆ. ಅದೇ ಸಮಯವನ್ನು ನನ್ನನ್ನು ಪ್ರೀತಿಸುವವರಿಗೆ ಕೊಡಬಹುದಲ್ಲ ಅಂತನ್ನಿಸಿದ ಕ್ಷಣದಿಂದ ಟ್ವೀಟರ್‌ ನಲ್ಲಿ ಅಭಿಮಾನಿಗಳ ಜೊತೆ ಸಂವಹನ ನಡೆಸುತ್ತಿದ್ದೇನೆ. ನಾನು ಅವರಿಗೆ ಏನೂ ಆಗಬೇಕಿಲ್ಲ. ಆದರೂ ಪ್ರೀತಿ ತೋರಿಸ್ತಾರೆ. ಅವರಿಗೆ ಸಮಯ ಕೊಡುವುದು ನನಗೆ ಖುಷಿ ಕೊಡುತ್ತದೆ.’

ಇಷ್ಟೇ ಅಲ್ಲ. ಅವರು ಅಭಿಮಾನಿಗಳಿಗೆ ಹಣಕಾಸು ನೆರವು ಕೂಡ ನೀಡುತ್ತಾರೆ. ಒಂದು ಕುಟುಂಬಕ್ಕೆ ಅಗತ್ಯ ಹಣ ನೀಡಿದಾಗ ಆ ಕುಟುಂಬದವರು ಇವರನ್ನು ಭೇಟಿ ಮಾಡಬೇಕು ಅಂತ ಆಸೆ ಪಟ್ಟರು. ಆದರೆ ಸುದೀಪ್‌ ಹೋಗಲಿಲ್ಲ. ಗೆಳೆಯರು ಕೇಳಿದ್ದಕ್ಕೆ ಅವರು ಹೇಳಿದ್ದು ಒಂದೇ ಮಾತು.

‘ಅವರು ಚೆನ್ನಾಗಿರಬೇಕು. ಆದರೆ ದೇವರಾಗೋಕೆ ನಂಗೆ ಇಷ್ಟಇಲ್ಲ.’

ಬೇರೆ ಬೇರೆ ಸುದೀಪ್‌ಗಳು

ಅವತ್ತು ಸಂಜೆ ಅಲ್ಲಿ ಸ್ಪರ್ಶದಿಂದ ಇಲ್ಲಿಯವರೆಗೆ ಸುಮಾರು 23 ವರ್ಷದ ಪಯಣದ ತುಣುಕುಗಳು ಅಲ್ಲಲ್ಲಿ ಹಾದು ಬಂದವು. ಆರಂಭದಲ್ಲಿ ಕಟೌಟ್‌ ನೋಡಿ ಖುಷಿ ಪಟ್ಟಿದ್ದ ಸುದೀಪ್‌ ರಿಂದ ಇವತ್ತು ಕಟೌಟ್‌ ಬಗ್ಗೆ ಇಂಟರೆಸ್ಟ್‌ ಇಲ್ಲ ಎಂದು ಹೇಳುವ ಸುದೀಪ್‌ವರೆಗೆ ಬೇರೆ ಬೇರೆ ಸುದೀಪ್‌ಗಳು ಬಂದು ಹೋದರು. ಆದರೆ ಈಗಿರುವ ಸುದೀಪ್‌ ಪೈಲ್ವಾನ್‌ನಷ್ಟುದೃಢ ಮತ್ತು ಆರೋಗ್ಯವಂತ. ಆ ಮಾತುಗಳೆಲ್ಲಾ ಮುಗಿದ ಮೇಲೆ ಮನಸ್ಸಲ್ಲಿ ಉಳಿದಿದ್ದು ಒಂದೇ ಚಿತ್ರ. ಇಡೀ ದೇಶ ಗುರುತಿಸುವಷ್ಟರ ಮಟ್ಟಿಗೆ ಬೆಳೆದ ವ್ಯಕ್ತಿ ‘ಅದೋ, ಅಲ್ನೋಡಿ ಶೂಟಿಂಗ್‌ ಸ್ಟಾರ್‌’ ಎಂದು ಮಗುವಿನಂತೆ ಅಚ್ಚರಿ ಪಟ್ಟಿದ್ದು. ಆ ಅಚ್ಚರಿಯೇ ಅವರು ಏರಿದ ಎತ್ತರಕ್ಕೆ ಬುನಾದಿ.

- ನಾನು ಗುಂಪಿನ ವ್ಯಕ್ತಿ ಅಲ್ಲ. ತುಂಬಾ ಜನ ಕೂತಾಗ ನಂಗೆ ಮಾತಾಡೋಕಾಗಲ್ಲ.

- ಬರೋ ವೀಕ್ಷಕರಿಗೆ ಕತೆ ಹೇಳ್ಬೇಕು. ಅಷ್ಟೇ ನಮ್ಮ ಕರ್ತವ್ಯ. ಹೇಳೋ ಕತೇನ ಚೆನ್ನಾಗಿ ಹೇಳ್ಬೇಕು.

- ಕೆಲವೊಮ್ಮೆ ಸೈಲೆಂಟಾಗಿರುವುದೂ ಒಳ್ಳೆಯದೇ. ಯಾವಾಗ ಸುಮ್ಮನಿರಬೇಕು ಅನ್ನುವುದು ನಮಗೆ ಗೊತ್ತಿರಬೇಕು.

- ಸಿನಿಮಾ 50 ಪರ್ಸೆಂಟ್‌ ಕ್ರಿಯೇಟಿವಿಟಿ. 50 ಪರ್ಸೆಂಟ್‌ ಬಿಸಿನೆಸ್‌. ಸಿನಿಮಾ ಮಾಡೋರು ಬಿಸಿನೆಸ್‌ ಕೂಡ ಅರ್ಥ ಮಾಡಿಕೊಂಡಿರಬೇಕು.

ಮಗಳು ಸಾನ್ವಿ ಅಂದ್ರೆ ಪ್ರೀತಿ ಮತ್ತು ಭಯ

ಮಗಳು ಸಾನ್ವಿ ಅಂದ್ರೆ ಭಾರಿ ಪ್ರೀತಿ. ಅವತ್ತು ಮಗಳು ಹಾಡಿದ ಹಾಡನ್ನು ಎಲ್ಲರಿಗೂ ಕೇಳಿಸಿ ಖುಷಿಪಟ್ಟರು. ಮಗಳು ಹ್ಯಾಲೋವಿನ್‌ ದಿನದಂದು ತೊಡಿಸಿದ ಕನ್ನಡಕ ತೋರಿಸಿ ನಕ್ಕರು. ಅವಳು ತಂದೆಯಷ್ಟೇ ನೇರ ಮತ್ತು ನಿಷ್ಠುರ. ಸಿನಿಮಾ ಚೆನ್ನಾಗಿಲ್ಲ ಅಂದ್ರೆ ಮುಖದ ಮೇಲೆ ಹೊಡೆದಂತೆ ಚೆನ್ನಾಗಿಲ್ಲ ಅನ್ನುತ್ತಾಳೆ. ಹಾಗಾಗಿ ಸುದೀಪ್‌ ಮಗಳಲ್ಲಿ ಸಿನಿಮಾ ಹೇಗಿದೆ ಅಂತ ಕೇಳುವುದೇ ಇಲ್ಲ. ‘ಸಿನಿಮಾ ಮಾಡಿರ್ತೀವಿ, ಆಮೇಲೆ ಚೆನ್ನಾಗಿಲ್ಲ ಅಂದ್ರೆ.. ಭಯ ಆಗತ್ತೆ’ ಎಂದು ನಗುತ್ತಾರೆ.

ಸುದೀಪ್‌ ಮತ್ತು ಸಲ್ಮಾನ್‌ ಖಾನ್‌

ಸಲ್ಮಾನ್‌ ಖಾನ್‌ಗೆ ಸುದೀಪ್‌ ಅಂದ್ರೆ ಇಷ್ಟ. ಎಷ್ಟಿಷ್ಟಅಂದ್ರೆ ಒಂದ್ಸಲ ಸುದೀಪ್‌ಗೆ ಒಂದು ಬೆಲ್ಜಿಯಂ ಕುದುರೆ ಕೊಡಿಸೋಕೆ ಹೊರಟಿದ್ದರಂತೆ. ಸುದೀಪ್‌ ಹಠ ಮಾಡಿ, ಬೇಡ ಅಂತ ಹೇಳಿ ಅವರನ್ನು ನಿಲ್ಲಿಸಿದ್ದಾರೆ. ಒಂದಿನವಂತೂ ಹದಿನೈದು ಪ್ಯಾಕೆಟ್‌ ಬಟ್ಟೆತರಿಸಿ ಗಿಫ್ಟ್‌ ಕೊಟ್ಟರು. ಅಂಥಾ ಸಲ್ಮಾನ್‌ ಜತೆಗಿನ ಬಾಂಧವ್ಯದ ಬಗ್ಗೆ ಸುದೀಪ್‌ ಹೇಳಿದ್ದು

ಊರ್ವಶಿ..ಊರ್ವಶಿ.. ಹಾಡಿಗೆ ಸುದೀಪ್, ಸಲ್ಲುಭಾಯ್ ಡ್ಯಾನ್ಸ್; ವಿಡಿಯೋ ವೈರಲ್

‘ಅವರಿಗೆ ಇಷ್ಟಆದ್ರೆ ಅವರ ಫ್ಯಾಮಿಲಿ ಮೆಂಬರ್‌ ಥರ ನೋಡುತ್ತಾರೆ. ದಬಾಂಗ್‌ ಸೆಟ್‌ನಲ್ಲಂತೂ ಒಳ್ಳೆಯ ಟೀಮ್‌ ಕೊಟ್ಟು ರಾಜನ ಥರ ಇಟ್ಟಿದ್ದಾರೆ. ಅವರ ಜೊತೆ ಕ್ಲೈಮ್ಯಾಕ್ಸ್‌ ಫೈಟ್‌ ಮಾಡೋದು ಬಾರಿ ಕಷ್ಟಆಯಿತು ನನಗೆ. ಅವರ ಎದೆಗೆ ಒದಿಯಬೇಕಿತ್ತು. ಅಷ್ಟುಸೀನಿಯರ್‌ ಅವರು. ಹೇಗೆ ಒದೆಯಲಿ ನಾನು. ಅವರು ಕಿಚ್ಚ ಮಾಡು ಮಾಡು ಅಂತಿದ್ದಾರೆ. ಆದರೆ ಕಾಲಲ್ಲಿ ಒದಿಯೋಕೆ ನಂಗೆ ಆಗ್ತಾನೇ ಇರಲಿಲ್ಲ. ಆಗ ನಮ್ಮಲ್ಲಿ ನಮ್ಮವರು ನನಗೆ ಹೊಡೆಯೋಕೆ ಯಾಕೆ ಅಂಜುತ್ತಾರೆ ಅಂತ ಗೊತ್ತಾಯಿತು. ಸೀನಿಯರ್‌ ಗಳಿಗೆ ಹೊಡೆಯೋ ಸೀನ್‌ನಲ್ಲಿ ನಟಿಸುವುದು ಭಾರಿ ಕಷ್ಟ. ಮಾತಾಡ್‌ ಮಾತಾಡ್‌ ಮಲ್ಲಿಗೆ ಚಿತ್ರದಲ್ಲಿ ವಿಷ್ಣು ಸರ್‌ ಜತೆ ನಟಿಸುವಾಗ ಪುಣ್ಯಕ್ಕೆ ನಾನು ಅವರ ಪಕ್ಕ ನಿಂತಿದ್ದೆ ಮಾತ್ರ. ಅವರ ಜತೆ ಫೈಟಿಂಗ್‌ ಸೀನ್‌ ಏನಾದ್ರೂ ಇಟ್ಟಿದ್ರೆ ಸಿನಿಮಾನೇ ಬೇಡ ಎಂದುಬಿಡುತ್ತಿದ್ದೆ.’